ತುಮಕೂರು :
ಜುಳುಜುಳು ಎಂದು ಹರಿವ ನೀರು, ಪಕ್ಕದಲ್ಲಿಯೇ ಪ್ರತಿಷ್ಟಿತ ಶಾಲೆ, ನೀರು ಹೋಗುವ ಕಾಲುವೆಗೆ ಹೊಂದಿಕೊಂಡಂತೆ ಅಂಗಡಿ-ಮುಂಗಟ್ಟುಗಳು, ಹೋಟೆಲ್ ಗಳು, ಪಕ್ಕದಲ್ಲಿಯೇ ಬಸ್ ನಿಲ್ದಾಣ, ಆದರೆ ಒಂದು ನಿಮಿಷ ಇಲ್ಲಿ ನಿಂತುಕೊಂಡರೆ ಸಾಕು ಕೆಟ್ಟ ದುರ್ವಾಸನೆಯಿಂದ ಉಸಿರುಕಟ್ಟಿಸುವ ಭಾವನೆ ಎಂತಹವರನ್ನು ಮಾಡಿಬಿಡುತ್ತೆ.
ಹೌದು,, ತುಮಕೂರು ಮಹಾನಗರ ಪಾಲಿಕೆಯ 32 ನೇ ವಾರ್ಡಿನ ಬಡ್ಡಿಹಳ್ಳಿ ಕೆರೆಯ ನೀರಿನ ಪ್ರಸ್ತುತದ ಸ್ಥಿತಿ ಇದು. ಮೊದಲಿನಿಂದಲೂ ಕೂಡ ವಿವಾದದ ಗೂಡಾಗಿ ಕಂಡುಬರುತ್ತಿರುವ ಬಡ್ಡಿಹಳ್ಳಿ ಕೆರೆಯ ನೀರು ಇದೀಗ ಕಲುಷಿತಗೊಂಡಿದ್ದು ಅದರಿಂದ ಹೊರಗೆ ಬರುತ್ತಿರುವ ನೀರು ವಿಪರೀತ ವಾಸನೆಯಿಂದ ಸಾರ್ವಜನಿಕರಿಗೆ ಯಾತನೆಯನ್ನು ನೀಡುತ್ತದೆ.
ಸರಿಯಾಗಿ ಹೊರಗೆ ಹೋಗಬೇಕಾಗಿದ್ದ ನೀರು ಚರಂಡಿ ಮೂಲಕವಾಗಿ ಹರಿಯುತ್ತಿದ್ದು ವಿಪರೀತ ದುರ್ವಾಸನೆಯಿಂದ ಕೂಡಿದೆ. ಇದರಿಂದಾಗಿ ಸ್ಥಳೀಯರು ಹೈರಾಣಾಗಿ ಮುಕ್ತಿ ಸಿಕ್ಕರೆ ಸಾಕು ಎನ್ನುತ್ತಿದ್ದಾರೆ.
ಪಕ್ಕದಲ್ಲಿಯೇ ಶಾಲೆಯಿದ್ದು ಇದರ ವಾಸನೆ ಅವರಿಗೆ ತಟ್ಟುತ್ತಿಲ್ಲ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಯಾಕೆಂದರೆ ಇದರ ಬಗ್ಗೆ ಅವರು ಧ್ವನಿಯೆತ್ತುತ್ತಿಲ್ಲ, ಇನ್ನು ಪಕ್ಕದಲ್ಲಿಯೇ ಹೋಟೆಲ್ ಗಳು ಇದ್ದು ಗ್ರಾಹಕರು ಯಾರು ಎತ್ತ ಕಡೆ ತಲೆ ಹಾಕುತ್ತಿಲ್ಲ, ಕಾರಣ ಇಲ್ಲಿ ಕೆಟ್ಟ ವಾಸನೆ ಬರುವುದರಿಂದ ಕುಳಿತು ಊಟ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನು ಪ್ರತಿನಿತ್ಯ ಸಾವಿರಾರು ನಷ್ಟವನ್ನು ಹೋಟೆಲ್ ಮಾಲೀಕರು ಅನುಭವಿಸುತ್ತಿದ್ದಾರೆ. ಕೊಟ್ಟ ಸಾಲವನ್ನು ತೀರಿಸಲಾಗದೆ ಸಂಕಷ್ಟದಲ್ಲಿದ್ದಾರೆ. ಮಾತ್ರವಲ್ಲದೆ ಸ್ಥಳೀಯರು ಅನೇಕ ರೋಗರುಜಿನಗಳಿಗೆ ಒಳಗಾಗಿದ್ದು ಆಸ್ಪತ್ರೆಗಳಿಗೆ ಅಲೆಯುತ್ತಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಇಂತಹ ಸಮಸ್ಯೆ ಇದ್ದು 32 ನೇ ವಾರ್ಡಿನ ಕಾರ್ಪೋರೇಟರ್ ಮತ್ತು ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಆಗಿರುವ ಕೃಷ್ಣಪ್ಪನವರಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.
ಇನ್ನು ಮುಂದೆಯಾದರೂ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಕೆಟ್ಟ ವಾಸನೆಯಿಂದ ಮುಕ್ತಿ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
