ಆನ್‍ಲೈನ್ ನೋಂದಣಿ: ಈಗ ಗೊಂದಲ, ಬಳಕೆಯಾದಂತೆ ಸರಳ

 ತುಮಕೂರು :

      ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸುವ ಸಲುವಾಗಿ ಹಲವಾರು ರಾಜ್ಯಗಳಲ್ಲಿ ಆಯಾ ಸರ್ಕಾರಗಳು ಆನ್‍ಲೈನ್ ನೋಂದಣಿ ವ್ಯವಸ್ಥೆ ಜಾರಿಗೆ ತಂದಿವೆ. ಕರ್ನಾಟಕದಲ್ಲಿ ಈಗ ತಡವಾಗಿ ಜಾರಿ ಮಾಡಲು ಸರ್ಕಾರ ಮುಂದಾಗಿದ್ದು, ತುಮಕೂರು, ಬೆಂಗಳೂರಿನ ಜಾಲ ಹಾಗೂ ಬೆಳಗಾವಿಯ ಚಿಂಚೋಳಿ ಉಪನೋಂದಣ ಕಚೇರಿಗಳಲ್ಲಿ ಈ ತಿಂಗಳ 2ರಿಂದ ಪ್ರಾಯೋಗಿಕವಾಗಿ ಆನ್‍ಲೈನ್ ನೋಂದಣಿ ವ್ಯವಸ್ಥೆ ಜಾರಿಗೆ ತಂದಿದೆ.

      ಈ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ಕೊರತೆಯಾಗಿ ಹಾಗೂ ಆರಂಭಿಕ ಗೊಂದಲದಿಂದಾಗಿ ಆನ್‍ಲೈನ್ ನೋಂದಣಿ ತುಮಕೂರು ಸಬ್‍ರಿಜಿಸ್ಟ್ರಾರ್ ಕಚೇರಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳಲು ಸಾಧ್ಯವಾಗಿಲ್ಲ.

      ಈ ಸಂಬಂಧ ಜಿಲ್ಲಾ ನೋಂದಣಾಧಿಕಾರಿ ಎನ್.ಸೈಯದ್ ನೂರ್ ಪಾಷಾ ‘ಪ್ರಜಾಪ್ರಗತಿ’ಯೊಂದಿಗೆ ಮಾತನಾಡಿ ಮಾಹಿತಿ ನೀಡಿದ್ದಾರೆ.

 ಆನ್‍ಲೈನ್‍ನಲ್ಲಿ ಯಾವುದೇ ಸ್ಥಿರಾಸ್ತಿಯ ನೋಂದಣಿ ಹೇಗೆ?

      ಹಿಂದಿನ ಆಫ್‍ಲೈನ್‍ಗಿಂಥಾ ವ್ಯತ್ಯಾಸವೇನೂ ಇಲ್ಲ. ನೋಂದಾವಣೆ ಮಾಡುವ ಸಾರ್ವಜನಿಕರು ತಮ್ಮ ಆಸ್ತಿಯ ಪತ್ರವನ್ನು ದಸ್ತವೇಜು ಬರಹಗಾರರು ಅಥವಾ ವಕೀಲರ ಮುಖಾಂತರ ಸಿದ್ಧಪಡಿಸಿಕೊಂಡು ಸರ್ಕಾರದ ಕಾವೇರಿ ಆನ್‍ಲೈನ್ ಸರ್ವೀಸ್‍ನಲ್ಲಿ ಮಾಹಿತಿ ನಮೂದಿಸಿ ಆನ್‍ಲೈನ್‍ನಲ್ಲಿ ಸಬ್‍ರಿಜಿಸ್ಟ್ರರ್‍ರವರಿಗೆ ಕಳಿಸಬೇಕು. ಸಬ್‍ರಿಜಿಸ್ಟ್ರಾರ್ ಪರಿಶೀಲಿಸಿ, ಅನುಮೋದನೆ ನೀಡಿದ ನಂತರ ನಿಗಧಿತ ಮುದ್ರಾಂಕ ಶುಲ್ಕ, ನೋಂದಣಿ ಶುಲ್ಕವನ್ನು ಆನ್‍ಲೈನ್‍ನಲ್ಲಿ ಪಾವತಿ ಮಾಡಬೇಕು. ನಂತರ ನೋಂದಣಿದಾರರು ತಮಗೆ ಬೇಕಾದ ದಿನಾಂಕವನ್ನು ನಿಗದಿ ಮಾಡಿಕೊಂಡು, ಆ ದಿನದಂದು ಮೂಲ ದಾಖಲಾತಿಗಳೊಂದಿಗೆ ಸಬ್‍ರಿಜಿಸ್ಟ್ರಾರ್ ಕಚೇರಿಗೆ ಬಂದು ನೀಡಬೇಕು. ದಾಖಲಾತಿಗಳ ಪರಿಶೀಲನೆ ನಂತರ ಫೋಟೋ, ಬೆರಳು ಗುರುತು ಸಂಗ್ರಹಿಸಿ ಮುಂದಿನ ನೋಂದಣಿ ಕಾರ್ಯ ಪೂರ್ಣಗೊಳಿಸುತ್ತಾರೆ.

ಸಂಬಂಧಿಸಿದ ಇಲಾಖೆಗಳ ತತ್ರಾಂಶಗಳು ಲಿಂಕ್ ಆಗಿರುತ್ತವೆಯೆ?

      -ಕಾವೇರಿ ಆನ್‍ಲೈನ್ ಸರ್ವೀಸಸ್ ಜೊತೆ ಸಂಬಂಧಿಸಿದ ಇಲಾಖೆಗಳ ತತ್ರಾಂಶಗಳು ಲಿಂಕ್ ಆಗಿರುತ್ತವೆ. ಕೃಷಿ ಸಂಬಂಧಿತ ಭೂಮಿ ತತ್ರಾಂಶ ಜೋಡಣೆಯಾಗಿದೆ. ಕೃಷಿ ಜಮೀನು ನೋಂದಣಿ ಮಾಡುವಾಗ ಜಮೀನಿಗೆ ಸಂಬಂಧಿಸಿದ ದಾಖಲಾತಿಗಳು, ಮಾಲೀಕರ ವೈಯಕ್ತಿಕ ಮಾಹಿತಿಗಳು ಇಲ್ಲಿ ಹೊಂದಾಣಿಕೆಯಾಗುತ್ತವೆಯೆ ಎಂದು ಪರಿಶೀಲನೆ ಮಾಡಲಾಗುತ್ತದೆ. ಹಾಗೇ, ಗ್ರಾಮಾಂತರ ಪ್ರದೇಶದ ಕೃಷಿಯೇತರ ಆಸ್ತಿಗಳಾದ ಮನೆ, ಅಂಗಡಿ, ನಿವೇಶನಗಳಂತಹುಗಳ ಇ-ಸ್ವತ್ತು ತತ್ರಾಂಶವೂ ಜೋಡಣೆಯಾಗಿದೆ. ಅದರ ಮಾಹಿತಿಯೂ ಹೊಂದಾಣಿಕೆಯಾಗುವ ಬಗ್ಗೆ ಖಚಿತಪಡಿಸಿಕೊಳ್ಳಲಾಗುತ್ತದೆ. ನಗರ, ಪಟ್ಟಣ ವ್ಯಾಪ್ತಿಯ ಆಸ್ತಿಯ ಇ-ಆಸ್ತಿ ತತ್ರಾಂಶ ಇನ್ನೂ ಜೋಡಣೆಯಾಗಿಲ್ಲ. ಕನಕಪುರ, ರಾಮನಗರದಲ್ಲಿ ಇ-ಆಸ್ತಿ ಜೋಡಣೆಯ ಪ್ರಾಯೋಗಿಕ ಕಾರ್ಯ ನಡೆಯುತ್ತಿದೆ. ಅದಾದ ನಂತರ ತುಮಕೂರಿನಲ್ಲೂ ಅದು ಸಾಧ್ಯವಾಗುತ್ತದೆ.

ಆನ್‍ಲೈನ್ ನೋಂದಣಿಯಲ್ಲಿ ನಕಲಿ ಅಥವಾ ವಂಚನೆ ತಡೆಯಲು ಸಾಧ್ಯವೆ?

      -ಸಾಧ್ಯವಿದೆ. ಆಸ್ತಿ ಸಂಬಂಧಿಸಿದ ಪೂರ್ಣ ದಾಖಲೆ ಸಂಬಂಧಿತ ವ್ಯಕ್ತಿಯ ಹೆಸರಿನಲ್ಲಿರುವುದು ಮಾತ್ರ ಆನ್‍ಲೈನ್‍ನಲ್ಲಿ ನೋಂದಣಿ ಸಾಧ್ಯವಾಗುತ್ತದೆ. ಒಂದೇ ಆಸ್ತಿಯನ್ನು ಮತ್ತೊಬ್ಬರಿಗೆ ಮಾರಾಟ ಮಾಡಲು ಯತ್ನಿಸಿದರೆ ಡೇಟಾ ತೆಗೆದುಕೊಳ್ಳುವುದಿಲ್ಲ. ಇಂತಹ ವಂಚನೆಗಳನ್ನು ತಡೆಯಬಹುದು. ಅಂದಮಾತ್ರಕ್ಕೆ ಲೋಪಗಳಗುವುದಿಲ್ಲವೆಂದಲ್ಲ, ಆಫ್‍ಲೈನ್ ನೋಂದಣಿಗೆ ಹೋಲಿಸಿದರೆ ತೀರಾ ಕಡಿಮೆಯಾಗಬಹುದು.

 ಈಗ ಸಾರ್ವಜನಿಕರಲ್ಲಿ ಆನ್‍ಲೈನ್ ನೋಂದಣಿ ಬಗ್ಗೆ ಇರುವ ಗೊಂದಲ ನಿವಾರಣೆ ಹೇಗೆ?

     -ನೋಂದಣಿದಾರರಲ್ಲಿ ಉಂಟಾಗಿರುವ ಗೊಂದಲ, ತಾಂತ್ರಿಕ ತೊಂದರೆಗಳ ಬಗ್ಗೆ ಇಲಾಖೆ ಗಮನಕ್ಕೆ ಬಂದಿದೆ. ಪ್ರಧಾನ ಕಾರ್ಯದರ್ಶಿಗಳ ಮಟ್ಟದಲ್ಲಿ ಈ ಕುರಿತು ಉನ್ನತ ಚರ್ಚೆ ನಡೆಯುತ್ತಿವೆ. ಎರಡು ವರ್ಷದ ಹಿಂದೆಯೇ ಆಫ್‍ಲೈನ್ ಜೊತೆ ಆನ್‍ಲೈನ್ ನೋಂದಣಿಯನ್ನು ಜಾರಿ ಮಾಡಲಾಗಿತ್ತು. ಆದರೆ, ಈವರೆಗೆ ಆಫ್‍ಲೈನ್‍ನಲ್ಲೇ ನೋಂದಣಿಗಳಾಗುತ್ತಿವೆ. ಇನ್ನು ಮುಂದೆ ಆನ್‍ಲೈನ್ ನೋಂದಣಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಎನ್ನುವ ಕಾರಣಕ್ಕೆ ಸರ್ಕಾರದ ಮಟ್ಟದಲ್ಲಿ ಗಂಭೀರದ ಪ್ರಯತ್ನಗಳಾಗುತ್ತವೆ.

ಆನ್‍ಲೈನ್ ನೋಂದಣಿಯಿಂದ ಸಾರ್ವಜನಿಕರಿಗೆ ಆಗಬಹುದಾದ ಹೆಚ್ಚಿನ ಪ್ರಯೋಜನಗಳೇನು?

      -ನೋಂದಣಿದಾರರು ತಾವು ಇರುವ ಜಾಗದಲ್ಲೇ ತಾವೇ ದಿನ 24 ಗಂಟೆ ಕಾಲ ದಸ್ತವೇಜುಗಳ ಡೇಟಾ ಎಂಟ್ರಿ ಮಾಡಬಹುದು. ಅವರೇ ಅಪ್‍ಲೋಡ್ ಮಾಡುವುದರಿಂದ ತಪ್ಪುಗಳಾಗದೆ, ಖಚಿತ ಮಾಹಿತಿಗಳಿರುತ್ತವೆ. ತಮಗೆ ಬೇಕಾದ ದಿನವನ್ನು ನಿಗಧಿ ಮಾಡಿಕೊಂಡು ಸಬ್‍ರಿಜಿಸ್ಟ್ರಾರ್ ಕಚೇರಿಗೆ ಹೋಗಿ ನೋಂದಣಿ ಮಾಡಿಸಿಕೊಳ್ಳಬಹುದು. ಇದರಿಂದ ಪದೇಪದೆ ಕಚೇರಿಗೆ ಅಲೆಯುವುದು, ಕಾಲಹರಣವಾಗುವುದು ತಪ್ಪುತ್ತದೆ. ಇದೊಂದು ಸರ್ಕಾರದ ಮಹತ್ವ ಕಾರ್ಯಕ್ರಮ. ಆರಂಭಿಕ ಹಂತಗಳಲ್ಲಿ ಎದುರಾಗುವ ತೊಡಕು, ಲೋಪಗಳನ್ನು ಹಂತಹಂತವಾಗಿ ಸರಿಪರಿಸಿಕೊಂಡು ಪರಿಣಾಮಕಾರಿಯಾಗಿ ಜಾರಿಗೆ ತರುವ ಉದ್ದೇಶವಿದೆ.

ಆನ್‍ಲೈನ್ ನೋಂದಣಿ ಬಗ್ಗೆ ಸಬ್‍ರಿಜಿಸ್ಟ್ರಾರ್ ಕಚೇರಿಯಲ್ಲಿ ಸಾರ್ವಜನಿಕರಿಗೆ ಮಾರ್ಗದರ್ಶನ ನೀಡಲು ಸಲಹಾ ಕೇಂದ್ರ ಸ್ಥಾಪಿಸುವ ಅಗತ್ಯವಿದೆಯೇ?

      -ಆನ್‍ಲೈನ್ ನೋಂದಣಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಇರುವ ಬಳಕೆದಾರರ ಕೈಪಿಡಿ ಕಾವೇರಿ ಆನ್‍ಲೈನ್ ಸರ್ವೀಸ್‍ನಲ್ಲಿ ಪ್ರಕಟಿಸಲಾಗಿದೆ. ಈ ಕೈಪಿಡಿ ನೋಡಿಕೊಂಡು, ಅನುಸರಿಸದರೆ ನೋಂದಣಿ ಕಾರ್ಯ ಸರಳವಾಗುತ್ತದೆ. ನೋಂದಣಿದಾರರು, ಪತ್ರ ಬರಹಗಾರರು ಕೈಪಿಡಿ ಅನುಸರಿಸಬಹುದು. ಜೊತೆಗೆ ತುಮಕೂರಿನ ಸಬ್‍ರಿಜಿಸ್ಟ್ರಾರ್ ಕಚೇರಿಯಲ್ಲಿ ಮೂವರು ಸಬ್‍ರಿಜಿಸ್ಟ್ರಾರ್‍ಗಳು, 8 ಮಂದಿ ಆಪರೇಟರ್‍ಗಳು, ಇಬ್ಬರು ಇಂಜಿನಿಯರ್‍ಗಳಿದ್ದಾರೆ. ಇವರು ತರಬೇತಿ ಪಡೆದಿದ್ದಾರೆ. ಇವರು ಸಾರ್ವಜನಿಕರಿಗೆ ಈ ಕುರಿತು ಮರ್ಗದರ್ಶನ ನೀಡುತ್ತಿದ್ದಾರೆ.

ಆನ್‍ಲೈನ್‍ನಲ್ಲಿ ಮುದ್ರಾಂಕ ಶುಲ್ಕ, ನೋಂದಣಿ ಶುಲ್ಕ ಪಾವತಿ ಮಾಡಿದ ನಂತರ ತಾಂತ್ರಿಕ ತೊಂದರೆ ಅಥವಾ ಇನ್ನಾವುದೇ ಕಾರಣಕ್ಕೆ ನೋಂದಣಿ ತಿರಸ್ಕøತವಾದರೆ, ಸರ್ಕಾರಕ್ಕೆ ಪಾವತಿಸಿದ ಹಣವನ್ನು ಹಿಂಪಡೆಯುವುದು ಹೇಗೆ?

      -ಮರು ಪಾವತಿಗಾಗಿ ಸರ್ಕಾರಕ್ಕೆ ಆಫ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿ ಹಣ ವಾಪಸ್ ಪಡೆಯಬಹುದು. ಆನ್‍ಲೈನ್ ನೋಂದಣಿ ಬಗ್ಗೆ ಸಾರ್ವಜನಿಕರು ಅನಗತ್ಯ ಗೊಂದಲಕ್ಕೀಡಾಗುವುದು ಬೇಡ. ಬದಲಾವಣೆಗೆ ತಕ್ಕಂತೆ ಸ್ಪಂದಿಸಬೇಕಾಗುತ್ತದೆ. ಪೂರಕ ಜ್ಞಾನ ಬೆಳೆಸಿಕೊಂಡು ಬಳಸಿಕೊಳ್ಳಲು ಆನ್‍ಲೈನ್ ನೋಂದಣಿ ಸೇವೆ ಸರಳವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap