ತುಮಕೂರು :
ಹೇಳಿಕೊಳ್ಳುವುದಕ್ಕೆ ತುಮಕೂರು ಮಹಾನಗರ ಪಾಲಿಕೆ, ಅದು ಸಾಲದು ಎಂಬಂತೆ ಇದೀಗ ಸ್ಮಾರ್ಟ್ ಸಿಟಿ ಎಂಬ ಪಟ್ಟ ಬೇರೆ, ಆದರೆ ಇಲ್ಲಿರುವಂತಹ ಸಮಸ್ಯೆಗಳ ಸರಮಾಲೆ ಹೇಳತೀರದು.
ತುಮಕೂರು ನಗರದ 13 ನೇ ವಾರ್ಡಿನಲ್ಲಿನ ದಾನಃ ಪ್ಯಾಲೇಸ್ ಹಿಂಭಾಗದಲ್ಲಿರುವ ಸುಮಾರು 20 ಮನೆಗಳ ಮುಂದೆ ಹರಿಯುವಂತಹ ಗಲೀಜು ನೀರು ಸರಾಗವಾಗಿ ಹೊರಗೆ ಹರಿಯದೆ ತುಂಬಾ ಸಮಸ್ಯೆ ಎದುರಿಸುತ್ತಿದ್ದಾರೆ. ಇಲ್ಲಿ ಚರಂಡಿ ಎಂಬುದು ಇತ್ತು ಎನ್ನುವುದಕ್ಕೆ ಯಾವುದೇ ಪುರಾವೆಗಳು ಇಲ್ಲ, ಅಲ್ಲಿ ಚರಂಡಿಯೂ ಇಲ್ಲ, ಕಸ ತೆಗೆದುಕೊಂಡು ಹೋಗುವುದಕ್ಕೆ ಇತ್ತ ಕಡೆ ಪಾಲಿಕೆಯಿಂದ ಯಾರು ಕೂಡ ಹೆಜ್ಜೆ ಇಟ್ಟಿಲ್ಲ.
ಪ್ರತಿನಿತ್ಯ ಕೊಳಚೆ ನೀರಿನ ಸಹವಾಸದಿಂದ, ಗಬ್ಬು ನಾರುವ ಕಸದಿಂದ ರೋಸಿಹೋಗಿದ್ದಾರೆ ಇಲ್ಲಿನ ಜನ. ಸ್ನಾನ ಮಾಡಿದ ನೀರನ್ನು ಚರಂಡಿ ಇರುವ ಕಡೆ ಬಕೆಟ್ ನಲ್ಲಿ ತೆಗೆದುಕೊಂಡು ಹೋಗಿ ಹಾಕಬೇಕಾದ ಪರಿಸ್ಥಿತಿ. ಕುಡಿಯುವ ನೀರು ಅದೆ ಕೊಳಚೆ ನೀರಿನ ಜೊತೆ ಸೇರಿ ಹೋಗಿ ಅವಾಂತರ ಸೃಷ್ಠಿ ಮಾಡುತ್ತಿದೆ.
ರಸ್ತೆ ಬದಿಯಲ್ಲಿ ಪುಟ್ಬಾತ್ ನಿರ್ಮಾಣ, ಸುಸಜ್ಜಿತ ರಸ್ತೆ, ಶುದ್ಧ ಕುಡಿಯುವ ನೀರು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ವ್ಯವಸ್ಥಿತ ರೀತಿಯಲ್ಲಿ ಮಾಡುತ್ತಿರುವ ತುಮಕೂರು ಮಹಾನಗರಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಯೋಜನೆ ನಮ್ಮ ಪ್ರದೇಶವನ್ನು ಮರೆತಂತೆ ಕಾಣುತ್ತಿದೆ ಎನ್ನುವುದು ಸ್ಥಳೀಯರ ಆರೋಪ. ಈ ಪ್ರದೇಶದ ಸಮೀಪದಲ್ಲಿಯೇ ಪಾರ್ಕ್ ಒಂದು ನಿರ್ಮಾಣವಾಗಿದ್ದು, ಒಂದು ಪಾರ್ಕ್ ನಿರ್ಮಾಣಕ್ಕೆ ಕೋಟಿಗಟ್ಟಲೇ ಖರ್ಚು ಮಾಡುವ ಸರ್ಕಾರ ಜನವಸತಿ ಪ್ರದೇಶದಲ್ಲಿ ಒಂದು ಚರಂಡಿ ನಿರ್ಮಾಣ ಮಾಡುವುದಕ್ಕೆ ಯಾಕಿಷ್ಟು ಹಿಂದೇಟು ಹಾಕುತ್ತಿದೆ ಎಂದು ಗೊತ್ತಾಗುತ್ತಿಲ್ಲ.
ಮನವಿಗಳಿಗೆ ಸ್ಪಂದನೆಯಿಲ್ಲ:
ಓಟು ಹಾಕಿಸಿಕೊಳ್ಳುವಾಗ ಕೈ ಮುಗಿದು ಬಂದು ನಿಲ್ಲುವ ಸ್ಥಳೀಯ ಜನಪ್ರತಿನಿಧಿಗಳು, ನಮಗೆ ಸಮಸ್ಯೆ ಆಗಿದೆ ಅದನ್ನು ಪರಿಹರಿಸಿಕೊಡಿ ಎಂದರೆ ಇದು ನಮಗೆ ಸೇರುವುದಿಲ್ಲ, ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಇಲ್ಲ ಸಲ್ಲದ ಸಬೂಬು ಹೇಳುತ್ತಾರೆ. ಈ ಬಗ್ಗೆ ಹತ್ತಾರು ಮನವಿಗಳನ್ನು ಕೊಟ್ಟು ಸಾಕಾಗಿದೆ ಎಂದು ದೂರುತ್ತಾರೆ ಸ್ಥಳೀಯರು.
ಇದೆಲ್ಲ ನೋಡುತ್ತಿದ್ದರೆ ಪಾರ್ಕುಗಳನ್ನು ನಿರ್ಮಾಣ ಮಾಡುವುದಕ್ಕೆ ಲಕ್ಷಾಂತರ ರೂ ಖರ್ಚು ಮಾಡುವ ಜಿಲ್ಲಾಡಳಿತ, ಕನಿಷ್ಠ ಮೂಲಭೂತ ಸೌಕರ್ಯ ಒದಗಿಸುವಲ್ಲಿ ವಿಫಲವಾಗಿರುವುದು ಬಹು ದೊಡ್ಡ ಆಶ್ಚರ್ಯವಾಗಿ ಕಂಡುಬರುತ್ತಿದೆ. ಇನ್ನು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಈ ಸಮಸ್ಯೆ ಕಣ್ಣಿಗೆ ಕಾಣುತ್ತಿಲ್ಲವೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಚರಂಡಿ ಇಲ್ಲದೇ ಕಲಹಕ್ಕೆ ನಾಂದಿ
ನಮಗೆ ಇನ್ನೇನು ಬೇಡ.. ಈ ಚರಂಡಿ ನೀರು ಸರಾಗವಾಗಿ ಹರಿಯುವಂತೆ ಮಾಡಿಕೊಟ್ಟು, ಕಸವನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಂಡು ಹೋದರೆ ಅಷ್ಟೇ ಸಾಕು. ನಾವೆಲ್ಲರೂ ಜೊತೆಯಾಗಿ ಅಣ್ಣ-ತಮ್ಮಂದಿರಂತೆ ಬದುಕುತ್ತಿದ್ದೇವೆ, ಆದರೆ ಈ ಸಮಸ್ಯೆಯಿಂದಾಗಿ ಪ್ರತಿದಿನ ಜಗಳ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಸಮಸ್ಯೆ ಬಗೆಹರಿಯುತ್ತದೆ ಎಂದರೆ ಧರಣಿ ಮಾಡುವುದಕ್ಕೂ ನಾವೆಲ್ಲರೂ ಸಿದ್ಧವಾಗಿದ್ದೇವೆ ಎಂದು ತಮ್ಮ ನೋವನ್ನು ಹೊರಹಾಕುತ್ತಾರೆ.
ಮಾಹಿತಿ-ಮಂಜುನಾಥ್ ಹೆಚ್. ಆರ್.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ