ತುಮಕೂರು :
ಇತ್ತೀಚೆಗೆ ಜಿಲ್ಲೆಯಾದ್ಯಂತ ಭರ್ಜರಿ ಮಳೆಯಾಗುತ್ತಿದ್ದು, ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿದಿವೆ. ಬಹುತೇಕ ಜಿಲ್ಲೆಯಾದ್ಯಂತ ಭರ್ಜರಿ ಮಳೆಯಾಗಿದ್ದು, ಕೆರೆ-ಕಟ್ಟೆಗಳಲ್ಲಿ ನೀರು ತುಂಬಿರುವುದು ಒಂದು ಕಡೆಯಾದರೆ ಇನ್ನು ಕೆಲವು ಕಡೆಗಳಲ್ಲಿ ಕೆರೆಗಳು ತುಂಬಿ ಕೋಡಿಯಲ್ಲಿ ನೀರು ಹೊರ ಹೊಮ್ಮಿ ಹರಿದಿವೆ.
ಸೆಪ್ಟೆಂಬರ್ ಅಂತ್ಯದಿಂದ ಜಿಲ್ಲೆಯಲ್ಲಿ ಮಳೆಯ ಸಿಂಚನ ಆರಂಭವಾದ ನಂತರ ರೈತರಲ್ಲಿ ಸಂತಸ ಮೂಡತೊಡಗಿದೆ. ಬಾಡಿ ಒಣಗಿ ಹೋಗಿದ್ದ ರಾಗಿ ಫಸಲು ಸೇರಿದಂತೆ ಇತರೆ ಬೆಳೆಗಳು ಜೀವ ಪಡೆದುಕೊಂಡವು. ಅಕ್ಟೋಬರ್ ಮೊದಲ ವಾರದ ನಂತರ ಮಳೆ ನಿರಂತರವಾಗಿ ಸುರಿಯತೊಡಗಿತು. ಸಮುದ್ರದ ಮೇಲಿನ ವಾಯುಭಾರ ಕುಸಿತದ ಪರಿಣಾಮ ಜಿಲ್ಲೆಯಲ್ಲಿ ಮಳೆ ಸುರಿದ ಪರಿಣಾಮ ಹಾಗೂ ಮುಂಗಾರು ಮಳೆಯ ಅಂತ್ಯ ಮತ್ತು ಹಿಂಗಾರು ಆರಂಭದ ಈ ದಿನಮಾನಗಳಲ್ಲಿ ಉತ್ತಮ ಮಳೆಯಾದ್ದರಿಂದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.
ಗ್ರಾಮೀಣ ಪ್ರದೇಶಗಳಲ್ಲಿ ಕುರುಡನ ಮಳೆ ಹೆಚ್ಚು ಪ್ರಸಿದ್ಧಿ. ಈ ಮಳೆ ಆರಂಭವಾಯಿತೆಂದರೆ ಅತ್ಯಂತ ರಭಸವಾಗಿ ಮಳೆ ಸುರಿಯುತ್ತದೆ ಎಂಬ ನಂಬಿಕೆಯೂ ಇದೆ. ಗೊರೂರು ಜಲಾಶಯ ಸೇರಿದಂತೆ ನದಿ ಪಾತ್ರಗಳಲ್ಲಿ ಸತತವಾಗಿ ಮಳೆಯಾಗುತ್ತಿರುವ ಕಾರಣ ಹೇಮಾವತಿ ನೀರನ್ನು ಹರಿಯಬಿಡಲಾಗಿದೆ. ಈಗಾಗಲೇ ಜಿಲ್ಲೆಯ ಹಲವು ತಾಲ್ಲೂಕುಗಳಲ್ಲಿ ಹೇಮಾವತಿ ನೀರು ಹರಿಯುತ್ತಿದೆ. ಇದೇ ಸಮಯಕ್ಕೆ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ನೀರಿನ ಹರಿವು ಹೆಚ್ಚಾಗಿ ಕಾಲುವೆಗಳಲ್ಲಿ ರಭಸವಾಗಿ ನೀರು ನುಗ್ಗತೊಡಗಿದೆ.
ಚಿಕ್ಕನಾಯಕನಹಳ್ಳಿ, ತಿಪಟೂರು, ಶಿರಾ, ಗುಬ್ಬಿ ಮೊದಲಾದ ಭಾಗಗಳಲ್ಲಿ ಭರ್ಜರಿ ಮಳೆಗೆ ಕೆರೆ-ಕಟ್ಟೆಗಳು ತುಂಬಿರುವ ವರದಿಗಳು ಲಭ್ಯವಾಗಿವೆ. ಕೆರೆ-ಕಟ್ಟೆಗಳ ನೀರು ತಳ ಕಂಡು, ಇನ್ನು ಕೆಲವೇ ದಿನಗಳಲ್ಲಿ ಖಾಲಿಯಾಗುವ ಆತಂಕ ಕೆಲವು ಕಡೆ ಎದುರಾಗಿತ್ತು. ಆದರೆ ಮಳೆಯ ಪರಿಣಾಮವಾಗಿ ಸಮೃದ್ಧವಾಗಿ ನೀರು ಸಂಗ್ರಹವಾಗಿದೆ. ಸುಮಾರು ಕಡೆಗಳಲ್ಲಿ ಕೆರೆ-ಕಟ್ಟೆಗಳ ನೀರು ವ್ಯರ್ಥವಾಗಿ ಹರಿದು ಹೋಗುತ್ತಿರುವುದು ಕಂಡು ಬಂದಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ದೃಶ್ಯಗಳನ್ನು ಗಮನಿಸಬಹುದು.
ಶಿರಾ ತಾಲ್ಲೂಕಿನಲ್ಲಿ ಇತ್ತೀಚೆಗೆ ನೀರಿನ ರಾಜಕಾರಣ ತಾರಕಕ್ಕೆ ಏರಿತ್ತು. ಮದಲೂರು ಕೆರೆಗೆ ನೀರು ಹರಿಸಬೇಕೆಂಬ ಒತ್ತಾಯಗಳು ಹೆಚ್ಚುತ್ತಿರುವಾಗಲೆ ಮಳೆಯ ಆರ್ಭಟ ಹೆಚ್ಚಾಗಿ ಅಲ್ಲಿಯೂ ಕೆರೆ-ಕಟ್ಟೆಗಳಿಗೆ ನೀರು ಹರಿಯುತ್ತಿದೆ. ಕಳ್ಳಂಬೆಳ್ಳ ಕೆರೆ ಶನಿವಾರ ರಾತ್ರಿಯ ಮಳೆಗೆ ಭರ್ತಿಯಾಗಿ ನಾಲ್ಕೂ ಕೋಡಿಗಳಲ್ಲಿ ನೀರು ಹರಿದು ಹೋಗುತ್ತಿದೆ. ಇದೇ ಸಮಯಕ್ಕೆ ಕಾಲುವೆ ಮೂಲಕ ಮದಲೂರಿಗೂ ನೀರು ಹರಿಯಬಿಡಲಾಗಿದೆ. ಮದಲೂರು ಕೆರೆಗೆ ನೀರು ಹರಿಯದಂತೆ ತಡೆಯೊಡ್ಡಲಾಗಿದೆ ಎಂಬ ಆರೋಪಗಳು ಕೇಳಿ ಬಂದ ಹಿಂದೆಯೆ ವರುಣನ ಕೃಪೆಯಾಗಿ ಆ ಭಾಗದಲ್ಲೆಲ್ಲಾ ನೀರಿನ ಅತಿವೃಷ್ಟಿ ಕಾಣ ಬರುತ್ತಿದೆ. ಕೆರೆಯ ನಾಲೆ ದೊಡ್ಡದಾಗಿದ್ದರೆ ಕಳ್ಳಂಬೆಳ್ಳ ಕೆರೆಯಿಂದ ಸಾಕಷ್ಟು ನೀರನ್ನು ಹರಿಸಬಹುದಿತ್ತು. ಆದರೆ ಬಹಳಷ್ಟು ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ.
ಚಿಕ್ಕನಾಯಕನಹಳ್ಳಿ -ಶಿರಾ ಗಡಿ ವ್ಯಾಪ್ತಿಯ ಹೊಯ್ಸಳ ಕಟ್ಟೆ ಸಮೀಪದ ಬೋರನಕಣಿವೆ ಏರಿ ಅಪಾಯದಲ್ಲಿ ಇರುವ ಬಗ್ಗೆ ಹಿಂದೆ ವರದಿಯಾಗಿತ್ತು. ಇದೀಗಷ್ಟೆ ಅದರ ದುರಸ್ತಿ ಕಾರ್ಯ ಮುಗಿದಿದೆ. ಈಗ ಉತ್ತಮ ಮಳೆಯಾಗುತ್ತಿರುವುದರಿಂದ ಹೆಚ್ಚು ನೀರಿನ ಹರಿವು ಸಂಗ್ರಹವಾಗುತ್ತಿದೆ.
ಬುಕ್ಕಾಪಟ್ಟಣ, ಹುಳಿಯಾರು, ಕಳ್ಳಂಬೆಳ್ಳ ಹೋಬಳಿಯ ಬಹಳಷ್ಟು ಕೆರೆ-ಕಟ್ಟೆಗಳು ಭರ್ತಿಯಾಗಿವೆ. ಗುಡ್ಡದ ಸಾಲಿನಲ್ಲಿ ಬರುವ ಅಜ್ಜಿಗುಡ್ಡೆ ಮೊದಲಾದ ಪ್ರದೇಶಗಳಲ್ಲಿ ಹೆಚ್ಚು ನೀರು ಸಂಗ್ರಹವಾಗಿದೆ. ಹುಳಿಯಾರು ಕೆರೆ, ತಿಮ್ಲಾಪುರ ಕೆರೆ ಸೇರಿದಂತೆ ಆ ಸುತ್ತಮುತ್ತಲ ಕೆರೆಗಳಲ್ಲಿ ನೀರು ಸಂಗ್ರಹವಾಗಿದೆ.
ಹೇಮಾವತಿ ನೀರು ಕಳೆದ ವರ್ಷದ ಅಕ್ಟೋಬರ್ ತಿಂಗಳಿನಿಂದ ಚಿ.ನಾ.ಹಳ್ಳಿ ತಾಲ್ಲೂಕು ಸಾಸಲು ಕೆರೆ ಮಾರ್ಗವಾಗಿ ಹರಿಯುತ್ತಿದೆ. ಈಗಾಗಲೇ ಶೆಟ್ಟಿಕೆರೆ ಕೆರೆ ತುಂಬಿ ಅಂಕಸಂದ್ರ ಮಾರ್ಗವಾಗಿ ನೀರು ಹರಿದು ಹೋಗುತ್ತಿದೆ. ಇತ್ತೀಚೆಗೆ ಸುರಿದ ಮಳೆಯ ಪರಿಣಾಮವಾಗಿ ನೀರಿನ ಹರಿವು ಹೆಚ್ಚಳಗೊಂಡಿದೆ. ಕಳೆದ ನಾಲ್ಕೈದು ದಿನಗಳಿಂದ ಭರ್ಜರಿ ಮಳೆಯಾಗುತ್ತಿರುವುದರಿಂದ ಸಾಸಲು ಸೇರಿದಂತೆ ಹುಳಿಯಾರಿನವರೆಗೂ ನೀರಿನ ತಾಣಗಳು ಭರ್ತಿಯಾಗಿ ಹರಿಯುತ್ತಿವೆ. ಪೆಮ್ಮಲದೇವರಹಳ್ಳಿ ಕೆರೆಯಲ್ಲಿ ಮಳೆ ನೀರು ಸೇರಿಕೊಳ್ಳುತ್ತಿರುವುದರಿಂದ ಸಾಸಲು ಗೊಲ್ಲರಹಟ್ಟಿ ಮಾರ್ಗವಾಗಿ ಅಜ್ಜನಹಳ್ಳಿ ಮೂಲಕ ಹರಿದು ಹೋಗುವ ಹಳ್ಳವು ರಭಸವಾಗಿ ತುಂಬಿ ಹರಿಯುತ್ತಿದೆ. ಇದೇ ರೀತಿಯಲ್ಲಿ ಇತರೆ ಕಡೆಗಳಲ್ಲಿಯೂ ಉತ್ತಮ ಮಳೆಯಾಗಿದ್ದು, ಹಳ್ಳ-ಕೊಳ್ಳಗಳು ನೀರಿನಿಂದ ತುಂಬಿ ಹೋಗಿವೆ.
ಅಕ್ಟೋಬರ್ 24ರ ಬೆಳಗ್ಗೆ 10 ಗಂಟೆಯ ವರದಿಯಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಮಳೆಯಾಗಿರುವ ವಿವರ ಈ ಕೆಳಕಂಡಂತಿದೆ:
ಹುಳಿಯಾರು-16.40, ಶೆಟ್ಟಿಕೆರೆ-30.20, ಬೋರನಕಣಿವೆ-40.40, ಮತ್ತಿಘಟ್ಟ-54.20, ದೊಡ್ಡೆಣ್ಣೆಗೆರೆ-22.40, ಸಿಂಗದಹಳ್ಳಿ-52.20 ಮಳೆ ಸಂಗ್ರಹವಾಗಿರುವ ಪ್ರಮಾಣ ಲಭ್ಯವಾಗಿದೆ.
ಕೊರಟಗೆರೆ ತಾಲ್ಲೂಕಿನಲ್ಲಿಯೂ ಭರ್ಜರಿ ಮಳೆಯಾಗಿರುವ ವರದಿಗಳು ಬಂದಿದ್ದು, ಅಕ್ಕಿರಾಂಪುರ, ಭೈರೇನಹಳ್ಳಿ, ಕ್ಯಾಶವಾರದ ಕೆರೆ-ಕಟ್ಟೆಗಳು ತುಂಬಿ ಹರಿಯುತ್ತಿವೆ. ಬಹಳ ವರ್ಷಗಳ ನಂತರ ಜಯಮಂಗಲಿ ನದಿ ನೀರಿನಿಂದ ತುಂಬಿ ಹರಿಯುತ್ತಿದೆ. ಜಂಪೇನಹಳ್ಳಿ ಕೆರೆ ಕೋಡಿ ಬಿದ್ದು ನೀರು ರಭಸವಾಗಿ ಹರಿಯುತ್ತಿರುವುದರಿಂದ ಹೆಚ್ಚು ಜನರ ಆಕರ್ಷಣೆಗೆ ಕಾರಣವಾಗಿದೆ.
ಮಧುಗಿರಿ ತಾಲ್ಲೂಕಿನಲ್ಲಿಯೂ ಭರ್ಜರಿ ಮಳೆಯಾಗಿದ್ದು, ನೀರೇ ಇಲ್ಲದ ಕೆರೆಗಳಿಗೆ ನೀರು ತುಂಬಿದೆ. ಒಣಗಿ ಹೋಗಿದ್ದ ಹಳ್ಳಗಳಲ್ಲಿ ನೀರು ಹರಿಯತೊಡಗಿವೆ.
ಜಾಲತಾಣಗಳಲ್ಲಿ ನೀರಿನ ಚಿತ್ರಗಳು :
ಶುಕ್ರವಾರ ಹಾಗೂ ಶನಿವಾರ ರಾತ್ರಿ ಸುರಿದ ಭರ್ಜರಿ ಮಳೆಯಿಂದಾಗಿ ಕೆರೆ-ಕಟ್ಟೆಗಳು ತುಂಬಿ ಕೋಡಿ ಬೀಳುತ್ತಿರುವುದನ್ನು ತಮ್ಮ ಮೊಬೈಲ್‍ಗಳಲ್ಲಿ ಆ ಭಾಗದ ಜನತೆ ಸೆರೆ ಹಿಡಿದಿದ್ದಾರೆ. ಫೇಸ್‍ಬುಕ್ ಮತ್ತು ವಾಟ್ಸ್ಯಾಪ್‍ಗಳಿಗೆ ತಮ್ಮೂರ ಕೆರೆ-ಕಟ್ಟೆಗಳ ಚಿತ್ರಗಳನ್ನು ಹಾಕಿ ಸಂಭ್ರಮಿಸುತ್ತಿದ್ದಾರೆ. ನೀರು ಹರಿದು ಹೋಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿವೆ.
ಬೋರ್‍ವೆಲ್‍ಗಳಲ್ಲಿ ಉಕ್ಕಿದ ನೀರು
ನಮ್ಮೂರ ಕೆರೆಗೆ ನೀರು ಹರಿದಿಲ್ಲ, ಹೇಮಾವತಿ ನೀರು ಹರಿಸಿ ಎಂದೆಲ್ಲಾ ಕಳೆದ ತಿಂಗಳು ಒತ್ತಾಯಗಳು ಕೇಳಿಬಂದಿದ್ದವು. ಆದರೆ ವರುಣನ ಕೃಪೆ ಇದ್ದರೆ ಏನು ಬೇಕಾದರೂ ಆಗಬಹುದು ಎನ್ನುವ ರೀತಿಯಲ್ಲಿ ಭರ್ಜರಿ ಮಳೆಯಾಗುತ್ತಿದ್ದು, ಕೆರೆ-ಕಟ್ಟೆಗಳು ಭರ್ತಿಯಾಗುತ್ತಿವೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚತೊಡಗಿದೆ. ಚಿಕ್ಕನಾಯಕನಹಳ್ಳಿಯ ಕೆಲವು ಪ್ರದೇಶಗಳಲ್ಲಿ ನಿರಂತರ ಮಳೆಯ ಕಾರಣ ಹಾಗೂ ಈಗಾಗಲೇ ಹೇಮಾವತಿ ಹರಿಯುತ್ತಿರುವ ಕಾರಣದಿಂದಾಗಿ ಬೋರ್‍ವೆಲ್‍ಗಳಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಹೇಮಾವತಿ ನೀರು ಹರಿಯದ ಪ್ರದೇಶಗಳಲ್ಲಿಯೂ ಬೋರ್‍ವೆಲ್‍ಗಳಿಂದ ನೀರು ಹರಿಯುತ್ತಿರುವ ದೃಶ್ಯಗಳು ಹರಿದಾಡುತ್ತಿದ್ದು, ಎರಡು ದಿನಗಳ ಭರ್ಜರಿ ಮಳೆಯನ್ನು ಗ್ರಾಮೀಣ ಜನತೆ ಹಿಂದಿನ ದಿನಮಾನಗಳನ್ನು ನೆನೆದು ಸ್ಮರಿಸಿಕೊಳ್ಳುತ್ತಿದ್ದಾರೆ.
ಜಯಮಂಗಲಿ ನೋಡಲು ಜನಸಾಗರ
ಕೊರಟಗೆರೆ ಮತ್ತು ಮಧುಗಿರಿ ತಾಲ್ಲೂಕಿನಲ್ಲಿ ಹಾದು ಹೋಗಿ ಆಂಧ್ರ ಪ್ರದೇಶದ ಪರಗಿ ಕೆರೆ ಸೇರುವ ಜಯಮಂಗಲಿ ನದಿಯಲ್ಲಿ ನೀರು ಹರಿಯುತ್ತಿದ್ದು, ಆ ಭಾಗದ ಜನ ತುಂಬ ಖುಷಿಯಿಂದ ಸಂಭ್ರಮಿಸುತ್ತಿದ್ದಾರೆ. ಸುಮಾರು 22 ವರ್ಷಗಳ ಬಳಿಕ ಈ ನದಿ ಹರಿಯುತ್ತಿರುವುದಾಗಿ ಆ ಭಾಗದ ಜನತೆ ಖುಷಿಯಿಂದ ಹೇಳಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಜಯಮಂಗಲಿ ನದಿಗೆ ತನ್ನದೇ ಆದ ಐತಿಹ್ಯವಿದೆ.
ದೇವರಾಯನದುರ್ಗದಲ್ಲಿ ಹುಟ್ಟಿ ಹರಿಯುವ ಈ ನದಿ ಕೊರಟಗೆರೆ ತಾಲ್ಲೂಕು ಕ್ಯಾಶವಾರ ಹಾಗೂ ಮಧುಗಿರಿ ತಾಲ್ಲೂಕಿನ ಚನ್ನಸಾಗರ ಬಳಿ ಸಂಗಮವಾಗಿ ಜಯಮಂಗಲಿಯಾಗಿ (ಜಯ+ಮಂಗಲಿ) ಹರಿದು ಆಂಧ್ರಪ್ರದೇಶದ ದೊಡ್ಡದಾದ ಪರಿಗಿ ಕೆರೆಗೆ ನೀರು ಸೇರುತ್ತದೆ. ಭಾನುವಾರ ಈ ನದಿ ಹರಿಯುವ ಕಡೆಗಳಲ್ಲಿ ಸೇತುವೆಯ ಮೇಲೆ ನಿಂತು ಜನತೆ ಸಂಭ್ರಮಿಸುತ್ತಿದ್ದ ದೃಶ್ಯಗಳು ಹೆಚ್ಚು ಕಂಡುಬಂದವು.
ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ಭರ್ಜರಿ ಮಳೆಯಾಗಿದ್ದರೆ ಪಾವಗಡ ತಾಲ್ಲೂಕು ಸಾಧಾರಣ ಮಳೆಗೆ ಸೀಮಿತವಾಗಿದೆ. ಈ ಭಾಗದಲ್ಲಿ ಆರಂಭದಿಂದಲೂ ಉತ್ತಮ ಮಳೆಯಾಗದೆ ಶೇಂಗಾ ನೆಲ ಕಚ್ಚಿತ್ತು. ಇತ್ತೀಚೆಗೆ ಮಳೆಯಾಗುತ್ತಿದ್ದರೂ ಶೇಂಗಾ (ನೆಲಗಡಲೆ) ಇಳುವರಿ ಕುಂಠಿತವಾಗಿರುವುದರಿಂದ ಮತ್ತೆ ರೈತ ಹತಾಶನಾಗುವಂತಹ ಪರಿಸ್ಥಿತಿಯೆ ನಿರ್ಮಾಣವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ