ತುಮಕೂರು :
ನಗರದ ಭೀಮಸಂದ್ರದ ಹೊಸ ಬಡಾವಣೆಯ ಅಂಬೇಡ್ಕರ್ ನಗರ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ ಎಂದು ಈ ಭಾಗದ ನಾಗರಿಕರು ದೂರಿದ್ದಾರೆ.
ನಗರ ಪಾಲಿಕೆಯು ಸ್ಮಾರ್ಟ್‍ಸಿಟಿಯಾಗುತ್ತಿದ್ದರೂ ಸಹ ಈ ಬಡಾವಣೆಯು ಇನ್ನೂ ಹಳ್ಳಿಯೋಪಾದಿಯಲ್ಲೇ ಇದೆ. ಇಲ್ಲಿ ಸರಿಯಾದ ರಸ್ತೆ ಇಲ್ಲ, ಚರಂಡಿ ಇಲ್ಲ, ಕುಡಿಯಲು ಯೋಗ್ಯವಾದ ನೀರಿಲ್ಲ. ವಾರಕ್ಕೊಮ್ಮೆ ನೀರು ಪೂರೈಸುತ್ತಿದ್ದರೂ ಸಹ ಅದು ಕುಡಿಯಲಿಕ್ಕೆ ಯೋಗ್ಯವಿಲ್ಲ. ಹೀಗಿದ್ದರೂ ಸಹ ಪಾಲಿಕೆ ಈ ವಾರ್ಡ್‍ಗೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಕನಿಷ್ಠ ಈ ವಾರ್ಡಿನ ಸದಸ್ಯರಾದರೂ ಈ ಬಗ್ಗೆ ಗಮನ ಹರಿಸಬೇಕಲ್ಲವೆ ಎಂಬುದು ಸಾರ್ವಜನಿಕರ ಪ್ರಶ್ನೆ.
ಇನ್ನು ವಾರ್ಡ್‍ನಲ್ಲಿ ಗಿಡಗಂಟೆಗಳು ಬೆಳೆದು ನಿಂತಿವೆ. ಇದರಿಂದ ಚರಂಡಿಯ ನೀರು ಸರಾಗವಾಗಿ ಹರಿಯದೆ ನಿಂತಲ್ಲೇ ನಿಂತಿರುತ್ತದೆ. ಇದರಿಂದ ದುರ್ವಾಸನೆ ಬೀರುತ್ತಿದೆ. ಜನರು ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರೋಗರುಜಿನಗಳ ಆತಂಕದಲ್ಲಿ ಜನರು ವಾಸಿಸುವಂತಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ನಗರ ಪಾಲಿಕೆ ಅಧಿಕಾರಿಗಳು ಹಾಗೂ ವಾರ್ಡಿನ ಸದಸ್ಯರು ಕೂಡಲೇ ಇತ್ತ ಗಮನ ಹರಿಸುವುದರ ಮೂಲಕ ಬಡಾವಣೆಗೆ ಸರಿಯಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ನಾಗರಿಕರು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
