ತುಮಕೂರು : ಒತ್ತುವರಿ ತೆರವುಗೊಳಿಸಿ ರಸ್ತೆ ನಿರ್ಮಿಸಿ

ತುಮಕೂರು :

     ನಗರದ 11ನೆ ವಾರ್ಡಿಗೆ ಸೇರಿದ ಮೆಳೆಕೋಟೆಯಿಂದ ಗಂಗಸಂದ್ರಕ್ಕೆ ಹೋಗುವ ರಸ್ತೆಯ ಒತ್ತುವರಿ ತೆರವುಗೊಳಿಸಿ, ಸುಸಜ್ಜಿತ ರಸ್ತೆ ನಿರ್ಮಾಣ ಮಾಡುವಂತೆ ಸಂಸದ ಜಿ.ಎಸ್.ಬಸವರಾಜು ನಗರಪಾಲಿಕೆಯ ಆಯುಕ್ತರು ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ಮೆಳೆಕೋಟೆಯಿಂದ ಗಂಗಸಂದ್ರಕ್ಕೆ ಹೋಗುವ ರಸ್ತೆ ಸಿಡಿಪಿ ಪ್ರಕಾರ 40 ಅಡಿ ರಸ್ತೆಯಾಗಿದ್ದು, ಕೆಲವರು ರಸ್ತೆ ಒತ್ತುವರಿ ಮಾಡಿ ಮನೆ ನಿರ್ಮಿಸಿಕೊಂಡಿರುವ ಹಿನ್ನೆಲೆಯಲ್ಲಿ ಭಾನುವಾರ ಸ್ಥಳಕ್ಕೆ ಭೇಟಿ ನೀಡಿ, ಮನೆಯ ಮಾಲೀಕರು ಹಾಗೂ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದ ಸಂಸದರು, ರಸ್ತೆ ಅಗಲೀಕರಣವಾಗುವುದರಿಂದ ಈ ಭಾಗದ ನಿವೇಶನಗಳಿಗೆ ಉತ್ತಮ ಬೆಲೆ ಬರಲಿದೆ. ಅಲ್ಲದೆ ಒಂದು ಬಡಾವಣೆಯಿಂದ ಮತ್ತೊಂದು ಬಡಾವಣೆಗೆ ಸರಕು ಸಾಗಾಣಿಕೆ, ಪ್ರಯಾಣಿಕರ ವಾಹನಗಳು ಸುಗಮವಾಗಿ ಚಲಿಸಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಪೊಲೀಸರ ಸಹಕಾರದೊಂದಿಗೆ ಪಾಲಿಕೆಯ ನೌಕರರಿಂದ ರಸ್ತೆ ಒತ್ತುವರಿ ತೆರವುಗೊಳಿಸುವಂತೆ ಆಯುಕ್ತರಿಗೆ ನಿರ್ದೇಶನ ನೀಡಿದರು.

     ಈ ವೇಳೆ ಮಾತನಾಡಿದ ಆಯುಕ್ತರಾದ ರೇಣುಕಾ, 40 ಅಡಿ ಅಗಲದ ಮೆಳೆಕೋಟೆ-ಗಂಗಸಂದ್ರ ರಸ್ತೆಯ ಬಹುಪಾಲು ಕೆಲಸ ಪೂರ್ಣಗೊಂಡಿದ್ದು, ಕೇವಲ 500 ಮೀಟರ್ ರಸ್ತೆ ಅಭಿವೃದ್ಧಿ ಮಾತ್ರ ಬಾಕಿ ಇದೆ. ಲೋಕೋಪಯೋಗಿ ಇಲಾಖೆಯಿಂದ ಈ ರಸ್ತೆ ಅಭಿವೃದ್ಧಿ ಪಡಿಸುತ್ತಿದ್ದು, ಒತ್ತುವರಿ ತೆರವುಗೊಳಿಸಿಕೊಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಂಸದರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಒತ್ತುವರಿ ಮಾಡಿರುವ ಮನೆಗಳ ಮಾಲೀಕರೊಂದಿಗೆ ಮಾತನಾಡಿ, ಮನವೊಲಿಸುವ ಕೆಲಸ ಮಾಡಲಾಗಿದೆ. ಸಂಸದರ ನಿರ್ದೇಶನದಂತೆ ಮಂಗಳವಾರ ಪೊಲೀಸರ ಸಹಕಾರದೊಂದಿಗೆ ಒತ್ತುವರಿ ಮಾಡಿರುವ ಮನೆಗಳ ತೆರವು ಕಾರ್ಯಾಚರಣೆ ನಡೆಯಲಿದೆ ಎಂದರು.
ಈ ವೇಳೆ ವಾರ್ಡಿನ ಸದಸ್ಯ ಮನು, ಲೋಕೋಪಯೋಗಿ ಇಲಾಖೆಯ ಎಇಇ ಶಂಭುಕುಮಾರ್, ಎಇ ಸಿದ್ದಪ್ಪ ಹಾಗೂ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link