ತುಮಕೂರು : ಕೋವಿಡ್ ಸೋಂಕಿತರಿಗಾಗಿ 41.44ಕೋಟಿ ವೆಚ್ಚ..!

 ತುಮಕೂರು : 

ಖಾಸಗಿ ಆಸ್ಪತ್ರೆಯಲ್ಲಿ ಒದಗಿಸಲಾದ ಕೋವಿಡ್ ಚಿಕಿತ್ಸೆ (ಸಾಂದರ್ಭಿಕ ಚಿತ್ರ)

      ಕೋವಿಡ್ ಎರಡನೇ ಅಲೆಯಲ್ಲಿ ಸರಕಾರದ ಆದೇಶದ ಮೇರೆಗೆ ಶೇ.50ರಷ್ಟು ಬೆಡ್‍ಗಳನ್ನು ಒದಗಿಸಿ ಸೋಂಕಿತರಿಗೆ ಚಿಕಿತ್ಸೆ ನೀಡಿದ ಜಿಲ್ಲೆಯ ಖಾಸಗಿ ನರ್ಸಿಂಗ್ ಹೋಂಗಳು, ವೈದ್ಯಕೀಯ ಕಾಲೇಜುಗಳಿಗೆ ಸರಕಾರದಿಂದ ಈವರೆಗೆ ವೆಚ್ಚ ಮರುಪಾವತಿ ಮಾಡದೆ ಕೋಟಿ ಕೋಟಿ ರೂ. ಬಾಕಿ ಉಳಿಸಿಕೊಂಡಿರುವುದು ಕಂಡುಬಂದಿದೆ.

ಕೋವಿಡ್ ಎರಡನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದ ಕಾರಣಕ್ಕೆ ಸರಕಾರಿ ಆಸ್ಪತ್ರೆಗಳಲ್ಲಿ ಬೆಡ್‍ಗಳ ಕೊರತೆ ಉಂಟಾಯಿತು. ತಕ್ಷಣ ಮಧ್ಯ ಪ್ರವೇಶಿಸಿದ ಸರಕಾರ ಎಲ್ಲಾ ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂನವರು ತಮ್ಮಲ್ಲಿನ ಬೆಡ್‍ಗಳಲ್ಲಿ ಶೇ.50ರಷ್ಟನ್ನು ಸೋಂಕಿತರಿಗೆ ಮೀಸಲಿಟ್ಟು, ಸರಕಾರಿ ಆಸ್ಪತ್ರೆಯಿಂದ ಶಿಫಾರಸ್ಸಾದ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಮೀಸಲಿಡಿಸಿ ಚಿಕಿತ್ಸೆ ನೀಡಬೇಕೆಂದು ಆದೇಶಿಸಿತು. ಅದರಂತೆ ತುಮಕೂರು ಜಿಲ್ಲೆಯಲ್ಲೇ ಎರಡು ಖಾಸಗಿ ವೈದ್ಯಕೀಯ ಕಾಲೇಜುಗಳು ಸೇರಿ 25ಕ್ಕೂ ಅಧಿಕ ಖಾಸಗಿ ನರ್ಸಿಂಗ್ ಹೋಂಗಳು ಬೆಡ್‍ಗಳನ್ನು ಒದಗಿಸಿಕೋವಿಡ್ ಸೋಂಕಿತರ ಶುಶ್ರೂಷೆ ನಡೆಸಿದವು. ಆದರೆ ಈ ಚಿಕಿತ್ಸಾ ವೆಚ್ಚ ಈವರೆಗೆ ಮರುಪಾವತಿಯಾಗದಿರುವುದು ಚಿಕಿತ್ಸೆ ನೀಡಿದ ಖಾಸಗಿ ನರ್ಸಿಂಗ್ ಹೋಂಗಳವರು ಕಣ್ – ಕಣ್‍ಬಿಡುವಂತೆ ಮಾಡಿದ್ದು, ಮೂರನೇ ಅಲೆ ಎದುರಾದರೆ ನಾವು ಯಾರನ್ನು ನಂಬಿ ಸಹಕಾರ ಒದಗಿಸಬೇಕು ಎಂದು ಖಾಸಗಿ ನರ್ಸಿಂಗ್ ಹೋಂನವರು ಪ್ರಶ್ನಿಸುವಂತೆ ಮಾಡಿದೆ.

3480 ಮಂದಿಗೆ ಖಾಸಗಿಯಲ್ಲಿ ಚಿಕಿತ್ಸೆ:

      ಜಿಲ್ಲೆಯಲ್ಲಿ ಕೋವಿಡ್ ಮೊದಲ ಅಲೆ ಪ್ರಾರಂಭವಾದಂದಿನಿಂದ 2021 ಆಗಸ್ಟ್ 31ರವರೆಗೆ ಒಟ್ಟು 10,041 ಮಂದಿಗೆ ಚಿಕಿತ್ಸೆ ಒದಗಿಸಲಾಗಿದ್ದು, ಸರಕಾರಿ ಆಸ್ಪತ್ರೆಯಲ್ಲಿ 6,561 , ಖಾಸಗಿ ನಸಿಂಗ್ ಹೋಂಗಳಲ್ಲಿ 3480 ಮಂದಿಗೆ ಚಿಕಿತ್ಸೆ ನೀಡಲಾಗಿದೆ. ಸರಕಾರಿ, ಖಾಸಗಿ ಆಸ್ಪತ್ರೆ ಸೇರಿ ಒಟ್ಟು 41.44 ಕೋಟಿ ವೆಚ್ಚವಾಗಿದ್ದು, ಎರಡನೇ ಅಲೆಯಲ್ಲಿ 30ಕೋಟಿಗೂ ಅಧಿಕ ವೆಚ್ಚ ವಾಗಿದೆ. ಇದರಲ್ಲಿ ಖಾಸಗಿ ಆಸ್ಪತ್ರೆಗೆ ಬರಬೇಕಾದ ಮೊತ್ತವೇ ಕೋಟಿಗಟ್ಟಲೇ ಇದ್ದು, ಹತ್ತು ನರ್ಸಿಂಗ್ ಹೋಂಗಳು ಒಟ್ಟಾಗಿ ಸೇರಿ ಅಶ್ವಿನಿ ಆಸ್ಪತ್ರೆಯಲ್ಲಿ ತೆರೆದಿದ್ದ ಕೋವಿಡ್ ಆಸ್ಪತ್ರೆಗೆ 1 ಕೋಟಿ ಚಿಕಿತ್ಸಾ ವೆಚ್ಚ ಬಾಕಿ ಬರಬೇಕಿದೆ. ಸೂರ್ಯ ಆಸ್ಪತ್ರೆಗೆ 60ಲಕ್ಷಕ್ಕೂ ಅಧಿಕ , ನಿನಾದ್ ಪೃಥ್ವಿ ಆಸ್ಪತ್ರೆಗೆ 10 ಲಕ್ಷಕ್ಕೂ ಹೆಚ್ಚು.., ಹೀಗೆ 20ಕ್ಕೂ ಅಧಿಕ ಖಾಸಗಿ ಆಸ್ಪತ್ರೆಗಳಿಗೆ ಕೋಟಿಗಟ್ಟಲೇ ವೆಚ್ಚ ಮುರುಪಾವತಿ ಬಾಕಿ ಉಳಿದುಕೊಂಡಿದೆ.

      ಈ ರೀತಿ ಬಾಕಿ ಉಳಿಸಿಕೊಂಡಿರುವುದಕ್ಕೆ ತುಮಕೂರು ಜಿಲ್ಲಾ ಖಾಸಗಿ ನರ್ಸಿಂಗ್ ಹೋಂ ಆಡಳಿತ ಮಂಡಳಿಗಳ ಒಕ್ಕೂಟದವರು ಬೇಸರ ವ್ಯಕ್ತಪಡಿಸಿದ್ದು ಸರಕಾರದ ಸುವರ್ಣ ಆರೋಗ್ಯ ಟ್ರಸ್ಟ್(ಎಬಿಆರ್‍ಕೆ) ಮುಖ್ಯಸ್ಥರಿಗೂ ಪತ್ರ ಬರೆದಿದ್ದು, ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಡಾ.ಲಕ್ಷ್ಮೀಕಾಂತ್ ಪತ್ರಿಕ್ರಿಯಿಸಿದ್ದಾರೆ. ಅಂದು ಖಾಸಗಿ ಆಸ್ಪತ್ರೆಗಳಿಗೆ ಬೆಡ್‍ಗಳಿಗೆ ತೀವ್ರ ಒತ್ತಡ ಹಾಕಿದ್ದ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ಜನಪ್ರತಿನಿಧಿಗಳು ಈಗ ವೆಚ್ಚ ಮರುಪಾವತಿ ವಿಷಯದಲ್ಲಿ ಸರಕಾರದ ಮೇಲೆ ಒತ್ತಡ ಹಾಕಿ ಬಿಡುಗಡೆ ಮಾಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಆಕ್ಷೇಪಣೆ ಮುಂದು ಮಾಡಿ ವಿಳಂಬ:

       ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಬಜೆಟ್‍ನಲ್ಲಿ ಹತ್ತುಸಾವಿರ ಕೋಟಿಗೂ ಅಧಿಕ ಅನುದಾನವನ್ನು ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಮೀಸಲಿರಿಸಿದ್ದರು. ಆದರೂ ಎಬಿಆರ್‍ಕೆಯಡಿ ಕೋವಿಡ್‍ಗೆ ಚಿಕಿತ್ಸೆ ಒದಗಿಸಿದ ಖಾಸಗಿ ಆಸ್ಪತ್ರೆಗಳಿಗೆ ವೆಚ್ಚ ಮರುಪಾವತಿ ಮಾಡದಿರುವುದೇಕೆ ಎಂಬು ಪ್ರಶ್ನೆ ಎದುರಾಗಿದೆ. ಎಬಿಆರ್‍ಕೆಯಡಿ ಶಿಫಾರಸ್ಸಾದವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಬೇಕಿದ್ದು, ಕೆಲವು ಖಾಸಗಿ ಆಸ್ಪತ್ರೆಗಳು ಹೆಚ್ಚುವರಿ ದರ ವಸೂಲಿ ಮಾಡಿದ್ದಾರೆಂದು ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಬಿಲ್‍ಗಳನ್ನು ಸುವರ್ಣ ಆರೋಗ್ಯ ಟ್ರಸ್ಟ್ ತಡೆಹಿಡಿದಿದೆ ಎಂದು ಖಾಸಗಿ ಆಸ್ಪತ್ರೆಯವರೇ ಹೇಳುತ್ತಿದ್ದಾರೆ. ಆದರೆ ವಾಸ್ತವವಾಗಿ ಎಬಿಆರ್‍ಕೆ ಮಾನದಂಡದಡಿಯೇ ಚಿಕಿತ್ಸೆ ನೀಡಬೇಕೆಂದಿದ್ದರೆ ಸೋಂಕಿತರ ತ್ವರಿತ ಗುಣಮುಖ ಅಸಾಧ್ಯವಾಗುತ್ತಿತ್ತು. ಹೆಚ್ಚಿನ ಸೌಲಭ್ಯ, ತುರ್ತು ಔಷಧಗಳನ್ನು ಒದಗಿಸಿ ಸೋಂಕಿತರನ್ನು ಗುಣಪಡಿಸಲಾಗಿದೆ. ಇದಕ್ಕೆ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಸೋಂಕಿತರ ಕಡೆಯವರು ಒಪ್ಪಿ ಹೆಚ್ಚುವರಿ ಹಣಪಾವತಿಸಿದ್ದಾರೆ. ಗುಣಮುಖರಾದ ಬಳಿಕ ಹಣ ವಾಪಸ್ ಕೊಡಿಸಿ ಎಂದೆಲ್ಲ ತಕರಾರು ಮಾಡುವುದು, ಇದನ್ನೇ ಆಧರಿಸಿ ಬರಬೇಕಾದ ಬಾಕಿ ಮೊತ್ತವನ್ನೆಲ್ಲ ಎಬಿಆರ್‍ಕೆಯವರು ತಡೆಹಿಡಿಯುವುದು ಸಮಂಜಸವಲ್ಲ. ಹೀಗೆ ಮಾಡಿದರೆ 3ನೇ ಅಲೆ ಎದುರಾದಾಗ ಸರಕಾರ ಖಾಸಗಿ ನರ್ಸಿಂಗ್ ಹೋಂಗಳಿಂದ ನಿರೀಕ್ಷಿತ ಸಹಕಾರ ಕೊಡುವುದು ಅಸಾಧ್ಯವಾಗುತ್ತದೆ ಎಂದು ಖಾಸಗಿ ನರ್ಸಿಂಗ್ ಹೋಂ ಆಡಳಿತ ಮಂಡಳಿಯವರು ಎಚ್ಚರಿಸಿದ್ದಾರೆ.

      ಆಕ್ಷೇಪಣೆಗಳಿರುವ ಖಾಸಗಿ ಆಸ್ಪತ್ರೆ ಬಿಲ್‍ಗಳನ್ನು ಎಬಿಆರ್‍ಕೆಯವರು ಪರಿಶೀಲಿಸಿಯೇ ಬಿಡುಗಡೆ ಮಾಡಬೇಕೆಂಬುದು ನಿಯಮ. ಉಳಿದಂತೆ ಕೋವಿಡ್ ಎರಡು ಅಲೆಗಳಿಗೂ ಸಂಬಂಧಿಸಿದಂತೆ ಜಿಲ್ಲೆಯ ಖಾಸಗಿ ಆಸ್ಪತ್ರೆಗಳವರು ಮಾಡಿದ ವೆಚ್ಚ ಮಂಜೂರಾಗಿದೆ.
-ಶ್ವೇತಾ, ಸುವರ್ಣ ಆರೋಗ್ಯ ಟ್ರಸ್ಟ್ ಜಿಲ್ಲಾ ಮುಖ್ಯಸ್ಥರು.

      ಆರೋಗ್ಯ ಇಲಾಖೆಯವರಿಗೆ ಅಂದು ಖಾಸಗಿ ಆಸ್ಪತ್ರೆಗಳಿಗೆ ಒತ್ತಡ ಹೇರಿ ಬೆಡ್ ಕೊಡಿಸುವ ಮಾರ್ಗ ಗೊತ್ತಿತ್ತು, ಈಗ ಎಬಿಆರ್‍ಕೆಯಡಿ ಚಿಕಿತ್ಸೆ ನೀಡಿದ ವೆಚ್ಚವನ್ನು ಮರುಪಾವತಿ ಮಾಡಿಸಲು ಸಾಧ್ಯವಾಗುತ್ತಿಲ್ಲವೇಕೇ? ತುರ್ತುಸೇವೆಯಲ್ಲಿರುವ ವೈದ್ಯರುಗಳು ಸರಕಾರ ಕಚೇರಿಗಳಿಗೆ ಕಡತ ಹಿಡಿದು ಅಲೆಯಬೇಕು. ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನಹರಿಸಬೇಕು.

-ಡಾ.ಟಿ.ಎಸ್.ಶಶಿಧರ್, ನಿನಾದ್ ಪೃಥ್ವಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ.

      ತುಮಕೂರು ಜಿಲ್ಲಾ ಖಾಸಗಿ ನಸಿಂಗ್ ಹೋಂ, ಆಸ್ಪತ್ರೆಗಳ ಅಸೋಸಿಯೇಷನ್‍ನಿಂದ ಕೋವಿಡ್ ಚಿಕಿತ್ಸೆ ಬಾಕಿ ಬಿಡುಗಡೆಗೆ ಎಬಿಆರ್‍ಕೆಗೆ ಪತ್ರ ಬರೆಯಲಾಗಿದೆ. ಹೆಚ್ಚುವರಿ ದರ ಪಡೆಯಲಾಗಿದೆ ಎಂಬ ಆರೋಪಗಳಿಗೆ ಸ್ಪಷ್ಟೀಕರಣ ನೀಡಿ ಕೆಲವರಿಗೆ ಹಣವನ್ನು ವಾಪಸ್ ನೀಡಲಾಗಿದೆ. ಆದರೂ ಕೋಟಿಗಟ್ಟಲೇ ಖಾಸಗಿ ಆಸ್ಪತ್ರೆಗಳ ಬಿಲ್ ಬಾಕಿ ಉಳಿಸಿಕೊಂಡಿದÀ್ದು, ಪರಿಶಿಷ್ಟ ಜಾತಿ, ವರ್ಗದ ಮ್ಯಾನೇಜ್‍ಮೆಂಟ್ ಆಸ್ಪತ್ರೆಗಳ ನಿರ್ವಹಣೆ ಮತ್ತಷ್ಟು ಕಷ್ಟವಾಗಿದೆ. ಎಲ್ಲಾ ಆಸ್ಪತ್ರೆಗಳ ಬಾಕಿಯನ್ನು ತ್ವರಿತ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಮೂರನೇ ಅಲೆ ಎದುರಾದಾಗ ಅಗತ್ಯ ಸಹಕಾರ ಒದಗಿಸುವುದು ಖಾಸಗಿಯವರಿಗೆ ಕಷ್ಟವಾಗಲಿದೆ.
-ಡಾ.ಲಕ್ಷ್ಮೀಕಾಂತ್, ಖಾಸಗಿ ನರ್ಸಿಂಗ್ ಹೋಂಗಳ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ.

 -ಎಸ್.ಹರೀಶ್ ಆಚಾರ್ಯ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap