ತುಮಕೂರು :
ನಗರದ ಹೃದಯಭಾಗದ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಕಟ್ಟಡ ಪ್ರಾರಂಭಕ್ಕೆ ಹಿಡಿದಿರುವ ಗ್ರಹಣ ಬಿಡುವುದು ಯಾವಾಗ ಎಂಬ ಪ್ರಶ್ನೆಯನ್ನು ವಿದ್ಯಾರ್ಥಿನಿಯರೇ ಕೇಳುವಂತಾಗಿದ್ದು, ಸರಕಾರಿ ಇಲಾಖೆಗಳೇ ಎತ್ತುತ್ತಿರುವ ಆಡಳಿತ ತಕರಾರುಗಳಿಂದಾಗಿ ಅಮಾಯಕ ವಿದ್ಯಾರ್ಥಿನಿಯರು, ಕಾಲೇಜು ಸಿಬ್ಬಂದಿ ಸಂಕಷ್ಟ ಎದುರಿಸುವಂತಾಗಿದೆ.
ಕಾಲೇಜು ನಿರ್ಮಾಣಕ್ಕೆ 2 ಕೋಟಿ ಹಣ ಮಂಜೂರಾತಿಯಾಗಿ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆಯಾಗಿ ರೈಟ್ಸ್ ಸಂಸ್ಥೆಗೆ ಕಟ್ಟಡ ನಿರ್ಮಾಣದ ಜವಾಬ್ದಾರಿ ವಹಿಸಲಾಗಿದ್ದು, ಸಚಿವರು, ಶಾಸಕರು, ಅಧಿಕಾರಿಗಳೇ ಬಂದು ಸ್ಥಳ ಪರಿಶೀಲನೆ ಮಾಡಿ ಹೋಗಿದ್ದರೂ ಕಟ್ಟಡ ಕಾಮಗಾರಿ ಆರಂಭಕ್ಕೆ ಖಾತೆ ಕಗ್ಗಂಟು ಎದುರಾಗಿ ಜಿಲ್ಲೆ, ಹೊರಜಿಲ್ಲೆಗಳಿಂದಲೂ ಬಂದು ಕಾಲೇಜಿನಲ್ಲಿ ಪ್ರವೇಶ ಪಡೆದಿರುವ 1200ಕ್ಕೂ ಅಧಿಕ ವಿದ್ಯಾರ್ಥಿನಿಯರು ಸುಸಜ್ಜಿತ ಕಾಲೇಜು ಕಟ್ಟಡವಿಲ್ಲದೆ ಸೋರುತ್ತಿರುವ ಕೊಠಡಿ ಬೀಳುವ ಆತಂಕದಲ್ಲಿ ತರಗತಿ ಕೇಳುವ ದುಃಸ್ಥಿತಿ ನಿರ್ಮಾಣವಾಗಿದೆ.
ಬ್ರಿಟಿಷರ ಕಾಲದ ಹಳೆಯ ಬೀಳುವ ಹಂತದ ಕಟ್ಟಡದಲ್ಲೇ ಕಾಲೇಜು ನಡೆಯುತ್ತಿದ್ದು, ಹಿಂದಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಸಜ್ಜಿತ ಹೊಸ ಕಟ್ಟಡದಲ್ಲಿ ನಡೆಯುತ್ತಿದೆ. ಪಕ್ಕದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲೂ ಸ್ಮಾರ್ಟ್ ಸಿಟಿಯೋಜನೆಗಳಡಿ ಹೆಚ್ಚುವರಿ ಕೊಠಡಿಗಳು ನಿರ್ಮಾಣವಾಗುತ್ತಿವೆ. ಆದರೆ ಮಹಿಳಾ ಕಾಲೇಜು ಮಾತ್ರಅಲ್ಲಲ್ಲಿ ಕಿತ್ತುಹೋದ ಹೆಂಚಿಗೆ ಟಾರ್ಪಲ್ ಹೊದಿಸಿದ ಕಟ್ಟಡದಲ್ಲಿ ವಿಜ್ಞಾನ ಪ್ರಯೋಗಾಲಯ ಸೇರಿ ಆನ್‍ಲೈನ್ ತರಗತಿಗಳು ನಡೆಯುತ್ತಿದ್ದು, ಕೊಠಡಿಯೊಳಗೆ ಸರಿಯಾಗಿ ಗಾಳಿ-ಬೆಳಕು ಸಹ ಬಾರದ ಪರಿಸ್ಥಿತಿ ಇದೆ.
ಜಮೀನು ವಿವಾದವಿಲ್ಲ ಆದರೂ ಕಾಮಗಾರಿಗೆ ತಕರಾರು: ಆರಂಭದಲ್ಲಿ ಶಿಕ್ಷಣ ಇಲಾಖೆಯವರು ಕಾಲೇಜಿಗೆ ಹಾಲಿಯಿರುವ 1.3 ಎಕರೆ ಜಾಗವನ್ನು ಬಿಟ್ಟುಕೊಡಲು ತಕರಾರು ತೆಗೆದಿದ್ದರು. ನಂತರ ಆಗ ಶಿಕ್ಷಣ ಸಚಿವರಾಗಿದ್ದ ಸುರೇಶ್‍ಕುಮಾರ್‍ಹಾಗೂ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರೇ ಸ್ಥಳ ಪರಿಶೀಲಿಸಿ ಜಿಲ್ಲಾಡಳಿತದಿಂದ ಶಿಫಾರಸ್ಸು ಮಾಡಿ 2020 ಮಾ.23ರಂದು ಜಾಗವನ್ನು ಹೊಸ ಕಟ್ಟಡ ನಿರ್ಮಾಣಕ್ಕೆ ಉಪಯೋಗಿಸಲು ಸರಕಾರದ ಅನುಮೋದನೆಯೂ ದೊರೆಯಿತು. ಇದರ ಆಧಾರದಲ್ಲಿ ಉನ್ನತ ಶಿಕ್ಷಣರಾದ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಸಹ ಸ್ಥಳ ಪರಿಶೀಲನೆ ನಡೆಸಿ 200 ಲಕ್ಷ ಅನುದಾನವನ್ನು ಸಹ ಒದಗಿಸಿ ರೈಟ್‍ಸಂಸ್ಥೆಗೆ ಕಟ್ಟಡ ಕಾಮಗಾರಿಗೆ ಜವಾಬ್ದಾರಿಯನ್ನು ಸಹ ನೀಡಲಾಗಿದೆ. ಈ ಮಧ್ಯೆ ಕಾಲೇಜಿನ ಹೆಸರಿಗೆ ಜಾಗದ ಖಾತೆಯಾದರೆ ಮಾತ್ರ ಹಣ ಬಿಡುಗಡೆ ಸಾಧ್ಯ ಎಂದು ಇಲಾಖೆಯವರೇ ತೆಗೆದಿರುವ ತಕರಾರು ಕಾಮಗಾರಿ ಆರಂಭಕ್ಕೆ ಗ್ರಹಣ ಹಿಡಿಯುವಂತಾಗಿದೆ.
ಕುಸಿಯುವ ಮುನ್ನ ಎಚ್ಚೆತ್ತುಕೊಳ್ಳಿ:
ಏತನ್ಮಧ್ಯೆ ಕಾಲೇಜಿನ ಆಡಳಿತ ಮಂಡಳಿಯವರು ಖಾತೆಗಾಗಿ ಜಿಲ್ಲಾಡಳಿತಕ್ಕೂ ಮನವಿ ಮಾಡಿದ್ದು, ಸರಕಾರವೇ ಕಾಮಗಾರಿಗೆ ಅನುಮತಿ ನೀಡಿರುವಾಗ ಖಾತೆ ಕಡ್ಡಾಯದ ಅವಶ್ಯಕತೆಯಿಲ್ಲ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಖಾತೆ ಇಲ್ಲದೆ ಹಣ ಬಿಡುಗಡೆ ಅಸಾಧ್ಯ ಎಂಬ ಕಾಲೇಜು ಶಿಕ್ಷಣ ಇಲಾಖೆಯವರೇ ಹೇಳುತ್ತಿದ್ದಾರೆ. ಈ ಬಗ್ಗೆ ಶಾಸಕರು, ಸಂಸದರು, ಮಾಜಿ ಸಚಿವರೆಲ್ಲ ಇಲಾಖೆ ಮೇಲೆ ಒತ್ತಡ ಹೇರಿದ್ದರೂ ಇನ್ನೂ ಪೂರ್ಣಫಲ ದೊರೆತಿಲ್ಲ. ಕಟ್ಟಡ ಪೂರ್ಣ ಕುಸಿದು ಅಪಾಯ ಎದುರಾಗುವ ಮುನ್ನ ಆಡಳಿತಾತ್ಮಕ ಅಡಚಣೆ ಕೊನೆಗಾಣಿಸಿ ವಿದ್ಯಾರ್ಥಿನಿಯರಿಗೆ ಉತ್ತಮ ಪರಿಸರದಲ್ಲಿ ಉನ್ನತ ಶಿಕ್ಷಣದ ಅವಕಾಶ ಲಭ್ಯವಾಗುವಂತೆ ಸರಕಾರ, ಜನಪ್ರತಿನಿಧಿಗಳು ಮಾಡಬೇಕಿದೆ.
ಮೂಲತಃ ಪ.ಪೂ ಶಿಕ್ಷಣ ಇಲಾಖೆಗೆ ಸೇರಿರುವ ಈ ಜಾಗವನ್ನು ಮಾಲೀಕತ್ವ ಸಹಿತ ವರ್ಗಾವಣೆ ಮಾಡಬೇಕೆಂದರೆ ಸಾಕಷ್ಟು ಕಸರತ್ತು ನಡೆಸಬೇಕು. ವರ್ಷಾನುಗಟ್ಟಲೇ ಹಿಡಿಯುತ್ತದೆ. ರಾಜ್ಯದ ಇತರ ಕಾಲೇಜುಗಳಲ್ಲೂ ಇಂತಹ ಸಮಸ್ಯೆ ಎದುರಾದಾಗ ಸರಕಾರದ ಅನುಮತಿ ಆಧಾರದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಹೊಸ ಕಾಲೇಜು ಕಟ್ಟಲು ಸಂಬಂಧಿಸಿದ ಜಾಗದ ಒಡೆತನದ ಇಲಾಖೆ ಮುಖ್ಯಸ್ಥರ ಅನುಮತಿ ಸಾಕು ಎಂದು ಶಿಕ್ಷಣ ಇಲಾಖೆ ಉನ್ನತಾಧಿಕಾರಿಗಳೇ ಈ ಹಿಂದೆ ಸ್ಪಷ್ಟಪಡಿಸಿದ್ದು ಖಾತೆ ಹೆಸರಲ್ಲಿ ಕಟ್ಟಡ ನಿರ್ಮಾಣ ಮುಂದೂಡುತ್ತಿರುವುದೇಕೆ? ಎಂಬ ಪ್ರಶ್ನೆಯನ್ನು ಶಿಕ್ಷಣ ಕ್ಷೇತ್ರದ ತಜ್ಞರು ಮುಂದಿಡುತ್ತಾರೆ.
ಉನ್ನತ ಶಿಕ್ಷಣ ಸಚಿವರು ಏನಂತಾರೆ?
ಈ ಬಗ್ಗೆ ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಪ್ರಜಾಪ್ರಗತಿಗೆ ಪ್ರತಿಕ್ರಿಯಿಸಿ ಖಾತೆ ಮಾಡಿಕೊಡಬೇಕಾದ್ದು ಕಾಲೇಜು ಶಿಕ್ಷಣ ಇಲಾಖೆಯಲ್ಲ. ಅದು ಜಿಲ್ಲಾಡಳಿತ, ಸ್ಥಳೀಯ ಪಾಲಿಕೆಯ ಜವಾಬ್ದಾರಿ. ವಿಷಯ ಅನುಮೋದನೆಗೊಳಪಟ್ಟು ಕಾಮಗಾರಿ ಆರಂಭಿಸಲು ಯಾವುದೇ ಅಭ್ಯಂತರವಿಲ್ಲ. ನಾನು ಸಹ ಕಾಲೇಜು ಸ್ಥಳ ಪರಿಶೀಲನೆ ನಡೆಸಿ 2 ಕೋಟಿ ಹಣ ಸಹ ಬಿಡುಗಡೆ ಮಾಡಿರುವೆ. ಸಂಸದರು, ಶಾಸಕರು, ಮಾಜಿ ಸಚಿವರು ಸಹ ಈ ಸಂಬಂಧ ಚರ್ಚಿಸಿದ್ದು, ಆಡಳಿತಾತ್ಮಕ ತೊಂದರೆಯನ್ನು ಈ ತಿಂಗಳಲ್ಲಿ ನಿವಾರಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲು ಮುಂದಾಗಿರುವ ಸರಕಾರ ಕಾಲೇಜುಗಳ ಮೂಲ ಸೌಕರ್ಯಕ್ಕೆ ಮೊದಲು ಆದ್ಯತೆ ಕೊಡಬೇಕು. ಮಹಿಳಾ ಕಾಲೇಜು ಸಬಲೀಕರಣ ಪ್ರಥಮ ಆದ್ಯತೆ ಆಗಬೇಕು. ಆಡಳಿತಾತ್ಮಕ ತೊಡಕುಗಳನ್ನು ಅಧಿಕಾರಿಗಳ ಮಟ್ಟದಲ್ಲಿ ಬೇಗ ನಿವಾರಿಸಿ ಕಾಲೇಜಿಗೆ ಸುಸಜ್ಜಿತ ಕಟ್ಟಡ ನಿರ್ಮಾಣಮಾಡಬೇಕು. ಈ ಸಂಬಂಧ ಅಧಿವೇಶನದಲ್ಲೂ ಪ್ರಸ್ತಾಪಿಸಿ ಗಮನ ಸೆಳೆಯಲಾಗುವುದು.
-ತಿಪ್ಪೇಸ್ವಾಮಿ, ಜೆಡಿಎಸ್ ವಿಧಾನಪರಿಷತ್ ಸದಸ್ಯರು
ಎಸ್.ಹರೀಶ್ ಆಚಾರ್ಯ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ