ತುಮಕೂರು :
ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಕಡೆ ಹರಾಜು ಮೂಲಕ ಸದಸ್ಯತ್ವ ಪಡೆಯಲು ಯತ್ನಿಸಿ ಕಾನೂನು ಉಲ್ಲಂಘಿಸಿದವರ ವಿರುದ್ಧ ಒಟ್ಟು 9 ಪ್ರಕರಣಗಳನ್ನು ದಾಖಲಿಸಲಾಗಿದೆ.
ಕುಣಿಗಲ್ ತಾಲ್ಲೂಕು ಕಿತ್ನಾಮಂಗಲ ಗ್ರಾ.ಪಂ. ವ್ಯಾಪ್ತಿಗೆ ಸೇರಿದ ಕಾಡಮತ್ತಿಕೆರೆ ಗ್ರಾಮದ ಬಿ.ಸಿ.ಎಂ. ‘ಎ’ ಸ್ಥಾನಕ್ಕೆ ಲಕ್ಷ್ಮಮ್ಮ, ಅನುಸೂಚಿತ ಜಾತಿ ಮಹಿಳೆ ಸ್ಥಾನಕ್ಕೆ ಭಾಗ್ಯಮ್ಮ ಎಂಬುವರು ನಾಮಪತ್ರ ಸಲ್ಲಿಸಿದ್ದರು. ಇವರಿಬ್ಬರೂ ಅವಿರೋಧ ಆಯ್ಕೆಯಾಗಿರುತ್ತಾರೆ. ಈ ಆಯ್ಕೆಯ ಹಿಂದೆ ಹರಾಜು ಪ್ರಕ್ರಿಯೆ ನಡೆದಿರುವುದು ತಿಳಿದು ಬಂದಿದೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿ ಒಂದು ವಾರದ ಹಿಂದೆ ಗ್ರಾಮದ ಶ್ರೀ ಮಾರಮ್ಮ ದೇವಸ್ಥಾನದ ಮುಂಭಾಗ ಗ್ರಾ.ಪಂ. ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಹ ಅದನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ಲಕ್ಷ್ಮಮ್ಮ ಅವರಿಗೆ 11 ಲಕ್ಷದ 75 ಸಾವಿರ ರೂ.ಗಳನ್ನು ಹರಾಜು ಮೂಲಕ ಸದಸ್ಯತ್ವ ನೀಡಲು ಅವಿರೋಧವಾಗಿ ಆಯ್ಕೆ ಮಾಡಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.
ಈ ರೀತಿ ಅವಿರೋಧ ಆಯ್ಕೆಯ ಹರಾಜು ಪ್ರಕ್ರಿಯೆಗೆ ಕಾಡುಮತ್ತಿಕೆರೆ ಗ್ರಾಮದ ಜಯರಾಮಯ್ಯ, ರಂಗನಾಥ್, ನಾಗರಾಜು ಮತ್ತು ಮಂಜುನಾಥ ಕಾರಣರು ಎಂದು ತಿಳಿದು ಬಂದಿದೆ. ಕಾನೂನು ಬಾಹಿರವಾಗಿ ಹರಾಜು ಮೂಲಕ ಸದಸ್ಯತ್ವ ಸ್ಥಾನ ಆಯ್ಕೆ ಮಾಡಿದ್ದರಿಂದ ಅವರ ಮೇಲೆ ಐಪಿಸಿ ಕಲಂ 171 ಅನ್ವಯ ಪ್ರಕರಣ ದಾಖಲಿಸಲಾಗಿದೆ. ಜಯರಾಮ ಎಂಬುವರು ಇಂತಿಷ್ಟು ರೂ.ಗಳು ಎಂದು ಬಿಡ್ ಕೂಗಿದ್ದು, ಹೀಗೆ ಕೂಗಿರುವ ಮಾಹಿತಿ ವಿಡಿಯೋ ಮೂಲಕ ಲಭ್ಯವಾಗಿದೆ. ಮೊಬೈಲ್ ಜಾಲತಾಣದಲ್ಲಿಯೂ ಇದು ಅಪ್‍ಲೋಡ್ ಆಗಿದೆ.
ಮತ್ತೊಂದು ಪ್ರಕರಣ ತುರುವೇಕೆರೆ ತಾಲ್ಲೂಕಿನಿಂದ ವರದಿಯಾಗಿದೆ. ಮಾವಿನಕೆರೆ ಪಂಚಾಯತಿಗೆ ಸೇರಿದ ಮಾವಿನಕೆರೆ, ಮುದಿಗೆರೆ, ಬ್ಯಾಡರಹಳ್ಳಿ, ಕರಡಗೆರೆ, ಮೇಲಿನವರಗರಹಳ್ಳಿ ಗ್ರಾಮದಲ್ಲಿನ ಅಭ್ಯರ್ಥಿಗಳು ಕೆಂಪಮ್ಮ ದೇವರ ಹಾಗೂ ಇತರೆ ದೇವಾಲಯಗಳಿಗೆ ಹಣವನ್ನು ಬಳಸಿಕೊಳ್ಳಲು 37 ಲಕ್ಷದ 50 ಸಾವಿರ ರೂ.ಗಳಿಗೆ ಹಾಗೂ ಕಣತೂರು ಗ್ರಾ.ಪಂ.ಗೆ ಸೇರಿದ ಕಣತೂರು, ಮುದ್ದನಹಳ್ಳಿ ಗ್ರಾಮಗಳಲ್ಲಿ, ಗೋಣಿ ತುಮಕೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗೋಣಿ ತುಮಕೂರು ಗ್ರಾಮದಲ್ಲಿ ಅಭ್ಯರ್ಥಿಗಳ ಹರಾಜು ಆಗಿರುವ ಬಗ್ಗೆ ಮಾಹಿತಿಗಳು ಬಹಿರಂಗವಾಗಿದ್ದವು. ಈ ಸಂಬಂಧ ಐಪಿಸಿ 171 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಗುಬ್ಬಿ ತಾಲ್ಲೂಕು ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡದಹಳ್ಳಿ ಸಾಮಾನ್ಯ ಮಹಿಳಾ ಮೀಸಲು ಕ್ಷೇತ್ರಕ್ಕೆ ಮೀಸಲಿಟ್ಟಿದ್ದ ಸ್ಥಾನಕ್ಕೆ 5 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ ನಾಲ್ವರು ನಾಮಪತ್ರ ವಾಪಸ್ ಪಡೆದಿದ್ದರು. ಒಬ್ಬರು ಮಾತ್ರ ಅವಿರೋಧವಾಗಿ ಆಯ್ಕೆಯಾಗಿದ್ದರು. ಈ ಬಗ್ಗೆ ಗುಡ್ಡದಹಳ್ಳಿ ಗ್ರಾಮಸ್ಥರು ಆಕ್ಷೇಪಣೆ ಸಲ್ಲಿಸಿದ್ದರು. ಡಿ.4 ರಂದು ಮಧ್ಯಾಹ್ನ ಕೆಲವು ಮುಖಂಡರು ಗ್ರಾಮದ ದೇವಸ್ಥಾನ ಅಭಿವೃದ್ಧಿಗಾಗಿ 3 ಲಕ್ಷ 75 ಸಾವಿರ ರೂ.ಗಳ ಬಹಿರಂಗ ಹರಾಜು ಹಾಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಬಿದರೆ ಗ್ರಾ.ಪಂ. ಚುನಾವಣಾಧಿಕಾರಿಗಳು ನೀಡಿದ ದೂರಿನ ಮೇರೆಗೆ ಮೊಕದ್ದಮೆ ದಾಖಲಾಗಿದೆ.
ತಿಪಟೂರು ತಾಲ್ಲೂಕು ನೊಣವಿನಕೆರೆ ಗ್ರಾ.ಪಂ.ವ್ಯಾಪ್ತಿಗೆ ಸೇರಿದ ಆಲ್ಬೂರು ಗ್ರಾಮದ 2ನೇ ಬ್ಲಾಕಿನ ಮೂವರು ಸದಸ್ಯತ್ವ ಸ್ಥಾನಗಳಿಗೆ ಹರಾಜು ಮಾಡಲು ಪ್ರಯತ್ನಿಸುತ್ತಿದ್ದು, ಒಂದು ವೇಳೆ ಹರಾಜಾದರೆ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದರು. ಆಲ್ಬೂರು ಹಾಗೂ ಅಣಪನಹಳ್ಳಿ ಗ್ರಾಮಗಳ ನಡುವೆ ಗಲಾಟೆಗಳಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪಂಚಾಯತ್ ರಾಜ್ ಆ್ಯಕ್ಟ್, ಪ್ರಜಾಪ್ರತಿನಿಧಿ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ.
ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಕಡೆಗಳಲ್ಲಿ ಹದ್ದಿನ ಕಣ್ಣಿಟ್ಟಿದ್ದು, ಬೀಟ್ ಸಿಬ್ಬಂದಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಮಾಹಿತಿ ದೊರೆತಲ್ಲಿ ಕಾನೂನು ಉಲ್ಲಂಘಿಸುವವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
