ತುಮಕೂರು :
ಅತ್ಯಂತ ಮಹತ್ವಾಕಾಂಕ್ಷೆಯಿಂದ ರೂಪಿತವಾದ ತುಮಕೂರು ನಗರ ದಕ್ಷಿಣ ಭಾಗದ ಮೂಲಕ ಹಾದು ಹೋಗುವ ವರ್ತುಲ ರಸ್ತೆ (ಬೈಪಾಸ್) ಯೋಜನೆ ತ್ವರಿತಗತಿ ಕಾಣದೆ ನೆನೆಗುದಿಗೆ ಬಿದ್ದಿದೆ.
ಬೆಂಗಳೂರು-ಪೂನಾ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಬೆಂಗಳೂರಿನಿಂದ ವಸಂತನರಸಾಪುರಕ್ಕೆ ಸಂಪರ್ಕ ಕಲ್ಪಿಸುವ ಬೈಪಾಸ್ (ವರ್ತುಲ) ರಸ್ತೆಯ ನೀಲನಕ್ಷೆ ತಯಾರಾಗಿ ಬಹಳ ವರ್ಷಗಳೇ ಆಗಿವೆ. ಆದರೆ ಅದರ ಅನುಷ್ಠಾನ ವಿಳಂಬವಾಗಿ ಮುಂದಿನ ಪ್ರಕ್ರಿಯೆಗಳೆ ಸ್ಥಗಿತಗೊಂಡಿವೆ.
ಜನಸಂಖ್ಯೆ ದಿನೆ ದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಸುತ್ತಮುತ್ತ ಕೈಗಾರಿಕಾ ವಸಾಹತುಗಳು ಹುಟ್ಟಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಾಹನಗಳ ದಟ್ಟಣೆ-ಕಿರಿಕಿರಿ ತಪ್ಪಿಸುವ ಉದ್ದೇಶದಿಂದ ಈ ಯೋಜನೆ ತಯಾರಾಗಿದೆ. ಯೋಜನೆ ಅನುಷ್ಠಾನಗೊಂಡರೆ ಬಹುಮುಖ್ಯವಾಗಿ ತುಮಕೂರಿನ ಸಂಚಾರಿ ವ್ಯವಸ್ಥೆ ಸುಗಮವಾಗುವುದಲ್ಲದೆ, ಹೆದ್ದಾರಿಯಲ್ಲಿ ಸಂಚರಿಸುವ ಇತರೆ ವಾಹನಗಳ ಸಂಚಾರಕ್ಕೂ ಅನುಕೂಲವಾಗಲಿದೆ.
ಬೆಂಗಳೂರು ಗ್ರಾಮಾಂತರದ ನೆಲಮಂಗಲ ತಾಲ್ಲೂಕಿನ ಹಾಗೂ ತುಮಕೂರು ತಾಲ್ಲೂಕಿನ ಒಟ್ಟು 41 ಹಳ್ಳಿಗಳು ಈ ಯೋಜನೆ ವ್ಯಾಪ್ತಿಗೆ ಬರುತ್ತವೆ. ಈ ಭಾಗದಲ್ಲಿ ಭೂಸ್ವಾಧೀನಪಡಿಸಿಕೊಂಡು ವರ್ತುಲ ರಸ್ತೆ ನಿರ್ಮಾಣ ಮಾಡುವ ಕಾರ್ಯ ಯೋಜನೆ ಇದು. ನಂದಿಹಳ್ಳಿ ಸೇತುವೆ ಸಮೀಪದ ಮಾರ್ಗವಾಗಿ ಚಿಕ್ಕಹಳ್ಳಿ ಕ್ರಾಸಿಂಗ್ ಮೂಲಕ ಹಾದು ಬರುವ ಈ ರಸ್ತೆ ಮಲ್ಲಸಂದ್ರ ಸೇರುತ್ತದೆ. ಈ ಮಾರ್ಗದಲ್ಲಿ ಹಿರೇಹಳ್ಳಿ ಹಿಂಭಾಗದ ಅಡಕೆ ಫಾರಂ, ಪಾಲಸಂದ್ರ ಮೊದಲಾದ ಗ್ರಾಮಗಳನ್ನು ಸುತ್ತುವರಿದು ಗಂಗಸಂದ್ರ ಹಿಂದಿನ ಜಮೀನಿನ ಮೂಲಕ ಮಲ್ಲಸಂದ್ರ ಪ್ರವೇಶಿಸುತ್ತದೆ. ಅಲ್ಲಿಂದ ಮಣ್ಣೆಮಾರಿ ಕಾವಲ್ ಪ್ರದೇಶದ ಬಳಿಯಿಂದ ಸಾಗಿ ವಸಂತ ನರಸಾಪುರಕ್ಕೆ ಸಂಪರ್ಕ ಕಲ್ಪಿಸುತ್ತದೆ. 41 ಹಳ್ಳಿಗಳನ್ನು ಒಳಗೊಳ್ಳುವ ಈ ಯೋಜನೆಯ ಅಡಿಯಲ್ಲಿ ಭೂಸ್ವಾಧೀನಕ್ಕೆ ಒಳಗಾಗುವ ಒಟ್ಟು ವಿಸ್ತೀರ್ಣ 285.43 ಹೆಕ್ಟೇರ್. ಯೋಜನೆಯ ಸಿವಿಲ್ ಕಾಮಗಾರಿ ವೆಚ್ಚವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಭರಿಸಲಿದೆ.
1737.59 ಕೋಟಿ ರೂ.ಗಳ ಈ ಯೋಜನೆಯಲ್ಲಿ ಭೂಸ್ವಾಧೀನಕ್ಕೆ 748.58 ಕೋಟಿ ರೂ, ಯೋಜನೆ ನಿರ್ಮಾಣದ ಪೂರ್ವ ಹಂತದ ಅಂದಾಜು ವೆಚ್ಚ 33.21 ಕೋಟಿ ರೂ. ಹಾಗೂ ಸಿವಿಲ್ ಕಾಮಗಾರಿಗಾಗಿ 955.80 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿತ್ತು. ಆದರೆ ವರ್ಷಗಳು ಉರುಳಿದಂತೆ ಯೋಜನೆಯ ಅಂದಾಜು ವೆಚ್ಚವನ್ನು ಪರಿಷ್ಕರಿಸಲಾಗಿದ್ದು, 1737 ಕೋಟಿ ರೂ.ಗಳಿಂದ 2105.45 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ.
ಯೋಜನೆಗೆ ಒಳಗೊಳ್ಳುವ ಗ್ರಾಮಗಳು:
ನಂದಿಹಳ್ಳಿ, ಹಳೆ ನಿಜಗಲ್, ದೇವರ ಹೊಸಹಳ್ಳಿ, ಸಂಗಾಪುರ, ಕೋಳಿಹಳ್ಳಿ, ಬೈರಸಂದ್ರ, ಕೌತಮಾರನಹಳ್ಳಿ, ಗೌರಿಪುರ, ಮಾಚಗೊಂಡನಹಳ್ಳಿ, ಗಂಗಸಂದ್ರ, ಕಿತ್ತಗಾನಹಳ್ಳಿ, ಮಾನಂಗಿ, ಹೊಸೂರು, ಅಕ್ಕತಂಗಿ ಕಟ್ಟೆ ಕಾವಲ್, ಹಾಲು ಹೊಸಹಳ್ಳಿ, ಚಿಕ್ಕಸಾರಂಗಿ, ನಂದಿಹಳ್ಳಿ, ಡಿ.ಎನ್. ಹೊಸಹಳ್ಳಿ, ದೊಡ್ಡಸಾರಂಗಿ, ಕಂಬತ್ತನಹಳ್ಳಿ, ದೊಡ್ಡಸಾರಂಗಿ, ಕೊತ್ತಿಹಳ್ಳಿ ಕಾವಲ್, ಕುಂಕುಮನಹಳ್ಳಿ, ಮಲ್ಲಸಂದ್ರ, ಪೆರುಮನಹಳ್ಳಿ, ದೊಡ್ಡನಾರವಂಗಲ, ಗೌಡಿಹಳ್ಳಿ, ಕಾಗ್ಗೆರೆ, ಅಸಲೀಪುರ, ಮಣ್ಣೆಮಾರಿ ಕಾವಲ್, ಟಿ.ಗೊಲ್ಲಹಳ್ಳಿ, ದೇವರಾಜನಹಳ್ಳಿ, ಅಪ್ಪಿನಾಯಕನಹಳ್ಳಿ, ಚಿನ್ನೇನಹಳ್ಳಿ ಮಜ್ಜಿಗೆ ಕೆಂಪನಹಳ್ಳಿ, ಪುರದ ಕುಂಟೆ, ಗೊಲ್ಲಹಳ್ಳಿ, ದೇವರಹಳ್ಳಿ (ಬೆಂಗಳೂರು ಗ್ರಾಮಾಂತರದ ನೆಲಮಂಗಲ ತಾಲ್ಲೂಕು ಹಾಗೂ ತುಮಕೂರು ತಾಲ್ಲೂಕಿಗೆ ಸೇರಿರುವ ಮೇಲ್ಕಂಡ ಗ್ರಾಮಗಳು).
ಯೋಜನೆಯ ಅನುಷ್ಠಾನಕ್ಕಾಗಿ ಹಲವು ಸಭೆಗಳು ನಡೆದಿವೆ. ಆದರೆ ಇತ್ತೀಚಿನ ಬೆಳವಣಿಗೆಗಳ ಪ್ರಕಾರ ಈ ಯೋಜನೆಯ ಅನುಷ್ಠಾನದಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇರುವುದು ಕಂಡುಬಂದಿದೆ. ಇಲ್ಲಿನ ಜನಪ್ರತಿನಿಧಿಗಳಲ್ಲಿಯೇ ಒಮ್ಮತ ಮೂಡದಿರುವುದು ಯೋಜನೆಯ ಗ್ರಹಣಕ್ಕೆ ಕಾರಣವಾಗಿದೆ. ಇದೇ ವಿಷಯದಲ್ಲಿ ಈ ಯೋಜನೆಯ ಪರ-ವಿರೋಧದ ಚರ್ಚೆ ನಡೆದು ವಾದ ವಿವಾದಗಳಿಗೂ ಕಾರಣವಾಗಿರುವುದು ಈಗ ಗುಟ್ಟಾಗಿ ಉಳಿದಿಲ್ಲ.
ಹಿಂದಿನ ಸರ್ಕಾರ ಇದ್ದಾಗ ಅಂದರೆ ಟಿ.ಬಿ.ಜಯಚಂದ್ರ ಅವರು ಜಿಲ್ಲಾ ಉಸ್ತುವಾರಿ ಸಚಿವರಿದ್ದಾಗಲೇ ಈ ಯೋಜನೆಗೆ ಸಂಬಂಧಿಸಿದ ಪ್ರಕ್ರಿಯೆಗಳು ಆರಂಭವಾಗಿದ್ದವು. ಎಸ್.ಪಿ.ಮುದ್ದಹನುಮೇಗೌಡ ಅವರು ಸಂಸದರಾಗಿದ್ದ ಅವಧಿಯಲ್ಲಿಯೇ ಈ ಯೋಜನೆ ಮಂಜೂರಾಗಿತ್ತು. ಇದಾದ ನಂತರ ಸಾಕಷ್ಟು ಸಭೆಗಳು ನಡೆದಿವೆಯಾದರೂ ಭೂಸ್ವಾಧೀನಪಡಿಸಿಕೊಂಡು ಮುಂದಿನ ಪ್ರಕ್ರಿಯೆ ಕೈಗೊಳ್ಳುವ ಹಂತಗಳು ಸ್ಥಗಿತಗೊಂಡಂತೆ ಕಾಣುತ್ತಿವೆ.
ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಕರ್ನಾಟಕ ರಾಜ್ಯದಲ್ಲಿ ಒಟ್ಟು 7 ರಿಂಗ್ ರಸ್ತೆಗಳಿಗೆ ಅನುಮೋದನೆ ನೀಡಿದೆ. ಬೆಂಗಳೂರಿನ ಸೆಟಲೈಟ್ ರಿಂಗ್ ರೋಡ್, ಕೊಪ್ಪಳ, ಶಿವಮೊಗ್ಗ, ತುಮಕೂರು ಇದರಲ್ಲಿ ಸೇರಿವೆ. ಕಳೆದ ವರ್ಷ ಶಿವಮೊಗ್ಗ ವರ್ತುಲ ರಸ್ತೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಸಕ್ತಿ ವಹಿಸಿ ರಾಜ್ಯದ ಪಾಲಿನ ಹಣ ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದ ರಿಂಗ್ ರಸ್ತೆಗಳ ಯೋಜನೆಗೆ ಹಣಕಾಸು ನೆರವು ನೀಡದ ಕಾರಣ ಹಾಗೆಯೇ ಉಳಿದಿವೆ. ಈ ಯೋಜನೆಯಲ್ಲಿ ಕೇಂದ್ರದ 50 ಭಾಗ, ರಾಜ್ಯದ 50 ಭಾಗ ಅನುದಾನದ ಒಪ್ಪಂದ ಇದೆ. ಭೂಸ್ವಾಧೀನದ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳಬೇಕು.
ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆಯ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಸಭೆಗಳು ನಡೆದಿವೆ. ಸ್ಥಳ ಭೇಟಿ ಕಾರ್ಯವೂ ಆಗಿದೆ. ಈ ಯೋಜನೆಗೆ ಭೂಮಿ ಬಿಟ್ಟು ಕೊಡಲು ರೈತರೂ ಸಹ ಮುಂದೆ ಬಂದಿದ್ದಾರೆ.
ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು, ಸಂಸದ ಜಿ.ಎಸ್.ಬಸವರಾಜು, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಹಾಗೂ ಇತರೆ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ 11.9.2020 ರಂದು ತುಮಕೂರು ಬೈಪಾಸ್ ರಸ್ತೆಯ ಯೋಜನೆಗೆ ಸಂಬಂಧಿಸಿದಂತೆ ಸಭೆ ನಡೆದು, ಅಂದಿನ ಸಭೆಯಲ್ಲಿ ಯೋಜನೆಯ ತ್ವರಿತ ಅನುಷ್ಠಾನಕ್ಕೆ ಒಪ್ಪಿಗೆ ನೀಡಲಾಗಿದೆ. ಸಭೆಯಲ್ಲಿ ಒಪ್ಪಿಗೆ ನೀಡಿ ನಂತರ ವಿಳಂಬ ನೀತಿ ಅನುಸರಿಸುತ್ತಿರುವ ಕಾರಣವಾದರೂ ಏನು ಎಂಬುದು ಅರ್ಥವಾಗುತ್ತಿಲ್ಲ.
ತುಮಕೂರು ವರ್ತುಲ ರಸ್ತೆಯ ಈ ಯೋಜನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕಾರ್ಯ ಯೋಜನೆಯನ್ನು ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಪತ್ರಗಳ ಮೇಲೆ ಪತ್ರ ಬರೆಯುತ್ತಲೇ ಇದೆ. ಚತುಷ್ಪ್ಪಥ ರಸ್ತೆಯ ಈ ಭೂಸ್ವಾಧೀನಕ್ಕಾಗಿ 800 ಕೋಟಿ ರೂ.ಗಳ ಅಂದಾಜು ವೆಚ್ಚ (ತುಮಕೂರು ಬೈಪಾಸ್ 44.40 ಕಿ.ಮೀ. ಉದ್ದ) ತಯಾರಾಗಿದ್ದು, ಕೂಡಲೇ ಈ ಪ್ರಕ್ರಿಯೆ ಮುಗಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಕಳೆದ ನವೆಂಬರ್ ತಿಂಗಳಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪತ್ರ ಬರೆದಿದೆ. ರಾಜ್ಯ ಸರ್ಕಾರದ ಅನುಮತಿಗಾಗಿ ಹೆದ್ದಾರಿ ಪ್ರಾಧಿಕಾರವು ಕಾಯುತ್ತಿದೆ. ಆದರೆ ಪ್ರಾಧಿಕಾರದ ನಿರೀಕ್ಷೆಗೆ ತಕ್ಕಂತ ಪ್ರತಿಕ್ರಿಯೆಗಳು ಇಲ್ಲಿ ವ್ಯಕ್ತವಾಗುತ್ತಿಲ್ಲ.
ಇಂತಹ ಯಾವುದೇ ಯೋಜನೆಗಳಾದರೂ ನಿಗದಿತ ಸಮಯದಲ್ಲಿ ಕಾರ್ಯಾನುಷ್ಠಾನಗೊಂಡರೆ ಯೋಜನೆಯ ಅಂದಾಜು ವೆಚ್ಚದೊಳಗೆ ಮುಗಿಸಲು ಸಾಧ್ಯವಿದೆ. ಆದರೆ ವಿಳಂಬವಾದಂತೆಲ್ಲ ವೆಚ್ಚವೂ ಪರಿಷ್ಕರಣೆಗೊಳ್ಳಲಿವೆ. ವರ್ಷದಿಂದ ವರ್ಷಕ್ಕೆ ಹಣಕಾಸು ದರದ ವೆಚ್ಚ ಹೆಚ್ಚಳಗೊಳ್ಳುತ್ತಾ ಹೋದರೆ ಸರ್ಕಾರದ ಬೊಕ್ಕಸಕ್ಕೆ ನಷ್ಟ. ಪರೋಕ್ಷವಾಗಿ ತೆರಿಗೆದಾರನ ಮೇಲೆ ಹೊರೆ.
ಒಪ್ಪಂದದ ಬದ್ಧತೆ ಪತ್ರ ನೀಡಲಿ :
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ನಡೆಯುವ ಕಾಮಗಾರಿ ಇದು. ಈ ಯೋಜನೆ ಜಾರಿಯಾದರೆ ಬೆಂಗಳೂರು-ಹೊನ್ನಾವರ ಹೆದ್ದಾರಿಯಲ್ಲಿ ಜರುಗುವ ಅಪಘಾತಗಳು ತಪ್ಪುತ್ತವೆ. ಕ್ಯಾತ್ಸಂದ್ರ ಬಳಿ ಮೇಲ್ಸೇತುವೆ ನಿರ್ಮಾಣವಾಗಬೇಕಿತ್ತು. ಇನ್ನೂ ಆಗಿಲ್ಲ. ಈ ಭಾಗದಿಂದ ಎಡಭಾಗವಾಗಿ ಮಲ್ಲಸಂದ್ರ ಸಂಪರ್ಕಿಸುವ ವರ್ತುಲ ರಸ್ತೆಯಾದರೆ ಭಾರಿ ಗಾತ್ರದ ವಾಹನಗಳು ಇಲ್ಲಿ ಸರಾಗವಾಗಿ ಯಾವುದೇ ಅಡೆತಡೆ ಇಲ್ಲದೆ ಚಲಿಸಲು ಸಾಧ್ಯವಾಗುತ್ತದೆ. ಜನರ ಜೀವ ಉಳಿಸುವುದರ ಜೊತೆಗೆ ನೆಮ್ಮದಿಯ ಸಂಚಾರಕ್ಕೂ ಅವಕಾಶವಾಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಳಂಬ ಮಾಡದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಕಮಿಟ್‍ಮೆಂಟ್ ಲೆಟರ್ ನೀಡಲಿ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಇರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಗಮನ ಹರಿಸಿ ಅಧಿಕಾರಿಗಳ ಸಭೆ ನಡೆಸಲಿ. ಒಂದು ವಾರದೊಳಗೆ ಕ್ರಮ ಕೈಗೊಂಡರೆ ಮುಂದಿನ ಪ್ರಕ್ರಿಯೆಗಳು ಸಲೀಸಾಗಲಿವೆ.
-ಕೆ.ಎ.ತಿಪ್ಪೇಸ್ವಾಮಿ, ವಿ.ಪ.ಸದಸ್ಯರು.
ಎಲ್ಲ ಕಾಮಗಾರಿಗಳೂ ವಿಳಂಬ :
ಈ ಯೋಜನೆ ಮಾತ್ರ ವಿಳಂಬವಲ್ಲ, ಬಹುತೇಕ ಯೋಜನೆಗಳು ನೆನೆಗುದಿಗೆ ಬೀಳುವಂತಾಗಿದೆ. ನಿರ್ದಿಷ್ಟ ಅವಧಿಯಲ್ಲಿ ಯಾವುದೇ ಕಾಮಗಾರಿಗಳು ಪೂರ್ಣಗೊಳ್ಳುತ್ತಿಲ್ಲ. ರಾಯದುರ್ಗ ರೈಲ್ವೆ ಯೋಜನೆ ಅಪೂರ್ಣ ಗೊಂಡಿದೆ. ತುಮಕೂರು –ತಿಪಟೂರು ರಸ್ತೆ ಕಾಮಗಾರಿ ನಡೆಯುತ್ತಲೇ ಇದೆ. ಇನ್ನೂ ಎಷ್ಟು ವರ್ಷಗಳು ಬೇಕಾಗಬಹುದೋ? ರಾಜಕಾರಣಿಗಳಾದವರು ಅಧಿಕಾರಿಗಳ ಹಿಂದೆ ಬೀಳಬೇಕು. ಸಭೆಗಳನ್ನು ನಡೆಸಬೇಕು. ಅವೆಲ್ಲವೂ ದಾಖಲಾಗಬೇಕು. ಹೀಗಾದಾಗ ಮಾತ್ರ ಯೋಜನೆಗಳು ಜೀವ ಪಡೆದುಕೊಳ್ಳುತ್ತವೆ. ಪ್ರಸ್ತುತ ಸರ್ಕಾರದಲ್ಲಿ ಯೋಜನೆಗಳೆಲ್ಲ ವಿಳಂಬ ಗತಿಯಲ್ಲಿ ಸಾಗುತ್ತಿವೆ. ಬೈಪಾಸ್ ಯೋಜನೆ ಅನುಷ್ಠಾನಕ್ಕೆ ಬಂದರೆ ಮುಂದಿನ ದಿನಗಳಲ್ಲಿ ಎದುರಾಗುವ ಸಂಚಾರಿ ದಟ್ಟಣೆಯನ್ನು ನಿಯಂತ್ರಿಸಬಹುದು. ಇವೆಲ್ಲವೂ ದೂರದೃಷ್ಟಿಯ ಯೋಜನೆಗಳು.
-ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಸಂಸದರು.
ನಂದಿಹಳ್ಳಿ ಮಾರ್ಗವಾಗಿ ವಸಂತನರಸಾಪುರ ಸಂಪರ್ಕಿಸುವ ಬೈಪಾಸ್ ರಸ್ತೆಯಿಂದ ತುಮಕೂರಿಗೆ ಹಲವು ವಿಧದಲ್ಲಿ ಅನುಕೂಲವಿದೆ. ಇದನ್ನು ರೇಡಿಯಲ್ ಲಿಂಕ್ ರೋಡ್ ಆಗಿ ಪರಿವರ್ತಿಸುವುದರಿಂದ ನಿರುದ್ಯೋಗಿಗಳಿಗೂ ಅನುಕೂಲವಾಗಲಿದೆ. ಕೈಗಾರಿಕೆಗಳ ದೃಷ್ಟಿಯಿಂದಲೂ ಇದು ಒಳಿತಾದ ಯೋಜನೆ. ಭೂಸ್ವಾಧೀನಗೊಳಪಡಿಸಲು ಆ ಭಾಗದ ರೈತರೆ ಒಪ್ಪಿ ಮುಂದೆ ಬಂದಿದ್ದಾರೆ. ಇದನ್ನೆಲ್ಲ ಗಮನವಿಟ್ಟುಕೊಂಡು ಸಂಸದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಯೋಜನೆಯ ಕಾರ್ಯರೂಪಕ್ಕೆ ಮುಂದಾಗಬೇಕು.
-ಕುಂದರನಹಳ್ಳಿ ರಮೇಶ್, ದಿಶಾ ಸಮಿತಿ ರಾಜ್ಯ ಸದಸ್ಯರು.