ಶಿಕ್ಷಣ ಸಂಸ್ಥೆಗಳ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲಿ – ಶ್ರೀ ಸಿದ್ಧಲಿಂಗಸ್ವಾಮೀಜಿ

ತುಮಕೂರು : 

      ಕೋವಿಡ್‍ನಿಂದಾಗಿ ಎಲ್ಲಾ ಕ್ಷೇತ್ರಗಳಂತೆ ಶಿಕ್ಷಣ ಕ್ಷೇತ್ರವೂ ಸಂಕಷ್ಟ ಅನುಭವಿಸುವಂತಾಗಿದೆ. ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಶಿಕ್ಷಕರು, ಸಿಬ್ಬಂದಿಗೆ ಸಂಬಳ ನೀಡಲಾಗದಂತಹ ಪರಿಸ್ಥಿತಿಇದ್ದು, ಸಂಸ್ಥೆಗಳ ಪದಾಧಿಕಾರಿಗಳ ಬೇಡಿಕೆಯಂತೆ ವಿಶೇಷ ಪ್ಯಾಕೇಜ್ ಘೋಷಿಸಿ ನೆರವಾಗಬೇಕು ಎಂದು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿದರು.

      ಮಂಗಳವಾರ ಸಿದ್ದಗಂಗಾ ಮಠದಲ್ಲಿ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳು ತಮ್ಮನ್ನು ಭೇಟಿ ಮಾಡಿ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯುವಂತೆ ಮನವಿ ಮಾಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಶಿಕ್ಷಣ ಸಂಸ್ಥೆಗಳ ಮಾನ್ಯತೆ ನವೀಕರಣಕ್ಕೆ ಇರುವ ನಿರ್ಬಂಧಗಳನ್ನು ಸರ್ಕಾರ ಸಡಿಲಗೊಳಿಸಬೇಕು, ಮಕ್ಕಳ ದಾಖಲಾತಿಗೆ ಸಮಸ್ಯೆಯಾಗದಂತೆ ಅನುಕೂಲ ಕಲ್ಪಿಸಬೇಕು ಎಂದು ಹೇಳಿದರು.

      ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರದ ಜೊತೆ ಜೊತೆಯಲ್ಲೇ ಖಾಸಗಿ ಶಿಕ್ಷಣ ಸಂಸ್ಥೆಗಳು, ಮಠಮಾನ್ಯಗಳು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು ಅಷ್ಟೇ ಮಹತ್ವಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ. ನಾಡಿನ ಶೈಕ್ಷಣಿಕ ಪ್ರಗತಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಕೊಡುಗೆಯೂ ಅಪಾರವಾಗಿದೆ. ಕೋವಿಡ್-19 ಬಂದ ಮೇಲೆ ಎಲ್ಲ ಕ್ಷೇತ್ರವೂ ಸ್ಥಗಿತಗೊಂಡಿವೆ. ಹಾಗೆಯೇ ಶಿಕ್ಷಣ ಕ್ಷೇತ್ರವೂ ಸ್ಥಗಿತಗೊಂಡಿದೆ. ಇಂತಹ ಸನ್ನಿವೇಶದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಕರಿಗೆ ಸಂಬಳ ಕೊಡಲು ಕಷ್ಟಕರವಾಗಿದೆ. ಆದ್ದರಿಂದ ಸರ್ಕಾರ ಅನೇಕ ರೀತಿಯ ಪ್ಯಾಕೇಜ್ ಘೋಷಣೆ ಮಾಡಿರುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಸಹ ತಮಗೂ ಪ್ಯಾಕೇಜ್ ಘೋಷಣೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದಾರೆ. ಸರ್ಕಾರ ಈ ಬಗ್ಗೆ ಗಮನ ಹರಿಸುತ್ತದೆ ಎಂದು ಭಾವಿಸುತ್ತೇನೆ ಎಂದರು.

      ಪ್ರಸ್ತುತ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಅನೇಕ ನಿರ್ಬಂಧಗಳನ್ನು ಹೇರಿರುವ ಹಿನ್ನೆಲೆಯಲ್ಲಿ ಕಾನೂನಾತ್ಮಕ ತೊಡಕುಗಳು ಉಂಟಾಗುತ್ತಿವೆ. ಶಿಕ್ಷಣ ಸಂಸ್ಥೆಗಳ ನವೀಕರಣ ಮಾಡಲು ಅನೇಕ ದಾಖಲಾತಿಗಳನ್ನು ಕೊಡಬೇಕಾಗಿದೆ. ಈ ದಾಖಲಾತಿಗಳನ್ನು ಪಡೆದುಕೊಳ್ಳುವುದು ತುಂಬಾ ಕಷ್ಟಕರವಾಗುತ್ತಿದೆ. ಆದ್ದರಿಂದ ನಿಯಮಗಳನ್ನು ಸಡಿಲಗೊಳಿಸಬೇಕು. ಸುಪ್ರೀಂ ಕೋರ್ಟ್ ಆದೇಶದ ಅನ್ವಯ ದಾಖಲಾತಿ ಒದಗಿಸಲಾಗದಂತಹ ಅನೇಕ ನಿರ್ಬಂಧಗಳನ್ನು ಸರ್ಕಾರ ಹೇರುತ್ತಿದೆ. ಈ ಸಂಬಂಧ ತಜ್ಞರ ಸಮಿತಿ ನೇಮಿಸಿ ಇದನ್ನು ಸರಳೀಕರಣಗೊಳಿ ಅನುಕೂಲ ಮಾಡಿಕೊಡಬೇಕು. ಎಲ್ಲರೂ ಸೇರಿ ಮಕ್ಕಳ ಸುರಕ್ಷತಾ ಕ್ರಮಕ್ಕೆ ಹೆಚ್ಚು ಒತ್ತು ಕೊಡೋಣ ಎಂದು ಸ್ವಾಮೀಜಿ ಹೇಳಿದರು.

     ಬ್ಯಾಂಕ್‍ಗಳಲ್ಲಿ ಸಾಲ ಮಾಡಿಕೊಂಡಿರುವ ಶಿಕ್ಷಣ ಸಂಸ್ಥೆಗಳವರವೀ ಸಂಕಷ್ಟದ ಕಾಲದಲ್ಲಿ ಇಎಂಐ ಕಟ್ಟಲು ಕಷ್ಟವಾಗುತ್ತಿದೆ. ಆದ್ದರಿಂದ ಸರ್ಕಾರ ಇಎಂಐ ಕಟ್ಟಲು ಒಂದು ವರ್ಷ ಕಾಲಾವಕಾಶ ಕೊಡಿಸಬೇಕು. ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗಬೇಕು ಎಂದು ಅವರು ಮನವಿ ಮಾಡಿದರು.

 ಕೊರೊನಾ ನಿಯಮ ಪಾಲಿಸಿ 

      ಕೊರೊನಾ ಇನ್ನು ಮುಗಿದಿಲ್ಲ. ಜನತೆ ಜಾಗೃತರಾಗಬೇಕು. ಕೊರೊನಾ ನಿಯಮಗಳನ್ನು ಉಲ್ಲಂಘನೆ ಮಾಡದೆ, ಪಾಲನೆ ಮಾಡಬೇಕು. ಕೊರೊನಾ ಬಹಳ ಕೆಟ್ಟ ಕಾಯಿಲೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಗುಂಪು ಗುಂಪು ಸೇರದೆ ಸಾಮಾಜಿಕ ಅಂತರ ಕಾಯ್ದುಕೊಂಡು ಓಡಾಡಬೇಕು ಎಂದರು.  ನಮ್ಮ ಆರೋಗ್ಯಕ್ಕಾಗಿ, ಸಮಾಜದ ಹಿತಕ್ಕಾಗಿ ಪ್ರತಿಯೊಬ್ಬರೂ ಕಾಳಜಿವಹಿಸಬೇಕು ಎಂದು ಹೇಳಿದರು.

      ಹೊಸ ವರ್ಷದಂದು ಸಿದ್ಧಗಂಗಾ ಮಠಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಹೊಸ ವರ್ಷದ ದಿನ ದೇವಸ್ಥಾನ, ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡಬೇಕು ಎಂಬ ಭಾವನೆ ಜನರಲ್ಲಿದೆ. ಅವರ ಭಾವನೆಯನ್ನೂ ಗೌರವಿಸಬೇಕಾಗಿದೆ ಎಂದ ಶ್ರೀಗಳು, ಸಿದ್ದಗಂಗಾ ಮಠಕ್ಕೆ ದಾಸೋಹವೇ ಜೀವಾಳ. ಹಾಗಾಗಿ ಕೋವಿಡ್ ಸಂದರ್ಭದಲ್ಲೂ ಸುರಕ್ಷತಾ ಕ್ರಮಗಳನ್ನು ಕೈಗೊಂಡು ದಾಸೋಹ ನಡೆಸಿಕೊಂಡು ಬಂದಿದ್ದೇವೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap