ಸುಪ್ರೀಂ ಚಾಟಿಯಿಂದಾದರೂ ಸರ್ಕಾರ ಬುದ್ದಿ ಕಲಿಯಲಿ : ಕೋಡಿಹಳ್ಳಿ ಚಂದ್ರಶೇಖರ್

 ತುಮಕೂರು :

      ಕೃಷಿ ಕಾಯ್ದೆಗಳನ್ನು ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತಂದು, ಅಸಂವಿಧಾನಾತ್ಮಕವಾಗಿ ವರ್ತಿಸುತ್ತಿದ್ದ ಕೇಂದ್ರ ಸರಕಾರಕ್ಕೆ ಸುಪ್ರಿಂಕೋರ್ಟ್ ಚಾಟಿ ಬೀಸಿದ್ದು, ನ್ಯಾಯಮೂರ್ತಿಗಳ ಸೂಚನೆಯಂತೆ ಕೇಂದ್ರ ಸರಕಾರ ರೈತರ ಸಮಿತಿಯನ್ನು ರಚಿಸಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

      ನಗರದ ಕನ್ನಡಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಜಾಪ್ರಭುತ್ವದಲ್ಲಿ ಯಾವುದೇ ಕಾಯಿದೆಗಳನ್ನು ಜಾರಿಗೆ ತರುವು ಮುನ್ನಾ ಅದನ್ನು ವಿಸ್ತøತ ಚರ್ಚೆಗೊಳಪಡಿಸಿ ಸದನದಲ್ಲಿ ಅಂಗೀಕರಿಸಬೇಕು. ಆದರೆ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಕೃಷಿ ಸಂಬಂಧಿತ ಕಾಯ್ದೆಗಳನ್ನು ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತರುತ್ತಿರುವುದಕ್ಕೆ ಸುಪ್ರೀಂಕೋರ್ಟ್ ಆಕ್ಷೇಪವೆತ್ತಿ ರೈತರ ಹಿತಕ್ಕೆ ನ್ಯಾಯ ಒದಗಿಸಿರುವುದನ್ನು ರೈತ ಸಂಘ ಸ್ವಾಗತಿಸುತ್ತದೆ. ಇನ್ನಾದರೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಣ್ತೆರೆದು ರೈತ ಪರ ತೀರ್ಮಾನ ಕೈಗೊಳ್ಳಲಿ ಎಂದರು.

      ಜ.26ರಂದು ದೆಹಲಿಯಲ್ಲಿ ಹೋರಾಟ ನಿರತ ರೈತರು ನಡೆಸುವ ಟ್ರಕ್ ಮತ್ತು ಟ್ರ್ತ್ಯಾಕ್ಟರ್ ಪರೇಡ್ ಮಾದರಿಯಲ್ಲೂ ಕರ್ನಾಟಕದಲ್ಲಿಯೂ ಹೋರಾಟ ರೂಪಿಸುವ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ನಡೆಸಿದ್ದು, ಪ್ರಜಾಸತ್ಮಾತ್ಮಕವಾಗಿ ಜನಾಭಿಪ್ರಾಯದ ನಂತರ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸುಧೀರ್ಘ ಚರ್ಚೆ ನಡೆಸಿ, ತರಬೇಕಾದ ಕಾಯ್ದೆಯನ್ನು ಕೇಂದ್ರ ಸರಕಾರ ಸರ್ವಾಧಿಕಾರಿ ಧೋರಣೆಯಿಂದ ಸುಗ್ರಿವಾಜ್ಞೆ ಮೂಲಕ ಜಾರಿಗೆ ಮಾಡುತ್ತಿರುವುದು ಸರಿಯಲ್ಲ ,ಈ ಕಾಯ್ದೆಗಳು ಜನಪರವಲ್ಲ ಎಂಬ ತೀರ್ಮಾನಕ್ಕೆ ನ್ಯಾಯಾಲಯ ಸಹ ಬಂದಿದೆ. ಇದಕ್ಕಾಗಿ ದೇಶದ ರೈತರ ಪರವಾಗಿ ಸರ್ವೋಚ್ಛ ನ್ಯಾಯಾಲಯಕ್ಕೆ ಧನ್ಯವಾದಗಳು ಎಂದರು.

       ಕೇಂದ್ರ- ರಾಜ್ಯ ಸರಕಾರಗಳು ಸುಳ್ಳು ಭರವಸೆಯ ಕೋಟೆ ಕಟ್ಟಿ ಜನರನ್ನು ವಂಚಿಸುತ್ತಿದೆ.. ಕೃಷಿ ಮಾರುಕಟ್ಟೆ ಮುಚ್ಚಿಸುವುದಿಲ್ಲ ಎಂದು ಎಪಿಎಂಸಿ ತಿದ್ದುಪಡಿ ಕಾಯ್ದೆ ತಂದಿದ್ದು, ಇದು ಎಪಿಎಂಸಿಯನ್ನೇ ಬೈಪಾಸ್ ಮಾಡಿ ಕಾರ್ಪೋರೇಟ್ ಕಂಪನಿಗಳನ್ನು ಎಪಿಎಂಸಿ ಕಾನೂನುಗಳಿಂದ ಹೊರತಾಗಿಸುವುದೇ ಹೊರತು ಬೇರ್ಯಾವುದೇ ಅಲ್ಲ. ರಿಲಯನ್ಸ್ ನವರು ದಿಲ್ಲಿಯಲ್ಲಿ ರೈತರ ಪ್ರತಿಭಟನೆಗೆ ಹೆದರಿ ಬೈಪಾಸ್ ಕಾಯ್ದೆಯನ್ನು ಜಾರಿಗೆ ತಂದು ಕಾರ್ಪೋರೇಟ್ ಮತ್ತು ಎಂಎನ್ಸಿಗಳಿಗೆ ಕೃಷಿ ಉತ್ಪನ್ನ ಖರೀದಿಸಲು ಮಾರಾಟ ಮಾಡಲು ನಾವು ಕೃಷಿ ಮಾರಾಟ ವ್ಯವಸ್ಥೆಯಲ್ಲಿ ನಾವು ಭಾಗವಹಿಸುವುದಿಲ್ಲ ಎಂದು ರಿಲೆಯನ್ಸ್ ಕಂಪನಿ ಹೇಳುತ್ತಿದೆ. ಆದರೆ ರಾಯಚೂರು, ಸಿಂಧನೂರು ರೈತರ ಬಳಿ ಭತ್ತ ಖರೀದಿಸುವ ಒಪ್ಪಂದ ಮಾಡಿಕೊಂಡಿದೆ.ಈ ಬಗ್ಗೆ ಯಡಿಯೂರಪ್ಪನವರಿಗೆ ಗೊತ್ತಿಲ್ಲವೇ ಎಂದು ಕೋಡಿಹಳ್ಳಿ ಪ್ರಶ್ನಿಸಿದರು.

ಬೆಂಬಲ ಬೆಲೆಯನ್ನು ಕಾನೂನಿನಲ್ಲಿ ಅಡಕಗೊಳಿಸದಿರುವುದೇಕೆ?

     ಅಮೇರಿಕಾದ ಹಾಲು ಉತ್ಪನ್ನ ಖರೀದಿಸಿ, ದೇಶದ ಗ್ರಾಮೀಣ ಭಾಗದ ಹೈನುಗಾರಿಕೆ ಕೈಬಿಡಿಸುವ ಪ್ರಯತ್ನದ ಹಿನ್ನೆಲೆಯಲ್ಲಿ ಕಾಯ್ದೆಗಳನ್ನು ರೂಪಿಸಲಾಗುತ್ತಿದೆ.ಎಂಎಸ್ ಪಿ ಇಲ್ಲದ ಮೇಲೆ ದರ ನಿಗದಿ ಪಡಿಸುವುದು ಹೇಗೆ,ಪಂಜಾಬ್‍ನಲ್ಲಿ ಯಾವುದೇ ಖರೀದಿದಾರ ಎಂಎಸ್ ಪಿಗಿಂತ ಕಡಿಮೆ ಖರೀದಿಸಿದರೆ ಜೈಲು ಶಿಕ್ಷೆಯ ಕಾಯ್ದೆ ತರಲಾಗಿದೆ.ಯಡಿಯೂರಪ್ಪ ಕರ್ನಾಟಕದಲ್ಲಿಯೂ ಈ ಕಾಯ್ದೆ ಜಾರಿ ಮಾಡಲು ಸಾಧ್ಯವೇ ಎಂದರು.

      ಕರ್ನಾಟಕದಲ್ಲಿ ಎಂಎಸ್ಪಿಗೆ ಯಾವುದೇ ಮಾನ್ಯತೆ ಇಲ್ಲ.ಅಲ್ಲದೆ ಎಪಿಎಂಸಿಯಿಂದ ಹೊರಗೆ ಖರೀದಿ ನಡೆದು ಅನ್ಯಾಯವಾದರೇ ಯಾರನ್ನು ಪ್ರಶ್ನಿಸಬೇಕು ಎಂಬ ಬಗ್ಗೆ ಮಾಹಿತಿ ಇಲ್ಲ.ಎಪಿಎಂಸಿಯ ಯಾವ ಕಾಯ್ದೆಗಳು ರಿಲೆಯನ್, ಅಧಾನಿ ಗ್ರೂಪ್ ಕಂಪನಿಗಳಿಗೆ ಅನ್ವಯವಾಗಲ್ಲ. ಮೋಸ ಮಾಡುವವರ ಬೆನ್ನ ಹಿಂದೆ ಬಿಜೆಪಿ ನಿಂತಿದೆ, ರಿಲೆಯನ್ಸ್ ಸಹ ಕಾನೂನಿನ ಚೌಕಟ್ಟಿಗೆ ಒಳಪಡಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಕೇಂದ್ರ ಮತ್ತು ರಾಜ್ಯ ಸರಕಾರವನ್ನು ಒತ್ತಾಯಿಸಿದರು.

      ಸುದ್ದಿಗೋಷ್ಠಿಯಲ್ಲಿ ರೈತ ಸಂಘ, ಹಸಿರು ಸೇನೆ ರಾಜ್ಯ ಗೌರವಾಧ್ಯಕ್ಷ ಬಸವರಾಪ್ಪ,ತುಮಕೂರು ಜಿಲ್ಲಾಧ್ಯಕ್ಷ ಆನಂದಪಟೇಲ್, ಭಕ್ತರಹಳ್ಳಿ ಬೈರೇಗೌಡ ವಿವಿಧ ಜಿಲ್ಲೆಗಳ ಅಧ್ಯಕ್ಷರುಗಳು , ಪದಾಧಕಾರಿಗಳು ಉಪಸ್ಥಿತರಿದ್ದರು.

 
ರಾಜ್ಯಪಾಲರಿಂದ ಬಿಜೆಪಿ ಸರಕಾರ ಏಜೆಂಟರಂತೆ ವರ್ತನೆ

      ರಾಜ್ಯಪಾಲರಿಗೆ ಸಾಮಾನ್ಯ ಪ್ರಜ್ಞೆ ಇರಬೇಕು, ಗೋಹತ್ಯೆ ನಿಷೇಧ ಕಾಯ್ದೆ ವಿಧಾನ ಪರಿಷತ್‍ನಲ್ಲಿ ಅಂಗೀಕಾರವಾಗಲ್ಲ ಎಂದು ತಿಳಿದಿದ್ದರೂ ಸುಗ್ರೀವಾಜ್ಞೆಗೆ ಅಂಕಿತಹಾಕಿರುವುದು ಸಂವಿಧಾನತ್ಮಕ ಹುದ್ದೆಯಲ್ಲಿರುವ ರಾಜ್ಯಪಾಲರಿಗೆ ಶೋಭೆ ತರುವುದಲ್ಲ. ಸರಕಾರದ ಏಜೆಂಟರಾಗಿ ವರ್ತಿಸುತ್ತಿದ್ದಾರೆ. ರೈತರ ಸಂಕಷ್ಟಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಂದಿಸಿಲ್ಲ. ಕಾನೂನು ಮಂತ್ರಿಗಳು ಗೋ ಹತ್ಯೆ ನಿಷೇಧ ಕಾಯ್ದೆಯಲ್ಲಿ ಎಮ್ಮೆ ಸೇರಿಲ್ಲ ಅಂತಾರೆ. ಅವರಿಗೆ ಗೊತ್ತಿಲ್ಲದೆಯೇ ಕಾನೂನುಗಳು ರೂಪಿತವಾಗುತ್ತವೆಯೇ ಎಂದು ಲೇವಡಿ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap