‘ಭ್ರಷ್ಟಾಚಾರದ ದೂರು ನೀಡಲು ಹಿಂಜರಿಯಬೇಡಿ’ -ಎಸಿಬಿ ಎಸ್ಪಿ

 ತುಮಕೂರು : 

     ನಾಗರಿಕರು ಇಲಾಖೆಗಳಲ್ಲಿನ ನೌಕರರು, ಅಧಿಕಾರಿಗಳ ಭ್ರಷ್ಟಾಚಾರದ ಬಗ್ಗೆ ದೂರು ನೀಡಲು ಹಿಂಜರಿಯುವುದು ಬೇಡ. ದೂರು ನೀಡಿದರೆ ಯಾವ ಕ್ರಮವಾಗುತ್ತದೆಂಬ ಅಪನಂಬಿಕೆಯೂ ಬೇಡ. ಕ್ರಮ ತತ್‍ಕ್ಷಣ ಆಗದಿದ್ದರೂ ಪರಿಣಾಮವಂತೂ ಆಗುತ್ತದೆ. ದೂರನ್ನು ಆಧರಿಸಿ ಕೇಸು ದಾಖಲಿಸಿ ಆರೋಪಿತರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಸಿಬಿ ಕೇಂದ್ರ ವಲಯ ಎಸ್ಪಿ ಕಲಾ ಕೃಷ್ಣಸ್ವಾಮಿ ತಿಳಿಸಿದರು.

      ನಗರದ ಎಸಿಬಿ ಕಚೇರಿ ಆವರಣದಲ್ಲಿ ನಡೆದ ಸಾರ್ವಜನಿಕ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಳೆದ ಹಲವು ತಿಂಗಳಿಂದ ಕೋವಿಡ್ ಕಾರಣಕ್ಕೆ ಎಸಿಬಿ ಕಾರ್ಯಚಟುವಟಿಕೆಯಲ್ಲಿ ಕುಂಠಿತವಾಗಿದೆ. ಈಗ ಪರಿಸ್ಥಿತಿ ಸುಧಾರಿಸುತ್ತಿದ್ದು, ಇನ್ನೂ ಮುಂದೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಾರ್ವಜನಿಕ ಸಂಪರ್ಕ ಸಭೆ ನಡೆಸಿ ಜನರ ಅಹವಾಲು ಆಲಿಸಲಾಗುವುದು.  ಇಲಾಖೆಗಳ ಭ್ರಷ್ಟಾಚಾರದ ಬಗ್ಗೆ ಮಾಹಿತಿ ನೀಡಿದರೆ, ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು. ಹೆಚ್ಚು ಅಕ್ರಮ ಸಂಪತ್ತು ಗಳಿಸಿರುವ ಮಾಹಿತಿ ಒದಗಿಸಿದರೆ ಅಂತಹವರ ಮೇಲೆ ಎಸಿಬಿ ಸ್ವಯಂ ಪ್ರೇರಿತ ದಾಳಿ ನಡೆಸಲಿದೆ ಎಂದರು.

      ಇಂದಿನ ಸಭೆಯಲ್ಲಿ ಕೇಳಿಬಂದ ದೂರುಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು. ಎಸಿಬಿ ಕಾರ್ಯಚಟುವಟಿಕೆಗಳ ಬಗ್ಗೆ ಹೆಚ್ಚಿನ ಪ್ರಚಾರವಾಗಬೇಕಿದೆ. ಸರಕಾರದ ಅನುದಾನ ಪಡೆಯುತ್ತಿರುವ ಸಂಸ್ಥೆಗಳ ಅಕ್ರಮದ ಮೇಲೂ ಎಸಿಬಿ ದೂರು ದಾಖಲಿಸಿಕೊಳ್ಳಬಹುದಾಗಿದೆ.. ಗ್ರಾಮಮಟ್ಟದಲ್ಲೂ ಎಸಿಬಿಯನ್ನು ಪರಿಣಾಮಕಾರಿಯಾಗಿಸಲು ಚಿಂತನೆ ನಡೆದಿದೆ ಎಂದರು.

      ಎಸಿಬಿ ಡಿವೈಎಸ್ಪಿ ಮಲ್ಲಿಕಾರ್ಜುನ್ ಚುಕ್ಕಿ ಮಾತನಾಡಿ ಎಸಿಬಿ ಕಚೇರಿಗೆ ಖುದ್ದು ಬಂದು ದೂರು ಸಲ್ಲಿಸಲು ಅವಕಾಶವಿದ್ದು, ಇದು ಸಾಧ್ಯವಾಗದವರು 1064 ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳಬಹುದಾಗಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ಸಂಪರ್ಕಸಭೆಗಳ ಬಗ್ಗೆ ಹೆಚ್ಚು ಪ್ರಚಾರ ಮಾಡಲಾಗುವುದು ಎಂದರು.

     ಹೋರಾಟಗಾರ ಷಫಿ ಮಾತನಾಡಿ ಕಂದಾಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ನೀರು ಸರಬರಾಜು ಇಲಾಖೆ, ಆರ್‍ಟಿಒ ಇಲಾಖೆಗಳಲ್ಲಿ ಹೆಚ್ಚು ಭ್ರಷ್ಟಾಚಾರವಾಗುತ್ತಿದ್ದು, ರೆವಿನ್ಯೂ ನಿವೇಶನಗಳಿಗೂ 50, 60 ಸಾವಿರ ಹಣ ಪಡೆದು ಸರಕಾರಿ ಆದೇಶ ಉಲ್ಲಂಘಿಸಿ ಪಾಲಿಕೆ ನಗರಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಮಾಡಿಕೊಡಲಾಗುತ್ತದೆ. ಹೋರಾಟಗಾರರು, ದೂರುದಾರರ ಮೇಲೆಯೇ ಹಲ್ಲೆ ಮಾಡಲಾಗುತ್ತಿದೆ. ಇದಕ್ಕೆಲ್ಲ ಕಡಿವಾಣ ಹಾಕಬೇಕು ಎಂದರು. ಎಸಿಬಿ ಇನ್ಸ್‍ಪೆಕ್ಟರ್ ಇಬ್ರಾನ್‍ಬೇಗ್, ಪ್ರವೀಣ್‍ಕುಮಾರ್.ವಿ ಹಾಗೂ ಸಿಬ್ಬಂದಿ ಹಾಜರಿದ್ದರು.

ಎಸಿಬಿ ಕಾರ್ಯಚಟುವಟಿಕೆ ಜನರ ಕಣ್ಣಿಗೆ ಕಾಣಲಿ

     ಸಾಮಾಜಿಕ ಹೋರಾಟಗಾರರುಗಳು ಮಾತನಾಡಿ ಎಷ್ಟೋ ಜನರಿಗೆ ಎಸಿಬಿ ಕಾರ್ಯಚಟುವಟಿಕೆಗಳ ಬಗ್ಗೆಯೇ ಅರಿವಿಲ್ಲ. ಸಾರ್ವಜನಿಕ ಸಂಪರ್ಕ ಸಭೆಗಳ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ದೂರುದಾರರ ದೂರನ್ನೇ ಕಾಯದೇ ಸ್ವಯಂ ಪ್ರೇರಿತ ದಾಳಿ ನಡೆಸಿ ಪ್ರಕರಣಗಳನ್ನು ದಾಖಲಿಸಿಬೇಕು. ಕಾನೂನಿನನ್ವಯ ತ್ವರಿತ ಶಿಕ್ಷೆ ಕೊಡಿಸಿ ಒಂದಷ್ಟು ಎಚ್ಚರಿಕೆಯ ಸಂದೇಶ ರವಾನಿಸಬೇಕು. ಇಲ್ಲವಾದರೆ ಎಸಿಬಿಯನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap