ತುಮಕೂರು : ಜನರಲ್ ಕಾರಿಯಪ್ಪ ರಸ್ತೆ ಅವ್ಯವಸ್ಥೆ ಸರಿಪಡಿಸಲು ಸೂಚನೆ

 ತುಮಕೂರು :

      ಸ್ಮಾರ್ಟ್ ಸಿಟಿಯ ಮೊದಲ ಮಾದರಿರಸ್ತೆ ಎಂದು ನಿರ್ಮಿಸಲಾದ ಜನರಲ್ ಕಾರಿಯಪ್ಪ ರಸ್ತೆ ಅವ್ಯವಸ್ಥೆ ಸಮಸ್ಯೆ ಸ್ಮಾರ್ಟ್ ಸಿಟಿ ಸಲಹಾ ಸಮಿತಿ ಸಭೆಯಲ್ಲಿ ಪ್ರಸ್ತಾಪವಾಗಿದ್ದು, ಅಸಮರ್ಪಕವಾಗಿರುವ ಚರಂಡಿ, ಕಿರಿದಾದ ರಸ್ತೆ ಸಮಸ್ಯೆಯನ್ನು ಸರಿಪಡಿಸಲು ಸಮಿತಿ ಅಧ್ಯಕ್ಷರಾದ ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ ಸೂಚಿಸಿದ್ದಾರೆ.

      ಸಂಸದ ಜಿ.ಎಸ್.ಬಸವರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್ ಹಾಗೂ ಸಲಹಾ ಸಮಿತಿ ಸದಸ್ಯರ ಸಮ್ಮುಖದಲ್ಲಿ ಶುಕ್ರವಾರ ಸಂಜೆ ಜಿಲ್ಲಾಧಿಕಾರಿಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪ್ರಜಾಪ್ರಗತಿ ಬೆಳಕು ಚೆಲ್ಲಿದ ಸ್ಮಾರ್ಟ್ ಸಿಟಿ ಅವ್ಯವಸ್ಥೆಗಳು ರಿಂಗಣಿಸಿದ್ದು, ವಿಳಂಬಗತಿಯಲ್ಲಿ ಸಾಗಿರುವ ಸ್ಮಾಟ್‍ಸಿಟಿ ಕಾಮಗಾರಿಗೆ ವೇಗ ನೀಡುವಂತೆ ಸೂಚಿಸಿದ್ದಲ್ಲದೆ ಪಿಎಂಸಿಗಳು ಸರಿಯಾಗಿ ಮಾನಿಟರಿಂಗ್ ಮಾಡಬೇಕೆಂದು ನಿರ್ದೇಶಿಸಲಾಗಿದೆ.

ರಿಂಗ್ ರೋಡ್ ಅಗಲದಲ್ಲಿ ವ್ಯತ್ಯಾಸವಾಗಬಾರದು:

      ಸ್ಮಾರ್ಟ್ ಸಿಟಿಯಡಿ ಅಭಿವೃದ್ಧಿ ಮಾಡಲಾಗುತ್ತಿರುವ ನಗರದ ಶೆಟ್ಟಿಹಳ್ಳಿ ರಿಂಗ್ ರಸ್ತೆ ಅಗಲದಲ್ಲಿ ಕ್ಯಾತ್ಸಂದ್ರದಿಂದ ಗೂಳೂರು ಸಂಪರ್ಕ ರಸ್ತೆಯವರೆಗೆ ಒಂದೇ ಸಮನಾಗಿರದೆ ವ್ಯತ್ಯಾಸವಿದೆ. ಕೆಲವೆಡೆ ಒತ್ತುವರಿಯಾಗಿದ್ದು, ಸರ್ವೀಸ್ ರಸ್ತೆ ಭೂ ಸ್ವಾಧೀನ ಸಮಸ್ಯೆ ಪರಿಹರಿಸಿಕೊಂಡು ರಸ್ತೆಯನ್ನು ಬೇಗ ಪೂರ್ಣಗೊಳಿಸಬೇಕೆಂದು ಸೂಚಿಸಲಾಯಿತು ಎಂದು ಜಿಲ್ಲಾಧಿಕಾರಿ ಪ್ರಜಾಪ್ರಗತಿಗೆ ತಿಳಿಸಿದರು.

      ಅಂತೆಯೇ ಸ್ಮಾರ್ಟ್ ಸಿಟಿಯಿಂದ ಕೈಗೆತ್ತಿಕೊಳ್ಳಲಾಗಿರುವ ಗ್ರಂಥಾಲಯ, ಆಡಿಟೋರಿಯಂ, ಮಾರಿಯಮ್ಮ ನಗರ ಕಾಮಗಾರಿಗಳ ಬಗ್ಗೆಯೂ ಚರ್ಚೆ ನಡೆಸಲಾಗಿದ್ದು, ಸ್ಲಂ ನಿವಾಸಿಗಳ ಬೇಡಿಕೆಗಳಗನುಗುಣವಾಗಿ ಕೆಲವು ಮಾರ್ಪಾಡುಗಳನ್ನು ಸೂಚಿಸಲಾಗಿದೆ ಎಂದರು.

    ಶಾಸಕರ ಅಧ್ಯಕ್ಷತೆಯಲ್ಲಿ ಕ್ರೀಡಾಂಗಣ ಸಮಿತಿ:

      ಬಹುಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ವಿವಿದೋದ್ದೇಶದ ಸ್ಟೇಡಿಯಂ ಆಧುನೀಕರಣ ಕಾಮಗಾರಿ ಸಮರ್ಪಕವಾಗಿ ನಡೆಯಬೇಕೆಂಬ ಸಲುವಾಗಿ ನಗರ ಶಾಸಕರ ಅಧ್ಯಕ್ಷತೆಯಲ್ಲಿ ಪ್ರತ್ಯೇಕ ಸಮಿತಿಯನ್ನು ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಎಲ್ಲಾವಾರ್ಡ್‍ಗಳ ಪಾರ್ಕ್ ಅಭಿವೃದ್ಧಿ:

      ಸದ್ಯ ನಗರದ 25 ಪಾರ್ಕ್‍ಗಳ ಅಭಿವೃದ್ಧಿಯನ್ನು ಸ್ಮಾರ್ಟ್‍ಸಿಟಿಯಿಂದ ಮಾಡುತ್ತಿದ್ದು, ಎಲ್ಲಾ ವಾರ್ಡ್‍ಗಳ ಪಾರ್ಕ್‍ಗಳ ಅಭಿವೃದ್ಧಿ ಮಾಡಲು ಚರ್ಚೆ ನಡೆಸಲಾಯಿತು. ಈಗಾಗಲೇ ನಗರಾಭಿವೃದ್ಧಿ ಪ್ರಾಧಿಕಾರದಿಂದ ಉದ್ಯಾನವನಗಳ ಪಟ್ಟಿ ತಯಾರಿಸಿದ್ದು, ಅದರ ಆಧಾರದಲ್ಲಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ ಎಂದರು.

      ನೀರು ನಿಲ್ಲುವುದನ್ನು ತಡೆದು ಕಾಮಗಾರಿ ಕೈಗೊಳ್ಳಿ: ಪಾರ್ಕಿಂಗ್ ಸಹಿತ ಬಹು ಅಂತಸ್ತಿನ ಹೈಟೆಕ್ ಬಸ್‍ನಿಲ್ದಾಣ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದು, ಅಂಡರ್‍ಗ್ರೌಂಡ್ ಕಾಮಗಾರಿಗೆ ಭೂಮಿ ಅಗೆದಾಗ ನೀರು ನಿಲ್ಲುತ್ತಿರುವುದು ಕಂಡುಬಂದಿದೆ. ಇದಕ್ಕೆ ಪರಿಹಾರ ಕಲ್ಪಿಸಿ ಕಾಮಗಾರಿ ಮುಂದುವರಿಸುವಂತೆ ಸೂಚಿಸಿದ್ದು, ಶಾಸಕರು, ಸಂಸದರು, ಸಮಿತಿ ಸದಸ್ಯರು ನೀಡಿದ ಸಲಹೆಗಳನ್ನು ಪರಿಗಣಿಸಿ ನಿಗದಿತ ಕಾಲಮಿತಿಯೊಳಗೆ ಕಾಮಗಾರಿ ಅನುಷ್ಟಾನಗೊಳಿಸಬೇಕೆಂದು ಸೂಚಿಸಲಾಯಿತು ಎಂದರು.

      ಸದಸ್ಯ ಕುಂದರನಹಳ್ಳಿ ರಮೇಶ್ ಸ್ಮಾರ್ಟ್ ಸಿಟಿ, ಪಾಲಿಕೆ ಅಧಿಕಾರಿಗಳು ಹಾಗೂ ಪಿಎಂಸಿಗಳ ನಡುವೆ ಸಮನ್ವಯ ಕೊರತೆ ಇರುವುದೇ ಕಾಮಗಾರಿಗಳು ಹಾಳಾಗಲು ಕಾರಣವಾಗಿದೆ ಎಂದು ಹೇಳಿ ಸಮನ್ವಯತೆಯಿಂದ ಕೆಲಸ ಮಾಡುವ ಅಗತ್ಯವಿದೆ ಎಂದರು. ಸಭೆಯಲ್ಲಿ ಆಯುಕ್ತೆ ರೇಣುಕಾ, ಸ್ಮಾರ್ಟ್ ಸಿಟಿ ಎಂಡಿ ರಂಗಸ್ವಾಮಿ, ಸಮಿತಿ ಸದಸ್ಯರಾದ ನರಸಿಂಹಮೂರ್ತಿ, ಶೆಟ್ಟಾಳಯ್ಯ ಇತರ ಸದಸ್ಯರುಗಳು, ಅಧಿಕಾರಿ ವರ್ಗದವರು ಹಾಜರಿದ್ದರು.

ವಿವೇಕಾನಂದ ರಸ್ತೆ ರೀ ಟೆಂಡರ್‍ಗೆ ಶಾಸಕರ ಸೂಚನೆ

      ಚಾಮುಂಡೇಶ್ವರ ದೇವಸ್ಥಾನದ ರಸ್ತೆಯಿಂದ-ಅಶೋಕರಸ್ತೆಗೆ ಕೊನೆಗೊಳ್ಳುವ ವಿವೇಕಾನಂದ ರಸ್ತೆ ಅಭಿವೃದ್ಧಿಯಲ್ಲಿ ಹಲವು ಸವಾಲುಗಳಿದ್ದು, ಹಳೆಯ ಟೆಂಡರ್ ಮಾದರಿಯಲ್ಲಿ ರಸ್ತೆ ನಿರ್ಮಾಣ ಅಸಾಧ್ಯ. ಪದೇ ಪದೇ ಕುಸಿಯುವ ರಸ್ತೆಗೆ ಶಾಶ್ವತ ಪರಿಹರ ಕಲ್ಪಿಸಲು ಸದೃಢ ರಸ್ತೆಯೇ ನಿರ್ಮಾಣ ಮಾಡಬೇಕಿದ್ದು, ಅದಕ್ಕೆ ರೀ ಟೆಂಡರ್ ಮಾಡುವುದೇ ಸೂಕ್ತ ಎಂಬ ಸಲಹೆಯನ್ನು ಶಾಸಕ ಜಿ.ಬಿ.ಜ್ಯೋತಿಗಣೇಶ್ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap