ತುಮಕೂರು : ಮನೆ, ಮಳಿಗೆಗಳ ವಿದ್ಯುತ್, ಯುಜಿಡಿ ಸಂಪರ್ಕ ಕಡಿತ

 ತುಮಕೂರು :

      ಸಂಬಂಧಿಸಿದ ಇಲಾಖೆ ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲದೆ ನಗರದಲ್ಲಿ ನಡೆದಿರುವ ಅನೇಕ ಕಾಮಗಾರಿಗಳು ಸಮರ್ಪಕಗೊಳ್ಳದೆ ಅಸ್ತವ್ಯಸ್ತವಾಗಿ ಸಾರ್ವನಿಕರಿಗೆ ತೊಂದರೆಯೂ ಆಗುತ್ತಿದೆ. ಇದೇ ರೀತಿ ನಗರದ ಬೆಳಗುಂಬ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ರಸ್ತೆ ಅಭಿವೃದ್ಧಿ ಕಾಮಗಾರಿ ವೇಳೆ ಆದ ಎಡವಟ್ಟಿನಿಂದ ಪಕ್ಕದ ಕಟ್ಟಡಗಳ ವಿದ್ಯುತ್ ಹಾಗೂ ಯುಜಿಡಿ ಸಂಪರ್ಕ ಕಡಿತಗೊಂಡಿದೆ. ಈ ತೊಡಕು ನಿವಾರಣೆಗೆ ಯಾರೊಬ್ಬರೂ ಜವಬ್ದಾರಿ ಹೊತ್ತುಕೊಳ್ಳದೆ, ಒಬ್ಬರ ಮೇಲೊಬ್ಬರು ಹೇಳುತ್ತಾ 15 ದಿನಗಳಿಂದ ಈ ಸಮಸ್ಯೆ ಹಾಗೇ ಉಳಿದಿದೆ.

      ಬೆಳಗುಂಬ ರಸ್ತೆಯನ್ನು ವಿಸ್ತರಿಸಿ ಅಭಿವೃದ್ಧಿಪಡಿಸುವ ಯೋಜನೆಯನ್ನು ಸ್ಮಾರ್ಟ್‍ಸಿಟಿ ಲಿಮಿಟೆಡ್‍ನಿಂದ ಆರಂಭಿಸಲಾಗಿದೆ. ಈಗಾಗಲೇ ರಸ್ತೆಯ ಎರಡೂ ಬದಿ ಇದ್ದ ಬೃಹತ್ ಮರಗಳನ್ನು ತೆರವುಗೊಳಿಸಿ ರಸ್ತೆ ವಿಸ್ತರಣೆ ಮಾಡಲಾಗುತ್ತಿದೆ. ಇಂಟರ್‍ನೆಟ್ ಕೇಬಲ್, ಕುಡಿಯುವ ನೀರಿನ ಪೈಪ್, ಟೆಲಿಫೋನ್ ಕೇಬಲ್, ವಿದ್ಯುತ್ ಕೇಬಲ್ ಮತ್ತಿತರ ಸಂಪರ್ಕಕ್ಕಾಗಿ ಪದೇಪದೆ ರಸ್ತೆ ಅಗೆಯುವುದನ್ನು ತಪ್ಪಿಸಲು ರಸ್ತೆಯ ಎರಡೂ ಬದಿ ಡಕ್ಟ್ ನಿರ್ಮಾಣ ಮಾಡಿ, ಈ ಎಲ್ಲಾ ಸೌಲಭಗಳನ್ನು ಒಂದೇ ಮಾರ್ಗದಲ್ಲಿ ಒದಗಿಸಲು ಡಕ್ಟ್ ಒಳಗೆ ಪ್ರತ್ಯೇಕ ಪೈಪ್‍ಗಳನ್ನು ಅಳವಡಿಸಲಾಗಿದೆ. ರಸ್ತೆ ಬದಿಯ ವಿದ್ಯುತ್ ಕಂಬಗಳನ್ನು ತೆರವು ಮಾಡಿ, ಅದರ ಬದಲು ಅಂಡರ್‍ಗ್ರೌಂಡ್ ವಿದ್ಯುತ್ ಸರಬರಾಜು ವ್ಯವಸ್ಥೆಯೊಂದಿಗೆ ಅಕ್ಕಪಕ್ಕದ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡುವ ವ್ಯವಸ್ಥೆ ಮಾಡಲಾಗಿದೆ. ಇಲ್ಲಿನ ಮಾರುತಿ ಬಾರ್ ಬಳಿಯ ಪ್ರದೇಶದಲ್ಲಿ ಅಂಡರ್‍ಗ್ರೌಂಡ್ ವಿದ್ಯುತ್ ಸರಬರಾಜಿನ ವ್ಯವಸ್ಥೆ ಚಾಲನೆಗೊಂಡಿತ್ತು.

      ಈ ನಡುವೆ, ರಸ್ತೆಯ ಮಧ್ಯದಲ್ಲಿದ್ದ ಒಳಚರಂಡಿ ಮಾರ್ಗವನ್ನು ರಸ್ತೆ ಬದಿಗೆ ಸ್ಥಳಾಂತರ ಮಾಡಲು ಪ್ರತ್ಯೇಕ ಯುಜಿಡಿ ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ. ರಸ್ತೆ ಮಧ್ಯೆ ಯುಜಿಡಿ ಮಾರ್ಗ ಹಾದು ಹೋದರೆ ವಾಹನಗಳ ಓಡಾಟದಿಂದ ಕೊಳವೆಗಳಿಗೆ ಧಕ್ಕೆ ಆಗಬಹುದು, ಮ್ಯಾನ್ ಹೋಲ್‍ಗಳ ಮುಚ್ಚಳ ಒಡೆದು ಸಮಸ್ಯೆಯಾಗಬಹುದ ಎನ್ನುವ ಕಾರಣಕ್ಕೆ ವಾಹನಗಳ ಪಾರ್ಕಿಂಗ್‍ಗೆ ನಿಗಧಿಯಾದ ಜಾಗದಲ್ಲಿ ಯುಜಿಡಿ ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕಾಗಿ ರಸ್ತೆ ಬದಿ ಕಾಲುವೆ ತೆಗೆಯುವ ಕೆಲಸ ನಡೆದಿದೆ. ಡಕ್ಟ್ ಪಕ್ಕದಲ್ಲೇ ಹೊಸ ಯುಜಿಡಿ ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ. ಹೀಗೆ ಮಾಡುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ, ಯುಜಿಡಿಗೆ ಕಾಲುವೆ ತೆಗೆಯುವಾಗ ಈ ಭಾಗದಲ್ಲಿ ಡಕ್ಟ್‍ನ ಅಂಡರ್‍ಗ್ರೌಂಡ್ ವಿದ್ಯುತ್ ಕೇಬಲ್ ತುಂಡಾಗಿದೆ. ಇದಾಗಿ 15 ದಿನಗಳಿಂದ ಪಕ್ಕದ ಕಟ್ಟಡಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

      ಆಗಿರುವ ಸಮಸ್ಯೆ ಸರಿಪಡಿಸಿ, ವಿದ್ಯುತ್ ಸಂಪರ್ಕ ಒದಗಿಸಿಕೊಡಿ ಎಂದು ಇಲ್ಲಿನ ವಾಣಿಜ್ಯ ಮಳಿಗೆ ಮಾಲೀಕರಾದ ಪಂಚಾಕ್ಷರಯ್ಯನವರು ಸ್ಮಾರ್ಟ್ ಸಟಿ, ಬೆಸ್ಕಾಂ ಅಧಿಕಾರಿಗಳತ್ತ ಎಡತಾಕುತ್ತಲೇ ಇದ್ದಾರೆ. ಅದು ಸ್ಮಾರ್ಟ್ ಸಿಟಿಯವರ ಲೋಪ ಅವರೇ ಸರಿಪಡಿಸಬೇಕು ಎಂದು ಬೆಸ್ಕಾಂ ಅಧಿಕಾರಿಗಳು ಹೇಳುತ್ತಾರೆ. ನಮಗೆ ಸಂಬಂಧಿಸಿದ್ದಲ್ಲ, ಬೇಸ್ಕಾಂನವರನ್ನು ಕೇಳಿ ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳು ಹೇಳುತ್ತಾರೆ. ಯಾರನ್ನು ಕೇಳಬೇಕೋ, ಈ ಸಮಸ್ಯೆ ಯಾವಾಗ ಬಗೆಹರಿಯುವುದೋ ಎಂದು ಪಂಚಾಕ್ಷರಿಯವರು ಕಂಗಾಲಾಗಿದ್ದಾರೆ.

      ಇಷ್ಟು ಸಾಲದೆಂಬಂತೆ ಇದೇ ಜಾಗದಲ್ಲಿ ಕಟ್ಟಡಗಳ ಒಳಚರಂಡಿ ಸಂಪರ್ಕವನ್ನೂ ಕಡಿತಗೊಳಿಸಲಾಗಿದೆ. ಒಳಚರಂಡಿ ಹೊಸ ಮಾರ್ಗ ನಿರ್ಮಾಣಕ್ಕೆ ಅಡ್ಡವಾಗಿದ್ದ ಕಟ್ಟಡಗಳ ಯುಜಿಡಿ ಪೈಪ್‍ಗಳ ಸಂಪರ್ಕವನ್ನು ಕಡಿತಮಾಡಿದ್ದಾರೆ. ಕಟ್ಟಡಗಳ ಯುಜಿಡಿ ಪೈಪ್ ಹಾಲಿ ಇರುವ ಯುಜಿಡಿಗೆ ಲಿಂಕ್ ಮಾಡಲು, ಹೊಸ ಮಾರ್ಗ ಅಡ್ಡವಾಗಿದೆ. ಹೊಸ ಮಾರ್ಗದ ಕಾಮಗಾರಿ ಮುಗಿದು ಸಂಪರ್ಕ ನೀಡಲು ಇನ್ನೆಷ್ಟು ದಿನಾವಾಗುವುದೋ, ಅಲ್ಲಿಯವರೆಗೂ ಏನು ಮಾಡಬೇಕು? ಎಂದು ನಿವಾಸಿಗಳು ಆತಂಕಕ್ಕೀಡಾಗಿದ್ದಾರೆ. ಇಂತಹ ಸಮಸ್ಯೆಗಳು ಎದುರಾಗುತ್ತವೆ ಎಂಬ ಮುಂದಾಲೋಚನೆ ಇಲ್ಲದೆ ಕಾಮಗಾರಿಗಳನ್ನು ಆರಂಭ ಮಾಡಿ ಸ್ಮಾರ್ಟ್ ಸಿಟಿಯವರು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap