ತುಮಕೂರು:
ಆರಂಭದಲ್ಲಿ ಹೋಗಿ ಕೆಡಿಸಿದ್ದ ಮಳೆ, ಈಗ ವಿಪರೀತವಾಗಿ ರೈತರು ಬೆಳೆದ ಶೇಂಗಾ, ರಾಗಿ ಇನ್ನಿತರ ಬೆಳೆಗಳನ್ನು ಹಾಳು ಮಾಡಿದೆ. ಹಾಗಾಗಿ ಜಿಲ್ಲಾಡಳಿತ ಕೂಡಲೇ ಬೆಳೆ ನಷ್ಟ ಪರಿಹಾರ ಅಂದಾಜಿಸಿ, ವೈಜ್ಞಾನಿಕ ಪರಿಹಾರ ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಒತ್ತಾಯಿಸಿದ್ದಾರೆ.
ವಿಜ್ಞಾನ ಕೇಂದ್ರದಲ್ಲಿ ನಡೆದ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ರೈತರ ಹೊಲ,ಗದ್ದೆಗಳಲ್ಲಿ ಬೆಳೆದ ಬೆಳೆಯಲ್ಲದೆ,ಮನೆಗಳು,ಗುಡಿಸಲುಗಳು ನೆಲಕಚ್ಚಿವೆ. ಜನ ಜಾನುವಾರುಗಳಿಗೆ ತೀವ್ರ ಸ್ವರೂಪದ ತೊಂದರೆಯಾಗಿದೆ. ಆದರೆ ಇದುವರೆಗೂ ಜಿಲ್ಲಾಡಳಿತ ಮಳೆ ಹಾನಿಯನ್ನು ತೀವ್ರವಾಗಿ ಪರಿಗಣಿಸಿದಂತೆ ಕಂಡು ಬರುತ್ತಿಲ್ಲ. ಹಾಗಾಗಿ ಜಿಲ್ಲಾಡಳಿತ ಕೂಡಲೇ ಮಳೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂಬುದು ರೈತ ಸಂಘದ ಆಗ್ರಹವಾಗಿದೆ ಎಂದರು.
ರೈತರು ಹತ್ತಾರು ವರ್ಷಗಳಿಂದ ಸರಕಾರಿ ಭೂಮಿಯನ್ನು ಉಳುಮೆ ಮಾಡುತ್ತಾ ಫಾರಂ ನಂ 50,53 ಮತ್ತು 57 ಅಡಿಯಲ್ಲಿ ಸರಕಾರಕ್ಕೆ ಮಂಜೂರಾತಿಗಾಗಿ ಅರ್ಜಿ ಸಲ್ಲಿಸುತ್ತಾ ಬಂದಿದ್ದರೂ ಇದುವರೆಗೂ ಬಡವರಿಗೆ ಭೂಮಿ ಸಿಕ್ಕಿಲ್ಲ. ಆದರೆ ಉಳ್ಳುವರಿಗೆ ಭೂಮಿ ದೊರೆಯುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳೇ ಬಗರ್‌ಹುಕ್ಕಂ ಸಾಗುವಳಿ ಅರ್ಜಿಗಳನ್ನು ತುರ್ತು ವಿಲೇವಾರಿ ಮಾಡುವಂತೆ ಸೂಚನೆ ನೀಡಿದ್ದರೂ ತಹಶೀಲ್ದಾರರುಗಳು ಗಮನಹರಿಸಿದಂತೆ ಕಂಡು ಬರುತ್ತಿಲ್ಲ. ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಬಗರ್‌ಹುಕ್ಕಂ ಭೂಮಿಗಾಗಿ ಅರ್ಜಿ ಸಲ್ಲಿಸಿರುವ ಎಲ್ಲಾ ಆರ್ಹ ರೈತರಿಗೂ ಭೂಮಿ ಮಂಜೂರು ಮಾಡಬೇಕೆಂದು ರೈತ ಸಂಘ ಆಗ್ರಹಿಸುತ್ತದೆ ಎಂದು ಗೋವಿಂದರಾಜು ತಿಳಿಸಿದರು.
ಕುಲಾಂತರಿ ಬೀಜದಿಂದ ವಾತಾವರಣದ ಮೇಲಾಗುವ ದುಷ್ಪರಿಣಾಮಗಳ ಕುರಿತು ಪ್ರೊ.ಎಂ.ಎನ್.ನಜುಂಡಸ್ವಾಮಿ ಅವರ ಕಾಲದಿಂದ ರೈತ ಸಂಘ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದೆ. ಅಲ್ಲದೆ ವಾಮಮಾರ್ಗದಿಂದ ದೇಶಕ್ಕೆ ನುಸುಳಿದ ಬಿಟಿ ಹತ್ತಿಯಿಂದ ಪರಿಸರದ ಮೇಲಾಗಿರುವ ಕೆಟ್ಟ ಪರಿಣಾಮಗಳ ಕುರಿತು ಹಲವಾರು ತಜ್ಞರು ತಮ್ಮ ಅಭಿಪ್ರಾಯ ಮಂಡಿಸಿ ಕುಲಾಂತರಿ ತಳಿ ಬೀಜಗಳ ಬಳಕೆಗೆ ವಿರೋಧ ವ್ಯಕ್ತಪಡಿಸಿದ್ದರೂ ಸುಪ್ರಿಂ ಕೋರ್ಟು ಕುಲಾಂತರಿ ಬೀಜ ನೀತಿಯ ಕುರಿತು ಸಮಿತಿ ರಚಿಸಲು ಎಂ.ಎನ್.ಸಿ. ಕಂಪನಿಗಳಾದ ಮ್ಯಾನ್ಸೆಂಟೋ ಮತ್ತು ಬೇಯರ್ ಕಂಪನಿಗಳ ನೇತೃತ್ವದಲ್ಲಿ ರೈತರು, ಕೃಷಿ ತಜ್ಞರು,ಸಾರ್ವಜನಿಕರನ್ನು ಒಳಗೊಂಡ ಸಮಿತಿಯನ್ನು 4 ತಿಂಗಳಲ್ಲಿ ರಚಿಸುವಂತೆ ನಿರ್ದೇಶನ ನೀಡಿರುವುದು ಅತ್ಯಂತ ಅಪಾಯಕಾರಿಯಾಗಿದೆ ಎಂದರು.
ತಜ್ಞರ ಪ್ರಕಾರ ಒಂದು ವೇಳೆ ಈ ಸಮಿತಿ ಜಾರಿಗೆ ಬಂದರೆ, ಭವಿಷ್ಯದಲ್ಲಿ ಪ್ರತಿ ಮನೆಯಲ್ಲಿಯೂ ಒರ್ವ ಕ್ಯಾನ್ಸರ್ ರೋಗಿಯನ್ನು ಕಾಣಬಹುದಾಗಿದೆ.ಕಳೆದ ಸೆಪ್ಟಂಬರ್ 29ರಿಂದ ಅಕ್ಟೋಬರ್ 10ರವರೆಗೆ ದೊಡ್ಡ ಹೊಸೂರು ಸತ್ಯಾಗ್ರಹದಲ್ಲಿ ಇದೇ ವಿಚಾರವಾಗಿ ಹಲವಾರು ಆಯಾಮಗಳಲ್ಲಿ ಚರ್ಚೆ ನಡೆಸಲಾಗಿದೆ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಇದನ್ನು ವಿರೋಧಿಸಬೇಕು. ಕರ್ನಾಟಕ ರಾಜ್ಯ ರೈತ ಸಂಘ ನವೆಂಬರ್ 4 ರಂದು ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎ.ಗೋವಿಂದರಾಜು ತಿಳಿಸಿದರು.
ರೈತರು,ರಾಜಕೀಯ ನಾಯಕರುಗಳ ವಿರೋಧದ ನಡುವೆಯೂ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ಮುಂದುವರೆಸಲು ಗುತ್ತಿಗೆದಾರರು ಮುಂದುವರೆಸಲು ಪ್ರಯತ್ನಿಸುತಿದ್ದು,ಇದು ಸರಕಾರ ಮತ್ತು ರೈತರ ನಡುವಿನ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಇದೆ.ಯಾವುದೇ ಭೂಸ್ವಾಧೀನವಿಲ್ಲದೆ ಕಾಮಗಾರಿ ನಡೆಸಲಾಗುತ್ತಿದೆ.ರೈತರ ಹಾಗಾಗಿ ಜಿಲ್ಲಾಡಳಿತ ಕೂಡಲೇ ಮಧ್ಯ ಪ್ರವೇಶಿಸಿ,ಜಿಲ್ಲೆಯ ಜನತೆಗೆ ನ್ಯಾಯ ಕೊಡಿಸಬೇಕು. ಎಕ್ಸ್ಪ್ರೆಸ್ ಕೆನಾಲ್‌ನಿಂದ ಜಿಲ್ಲೆಯ 4-5 ತಾಲೂಕುಗಳಿಗೆ ತೀವ್ರ ಅನ್ಯಾಯವಾಗಲಿದೆ. ಹಾಗಾಗಿ ಜಿಲ್ಲೆಯ ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಎ.ಗೋವಿಂದರಾಜು ಒತ್ತಾಯಿಸಿದರು.
ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತಿದ್ದು ಅಕ್ರಮ ಸಕ್ರಮ ಕಾಮಗಾರಿ ತ್ವರಿತವಾಗಿ ಕೈಗೊಳ್ಳುವುದು. ಬಿಕ್ಕೆಗುಡ್ಡ, ಹಾಗಲವಾಡಿ ಏತ ನೀರಾವರಿ ಯೋಜನೆಗಳನ್ನು ನಿಗಧಿತ ಸಮಯದೊಳಗೆ ಪೂರ್ಣಗೊಳಿಸುವುದು ಸೇರಿದಂತೆ ಹಲವಾರು ವಿಷಯಗಳ ಕುರಿತು ನವೆಂಬರ್ 4ರಂದು ನಡೆಯುವ ತಾಲೂಕು ಕಚೇರಿ ಎದುರಿನ ಪ್ರತಿಭಟನೆ ವೇಳೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು.ಅಲ್ಲದೆ ಇದೇ 26 ರಂದು ಚಿತ್ರದುರ್ಗದಲ್ಲಿ ನಡೆಯುವ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳ ಪರಿಷ್ಕರಣೆ ವೇಳೆ ಜಿಲ್ಲೆಯಿಂದ ಗೋವಿಂದರಾಜು ಮತ್ತು ದೊಡ್ಡಮಾಳಪ್ಪ ಅವರುಗಳನ್ನು ರಾಜ್ಯ ಸಮಿತಿಗೆ ಕಳುಹಿಸಲು ತೀರ್ಮಾನಿಸಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಶಂಕರಪ್ಪ, ಜಿಲ್ಲೆಯ ಮುಖಂಡರಾದ ಕಾಳೇಗೌಡ, ಬಸವರಾಜು, ಶಿವಕುಮಾರ್,ಜಗಧೀಶ್, ವೆಂಕಟೇಗೌಡ, ಲಕ್ಷ್ಮಗೌಡ, ನಾಗರತ್ನಮ್ಮ, ಚಿಕ್ಕಬೋರೇಗೌಡ, ರಹಮತ್ ಸಾಬ್, ಭಾಗ್ಯಮ್ಮ, ಲೋಕೇಶ್, ರವೀಶ್, ಚನ್ನಬಸಣ್ಣ, ಅರೇಹಳ್ಳಿ ಮಂಜುನಾಥ್, ಶಬ್ಬೀರ ಕೊರಟಗೆರೆ, ಕೆಂಚಪ್ಪ, ಚಿರತೆ ಚಿಕ್ಕಣ್ಣ, ತಿಮ್ಮೇಗೌಡ, ಮಹೇಶ್, ಬಸವರಾಜು ಮತ್ತಿತರರು ಭಾಗವಹಿಸಿದ್ದರು.