![]()
ದಕ್ಷಿಣ ಕನ್ನಡ : ಸುಬ್ರಹ್ಮಣ್ಯ ಸಮೀಪದ ಏನೆಕಲ್ಲು ಗ್ರಾಮದ ಪರಂಪಾಡಿ–ಅರಂಪಾಡಿ ಪ್ರದೇಶದಲ್ಲಿ ಚಿರತೆ ಕಾಟ ಮತ್ತೆ ಹೆಚ್ಚಳ ಕಂಡಿದ್ದು, ತಡರಾತ್ರಿ ನಡೆದ ಘಟನೆ ಸ್ಥಳೀಯರಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದೆ.
ಅರಂಪಾಡಿ ನಿವಾಸಿ ಈಶ್ವರಗೌಡ ಅವರ ಮನೆಯ ಅಂಗಳದಲ್ಲಿ ಮಲಗಿದ್ದ ನಾಯಿಯನ್ನು ಚಿರತೆ ದಾಳಿ ಮಾಡಿ ಹೊತ್ತೊಯ್ದಿದೆ. ಈ ಘಟನೆ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದ್ದು, ದೃಶ್ಯಗಳು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸುವಂತೆ ಮಾಡಿವೆ. ಕೆಲವೇ ದಿನಗಳ ಹಿಂದೆ ಕಿಶೋರ್ ಪರಂಪಾಡಿ ಅವರ ಮನೆಯ ನಾಯಿಯನ್ನೂ ಚಿರತೆ ಬಲಿ ತೆಗೆದುಕೊಂಡಿತ್ತು. ಇದೀಗ ಅರಂಪಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಸಂಚಾರ ಹೆಚ್ಚಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಪ್ರದೇಶವು ದಟ್ಟ ಕಾಡು ಪ್ರದೇಶಕ್ಕೆ ಸಮೀಪ ಇರುವುದರಿಂದ ರಾತ್ರಿ ವೇಳೆ ರಸ್ತೆಗಳಲ್ಲಿ ಸಂಚರಿಸುವುದು ಅಪಾಯಕಾರಿಯಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ತಕ್ಷಣವೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.ರಾತ್ರಿ ವೇಳೆ ಬೆಳಕಿನ ಕೊರತೆಯಿಂದ ಚಿರತೆ ಸಂಚಾರ ಹೆಚ್ಚಾಗುತ್ತಿರುವುದರಿಂದ ರಸ್ತೆ ಬದಿಗಳಲ್ಲಿ ಪಂಚಾಯತ್ ವತಿಯಿಂದ ಸೋಲಾರ್ ಲೈಟ್ ಅಳವಡಿಸುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಚಿರತೆಯನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ವರ್ಗಾವಣೆ ಮಾಡುವಂತೆ ಅರಣ್ಯ ಇಲಾಖೆ ಹಾಗೂ ಅರಣ್ಯ ಸಚಿವರಿಗೆ ಮನವಿ ಸಲ್ಲಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಜನರು ಹಾಗೂ ಪಶುಗಳ ಸುರಕ್ಷತೆಗಾಗಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಈ ಘಟನೆ ಹಿನ್ನೆಲೆ ಗ್ರಾಮದಲ್ಲಿ ಭಯ ಮತ್ತು ಆತಂಕ ಹೆಚ್ಚಾಗಿದ್ದು, ಅರಣ್ಯ ಇಲಾಖೆ ತ್ವರಿತವಾಗಿ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
——————————–
ಹುಲಿ ಸೆರೆಗೆ ಅಳವಡಿಸಿದ್ದ ಬೋನಲ್ಲಿ ಚಿರತೆ ಲಾಕ್
ಚಾಮರಾಜನಗರ : ಹುಲಿಗಾಗಿ ಇಟ್ಟಿದ್ದ ಬೋನಿಗೆ ಚಿರತೆ ಸೆರೆಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದಲ್ಲಿ ನಿನ್ನೆ ನಡೆದಿತ್ತು. ಪಡಗೂರು ಗ್ರಾಮದ ರೈತ ಮಹಾದೇವಸ್ವಾಮಿ ಎಂಬುವರ ಜಮೀನಿನಲ್ಲಿ ಚಿರತೆ ಸೆರೆಯಾಗಿದ್ದು, ಸೆರೆಸಿಕ್ಕ ಚಿರತೆ ಅಂದಾಜು 4 ವರ್ಷ ಪ್ರಾಯದ ಹೆಣ್ಣು ಚಿರತೆಯಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದರು.
ಕಳೆದ ಹಲವು ದಿನಗಳಿಂದ ಪಡಗೂರು ಸುತ್ತಮುತ್ತ ಹುಲಿ ಓಡಾಟದ ಆತಂಕವನ್ನು ರೈತರು ಹೊರಹಾಕಿದ್ದರಿಂದ ತುಮಕೂರು ಮಾದರಿ ಬೋನಿಟ್ಟು ಕರುವೊಂದನ್ನು ಕಟ್ಟಲಾಗಿತ್ತು. ಆಹಾರ ಅರಸಿ ಬಂದ ಚಿರತೆ ಈ ಬೋನಿನಲ್ಲಿ ಸಿಲುಕಿತ್ತು.







