ಕೊರೊನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ :  ಸಚಿವ 

ತುಮಕೂರು:

      ಜಿಲ್ಲೆಯಲ್ಲಿ ಕೋವಿಡ್-19 ಹರಡದಂತೆ ಕಾಪಾಡುವ ನಿಟ್ಟಿನಲ್ಲಿ ಅಂಗಡಿ ಮುಂಗಟ್ಟು ಮತ್ತಿತರ ಸಾಮಾಜಿಕ ಸ್ಥಳಗಳಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಕಾನೂನು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಸಚಿವರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ ಮಾಧುಸ್ವಾಮಿ ಅವರು ಹೇಳಿದರು.

      ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಅಕ್ಕಪಕ್ಕದ ಜನರು ಕೆಮ್ಮುವಾಗ, ಸೀನುವಾಗ ಎಚ್ಚರವಹಿಸಬೇಕು ಎಂದರಲ್ಲದೇ ಈಗಾಗಲೇ ಮುಸ್ಲಿಂ ಭಾಂದವರ ಪವಿತ್ರ ರಂಜಾನ್ ಹಬ್ಬ ಪ್ರಯುಕ್ತ ಪ್ರಾರ್ಥನೆ ಮಾಡುವವರು ಈದ್ಗಾಗೆ ಹೋಗುವುದು ಬೇಡ. ಇದರಿಂದ ಹಲವಾರಿಗೆ ತೊಂದರೆಯಾಗುತ್ತದೆ. ಈಗ ಹಗ್ ಮಾಡುವುದು ಬೇಡ. ಆದ್ದರಿಂದ ಮುಸ್ಲಿಂ ಭಾಂದವರು ಮನೆಯಲ್ಲಿಯೇ ಕುಳಿತು ಪ್ರಾರ್ಥನೆ ಮಾಡಿ ಎಂದರು.

      ಕೊರೊನಾ ವೈರಸ್ ಎಂಬುದು ಒಂದು ಸಮುದಾಯದ ಜನರಿಗೆ ಮಾತ್ರ ಬರುವಂತಹದ್ದಲ್ಲ. ಸಾರ್ವಜನಿಕರು ಕೇವಲ ಒಂದು ಸಮುದಾಯವನ್ನು ಟಾರ್ಗೆಟ್ ಮಾಡಬಾರದು. ಖಾಯಿಲೆ ಪ್ರತಿಯೊಬ್ಬರಿಗೂ ಬರುತ್ತದೆ. ನಾವೆಲ್ಲರೂ ಭಾರತಾಂಬೆಯ ಮಕ್ಕಳು. ಇಲ್ಲಿ ಯಾರು ಕೂಡ ಹೊರಗಿನವರಲ್ಲ. ನಾವು ಒಂದೇ ತಾಯಿಯ ಮಕ್ಕಳಂತೆ ಬಾಳಬೇಕು. ಸಮುದಾಯದವರನ್ನು ಕೆಲವೊಂದು ಹಳ್ಳಿಗಳಿಗೆ ಬಿಟ್ಟುಕೊಳ್ಳದೆ ಅವರದೊಂದಿಗೆ ವ್ಯವಹಾರ ಮಾಡುವುದನ್ನೆ ಬಿಟ್ಟಿದ್ದಾರೆ. ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ವರ್ತಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

      ಕೊರೊನಾ ಕಾಯಿಲೆಯಿಂದ ಸಾಯುವವರಿಗಿಂತರ ಅದರ ಭೀತಿಗೆ ಜನರು ಸಾಯುತ್ತಿದ್ದಾರೆ. ರೋಗ ಸೋಂಕಿತರಲ್ಲಿ ನಿರೋಧಕ ಶಕ್ತಿ ಕಡಿಮೆಯಾಗಿ ಜನರು ಸಾಯುತ್ತಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ವಯೋವೃದ್ಧರು, ಮಕ್ಕಳು, ಗರ್ಭಿಣಿ, ಬಾಣಂತಿಯರನ್ನು ಸುರಕ್ಷಿತವಾಗಿ ನೋಡಿಕೊಳ್ಳಬೇಕು ಎಂದರಲ್ಲದೇ ಈಗಾಗಲೇ ಸೋಂಕಿನಿಂದ ಚೇತರಿಸಿಕೊಂಡಿರುವವರಿಗೆ ಮತ್ತೆ ಪರೀಕ್ಷಿಸಿ ಎಂದು ಸೂಚಿಸಿದರು.

       ಶಾಸಕ ಜಿ.ಬಿ ಜ್ಯೋತಿಗಣೇಶ್ ಮಾತನಾಡಿ, ನಗರದಲ್ಲಿ ಪಿಹೆಚ್ ಕಾಲೋನಿ , ಕೆಹೆಚ್‍ಬಿ ಕಾಲೋನಿಯಲ್ಲಿರುವ ಕಂಟೈನ್ಮೆಂಟ್ ವಲಯದಲ್ಲಿ ಬಡ ಜನರಿಗೆ ಮಹಾನಗರ ಪಾಲಿಕೆ ವತಿಯಿಂದ ದಿನನಿತ್ಯ ಹಾಲು ಮತ್ತು ಆಹಾರ ಧಾನ್ಯಗಳನ್ನು ಒದಗಿಸಿಕೊಡಬೇಕೆಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಡಾ|| ರಾಕೇಶ್‍ಕುಮಾರ್ ಅವರು ಮಾತನಾಡಿ, ನಗರದಲ್ಲಿ ಪಿಹೆಚ್ ಕಾಲೋನಿ, ಕೆಹೆಚ್‍ಬಿ ಕಾಲೋನಿಗಳ ಕಂಟೈನ್ಮೆಂಟ್ ವಲಯದಲ್ಲಿ ಅಂಗಡಿ ತೆರೆಯಲು ಅವಕಾಶವಿರುವುದಿಲ್ಲ. ಆದರೆ ಬಫರ್ ವಲಯಗಳಲ್ಲಿ ಅಗತ್ಯ ವಸ್ತುಗಳ ಸಂಚಾರಕ್ಕೆ ಅವಕಾಶವಿದೆ. ಈ ವ್ಯಾಪ್ತಿಯಲ್ಲಿರುವ ಜನರಿಗೆ ರ್ಯಾಂಡಮ್ ಆಗಿ ಪರೀಕ್ಷೆಗೊಳಪಡಿಸಲಾಗುತ್ತಿದೆ. ಮುಂಜಾಗ್ರತ ಕ್ರಮವಾಗಿ ಜಿಲ್ಲೆಯಲ್ಲಿ ಆರೋಗ್ಯ ಸಮೀಕ್ಷೆ ನಡೆಸಿ ಪ್ರತಿಯೊಬ್ಬರ ಆರೋಗ್ಯ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆಯುತ್ತೀದ್ದೇವೆ ಎಂದರು.

      ಪಾಲಿಕೆ ಮೇಯರ್ ಫರೀದಾ ಬೇಗಂ ಅವರು ಮಾತನಾಡಿ, ಬಫರ್ ವಲಯದಲ್ಲಿ ಕುಡಿಯುವ ನೀರಿನ ಬೋರ್‍ಗಳು ಕೆಟ್ಟು ಹೋಗಿದ್ದು, ಅದನ್ನು ರಿಪೇರಿ ಮಾಡಲು ಸಹ ಜನರು ಬರುತ್ತಿಲ್ಲ. ಕೇವಲ ಒಂದು ಸಮುದಾಯಕ್ಕೆ ಬರುವ ಕಾಯಿಲೆಯಲ್ಲ ಇದು ಸಾಂಕ್ರಾಮಿಕ ರೋಗವಾಗಿದ್ದು, ಜನರು ಭಯಪಡದೇ ಎಚ್ಚರವಹಿಸಬೇಕು ಎಂದರು.

      ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೋನವಂಶಿಕೃಷ್ಣ, ಪಾಲಿಕೆ ಆಯುಕ್ತ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಸೇರಿದಂತೆ ಮತ್ತಿತರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link