ತುಮಕೂರು :

ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ್ವರ ಪ್ರಸನ್ನ ತೀರ್ಥ ಸ್ವಾಮೀಜಿಗಳು ಭಾನುವಾರ ನಗರದ ಅಂಬೇಡ್ಕರ್ ನಗರ ಹಾಗೂ ಎನ್.ಆರ್.ಕಾಲೋನಿಗಳಲ್ಲಿ ಪಾದಯಾತ್ರೆ ಮಾಡಿ ಅಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ ನಿಧಿ ಸಂಗ್ರಹಣೆ ಮಾಡಿದರು.
ಮೊದಲು ಅಂಬೇಡ್ಕರ್ ನಗರದ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ಶ್ರೀಗಳು, ದೇವಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಪೇಜಾವರ ಶ್ರೀಗಳು, ಅಯೋಧ್ಯೆಯ ಶ್ರೀರಾಮ ಮಂದಿರ ಭಾರತದ ಗೌರವದ ಸಂಕೇತವಾಗಿ ಭವ್ಯವಾಗಿ ನಿರ್ಮಾಣ ಮಾಡಬೇಕು ಎಂಬ ಉದ್ದೇಶದಿಂದ ನಿರ್ಮಿಸಲಾಗುತ್ತಿದೆ. ಪೂರ್ಣ ದೇವಸ್ಥಾನ ನಿರ್ಮಿಸಲು ಬೇಕಾದ ಹಣವನ್ನು ನೀಡುವ ಭಕ್ತರಿದ್ದಾರೆ. ಆದರೆ, ದೇಶದ ಎಲ್ಲಾ ಶ್ರೀರಾಮ ಭಕ್ತರ ಕಾಣಿಕೆಯಿಂದ ಮಂದಿರ ನಿರ್ಮಾಣ ಮಾಡಬೇಕು ಎಂಬ ಉದ್ದೇಶದಿಂದ ದೇಣಿಗೆ ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು.
ಶ್ರೀರಾಮ ಮಂದಿರಕ್ಕೆ ಭಕ್ತರು ಕೋಟಿ ರೂಪಾಯಿ ಕೊಟ್ಟವರೂ, ಹತ್ತು ರೂಪಾಯಿ ಕೊಟ್ಟವರೂ ಅಷ್ಟೇ ಸಂತೋಷದಿಂದ ಸ್ವೀಕರಿಸುತ್ತೇವೆ, ನೀವು ಮಂದಿರಕ್ಕಾಗಿ ನೀಡುತ್ತಿರುವುದು ಕೇವಲ ಹಣವಲ್ಲ, ನಿಮ್ಮ ಭಕ್ತಿ, ಭಾವ. ಮಂದಿರ ನಿರ್ಮಾಣದಲ್ಲಿ ನಮ್ಮದೂ ಪಾಲಿದೆ ಎಂಬ ಅಭಿಮಾನ, ಭಕ್ತಿ ನಿಮಗೆ ಇರಬೇಕು ಎಂದು ಶ್ರೀ ವಿಶ್ವೇಶ್ವರ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ನಂತರ ಸ್ವಾಮೀಜಿಗಳನ್ನು ಎನ್.ಆರ್.ಕಾಲೋನಿಯ ಮುಖಂಡರು ಭಕ್ತಿ, ಗೌರವದಿಂದ ಸ್ವಾಗತಿಸಿ ಬರಮಾಡಿಕೊಂಡರು. ಮಾಜಿ ಶಾಸಕ ಗಂಗಹನುಮಯ್ಯ, ಜಿಲ್ಲಾ ಪಂಚಾಯ್ತಿ ಸದಸ್ಯ ನಾರಾಯಣಮೂರ್ತಿ ಸೇರಿದಂತೆ ವಿವಿಧ ಮನೆಗಳಿಗೆ ಸ್ವಾಮೀಜಿ ತೆರಳಿ ನಿಧಿ ಸಂಗ್ರಹಣೆ ಮಾಡಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುನಾಯ್ಕರ್, ಮಾಜಿ ಶಾಸಕ ಗಂಗಹನುಮಯ್ಯ, ವಿಶ್ವ ಹಿಂದು ಪರಿಷತ್‍ನ ಜಿ.ಎಸ್.ಬಸವರಾಜು, ಆರ್‍ಎಸ್‍ಎಸ್ ಮುಖಂಡ ನಾಗೇಂದ್ರ ಪ್ರಸಾದ್, ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷ ಎನ್.ಆರ್.ನಾಗರಾಜರಾವ್, ಮುಖಂಡರಾದ ಗೋವಿಂದರಾವ್, ಅಂಜನಮೂರ್ತಿ, ಚಂದ್ರಶೇಖರ್, ರಾಜಣ್ಣ, ಗಂಗಾಧರ್, ಕಿರಣ್, ಗೋಪಾಲ್ ಮತ್ತಿತರರು ಸ್ವಾಮೀಜಿಗಳ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ನಂತರ ಶ್ರೀ ವಿಶ್ವೇಶ್ವರ ಪ್ರಸನ್ನ ತೀರ್ಥ ಸ್ವಾಮೀಜಿಗಳು ಸಿದ್ಧಗಂಗಾ ಮಠಕ್ಕೆ ತೆರಳಿ ಶ್ರೀ ಸಿದ್ಧಲಿಂಗಸ್ವಾಮೀಗಿಗಳನ್ನು ಭೇಟಿ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








