ತುಮಕೂರು : ಕುಡುಕರಿಗಿಲ್ಲ ಕಡಿವಾಣ, ಕಣ್ಮುಚ್ಚಿದೆಯಾ ಪೊಲೀಸ್, ಅಬ್ಕಾರಿ?

  ತುಮಕೂರು :

    ಶೈಕ್ಷಣಿಕ ನಗರಿ, ಸಂಸ್ಕøತಿ -ಕಲೆ- ಧರ್ಮದ ಸಂಗಮವೆನಿಸಿರುವ ತುಮಕೂರು ನಗರ ಇತ್ತೀಚೆಗೆ ಕುಡುಕರ ನಗರಿಯೆಂಬ ಕುಖ್ಯಾತಿಗೆ ಭಾಜನವಾಗುತ್ತಿದ್ದು, ನಗರದಲ್ಲಿ ಕುಡಿದ ನಶೆಯಲ್ಲಿ ಪುಂಡರು ಮಾಡುತ್ತಿರುವ ದಾಂಧಲೆ, ಹಾವಳಿ ಹೆಚ್ಚಾಗಿದೆ. ಇದು ಜಿಲ್ಲಾ ಕೇಂದ್ರದಲ್ಲೇ ಕಾನೂನು ಸುವ್ಯವಸ್ಥೆ ಹದಗೆಡಲು ಕಾರಣವಾಗಿದ್ದು, ಪೊಲೀಸರು, ಅಬ್ಕಾರಿ ಅಧಿಕಾರಿಗಳು ಏನು ಮಾಡುತ್ತಿದ್ದಾರೆಂದು ನಾಗರಿಕರು ಪ್ರಶ್ನಿಸುವಂತೆ ಮಾಡಿದೆ.

      ಕೋವಿಡ್‍ನಿಂದ ಕುಸಿತಕಂಡಿದ್ದ ಸಂಪನ್ಮೂಲ ಸಂಗ್ರಹಣೆ ಹೆಚ್ಚಳಕ್ಕೆ ಅಬ್ಕಾರಿ ಆದಾಯ ಹೆಚ್ಚಿಸಿಕೊಳ್ಳುವುದಕ್ಕೆ ಮುಂದಾದ ಸರಕಾರದ ಕ್ರಮದಿಂದಾಗಿ ಕುಡುಕರ ಸಂಖ್ಯೆ ಮಿತಿಮೀರಿದ್ದು, ಸಾಮಾಜಿಕ ದುಷ್ಪರಿಣಾಮಗಳನ್ನು ಉಂಟುಮಾಡುತ್ತಿದೆ. ಹದಿಹರೆಯದ ಯುವಜನರು ಕುಡಿತಕ್ಕೆ ದಾಸರಾಗಿ ದುಂಡಾವರ್ತನೆಯಲ್ಲಿ ತೊಡಗಿದ್ದು, ಕುಡಿದ ನಶೆಯಲ್ಲಿ ತ್ರಿಬಲ್‍ರೈಡಿಂಗ್, ವ್ಹೀಲಿಂಗ್, ದಾರಿಯಲ್ಲಿ ತಮ್ಮ ಪಾಡಿಗೆ ತಾವೂ ಹೋಗುವವರನ್ನು ಬಿಡದೆ ಕಾಡಿಸುವುದು, ಹಲ್ಲೆಗೈಯ್ಯುವಂತಹ ಕೆಟ್ಟ ಪ್ರವೃತ್ತಿಗೆ ಮುಂದಾಗಿರುವುದು ಶಾಂತಿಪ್ರಿಯರಾದ ತುಮಕೂರು ನಗರದ ಜನತೆಯನ್ನು ಕಂಗೆಡೆಸಿದೆ.

ಖಾಲಿ ಲೇಔಟ್‍ಗಳು, ಕೆರೆ ಬದಿ, ಪಾರ್ಕ್‍ಗಳಲ್ಲಿ ಕುಡುಕರ ಕಾಟ:

      ಕುಡುಕರು ತಮ್ಮ ದಾಂಧಲೆಗೆ ಹೊಸದಾಗಿ ನಿರ್ಮಾಣವಾದ ಕೆಲವೇ ವಸತಿಗಳಿರುವ ಲೇಔಟ್‍ಗಳು ಕೆರೆ ಸಮೀಪದ ಖಾಲಿ ಪ್ರದೇಶಗಳು, ಮೈದಾನಗಳು, ದೊಡ್ಡ ಪಾರ್ಕ್‍ಗಳನ್ನು ಬಳಸಿಕೊಳ್ಳುತ್ತಿದ್ದು, ಮದ್ಯದ ಬಾಟಲಿಗಳನ್ನು ಕೊಂಡೊಯ್ದು, ಅಲ್ಲೇ ಕುಡಿದು ತಿಂದು ಬಾಟಲ್‍ಗಳನ್ನು ಎಸೆದು ಕೂಗಾಟ ರಂಪಾಟ ಮಾಡುತ್ತಿದ್ದಾರೆ. ಇದನ್ನು ಸ್ಥಳೀಯ ನಿವಾಸಿಗಳು ಪ್ರಶ್ನಿಸಲು ಮುಂದಾದರೆ ಅವರ ಮೇಲೆ ಹಲ್ಲೆ ಮಾಡಿ, ಬಾಟಲ್‍ನಲ್ಲೇ ಇರಿಯುವಯತ್ನ ಮಾಡುವ ಮಟ್ಟಿಗೆ ದುಷ್ಕøತ್ಯಕ್ಕೆ ಮುಂದಾಗಿರುವುದನ್ನು ನೋಡಿದರೆ ಕಾನೂನು, ಪೊಲೀಸ್, ಆಡಳಿತ ವ್ಯವಸ್ಥೆ ಮದ್ಯವ್ಯಸನಿಗಳಿಗೆ ಲೆಕ್ಕವೇ ಇಲ್ಲದಂತಾಗಿದೆ.

10-20 ಅಡಿಗೊಂದು ಮದ್ಯದಂಗಡಿಗಳು:

     ನಗರದ ಹೃದಯಭಾಗವಾದ ಬೆಳಗುಂಬ ರಸ್ತೆಯನ್ನೇ ಉದಾಹರಣೆಗೆ ತೆಗೆದುಕೊಳ್ಳುವುದಾದರೆ ತಮ್ಮಯ್ಯ ಆಸ್ಪತ್ರೆಯಿಂದ ಆರಂಭಗೊಂಡು ಸತ್ಯಮಂಗಲದವರೆಗೆ 8 ಸಂಖ್ಯೆಯ ಬಾರ್ ಅಂಡ್ ರೆಸ್ಟೋರೆಂಟ್‍ಗಳು, ಡಾಬಾಗಳು, ಬೋರ್ಡಿಂಗ್ ಲಾಡ್ಡಿಂಗ್ ಕಂ ಲಿಕ್ಕರ್ ಶಾಪ್‍ಗಳು ಇವೆ. ನಾಮದ ಚಿಲುಮೆ, ದೇವರಾಯನದುರ್ಗ ಹಾಗೂ ರಾಷ್ಟ್ರೀಯ ಹೆದ್ದಾರಿ 48ಕ್ಕೂ ಇದೇ ಭಾಗದಿಂದ ಪ್ರವೇಶಪಡೆಯಬೇಕಿದ್ದು, ಜನದಟ್ಟಣೆ ಹೆಚ್ಚಿದೆ. ತುಮಕೂರು ವಿವಿ ಸೇರಿದಂತೆ ಶಾಲಾ ಕಾಲೇಜು, ಹಾಸ್ಟೆಲ್‍ಗಳು ಈ ಭಾಗದಲ್ಲಿ ಬರುವುದರಿಂದ ವಿದ್ಯಾರ್ಥಿಗಳು, ಯುವಜನರ ಸಂಚಾರವೂ ಹೆಚ್ಚಿದೆ. ಪ್ರತಿದಿನ ರಾತ್ರಿ ರಸ್ತೆ ತನಕ ಬಂದು ತೂರಾಡುವ ಕುಡುಕರ ಹಾವಳಿಯಿಂದ ನಾಗರಿಕರು 7ಗಂಟೆ ನಂತರ ಈ ಭಾಗದಲ್ಲಿ ಓಡಾಡುವುದೇ ದುಸ್ತರವಾಗಿದ್ದು, ವಾರಾಂತ್ಯ, ರಜೆ ದಿನಗಳಂದು ಕುಡುಕರದ್ದೇ ದರ್ಬಾರ್ ಆಗಿದೆ. ಇವುಗಳೊಂದಿಗೆ ಕ್ಯಾಸಿನೊ(ಜೂಜಾಟದ ಕೇಂದ್ರಗಳು), ಡಿಸ್ಕೊ, ಕ್ಯಾಬರೆಯಂತಹ ಕೇಂದ್ರಗಳು ನಗರ ಭಾಗಗಳಲ್ಲಿ ತಲೆಎತ್ತಿದರೆ ಸರಕಾರದ ಖಜಾನೆ ಅರ್ಧ ತುಂಬಿಸಬಹುದು ಎಂದು ಪ್ರಜ್ಞಾವಂತರು ವ್ಯಂಗ್ಯವಾಡುವ ಸ್ಥಿತಿ ನಿರ್ಮಾಣವಾಗಿದೆ.

ಬೀಟ್ ಪೊಲೀಸರು ಇತ್ತ ಗಮನಹರಿಸುತ್ತಿಲ್ಲವೇ: 

      ಪ್ರತೀ ವಾರ್ಡ್ ಬಡಾವಣೆಗಳಿಗೂ ಬೀಟ್ ಪೊಲೀಸ್ ವ್ಯವಸ್ಥೆಯನ್ನು ಅಸ್ಥಿತ್ವಕ್ಕೆ ತರಲಾಗಿದೆ. ಬೈಕ್‍ನಲ್ಲಿ ಗಸ್ತು ತಿರುಗಿ ಪುಂಡ ಪೋಕರಿ, ಕಳ್ಳರ ಬಗ್ಗೆ ಎಚ್ಚರವಹಿಸುವುದು ಬೀಟ್ ಪೊಲೀಸರ ಜವಾಬ್ದಾರಿಯಾಗಿದ್ದು, ಮದ್ಯದಂಗಡಿಗಳು ರೆಸ್ಟೊರೆಂಟ್ ಸುತ್ತಮುತ್ತ ಹಾಗೂ ಕುಡುಕರು ಅಡ್ಡೆ ಮಾಡಿಕೊಂಡಿರುವ ಸ್ಥಳಗಳಲ್ಲಿ ಬೀಟ್ ಪೊಲೀಸರು ನಿರಂತರ ಗಸ್ತು ತರುಗಿದರೆ ಕುಡುಕರ ಹುಚ್ಚಾಟಕ್ಕೆ ಕಡಿವಾಣಹಾಕಬಹುದಾಗಿದೆ. ಆದರೆ ಅದೇಕೋ ಬೀಟ್ ಪೊಲೀಸಿಂಗ್ ವ್ಯವಸ್ಥೆ ಇದ್ದೂ ಇಲ್ಲದಂತಿರುವುದು ತಮ್ಮನ್ನು ಯಾರು ಕೇಳುವವರಿಲ್ಲವೆಂದು ಮನಸೋ ಇಚ್ಚೆ ವರ್ತನೆಗೆ ಆಸ್ಪದ ನೀಡಿದೆ ಎಂಬುದು ಪ್ರಜ್ಞಾವಂತರ ದೂರಾಗಿದೆ.

ಆದಾಯ ಹೆಚ್ಚಿಸಿಕೊಳ್ಳಲು ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ

ರಾಜ್ಯ ಸರಕಾರಕ್ಕೆ ಅಬ್ಕಾರಿ ಸುಂಕದಿಂದಲೇ 20ಸಾವಿರ ಕೋಟಿಗೂ ಅಧಿಕ ಆದಾಯ ಸಂಗ್ರಹವಾಗುತ್ತಿದ್ದು ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ಸರಕಾರಕ್ಕೆ ಅಬ್ಕಾರಿ ಆದಾಯ ಸಂಪೂರ್ಣ ಕುಸಿದಿತ್ತು. ಅನ್‍ಲಾಕ್ ಬಳಿಕ ಆದಾಯ ಹೆಚ್ಚಿಸಿಕೊಳ್ಳಲು ಅಬ್ಕಾರಿ ಇಲಾಖೆಗೆ ಟಾರ್ಗೆಟ್ ನೀಡಿದ್ದು, ಗುರಿ ತಲುಪಲು ಮದ್ಯದಂಗಡಿಗಳ ಮೇಲೆ ನಿಯಂತ್ರಣವಿಲ್ಲದೆ ಇಲಾಖೆಯವರು ಅನುಸರಿಸಿದ ಸಡಿಲ ನೀತಿ, ಕುಡುಕರ ಸಂಖ್ಯೆ ಹೆಚ್ಚಳದ ಜೊತೆಗೆ ಸಾಮಾಜಿಕ ದುಷ್ಪರಿಣಾಮಗಳಿಗೆ ಕಾರಣವಾಗಿಸಿದೆ. ನಿಯಮ ಉಲ್ಲಂಘಿಸಿ ಬಾರ್‍ಗಳ ಬಳಿಯೇ ಕುಡಿಯುವುದು, ಕುಡಿದು ಗಾಡಿ ಚಲಾಯಿಸುವುದು, ಪ್ರಶ್ನಿಸಲು ಬಂದ ಪೊಲೀಸರು, ಅಧಿಕಾರಿಗಳ ಮೇಲೂ ಹಲ್ಲೆಗೆ ಮುಂದಾಗುವ, ಸುಲಿಗೆ ಮಾಡುವ ಉದಾಹರಣೆಗಳು ಸಾಕಷ್ಟು ನಗರದಲ್ಲಿ ನಡೆದಿವೆ. ಹಣದಾಸೆಗೋ, ಗುರಿ ತಲುಪಲೋ ಮದ್ಯದಂಗಡಿಗಳನ್ನು, ಕುಡುಕರನ್ನು ನಿಯಂತ್ರಿಸದಿದ್ದರೂ ನಾಗರಿಕ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟಾಗುವುದಲ್ಲದೆ ಬಡ ಕುಟುಂಬಗಳು ಕಣ್ಣೀರಲ್ಲಿ ಕೈ ತೊಳೆಯುವ ಸ್ಥಿತಿ ಉಂಟಾಗಲಿದೆ.

ತುಮಕೂರು ನಗರದಲ್ಲೆ 94 ಮದ್ಯದಂಗಡಿಗಳು!

ನಗರದ ಬ್ಯಾನಿಯನ್ ಟ್ರೀ ಪಾರ್ಕ್‍ನಲ್ಲಿ ಕಾಣಸಿಗುವ ಮದ್ಯದ ಬಾಟೆಲ್‍ಗಳು.

      ಅಧಿಕೃತ ಲೈಸನ್ಸ್ ಹೊಂದಿರುವ ಬಾರ್ ಅಂಡ್ ರೆಸ್ಟೊರೆಂಟ್‍ಗಳ ಸಂಖ್ಯೆ ಜಿಲ್ಲೆಯಲ್ಲಿ 388 ಸಂಖ್ಯೆಯಲ್ಲಿದ್ದು ತುಮಕೂರು ನಗರ ಒಂದರಲ್ಲೇ 94 ಮದ್ಯದಂಗಡಿಗಳಿವೆ. ಜಿಲ್ಲೆಯಲ್ಲಿ ಅತ್ಯಧಿಕ ಮದ್ಯದಂಗಡಿಗಳು ತುಮಕೂರು ತಾಲೂಕಿನಲ್ಲಿ 128 ಸಂಖ್ಯೆಗಳಲ್ಲಿದ್ದು, ಬೋರ್ಡಿಂಗ್, ಲಾಡ್ಡಿಂಗ್ ಹೊಂದಿರುವ ವಸತಿಗೃಹಗಳಿಗೆ ಸಿಎಲ್-7 ಲೈಸ್‍ನ್ಸ್ ನಡಿ ಮದ್ಯ ಮಾರಾಟಕ್ಕೆ ಅಧಿಕೃತ ಅನುಮತಿ ನೀಡಲಾಗುತ್ತಿದ್ದು ಇದರ ದುರುಪಯೋಗವಾಗುತ್ತಿದೆ ಎಂಬ ದೂರುಗಳು ವ್ಯಾಪಕವಾಗಿವೆ. ಕುಡುಕರ ಹಾವಳಿ ನಿಯಂತ್ರಿಸಬೇಕಾದರೆ ಬಾರ್ ಮತ್ತು ರೆಸ್ಟೊರೆಂಟ್ ಒಳಗೆ ಹೊರಗಡೆ ಸಿಸಿ ಕ್ಯಾಮೆರಾ ಕಡ್ಡಾಯ ಮಾಡುವ ಜೊತೆಗೆ ಹೊಸ ಲೇಔಟ್‍ಗಳು, ಖಾಲಿ ಪ್ರದೇಶಗಳ ಬಳಿಯೂ ಸಿಸಿ ಕ್ಯಾಮೆರಾ ಅಳವಡಿಕೆ ಕಡ್ಡಾಯವಾಗಬೇಕಿದೆ.

     ತುಮಕೂರು ನಗರದಲ್ಲಿ ಹೆಚ್ಚಳವಾಗಿರುವ ಕುಡುಕರ ಹಾವಳಿ ಬಗ್ಗೆ ಗಮನಕ್ಕೆ ಬಂದಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಇಲಾಖೆ ಮೂಲ ಕರ್ತವ್ಯವಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ದಾಂಧಲೆ ನಡೆಸುವವರನ್ನು ಮಟ್ಟ ಹಾಕಲು ಸೂಚಿಸಿರುವೆ.

-ರಾಹುಲ್‍ಕುಮಾರ್ ಶಹಾಪುರವಾಡ್, ಎಸ್ಪಿ. ತುಮಕೂರು

 

     ಮಾಧ್ಯಮಗಳಲ್ಲಿ ಸುದ್ದಿಯಾದಾಗ, ಮಹಿಳಾ ಸಂಘಟನೆಗಳು ಹೋರಾಟಮಾಡಿದಾಗಲಷ್ಟೇ ಅಕ್ರಮ ಮದ್ಯ ಮಾರಾಟ, ಕುಡಿತದ ನಿಯಂತ್ರಣದ ಶಾಸ್ತ್ರ ಮಾಡುವ ನಮ್ಮ ಆಡಳಿತ ವ್ಯವಸ್ಥೆ, ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ತರುವ ಕೃತ್ಯಗಳನ್ನು ನಿಯಂತ್ರಣದಲ್ಲಿಡಲು ನಿರಂತರ ಪರಿಶೀಲನೆ ಕ್ರಮ ಅಗತ್ಯವಾಗಿದೆ.

-ರಾಘವೇಂದ್ರ ಸಾಮಾಜಿಕ ಹೋರಾಟಗಾರ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link