ತುಮಕೂರು :
ಸಿದ್ಧಗಂಗಾ ಮಠಕ್ಕೆ ನೇರ ಸಂಪರ್ಕ ರಸ್ತೆ ದುರಸ್ತಿಗೆ ಒತ್ತಾಯಿಸಿ ಇಂದು ಬೆಳಿಗ್ಗೆ 11ಕ್ಕೆ ಕ್ಯಾತ್ಸಂದ್ರ ವೃತ್ತದಲ್ಲಿ ಅಂಬೇಡ್ಕರ್ ಯುವ ಸೇನೆ ವತಿಯಿಂದ ಹೆದ್ದಾರಿ ಬಂದ್ ಹಮ್ಮಿಕೊಂಡಿದ್ದು, ಪ್ರಜಾಪ್ರಗತಿ ವರದಿ ಆಧರಿಸಿ ಸಂಘಟನೆಗಳು, ನಾಗರಿಕರು ಹೋರಾಟದ ಹಾದಿ ತುಳಿದಿದ್ದಾರೆ.
ಕ್ಯಾತ್ಸಂದ್ರ ರೈಲ್ವೆ ಸುರಂಗಮಾರ್ಗ ನಿರ್ಮಾಣ ಸಂಬಂಧ ಕಳೆದೊಂದು ವರ್ಷದಿಂದ ಕ್ಯಾತ್ಸಂದ್ರದಿಂದ ಸಿದ್ಧಗಂಗಾ ಮಠಕ್ಕೆ ಹೋಗುವ ರಸ್ತೆ ಮಾರ್ಗ ಬಂದ್ ಮಾಡಿದ್ದು, ಇದರಿಂದ ತ್ರಿವಿದ ದಾಸೋಹಕ್ಕೆ ಹೆಸರಾದ ಶ್ರೀ ಸಿದ್ಧಗಂಗಾ ಮಠಕ್ಕೆ ಕ್ಯಾತ್ಸಂದ್ರದಿಂದ ನೇರ ಹೋಗಲು ರಸ್ತೆ ಇಲ್ಲದಂತಾಗಿದೆ. ಭೂ ವಿವಾದದಿಂದ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ದಿನವೊಂದಕ್ಕೆ ಸುಮಾರು 30 ಸಾವಿರ ಜನ ಓಡಾಡುತ್ತಿದ್ದ ದಾರಿ, ವಾಹನ ಸಂಚಾರವೂ ಸಾಧ್ಯವಾಗದೆ ಶ್ರೀಮಠಕ್ಕೆ ಹೋಗುವ ಭಕ್ತಾದಿಗಳಿಗೆ ತುಂಬಾ ತೊಂದರೆಯಾಗಿರುತ್ತದೆ. ಈ ಸಂಬಂಧ ಸೆ.10ರಂದು ಪ್ರಜಾಪ್ರಗತಿಯಲ್ಲಿ ಮಠಕ್ಕೆ ನೇರ ಪ್ರವೇಶ ವರ್ಷದಿಂದ ಬಂದ್ ಎಂಬ ಶೀರ್ಷಿಕೆಯಡಿ ವಿಸ್ತೃತ ವರದಿ ಪ್ರಕಟಿಸಿತ್ತು. ಸಿದ್ಧಗಂಗಾ ಶ್ರೀಗಳು ಸಹ ತ್ವರಿತ ಕಾಮಗಾರಿ ಆಗಬೇಕೆಂದು ಅಭಿಪ್ರಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ರೈಲ್ವೆ ಸುರಂಗ ಮಾರ್ಗವನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಿ ಮಠದ ನೇರ ರಸ್ತೆ ಸಂಪರ್ಕ ಕ್ಕೆಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ಸಾರ್ವಜನಿಕರು ನಿರ್ಧರಿಸಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಶಾಂತಿಯುತವಾಗಿ ರಹದಾರಿ ಬಂದ್ ನಡೆಸಲಾಗುವುದು ಎಂದು ಅಂಬೇಡ್ಕರ್ ಯುವ ಸೇನೆ ಜಿಲ್ಲಾಧ್ಯಕ್ಷ ಜಿ.ಗಣೇಶ್, ಉಪಾಧ್ಯಕ್ಷ ಡಾ.ಎನ್.ವಿಜಯ್, ಮುಬಾರಕ್ ಅಲಿ, ಕುಮಾರ್ ಮುಂತಾದವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ