ತುಮಕೂರು : ಗ್ರಾಪಂ 2ನೇ ಹಂತದ ಚುನಾವಣೆಗೆ ಸಿದ್ದತೆ

 ತುಮಕೂರು : 

      ಮೊದಲ ಹಂತದ ಗ್ರಾಮಪಂಚಾಯಿತಿ ಚುನಾವಣೆ ಯಶಸ್ವಿಯಾಗಿ ನಡೆದ ಬೆನ್ನಲ್ಲೇ ಜಿಲ್ಲೆಯಲ್ಲಿ 2ನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಜಿಲ್ಲಾಡಳಿತ ಅಗತ್ಯ ತಯಾರಿ ನಡೆಸಿದ್ದು, ಎರಡನೇ ಹಂತದ ಮಧುಗಿರಿ, ಶಿರಾ, ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ ತಾಲೂಕುಗಳ ಒಟ್ಟು 161 ಗ್ರಾಮ ಪಂಚಾಯಿತಿಗಳ 2400 ಸದಸ್ಯ ಸ್ಥಾನಗಳಿಗೆ ಡಿಸೆಂಬರ್ 27ರಂದು ಮತದಾನಕ್ಕೆ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

      ಮತದಾನವು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದ್ದು. ಮತದಾನ ಮಾಡಿದ ಮತದಾರನ ಎಡಗೈನ ಹೆಬ್ಬೆರಳಿಗೆ ಅಳಿಸಲಾಗದ ಶಾಹಿಯನ್ನು ಹಾಕಲಾಗುವುದು. ಇದರಲ್ಲಿ 1321 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 131 ಅತಿ ಸೂಕ್ಷ್ಮ, 198 ಸೂಕ್ಷ್ಮ ಹಾಗೂ 992 ಸಾಮಾನ್ಯ ಮತಗಟ್ಟೆಗಳಲ್ಲಿ ಚುನಾವಣಾ ಮತದಾನ ನಡೆಯಲಿದೆ.

      ಕೋವಿಡ್ ಸೋಂಕಿತರಿಗೆ ಒಂದು ಗಂಟೆ ಮೀಸಲು: ಕೋವಿಡ್ ಸೋಂಕಿತರು ಹಾಗೂ ಕೋವಿಡ್ ಶಂಕಿತರು ಪಿಪಿ ಕಿಟ್ ಧರಿಸಿ ಸಂಬಂಧಪಟ್ಟ ಮತಗಟ್ಟೆಗಳಲ್ಲಿ ಮತದಾನದ ಕೊನೆಯ ಒಂದು ಗಂಟೆಯ ಅವಧಿಯಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಿದೆ.

      ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು:

      ಮತದಾನ ಮಾಡಲು ಬರುವ ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮತದಾರರು ಮತಗಟ್ಟೆಗೆ ಆಗಮಿಸಿದಾಗ ಮೊದಲಿಗೆ ಥರ್ಮಲ್ ಸ್ಯ್ಕಾನಿಂಗ್ ಹಾಗೂ ಕೈಗಳನ್ನು ಸ್ಯಾನಿಟೈಸ್ ಮಾಡಲಾಗುವುದು. ಮತದಾರರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮತ ಚಲಾಯಿಸಬೇಕು.

       ಬಿಗಿ ಬಂದೋಬಸ್ತ್:

      ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದು, ಇದಕ್ಕಾಗಿ ಡಿಎಸ್‍ಪಿ-5, ಸಿಪಿಐ/ಪಿಐ-15, ಪಿಎಸ್‍ಐ-49, ಎಎಸ್‍ಐ-73, ಹೆಚ್‍ಸಿ-141, ಪಿಸಿ-872, ಹೆಚ್‍ಜಿ-627, ಡಿಎಆರ್-5 ತುಕಡಿ ಕೆಎಸ್‍ಆರ್‍ಪಿ-5 ತುಕಡಿ ಸೇರಿದಂತೆ ಒಟ್ಟು 1792 ಪೊಲೀಸ್ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

      ಎಪಿಕ್ ಅಥವಾ ಪರ್ಯಾಯ ದಾಖಲೆ ಹಾಜರುಪಡಿಸಿ ಮತದಾನ: ಮತದಾನ ಮಾಡಲು ಎಪಿಕ್ ಅಥವಾ ಆಧಾರ್ ಕಾರ್ಡ್, ನರೇಗಾ ಜಾಬ್‍ಕಾರ್ಡ್, ಬ್ಯಾಂಕ್/ಅಂಚೆ ಕಛೇರಿಯ ಭಾವಚಿತ್ರವಿರುವ ಪಾಸ್‍ಬುಕ್, ಕಾರ್ಮಿಕ ಸಚಿವಾಲಯದಡಿ ಆರೋಗ್ಯ ವಿಮೆಯಡಿ ವಿತರಿಸಿರುವ ಸ್ಮಾರ್ಟ್ ಕಾರ್ಡು, ಡ್ರೈವಿಂಗ್ ಲೈಸೆನ್ಸ್, ಇಂಡಿಯನ್ ಪಾಸ್‍ಪೋರ್ಟ್, ಭಾವಚಿತ್ರವಿರುವ ಪಿಂಚಣಿ ದಾಖಲೆ, ಭಾವಚಿತ್ರವಿರುವ ಪಡಿತರ ಚೀಟಿ, ಆಹಾರ ಇಲಾಖೆ ನೀಡಿರುವ ಕುಟುಂಬ ಸದಸ್ಯರು ಹಾಗೂ ಕುಟುಂಬ ಯಜಮಾನನೊಂದಿಗೆ ಹೊಂದಿರುವ ಸದಸ್ಯರ ಸಂಬಂಧ ಒಳಗೊಂಡ ಭಾವಚಿತ್ರವಿರುವ ತಾತ್ಕಾಲಿಕ/ಮೂಲ ಪಡಿತರ ಚೀಟಿ, ಸರ್ಕಾರಿ ಇಲಾಖೆ ನೀಡಿರುವ ಭಾವಚಿತ್ರವಿರುವ ಹಿರಿಯ ನಾಗರಿಕ ಗುರುತಿನ ಚೀಟಿ, ಸಂಧ್ಯಾ ಸುರಕ್ಷಾ ಯೋಜನೆಯ ಭಾವಚಿತ್ರವಿರುವ ಗುರುತಿನ ಚೀಟಿ, ಮಾಜಿ ಯೋಧರ ಭಾವಚಿತ್ರವಿರುವ ಸಿಎಸ್‍ಡಿ ಕ್ಯಾಂಟೀನ್ ಕಾರ್ಡ್, ವಿಶೇಷಚೇತನರಿಗೆ ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಗುರುತಿನ ಚೀಟಿ, ಸಕ್ಷಮ ಪ್ರಾಧಿಕಾರ ನೀಡಿರುವ ಎಸ್‍ಸಿ/ಎಸ್‍ಟಿ/ಓಬಿಸಿ ಭಾವಚಿತ್ರವಿರುವ ಪ್ರಮಾಣ ಪತ್ರಗಳು/ಭಾವಚಿತ್ರವಿರುವ ನೋಂದಾಯಿತ ಡೀಡ್‍ಗಳು/ಪಟ್ಟಾ ಮುಂತಾದ ಆಸ್ತಿ ದಾಖಲೆಗಳು, ಮಾನ್ಯತೆ ಪಡೆದ ನೋಂದಾಯಿತ ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳಿಗೆ ನೀಡಿರುವ ಗುರುತಿನ ಚೀಟಿಯನ್ನು ಹಾಜರುಪಡಿಸಿ ಮತದಾನ ಮಾಡಲು ಅವಕಾಶ ನೀಡಲಾಗಿದೆ.

    ಮಸ್ಟರಿಂಗ್/ಡಿಮಸ್ಟರಿಂಗ್ ಕೇಂದ್ರ:

      ಮಧುಗಿರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು; ಶಿರಾ-ಸರ್ಕಾರಿ ಪ್ರಥಮ ದರ್ಜೆ ಕಾಲೇಜು; ತಿಪಟೂರು- ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು; ತುರುವೇಕೆರೆ-ಸರ್ಕಾರಿ ಜೂನಿಯರ್ ಕಾಲೇಜು; ಚಿಕ್ಕನಾಯಕನಹಳ್ಳಿ-ಸರ್ಕಾರಿ ಪಿಯು ಕಾಲೇಜುಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಮಸ್ಟರಿಂಗ್ ಕಾರ್ಯ ನಡೆಯಲಿದೆ.

      ಡಿ ಮಸ್ಟರಿಂಗ್ ಕಾರ್ಯವು ಮತದಾನ ನಂತರ ತಿಪಟೂರಿನ ಪಲ್ಲಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ನಡೆಯಲಿದ್ದು, ಚುನಾವಣಾ ಮತದಾನ ನಡೆಯುವ ಉಳಿದ ತಾಲ್ಲೂಕುಗಳಲ್ಲಿ ಮಸ್ಟರಿಂಗ್ ಕೇಂದ್ರಗಳಲ್ಲಿಯೇ ಡಿಮಸ್ಟರಿಂಗ್ ಕಾರ್ಯ ನಡೆಯಲಿದೆ.
 
ಇಂದಿನಿಂದ 27ರವರೆಗೆ ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ : ಡಿಸಿ

      ಎರಡನೇ ಹಂತದ ಚುನಾವಣಾ ಮತದಾನ ನಡೆಯುವ ಮಧುಗಿರಿ, ಶಿರಾ, ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಡಿಸೆಂಬರ್ 25ರ ಸಂಜೆ 6 ಗಂಟೆಯಿಂದ ಡಿ.27ರ ಮಧ್ಯರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ನಿಷೇಧ ಅವಧಿಯಲ್ಲಿ 5 ಜನರ ಮೇಲ್ಪಟ್ಟು ಗುಂಪುಗಾರಿಕೆ ಮಾಡುವುದಾಗಲಿ, ಇತರೆ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಮೆರವಣಿಗೆ, ಅಕ್ರಮ ಗುಂಪು ಸೇರುವಿಕೆ, ಪಟಾಕಿ ಸಿಡಿಸುವಂತಿಲ್ಲ. ಯಾವುದೇ ರೀತಿಯ ಮತೀಯ ಭಾವನೆಗಳನ್ನು ಕೆರಳಿಸುವಂತಹ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದು/ ಘೋಷಣೆ ಕೂಗುವುದು/ ಭಿತ್ತಿ ಪತ್ರಗಳನ್ನು ಪ್ರಕಟಿಸುವುದು ಮಾಡತಕ್ಕದ್ದಲ್ಲ. ಶಾಂತಿ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಭಂಗವನ್ನುಂಟುಮಾಡುವ ಸುಳ್ಳು ವದಂತಿಗಳನ್ನು ಹಬ್ಬಿಸುವಂತಿಲ್ಲ. ಸಾರ್ವಜನಿಕ ಪ್ರಾಣ ಹಾಗೂ ಆಸ್ತಿಪಾಸ್ತಿಗಳಿಗೆ ಹಾನಿಯುಂಟಾಗುವ ರೀತಿಯಲ್ಲಿ ವರ್ತಿಸತಕ್ಕದ್ದಲ್ಲ. ಶವಸಂಸ್ಕಾರ, ಮಧುವೆ ಮತ್ತು ಧಾರ್ಮಿಕ ಕಾರ್ಯ ಹೊರತುಪಡಿಸಿ ಯಾವುದೇ ಸಭೆ-ಸಮಾರಂಭ, ಮೆರವಣಿಗೆ ಮಾಡುವಂತಿಲ್ಲ. ನಿಷೇಧಾಜ್ಞೆಯನ್ನು ಉಲ್ಲಂಘಿಸಿದ ವ್ಯಕ್ತಿಗಳನ್ನು ಕೂಡಲೇ ಬಂಧಿಸಲು ಅಗತ್ಯ ಕಾನೂನು ಕ್ರಮ ಜರುಗಿಸಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಈ ನಿಷೇಧಾದೇಶವು ಮತದಾನ ನಡೆಯುವ ಮತದಾನ ಕೇಂದ್ರ ಸ್ಥಳಕ್ಕೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅವರು ತಿಳಿಸಿದ್ದಾರೆ.

ಮದ್ಯ ಮಾರಾಟ ನಿಷೇಧ:

      ಡಿ.27ರಂದು ಎರಡನೇ ಹಂತದ ಗ್ರಾಮ ಪಂಚಾಯಿತಿಯ ಚುನಾವಣೆ ನಡೆಯುವ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಡಿಸೆಂಬರ್ 25ರ ಸಂಜೆ 5 ಗಂಟೆಯಿಂದ 27ರ ಸಂಜೆ 5 ಗಂಟೆಯವರೆಗೆ ಎಲ್ಲಾ ಮದ್ಯದಂಡಗಡಿಗಳನ್ನು ಮತ್ತು ಮದ್ಯ ತಯಾರಿಕಾ ಘಟಕಗಳನ್ನು ಅದರ ಮಾಲೀಕರು, ಅಧಿಭೋಗದಾರರು ಮತ್ತು ಸಂದರ್ಭನುಸಾರ ವ್ಯವಸ್ಥಾಪಕರು ಮುಚ್ಚತಕ್ಕದ್ದು ಹಾಗೂ ಮೊಹರ್ ಮಾಡಿ ಅದರ ಕೀ ಅನ್ನು ಜಿಲ್ಲಾಧಿಕಾರಿಗಳಿಗೆ ಅಥವಾ ಅಧಿಕಾರ ವ್ಯಾಪ್ತಿಯುಳ್ಳ ಕಾರ್ಯರ್ವಾಹಕ ಮ್ಯಾಜಿಸ್ಟ್ರೇಟರ್‍ರಿಗೆ ಒಪ್ಪಿಸತಕ್ಕದ್ದು. ಈ ಅವಧಿಯಲ್ಲಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ, ಸಾಗಾಣಿಕೆ, ಶೇಖರಣೆ ನಿಷೇಧಿಸಿ ಮುಚ್ಚಲು ಆದೇಶಿಸಿರುತ್ತಾರೆ.

      ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಯಾರಾದರೂ ಮದ್ಯವನ್ನು ಸ್ವಾಧೀನದಲ್ಲಿಟ್ಟುಕೊಂಡಿರುವುದು ಅಥವಾ ಮದ್ಯವನ್ನು ಸೇವಿಸಿ ಬೀದಿಯಲ್ಲಿ ರಂಪಾಟ ಮಾಡುತ್ತಿರುವುದು ಕಂಡು ಬಂದರೆ ಮುನ್ನೆಚ್ಚರಿಕೆ ಕ್ರಮವಾಗಿ ಚುನಾವಣೆ ಮುಕ್ತಾಯವಾಗುವವರೆಗೆ ಅಂತಹವರನ್ನು ಕಸ್ಟಡಿಯಲ್ಲಿ ಇಡಲಾಗುವುದು ಎಂದು ಅವರು ಆದೇಶಿಸಿದ್ದಾರೆ.
 

ಚುನಾವಣೆ ಪ್ರಮುಖಾಂಶಗಳು :

 *ಡಿ.27ರಂದು ಬೆಳಿಗ್ಗೆ 7ರಿಂದ ಸಂಜೆ5ರವರೆಗೆ ಮಧುಗಿರಿ, ಶಿರಾ, ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ ಮತದಾನ
*161 ಗ್ರಾಪಂಗಳ 2400 ಸದಸ್ಯ ಸ್ಥಾನಗಳಿಗೆ ಚುನಾವಣೆ
*ಎಡಗೈ ಹೆಬ್ಬೆರಳಿಗೆ ಅಳಿಸಲಾಗದ ಶಾಹಿ
*1792 ಭದ್ರತಾ ಸಿಬ್ಬಂದಿಗಳ ನಿಯೋಜನೆ
* ಡಿ.25ರ ಸಂಜೆ 5 ರಿಂದ 27ರ ಸಂಜೆ 5ರವರೆಗೆ ಮದ್ಯ ಮಾರಾಟ ನಿಷೇಧ.
*ಶವಸಂಸ್ಕಾರ, ಮಧುವೆ ಮತ್ತು ಧಾರ್ಮಿಕ ಕಾರ್ಯ ಹೊರತುಪಡಿಸಿ ಯಾವುದೇ ಸಭೆ-ಸಮಾರಂಭ, ಮೆರವಣಿಗೆ ಮಾಡುವಂತಿಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap