ತುಮಕೂರು:
ಜಮೀನು ತಗಾದೆ ವಿಚಾರದಲ್ಲಿ ದೂರು ನೀಡಲು ಬಂದ ಮಹಿಳೆಯನ್ನು ತನ್ನ ಕಾಮಪಿಪಾಸೆ ತೀರಿಸಿಕೊಳ್ಳಲು ಪೊಲೀಸ್ ಅಧಿಕಾರಿ ಬಲವಂತಪಡಿಸಿದ ಘಟನೆ ಮಧುಗಿರಿಯಲ್ಲಿ ನಡೆದಿದೆ. ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ತವರು ಜಿಲ್ಲೆ ತುಮಕೂರಿನಲ್ಲಿ ನಡೆದಿರುವ ಈ ಘಟನೆಯಿಂದಾಗಿ ಪೊಲೀಸ್ ಇಲಾಖೆ ತಲೆ ತಗ್ಗಿಸುವಂತಾಗಿದೆ.
ಜಮೀನು ತಗಾದೆ ವಿವಾದಕ್ಕೆ ಸಂಬಂಧಿಸಿದಂತೆ ದೂರು ನೀಡಲು ಠಾಣೆಗೆ ಬಂದ ಮಹಿಳೆಯನ್ನು ಮಧುಗಿರಿ ಉಪವಿಭಾಗದ ಡಿವೈಎಸ್‌ಪಿ ರಾಮಚಂದ್ರಪ್ಪ ಶೌಚಾಲಯದ ಬಳಿ ಕರೆದುಕೊಂಡುಹೋಗಿ ತನ್ನ ಕಾಮಪಿಪಾಸೆ ತೀರಿಸಲು ಬಲವಂತಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸನ್ನಿವೇಶದಲ್ಲಿ ಅದನ್ನು ಠಾಣೆಯಲ್ಲಿದ್ದ ಸಾರ್ವಜನಿಕರೊಬ್ಬರು ಶೌಚಾಲಯದ ಗೋಡೆಯ ಈಚೆಯಿಂದ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದಾರೆ.
ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ತುಮಕೂರಿನ ಎಲ್ಲೆಡೆ ಹರಿದಾಡುತ್ತಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಕಠಿಣ ಶಿಸ್ತುಕ್ರಮಕ್ಕೆ ಮುಂದಾಗಿದೆ. ಇದರ ಬೆನ್ನಲ್ಲೇ ಡಿವೈಎಸ್‌ಪಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
ಜಮೀನು ವ್ಯಾಜ್ಯದ ಬಗ್ಗೆ ಪಾವಗಡ ಮೂಲದ ಮಹಿಳೆಯೊಬ್ಬರು ದೂರು ನೀಡಿದ್ದರು. ಈ ಕುರಿತು ವಿಚಾರಿಸಲು ಮಹಿಳೆಯನ್ನು ಡಿವೈಎಸ್‌ಪಿ ಕಚೇರಿಗೆ ಕರೆಸಲಾಗಿತ್ತು. ಈ ವೇಳೆ ಮಹಿಳೆಯನ್ನು ಪುಸಲಾಯಿಸಿದ ರಾಮಚಂದ್ರಪ್ಪ ಆಕೆಯನ್ನು ಕಚೇರಿಯ ಶೌಚಾಲಯದ ಬಳಿ ಕರೆದುಕೊಂಡು ಹೋಗಿದ್ದಾರೆ. ಮಹಿಳೆ ಜೊತೆ ಡಿವೈಎಸ್‌ಪಿ ಬಲವಂತವಾಗಿ ನಡೆದುಕೊಳ್ಳುತ್ತಿದ್ದುದ್ದನ್ನು ಸೆರೆಹಿಡಿದ ವ್ಯಕ್ತಿಯೊಬ್ಬರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.
