ತುಮಕೂರು :

ಹಾವೇರಿಯಲ್ಲಿ ಫೆ.26 ರಿಂದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿದ್ದು, ಈ ಸಂಬಂಧ ಸರ್ವ ಸಿದ್ಧತೆಗಳು ರಾಜ್ಯ ಹಾಗೂ ಅಲ್ಲಿನ ಜಿಲ್ಲಾ ಕಸಾಪದಿಂದ ನಡೆಯುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಮನು ಬಳಿಗಾರ್ ಹೇಳಿದರು.
ಪ್ರಜಾಪ್ರಗತಿ ಹಾಗೂ ಪ್ರಗತಿ ವಾಹಿನಿಯಿಂದ ಏರ್ಪಡಿಸಿದ್ಧ ಕನ್ನಡ ನಾಡು-ನುಡಿ-ಗಡಿ ಕುರಿತ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು 15 ದಿವಸಗಳ ಹಿಂದೆ ಹಾವೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನದ ಪೂರ್ವಭಾವಿ ಸಭೆ ನಡೆದಿದ್ದು, ಸಮ್ಮೇಳನ ಯಶಸ್ಸಿಗೆ ಅಗತ್ಯವಾದ 24 ಸಮಿತಿಗಳನ್ನು ರಚನೆ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇನ್ನೂ 15 ದಿನಗಳಲ್ಲಿ ಕಾರ್ಯಕಾರಿ ಸಮಿತಿ ಸಭೆ ನಡೆಸಿ ಸಮ್ಮೇಳನ ಸರ್ವಾಧ್ಯಕ್ಷರ ಆಯ್ಕೆ ಬಗ್ಗೆ ಸರ್ವಾನುಮತದಿಂದ ತೀರ್ಮಾನಿಸಲಾಗುವುದು ಎಂದರು.
ಸರ್ವಾಧ್ಯಕ್ಷರು ಯಾರೆಂಬುದು ತೀರ್ಮಾನವಾಗಿಲ್ಲ:
ಸಮ್ಮೇಳನ ಆಯೋಜನೆಗೆ ರಾಜ್ಯ ಸರಕಾರದಿಂದಲೂ ಪೂರಕ ಸಹಕಾರ ದೊರೆತಿದ್ದು, ಕೋವಿಡ್ ಸಂಖ್ಯೆಯಲ್ಲಿ ಇಳಿಮುಖ ಹಾಗೂ ಲಸಿಕೆಯು ಬರುತ್ತಿರುವುದು ಆಶಾದಾಯಕ ಭರವಸೆ ಮೂಡಿಸಿದೆ. ಆದರೂ ಅಗತ್ಯ ಮುನ್ನೆಚ್ಚರಿಕೆ ಕ್ರಮದೊಂದಿಗೆ ಸಮ್ಮೇಳನಕ್ಕೆ ತಯಾರಿ ನಡೆಸಲಾಗುತ್ತಿದೆ. ಸಮ್ಮೇಳನದ ವೇಳೆಗೆ ಕೊರೊನಾ ಅಡ್ಡಿ ಆತಂಕಗಳು ತಗ್ಗುವ ವಿಶ್ವಾಸವಿದೆ ಎಂದರು.
ಮಹಿಳಾ ಸಾಹಿತಿಗಳಿಗೆ ಅಧ್ಯಕ್ಷ ಸ್ಥಾನ, ಕಾರ್ಯಕಾರಿ ಸಮಿತಿಯಲ್ಲಿ ಚರ್ಚೆ :
ಮಹಿಳಾ ಸಾಹಿತಿಗೆ ಈ ಬಾರಿ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಬೇಡಿಕೆ ಪ್ರಬಲವಾಗಿ ಕೇಳಿಬರುತ್ತಿದೆಯೆಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮನು ಬಳಿಗಾರ್ ಅವರು ಪ್ರತಿ ಬಾರಿ ಸಮ್ಮೇಳನ ನಡೆಯುವಾಗಲೂ ಈ ಕೂಗು ಕೇಳಿಬರುತ್ತಿದೆ. ಮಹಿಳಾ ಸಾಹಿತಿಗಳು ಸೇರಿ ಹಲವು ಹಿರಿಯ ಸಾಹಿತಿಗಳ ಸರ್ವಾಧ್ಯಕ್ಷರಾಗುವ ಅರ್ಹತೆ ಹೊಂದಿದ್ದಾರೆ. ಈ ಬಗ್ಗೆ ಕಾರ್ಯಕಾರಿ ಸಮಿತಿಯ ತೀರ್ಮಾನವೇ ಅಂತಿಮ ಎಂದರು.
ನಿರೀಕ್ಷಿಸಿ…..
ಪ್ರಜಾಪ್ರಗತಿ ಹಾಗೂ ಪ್ರಗತಿ ವಾಹಿನಿಯಿಂದ ಅಖಿಲ ಭಾರತ ಸಾಹಿತ್ಯ ಸಮ್ಮೆಳನದ ಹಿನ್ನೆಲೆಯಲ್ಲಿ ನಡೆದ ಕನ್ನಡ ನಾಡು-ನುಡಿ ಗಡಿ ಕುರಿತ ಸಂವಾದದಲ್ಲಿ ಕಸಾಪ ರಾಜ್ಯಾಧ್ಯಕ್ಷ ಡಾ.ಮನುಬಳಿಗಾರ್, ಮಾಜಿ ಸಚಿವೆ ಡಾ.ಲೀಲಾದೇವಿ ಆರ್.ಪ್ರಸಾದ್, ವಿಮರ್ಶಕ ಡಾ.ನಟರಾಜ್ ಬೂದಾಳ್ ಹಾಗೂ ಆಕಾಶವಾಣಿ ನಿರ್ದೇಶಕಿ ನಿರ್ಮಲಾ ಎಲಿಗಾರ್ ಪಾಲ್ಗೊಂಡು ಸಮ್ಮೇಳನ ನಿರ್ಣಯ ಅನುಷ್ಠಾನ, ಪರಿಷತ್ ಜವಾಬ್ದಾರಿ, ಸರಕಾರದ ಕನ್ನಡದ ಕಾಳಜಿ ಬಗ್ಗೆ ವಿಸ್ತೃತ ಚರ್ಚೆ ನಡೆಸಿದರು. ಇದರ ಸಮಗ್ರ ವರದಿ. ನಾಳಿನ ಸಂಚಿಕೆಯಲ್ಲಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








