ತುಮಕೂರು:
ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ ತುಮಕೂರು ರೈಲ್ವೆ ಸ್ಟೇಷನ್ ರಸ್ತೆ ಅಭಿವೃದ್ಧಿಯಾಗಿದ್ದು, ಡಾಂಬರೀಕರಣವೂ ನಡೆದಿದೆ. ಇದೀಗ ರಸ್ತೆ ನಡುವೆ ಇದ್ದ ಮರಗಳ ಕಟಾವು ಮಾಡಲಾಗುತ್ತಿದ್ದು, ಇದಕ್ಕೆ ಪರ ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗತೊಡಗಿವೆ.
ಸುಮಾರು 15ಕ್ಕೂ ಹೆಚ್ಚು ಮರಗಳು ಇಲ್ಲಿವೆ. ಈಗ ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ಕಡಿಯಲಾಗುತ್ತಿದೆ. ಇಷ್ಟು ವರ್ಷಗಳ ಕಾಲ ಇದ್ದ ಈ ಮರಗಳನ್ನು ಕಡಿದು ಹಾಕುವುದು ಸರಿಯೇ? ಇಂತಹ ಮರಗಳನ್ನು ಬೆಳೆಸಲು ಸಾಧ್ಯವೆ? ಎಂಬ ಪ್ರಶ್ನೆಗಳು ನಿಸರ್ಗಪ್ರಿಯರನ್ನು ಮತ್ತು ಆ ರಸ್ತೆಯ ಕೆಲವರನ್ನು ಕಾಡುತ್ತಿದೆ. ದಿಢೀರನೆ ಈ ಮರಗಳನ್ನು ಕಡಿಯುವ ಅವಶ್ಯಕತೆಯಾದರೂ ಏನಿತ್ತು? ಈಗಾಗಲೇ ಕಾಮಗಾರಿಗಳೆಲ್ಲವೂ ಮುಗಿದು ಹೋಗಿವೆ. ಸಂಚಾರ ಮುಕ್ತವಾಗಿರುವಾಗ ಮರಗಳನ್ನು ಕಡಿದಿದ್ದು ಏಕೆ ಎಂದು ಪ್ರಶ್ನಿಸುತ್ತಾರೆ.
ಇದಕ್ಕೆ ಪ್ರತಿಕ್ರಿಯಿಸುವ ಮತ್ತೆ ಕೆಲವರು ಬಹಳ ವರ್ಷಗಳಿಂದ ಈ ಮರಗಳು ಬೆಳೆದಿದ್ದವು. ಈಗ ನಗರ ಅಭಿವೃದ್ಧಿಯಾಗುತ್ತಿದೆ. ಅದಕ್ಕೆ ತಕ್ಕಂತೆ ರಸ್ತೆಗಳ ಅಗಲೀಕರಣ ಆಗುತ್ತದೆ. ಹೀಗಿರುವಾಗ ಮರಗಳಿಂದ ತೊಂದರೆಯಲ್ಲವೆ? ಕಡಿದು ಹಾಕುವುದರಿಂದ ಆಗುವ ನಷ್ಟವಾದರೂ ಏನು? ಎನ್ನುತ್ತಾರೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಪ್ರತಿಕ್ರಿಯಿಸಿದ ಕಾರ್ಪೋರೇಟರ್ ಗಿರಿಜಾ ಧನಿಯಾಕುಮಾರ್ ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ ಈ ರಸ್ತೆ ಅಭಿವೃದ್ಧಿ ಕಂಡಿದೆ. 35 ವರ್ಷಗಳಿಂದ ಈ ರಸ್ತೆ ಟಾರ್ ಕಾಣದೆ ಉಳಿದಿತ್ತು. ಅಲ್ಲಿ ಓಡಾಡಲೂ ಆಗದಂತಹ ಪರಿಸ್ಥಿತಿ ಇತ್ತು. ಮಹಿಳಾ ಪ್ರಥಮ ದರ್ಜೆ ಕಾಲೇಜು, ಹಾಸ್ಟೆಲ್‍ಗಳು ಸೇರಿದಂತೆ ಉಪಯುಕ್ತ ಕಚೇರಿಗಳು, ಶಾಲಾ ಕಾಲೇಜುಗಳು ಈ ರಸ್ತೆಯಲ್ಲಿವೆ. ಇದೀಗ ವಾಹನ ಸಂಚಾರ ಸುಗಮವಾಗಿದೆ. ಕಾನೂನು ಬದ್ಧವಾಗಿಯೇ ಎಲ್ಲ ಪ್ರಕ್ರಿಯೆಗಳನ್ನು ಕೈಗೊಂಡು ಸಾರ್ವಜನಿಕರ ಆಕ್ಷೇಪಣೆಗಳನ್ನು ಆಹ್ವಾನಿಸಿ ಪರಿಶೀಲಿಸಿದ ಬಳಿಕವೇ ಅಲ್ಲಿನ ಮರಗಳನ್ನು ಕಟಾವು ಮಾಡಲಾಗುತ್ತಿದೆ.40 ವರ್ಷಗಳ ಹಳೆಯದಾದ ಮರಗಳು ಮುಂದೆ ತೊಂದರೆ ಕೊಡಲೂಬಹುದು. ಈಗಾಗಲೇ ಒಂದು ಮರದ ಕೊಂಬೆ ಮುರಿದು ಒಂದು ಕಾರಿಗೆ ಹಾನಿಯಾಗಿತ್ತು. ಇವೆಲ್ಲವನ್ನೂ ಪರಿಶೀಲಿಸಬೇಕು ಎಂದಿದ್ದಾರೆ.
ರಸ್ತೆಯ ಎರಡೂ ಕಡೆಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯುತ್ತಿದೆ. ಈಗಾಗಲೇ ಆರಂಭವಾಗಿದೆ. ನೂರು ಸಸಿಗಳನ್ನು ನೆಡುವ ಉದ್ದೇಶವಿದೆ. ಸಾರ್ವಜನಿಕರಿಗೆ ಹಾನಿಯಾಗದ, ಆಮ್ಲಜನಕಕ್ಕೆ ಅನುಕೂಲವಾಗುವಂತಹ ಸಸಿಗಳನ್ನು ಅಲ್ಲಿ ನೆಡುವ ಉದ್ದೇಶವಿದೆ. ಹೀಗಾಗಿ ಮರಗಳ ಕಟಾವಿನಿಂದ ಯಾವುದೇ ತೊಂದರೆ ಇಲ್ಲ. ಹಿಂದೆ ನಗರಸಭೆ ಇತ್ತು. ಈಗ ನಗರ ಪಾಲಿಕೆಯಾಗಿದೆ. ಜನದಟ್ಟಣೆ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳು ಆಗಬೇಕು. ಹೀಗೆ ಮಾಡುವಾಗ ಮರಗಳನ್ನು ತೆರವುಗೊಳಿಸುವುದರಲ್ಲಿ ತಪ್ಪೇನಿಲ್ಲ ಎನ್ನುತ್ತಾರೆ ಅವರು.
ತುಮಕೂರು ರೈಲ್ವೆ ಸ್ಟೇಷನ್ ರಸ್ತೆ ಮೀಡಿಯನ್ ಅವೈಜ್ಞಾನಿಕವಾಗಿದ್ದು, ಅಲ್ಲಿರುವ ಮರಗಳನ್ನು ಕಡಿದು ರಸ್ತೆಯ ಎರಡೂ ಬದಿಯಲ್ಲಿ ನೆಟ್ಟು ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಸಾರ್ವಜನಿಕರೆ ಶಾಸಕರಿಗೆ ಮನವಿ ಮಾಡಿದ್ದಾರೆ ಎಂಬ ವಿಷಯವನ್ನು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ