ತುಮಕೂರು : ಜಿಲ್ಲೆಯಲ್ಲೂ ಕೋವಿಡ್ ಲಸಿಕೆ : ಸಕಲ ಸಿದ್ಧತೆ!!

 ತುಮಕೂರು : 

      ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲೆಯಲ್ಲೂ ಕೋವಿಡ್ ಲಸಿಕೆ ನೀಡಲು ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅವರು ತಿಳಿಸಿದರು.

      ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಶೀಘ್ರದಲ್ಲಿ ಜಿಲ್ಲೆಯಲ್ಲೂ ಕೋವಿಡ್ ಲಸಿಕೆಯನ್ನು ನೀಡಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ ಆರೋಗ್ಯ ಸಿಬ್ಬಂದಿ, ವೈದ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಹೆಲ್ತ್‍ಕೇರ್ ವರ್ಕರ್‍ಗಳಿಗೆ ಲಸಿಕೆ ನೀಡಲು ಅಗತ್ಯ ಕ್ರಮಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು.

      ಆರ್‍ಸಿಹೆಚ್ ಅಧಿಕಾರಿ ಡಾ: ಕೇಶವರಾಜ್ ಸಭೆಗೆ ಮಾಹಿತಿ ನೀಡುತ್ತಾ, ಈಗಾಗಲೇ ಜಿಲ್ಲೆಯ ಸರ್ಕಾರಿ/ ಖಾಸಗಿ ನರ್ಸಿಂಗ್ ಕಾಲೇಜು/ಮೆಡಿಕಲ್ ಕಾಲೇಜು/ಫಾರ್ಮಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 19271 ಹೆಲ್ತ್ ಕೇರ್ ವರ್ಕರ್‍ಗಳನ್ನು ಕೋವಿಡ್ ಪೋರ್ಟಲ್‍ನಲ್ಲಿ ಅಪ್‍ಲೋಡ್ ಮಾಡಲಾಗಿದೆ. ಲಸಿಕೆಯ ಶೇಖರಣೆ ಹಾಗೂ ವಿತರಣೆಗಾಗಿ ಜಿಲ್ಲೆಯ 134 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಕೋಲ್ಡ್ ಚೈನ್ ಪಾಯಿಂಟ್‍ಗಳಲ್ಲಿ ಪರಿಕರಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

      ಲಸಿಕೆಯನ್ನು ಶೇಖರಿಸಲು ಅಗತ್ಯವಿರುವ ಪರಿಕರಗಳ ಬಗ್ಗೆ ಕೂಡಲೇ ಪ್ರಸ್ತಾವನೆ ಸಲ್ಲಿಸಬೇಕು. ತುರ್ತು ಸಂದರ್ಭದಲ್ಲಿ ಬಳಸಿಕೊಳ್ಳಲು ಹೆಚ್ಚುವರಿಯಾಗಿ ಪಶುಸಂಗೋಪನಾ ಇಲಾಖೆಯಲ್ಲಿರುವ 29 ಕೋಲ್ಡ್ ಚೈನ್ ಪಾಯಿಂಟ್‍ಗಳನ್ನು ಕಾಯ್ದಿರಿಸಲು ಪಶುವೈದ್ಯ ಇಲಾಖೆಯ ಉಪನಿರ್ದೇಶಕರಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

      ಕೋವಿಡ್ ಲಸಿಕೆ ನೀಡುವ ಬಗ್ಗೆ ಮುಂದಿನ 10 ದಿನಗಳೊಳಗೆ (ಗ್ರಾಮ ಪಂಚಾಯಿತಿ ಚುನಾವಣೆ ದಿನ ಹೊರತುಪಡಿಸಿ) ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ತರಬೇತಿ ನೀಡಬೇಕು ಎಂದು ಸೂಚಿಸಿದರು.

      ಮೊದಲ ಹಂತದ ಲಸಿಕೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದಾಗ ಮಾತ್ರ 2ನೇ ಹಂತದ ಲಸಿಕಾ ಕಾರ್ಯ ಯಶಸ್ವಿ ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ಎಲ್ಲಾ ಹೆಲ್ತ್ ಕೇರ್ ವರ್ಕ್‍ರ್‍ಗಳು ತಪ್ಪದೇ ಲಸಿಕೆ ಪಡೆಯಬೇಕೆಂದು ಸೂಚಿಸಿದರು. ಕೋವಿಡ್ ಲಸಿಕೆಯನ್ನು ಮತಾನದ ಮಾದರಿಯಲ್ಲಿ ನೀಡಬೇಕು. ಮತದಾನ ಲಸಿಕಾ ಬೂತ್‍ಗಳನ್ನು ಸ್ಥಾಪಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಲಸಿಕೆ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದರು.

      ಕೋವಿಡ್ ಲಸಿಕೆ ನೆಪವೊಡ್ಡದೆ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದಡಿ 2 ವರ್ಷದ ಮಕ್ಕಳಿಗೆ ನೀಡಲಾಗುವ ಬಿಸಿಜಿ, ಪೆಂಟಾದಂತಹ ಲಸಿಕೆಗಳನ್ನು ತಪ್ಪದೇ ನೀಡಬೇಕು. ಜಿಲ್ಲೆಯಲ್ಲಿ ಶೇ. 100 ಕ್ಕಿಂತ ಕಡಿಮೆ ಪ್ರಗತಿ ಸಾಧಿಸಿರುವ ಪಾವಗಡ, ಶಿರಾ, ಚಿಕ್ಕನಾಯಕನಹಳ್ಳಿ, ಮಧುಗಿರಿ ತಾಲ್ಲೂಕಿನಲ್ಲಿ ಶೇ. 100 ರಷ್ಟು ಲಸಿಕೆ ನಿಡಬೇಕೆಂದು ಸೂಚನೆ ನೀಡಿದರು.

      ಪ್ರತಿ ವರ್ಷದಂತೆ 2021ರ ಜನವರಿ 17ರಿಂದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಜಿಲ್ಲಾದ್ಯಂತ ಹಮ್ಮಿಕೊಳ್ಳಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

      ತಾಯಿ ಹಾಗೂ ಶಿಶು ಮರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಡಾ: ಕೇಶವ್‍ರಾಜ್ ಜಿಲ್ಲೆಯಲ್ಲಿ ಕಳೆದ ಏಪ್ರಿಲ್‍ನಿಂದ ನವೆಂಬರ್‍ವರೆಗೆ 20 ತಾಯಿ ಮರಣ ಹಾಗೂ 250 ಶಿಶು ಮರಣ ಪ್ರಕರಣಗಳು ವರದಿಯಾಗಿವೆ. ರಾಜ್ಯದ ಸೂಚ್ಯಂಕವನ್ನು ಹೋಲಿಸಿದರೆ ಜಿಲ್ಲೆಯಲ್ಲಿ ತಾಯಿ-ಶಿಶು ಮರಣ ಕಡಿಮೆ ಪ್ರಮಾಣದಲ್ಲಿದೆ ಎಂದು ತಿಳಿಸಿದರು.

      ಬಹುತೇಕ ಗರ್ಭಿಣಿಯರಲ್ಲಿ ಕಾಣುವ ರಕ್ತದೊತ್ತಡ, ಹೆರಿಗೆ ನಂತರದ ರಕ್ತಸ್ರಾವ ಮತ್ತಿತರ ಕಾರಣಗಳಿಂದ ತಾಯಿ ಮರಣ ಹಾಗೂ ಶ್ವಾಸಕೋಶದ ಸೋಂಕು, ದಿನ ತುಂಬದೆ ಜನಿಸುವುದರಿಂದ ಮಕ್ಕಳ ಮರಣ ಪ್ರಕರಣಗಳು ವರದಿಯಾಗಿವೆ ಎಂದು ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ತಾಯಿ-ಶಿಶು ಮರಣ ತಪ್ಪಿಸಲು ಗರ್ಭ ಧರಿಸಿದಾಗಲೇ ಆರೋಗ್ಯ ಕಾರ್ಯಕರ್ತೆಯರು ತಾಯಂದಿರ ಮೇಲೆ ನಿಗಾ ವಹಿಸಬೇಕು ಎಂದು ಸೂಚನೆ ನೀಡಿದರು.

      ನಂತರ ನಡೆದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಾ: ಮೋಹನ್ ದಾಸ್ ಮಾಹಿತಿ ನೀಡುತ್ತಾ, ನಿಯಮ ಉಲ್ಲಂಘಿಸಿದ ಒಟ್ಟು 769 ಪ್ರಕರಣಗಳನ್ನು ದಾಖಲಿಸಿಕೊಂಡು 76510 ರೂ. ದಂಡ ಸೇರಿದಂತೆ 2016-17ನೇ ಸಾಲಿನಿಂದ ಈವರೆಗೂ 9429 ಪ್ರಕರಣಗಳನ್ನು ದಾಖಲಿಸಿಕೊಂಡು 1098730 ರೂ.ಗಳ ದಂಡವನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.

      ರಾಷ್ಟ್ರೀಯ ರೇಬಿಸ್ ನಿಯಂತ್ರಣ ಕಾರ್ಯಕ್ರಮದ ಸಮನ್ವಯ ಸಮಿತಿಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ನಾಯಿ ಕಡಿತದ ಪ್ರಕರಣಗಳನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದರಲ್ಲದೆ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕೋಳಿ/ ಮಾಂಸದ ಅಂಗಡಿಗಳ ಮಾಲೀಕರು ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೇ ಇರುವುದರಿಂದ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ತ್ಯಾಜ್ಯ ವಿಲೇವಾರಿಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸದ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಸೂಚನೆ ನೀಡಿದರು ಹಾಗೂ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿರುವ ನೋಂದಣಿಯಾಗದ ಕೋಳಿ/ ಮಾಂಸದ ಅಂಗಡಿಗಳ ಪಟ್ಟಿಯನ್ನು ಕೂಡಲೇ ತಮಗೆ ಸಲ್ಲಿಸಬೇಕೆಂದು ನಿರ್ದೇಶನ ನೀಡಿದರು.

      ನಂತರ ಜರುಗಿದ ರಾಷ್ಟ್ರೀಯ ಸಮಗ್ರ ಕಣ್ಗಾವಲು ಘಟಕದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ನೀಡಿದ ಡಾ: ಪುರುಷೋತ್ತಮ್, ಜಿಲ್ಲೆಯಲ್ಲಿ ಕಳೆದ ಏಪ್ರಿಲ್‍ನಿಂದ 3 ಮಲೇರಿಯಾ, 24 ಡೆಂಗ್ಯೂ, 67 ಚಿಕುಂಗುನ್ಯಾ ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದರು.

      ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ: ಸನತ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಜನವರಿಯಿಂದ ಡಿಸೆಂಬರ್‍ವರೆಗೆ 2269 ಮಂದಿಯಲ್ಲಿ ಕ್ಷಯರೋಗವನ್ನು ಪತ್ತೆ ಮಾಡಲಾಗಿದೆ. ಕೋವಿಡ್-19 ಸಂದರ್ಭದಲ್ಲಿ ಕೋವಿಡ್ ಶಂಕಿತರೆಂದು ದಾಖಲಾದ 60 ಮಂದಿಯಲ್ಲಿ ಕ್ಷಯ ಪತ್ತೆಯಾಗಿದೆ. ಅಲ್ಲದೆ 86 ಕೋವಿಡ್ ಸೋಂಕಿತರ ಪರೀಕ್ಷೆ ಮಾಡಲಾಗಿದ್ದು, ಇವರಲ್ಲಿ 9 ಮಂದಿಗೆ ಕ್ಷಯ ದೃಢಪಟ್ಟಿದೆ ಎಂದು ತಿಳಿಸಿದರು.

     ಕ್ಷಯರೋಗ ಪತ್ತೆಗಾಗಿ ಜಿಲ್ಲಾದ್ಯಂತ ಹಮ್ಮಿಕೊಂಡಿದ್ದ ಆಂದೋಲನದಲ್ಲಿ ಒಂದು ಲಕ್ಷ ಮನೆಗಳಿಗೆ ಭೇಟಿ ನೀಡಿ ಪರೀಕ್ಷೆಗೊಳಪಡಿಸಿದ 375000 ಮಂದಿಯಲ್ಲಿ 1800 ಶಂಕಿತರ ಕಫ ಪರೀಕ್ಷಿಸಿದಾಗ 36 ಮಂದಿಯಲ್ಲಿ ಕ್ಷಯರೋಗ ದೃಢಪಟ್ಟಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಭ್ರೂಣಲಿಂಗ ಪತ್ತೆ ಕಾಯ್ದೆ ಉಲ್ಲಂಘನೆ ಮಾಡುವ ಸ್ಕ್ಯಾನಿಂಗ್ ಸೆಂಟರ್‍ಗಳ ಮೇಲೆ ದಾಳಿ ನಡೆಸಿ ಸೀಜ್ ಮಾಡಬೇಕು ಹಾಗೂ ತುರುವೇಕೆರೆಯಲ್ಲಿ ಲಿಂಗಾನುಪಾತ ಕುಸಿದಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಮಹಿಮ ಅವರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

     ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ನಾಗೇಂದ್ರಪ್ಪ, ಡಾ: ವೀಣಾ, ಎಲ್ಲಾ ತಾಲ್ಲೂಕು ಆರೋಗ್ಯಾಧಿಕಾರಿಗಳು, ಪಾಲಿಕೆ ಆರೋಗ್ಯಾಧಿಕಾರಿ ಡಾ: ನಾಗೇಶ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link