ತುಮಕೂರು : ರಸ್ತೆ ಅಗಲೀಕರಣಕ್ಕೆ ಮನೆ, ಆಸ್ತಿಗಳ ತೆರವು!!

ತುಮಕೂರು :

     ನಗರದ 35ನೇ ವಾರ್ಡ್ ಖಾದರ್‍ನಗರದಲ್ಲಿ ರಿಂಗ್ ರಸ್ತೆಯಿಂದ ಬಿ.ಎಚ್.ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಬಟವಾಡಿ ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿದ್ದ ಮನೆ, ಆಸ್ತಿಗಳ ತೆರವು ಕಾರ್ಯಾಚರಣೆಯನ್ನು ಶುಕ್ರವಾರ ಮಹಾನಗರಪಾಲಿಕೆಯಿಂದ ನಡೆಸಲಾಯಿತು.

      ಮಹಾನಗರಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ ಮತ್ತು ಪಾಲಿಕೆ ಆಯುಕ್ತರಾದ ರೇಣುಕಾ ಅವರ ಸಮ್ಮುಖದಲ್ಲಿ ಪಾಲಿಕೆ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸಿದರು. ಈ ವೇಳೆ ಮಾತನಾಡಿದ ಮೇಯರ್ ಬಿ.ಜಿ.ಕೃಷ್ಣಪ್ಪ, ಬಟವಾಡಿಯಿಂದ ರೋಟಿಘರ್ ವರೆಗೆ ರಸ್ತೆ ಅಭಿವೃದ್ಧಿ ಬಹಳ ದಿನಗಳಿಂದ ನನೆಗುದಿಗೆ ಬಿದ್ದಿತ್ತು. ರಸ್ತೆ ಅಗಲೀಕರಣಕ್ಕೆ ಲೋಕೋಪಯೋಗಿ ಇಲಾಖೆಯವರು ಮಹಾನಗರಪಾಲಿಕೆಗೆ ಮನವಿ ಮಾಡಿದ್ದರ ಮೇರೆಗೆ ಸ್ಥಳೀಯ ನಿವಾಸಿಗಳ ಮನವೊಲಿಸಿ ಅವರಿಗೆ ಪರಿಹಾರದ ಭರವಸೆ ನೀಡಿದ್ದರ ಹಿನ್ನಲೆಯಲ್ಲಿ ಅವರೇ ಸ್ವಯಂಪ್ರೇರಿತವಾಗಿ ಮನೆ ಖಾಲಿ ಮಾಡಿ ರಸ್ತೆ ಅಗಲೀಕರಣಕ್ಕೆ ಸಹಕರಿಸಿದ್ದಾರೆಂದರು.

      ತುಮಕೂರಿನಲ್ಲಿ ಈಗಾಗಲೇ ಬೆಳಗುಂಬ, ಮೆಳೇಕೋಟೆ ರಸ್ತೆ ಅಗಲೀಕರಣ ಆಗಿದ್ದು, ಈ ರಸ್ತೆ ಮಾತ್ರ ಬಾಕಿ ಇತ್ತು. ಇಲ್ಲಿನ ಕೆಲವು ಆಸ್ತಿಗಳನ್ನು ತೆರವುಗೊಳಿಸುವುದು ಅನಿವಾರ್ಯವಾದ್ದರಿಂದ ಸ್ಥಳೀಯ ನಾಗರಿಕರನ್ನು ಭೇಟಿ ಮಾಡಿ ಅವರ ಮನವೊಲಿಸಲಾಗಿದೆ. ಅವರಲ್ಲಿರುವ ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಪರಿಹಾರ ನೀಡಲಾಗುವುದು. ತೆರವು ಕಾರ್ಯಾಚರಣೆ ಶಾಂತಿಯುತವಾಗಿ ನಡೆಯುತ್ತಿದ್ದು, ಸ್ವಯಂ ಪ್ರೇರಿತರಾಗಿ ಅವರೇ ತೆರವುಗೊಳಿಸಿಕೊಂಡು ರಸ್ತೆ ಅಗಲೀಕರಣಕ್ಕೆ ಸಹಕರಿಸುತ್ತಿದ್ದಾರೆ ಎಂದು ತಿಳಿಸಿದರು.

    ಜಿಲ್ಲಾಧಿಕಾರಿಗಳ ಅನುಮೋದನೆ ಪಡೆದು ಪರಿಹಾರ:

ತುಮಕೂರು ಮಹಾನಗರಪಾಲಿಕೆಯಿಂದ ಬಟವಾಡಿ ರಸ್ತೆ ಅಗಲೀಕರಣ ಸಲುವಾಗಿ ಸ್ಥಳೀಯ ಮನೆ ಮಾಲೀಕರ ಸಹಕಾರದೊಂದಿಗೆ ಶುಕ್ರವಾರ ತೆರವು ಕಾರ್ಯಚರಣೆ ನಡೆಸಲಾಯಿತು. ಮೇಯರ್, ಆಯುಕ್ತರು ಹಾಗೂ ಪಾಲಿಕೆ ಅಧಿಕಾರಿಗಳು ಪಾಲ್ಗೊಂಡರು.

     ಮಹಾನಗರಪಾಲಿಕೆ ಆಯುಕ್ತರಾದ ರೇಣುಕಾ ಮಾತನಾಡಿ, ಲೋಕೋಪಯೋಗಿ ಇಲಾಖೆಯಿಂದ ಸುಮಾರು 5 ಕೋಟಿ ರೂ.ವೆಚ್ಚದಲ್ಲಿ ರಿಂಗ್ ರಸ್ತೆಯಿಂದ ಬಿ.ಎಚ್.ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ರೈಲ್ವೆ ಹಳಿ ದಾಟಿದ ಬಳಿಕ ಇದ್ದ 24 ಆಸ್ತಿಗಳು ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿವೆ ತೆರವುಗೊಳಿಸಿಕೊಡಿ ಎಂದು ಲೋಕೋಪಯೋಗಿ ಇಲಾಖೆಯವರು ಮನವಿ ಮಾಡಿದ್ದರ ಮೇರೆಗೆ ಇಲ್ಲಿನ ನಿವಾಸಿಗಳ ಜೊತೆ ಚರ್ಚಿಸಿ ಅವರಿಗೆ ಪರಿಹಾರದ ಭರವಸೆ ನೀಡಿ, ರಸ್ತೆ ಅಗಲೀಕರಣಕ್ಕೆ ಚಾಲನೆ ನೀಡಲಾಗಿದೆ. ಇಲ್ಲಿರುವ 24 ಮನೆ, ಆಸ್ತಿಗಳಲ್ಲಿ 8ಕ್ಕೆಗೆ ಮಾತ್ರ ಖಾತೆ ಇದೆ. ಉಳಿದವಕ್ಕೆ ಖಾತೆಯಿಲ್ಲ, ಆದರೆ ದಾಖಲೆಗಳಿವೆ. ಎಲ್ಲರಿಗೂ ಪರಿಹಾರ ನೀಡುವುದಾಗಿ ಭರವಸೆ ನೀಡಲಾಗಿದೆ. ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದು ಅತಿ ಶೀಘ್ರದಲ್ಲಿ ಪರಿಹಾರ ವಿತರಿಸಲಾಗುವುದು ಎಂದರು.
ಜೆಸಿಬಿಗಳ ಮೂಲಕ ಬೆಳಿಗ್ಗೆಯಿಂದ ಸಂಜೆಯವರೆಗೂ ತೆರವು ಕಾರ್ಯಚರಣೆ ನಡೆಯಿತು. ಈ ಸಂದರ್ಭದಲ್ಲಿ ಪಾಲಿಕೆ 20 ನೇ ವಾರ್ಡಿನ ಸದಸ್ಯ ಎ.ಶ್ರೀನಿವಾಸ್, 31ನೇ ವಾರ್ಡಿನ ಸದಸ್ಯ ಸಿ.ಎನ್. ರಮೇಶ್, ಕಂದಾಯ ಅಧಿಕಾರಿ ಸರಸ್ವತಿ, ಮುಖಂಡ ಇಮ್ರಾನ್ ಪಾಷ ಸೇರಿದಂತೆ ಪಾಲಿಕೆ ಸಿಬ್ಬಂದಿ ಹಾಜರಿದ್ದರು.

      ಬಟವಾಡಿಯಿಂದ ರಿಂಗ್ ರಸ್ತೆವರೆಗೆ 80 ಅಡಿ ರಸ್ತೆಯಿದ್ದು, ರೈಲ್ವೆ ಹಳಿ ದಾಟಿದ ಬಳಿಕ ಕಿರಿದಾಗಿತ್ತು. ರೈಲ್ವೆ ಕ್ರಾಸಿಂಗ್ ಗೇಟ್ ಹಾಕುವ, ತೆಗೆಯುವ ಸಂದರ್ಭದಲ್ಲಿ ಸಾಲುಗಟ್ಟಲೇ ವಾಹನಗಳು ನಿಂತು ಎದುರು-ಬದಿರು ಸಂಚರಿಸಲು ತೊಂದರೆಯಾಗಿತ್ತು. ರಸ್ತೆ ಅಭಿವೃದ್ಧಿ ಪಡಿಸಲು ಅಗಲೀಕರಣ ಅನಿವಾರ್ಯವಾಗಿದ್ದು, ಅಲ್ಪಸಂಖ್ಯಾತ ನಿವಾಸಿಗಳು ಒಪ್ಪಿ ಅಗಲೀಕರಣಕ್ಕೆ ಸಹಕರಿಸಿದ್ದು ಒಳ್ಳೆಯ ಬೆಳವಣಿಗೆ. ಸೂಕ್ತ ಪರಿಹಾರ ಕೊಡಿಸಲು ಪಾಲಿಕೆ ಕ್ರಮವಹಿಸಲಿದೆ.

-ಬಿ.ಜಿ.ಕೃಷ್ಣಪ್ಪ, ಮೇಯರ್, ಮಹಾನಗರಪಾಲಿಕೆ.

ಬಟವಾಡಿ ರಸ್ತೆಯನ್ನು 80 ಅಡಿ ರಸ್ತೆ ಅಗಲೀಕರಣ ಮಾಡುವ ಉದ್ಧೇಶವಿತ್ತು. ಆದರೆ 10 ಅಡಿ ಕಡಿಮೆ ಮಾಡಿ ಎಂದು ಸ್ಥಳೀಯ ನಿವಾಸಿಗಳು ಕೋರಿದ್ದರ ಮೇರೆಗೆ 10 ಅಡಿ ಕಡಿಮೆ ಮಾಡಿ 70 ಅಡಿಗೆ ಸೀಮಿತಗೊಳಿಸಿ ರÀಸ್ತೆ ಅಗಲೀಕರಣ ಮಾಡಿ ಅಭಿವೃದ್ಧಿಗೊಳಿಸಲಾಗುವುದು.

-ರೇಣುಕಾ ಪಾಲಿಕೆ ಆಯುಕ್ತೆ.

      1970ರ ದಶಕದಿಂದಲೂ ನಾವು ಇಲ್ಲಿ ವಾಸಿಸುತ್ತಿದ್ದು, 74ರಲ್ಲಿ ಖಾತೆಯಾಗಿದೆ. ಈ ಸಂಬಂಧ ದಾಖಲೆಗಳಿವೆ. ರಸ್ತೆ ಅಗಲೀಕರಣಕ್ಕೆ ಮನೆ ತೆರವು ಮಾಡಿಕೊಡಿ ಎಂದು ಪಾಲಿಕೆಯವರು ಕೇಳಿದ್ದು, ಸೂಕ್ತ ಪರಿಹಾರ ಕಲ್ಪಿಸಿ ಕೊಡುವುದಾಗಿ ಹೇಳಿದ ಮೇರೆಗೆ ಆಸ್ತಿ ತೆರವಿಗೆ ಸಹಕರಿಸಿದ್ದೇವೆ. ನಾವೆಲ್ಲ ಬಡವರಾಗಿದ್ದು, ತಾತ್ಕಾಲಿಕ ಬಾಡಿಗೆ ಮನೆಗೆ ಸ್ಥಳಾಂತರಗೊಂಡಿದ್ದೇವೆ. ಶೀಘ್ರ ಪರಿಹಾರವನ್ನು ಪಾಲಿಕೆ ಕಲ್ಪಿಸಿಕೊಡಬೇಕು.

-ತೆರವಿಗೆ ಸಹಕರಿಸಿದ ಮನೆ ಮಾಲೀಕರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap