ಜಿಲ್ಲೆಯ ಅಂತರ್ಜಲ ವೃದ್ಧಿಗೆ ಆದ್ಯತೆಯ ಕಾರ್ಯಕ್ರಮ – ಸಚಿವ ಮಾಧುಸ್ವಾಮಿ

ತುಮಕೂರು :

      ಜಿಲ್ಲೆಯಲ್ಲಿ ದಿನೇದಿನೆ ಅಂತರ್ಜಲಮಟ್ಟ ಕುಸಿಯುತ್ತಿದ್ದು, ಭವಿಷ್ಯದಲ್ಲಿ ಮರಳುಗಾಡಾಗುವ ಆತಂಕ ಎದುರಾಗಿದೆ, ಅಂತರ್ಜಲ ವೃದ್ಧಿಗಾಗಿ ವಿವಿಧ ಕಾರ್ಯಕ್ರಮ ರೂಪಿಸಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅಂತರ್ಜಲ ಅಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ ಹೇಮಾವತಿ ನೀರಿನಿಂದ ಜಿಲ್ಲೆಯ ಕೆರೆಗಳನ್ನು ತುಂಬಿಸಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಯಾವುದೇ ಅಡ್ಡಿಯಿಲ್ಲದೆ ಸರಾಗವಾಗಿ ಹೇಮಾವತಿಯಿಂದ ಜಿಲ್ಲೆಗೆ ಹರಿದಿದೆ. ಮುಂದಿನ ದಿನಗಳಲ್ಲಿ ಭದ್ರ ಮೇಲ್ಡಂಡೆ, ಎತ್ತಿನಹೊಳೆಯ ಮೂಲಕವೂ ಜಿಲ್ಲೆಗೆ ನೀರು ತಂದು ಅಂತರ್ಜಲ ಮಟ್ಟ ಹೆಚ್ಚಿಸಲಾಗುವುದು ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

      ಮಂಗಳವಾರ ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ 72ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿದರು.

      ಕೈಗಾರಿಕಾಭಿವೃದ್ಧಿ ಉನ್ನತೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿ, ಉದ್ಯೋಗ ಸೃಷ್ಠಿಗೊಳಿಸುವುದರ ಜೊತೆಗೆ ಹೇಮಾವತಿ, ಎತ್ತಿನಹೊಳೆ, ಭದ್ರ ಮೇಲ್ಡಂಡೆ ನೀರಾವರಿ ಯೋಜನೆಗಳನ್ನು ಕ್ರಮಬದ್ಧವಾಗಿ ಅನುಷ್ಠಾನಗೊಳಿಸಲಾಗುವುದು. ರೆವಿನ್ಯೂ, ಪಿಂಚಣಿ ಅದಾಲತ್‍ಗಳನ್ನೂ ಕ್ರಮಬದ್ಧವಾಗಿ ನಡೆಸುವ ಮೂಲಕ ಗ್ರಾಮೀಣ ಭಾಗದ ಜನರ ಸಮಸ್ಯೆ ಬಗೆಹರಿಸಲಾಗುವುದು. ಜಿಲ್ಲೆಯಲ್ಲಿ ಹಾದು ಹೋಗುವ ತುಮಕೂರು-ರಾಯದುರ್ಗ, ತುಮಕೂರು-ದಾವಣಗೆರೆ ರೈಲು ಮಾರ್ಗಗಳ ಅನುಷ್ಠಾನಕ್ಕೂ ಒತ್ತು ನೀಡಲಾಗಿದೆ. ಮೊದಲ ಆದ್ಯತೆಯಾಗಿ ಸ್ವಚ್ಚತೆ, ನೀರು, ವಿದ್ಯುತ್ ಪೂರೈಕೆಗೂ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು. ಕೃಷಿ, ತೋಟಗಾರಿಕಾ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಗ್ರಾಮೀಣ ಜನರ ಬದುಕನ್ನು ಸ್ವಾಭಿಮಾನ ಬದುಕನ್ನಾಗಿ ಮಾಡುವ ಪ್ರಯತ್ನ ಮಾಡಲಾಗುವುದು. ವಲಸೆ ಹೋಗುವುದನ್ನು ತಪ್ಪಿಸಲು ಗ್ರಾಮೀಣ ಪ್ರದೇಶದ ಜನರ ಜೀವನವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮ ರೂಪಿಸಲಾಗುವುದು ಎಂದು ಹೇಳಿದರು.
ಸುಸ್ಥಿರ, ಸುಭೀಕ್ಷ ರಾಜ್ಯ ನಿರ್ಮಾಣಕ್ಕಾಗಿ ಆರೋಗ್ಯ, ಶಿಕ್ಷಣ, ವಸತಿ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ನಿರುದ್ಯೋಗ ಸಮಸ್ಯೆ ನಿವಾರಣೆಗೆ ಮಹಾತ್ಮಗಾಂಧಿ ನರೇಗಾ ಯೋಜನೆಯಡಿಯಲ್ಲಿ ಉದ್ಯೋಗ ಕಲ್ಪಿಸಲಾಗಿದೆ. ಈ ಯೋಜನೆಯಡಿ ತುಮಕೂರು ಜಿಲ್ಲೆಯಲ್ಲಿ ಶೇ. 10ರಷ್ಟು ಮಂದಿಗೆ ಉದ್ಯೋಗ ನೀಡಲಾಗಿದೆ ಎಂದರು.

      ದೇಶವನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಲು ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಉದಾತ್ತ ಧ್ಯೇಯವನ್ನಿಟ್ಟುಕೊಂಡು ಹೋರಾಟ ನಡೆಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು, ಅವರು ಹಾಕಿಕೊಟ್ಟ ಮಾದರಿ ಹಾದಿಯಲ್ಲಿ ನಡೆಯೋಣ, ಸ್ವಾತಂತ್ರ್ಯ ಪರಿಕಲ್ಪನೆಯನ್ನು ಸಾಕಾರಗೊಳಿಸೋಣ ಎಂದರು.

      ದೇಶದಲ್ಲಿ ಆಹಾರ ಮತ್ತು ಶೈಕ್ಷಣಿಕ ಕ್ರಾಂತಿಯಾಗಿದೆ. ವಿಶ್ವದಲ್ಲಿ ಭಾರತವು ಆಹಾರ ಸಾಮಾಗ್ರಿ ಶೇಖರಣೆಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಭವಿಷ್ಯದಲ್ಲಿ ಎದುರಾಗಬಹುದಾಗಿದ್ದ ಆಹಾರ ಸಮಸ್ಯೆ ಆತಂಕ ದೂರವಾಗಿದೆ. ಶೈಕ್ಷಣಿಕ ಕ್ರಾಂತಿಯಲ್ಲಿಯೂ ದೇಶ ವಿಶ್ವ ಸ್ಥಾನದಲ್ಲಿ ಪ್ರಗತಿಯ ಹೆಜ್ಜೆಯನ್ನಿಟ್ಟಿದೆ. ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶ ಕಲ್ಪಿಸಿ, ಎಲ್ಲರಿಗೂ ಎಲ್ಲರಂತೆ ಬಾಳುವ ಹಕ್ಕು ನೀಡಿ ವಿಶ್ವದಲ್ಲಿಯೇ ವಿಶಿಷ್ಟ ಹೆಗ್ಗಳಿಕೆ ಪಡೆದಿರುವ ದೇಶದ ಸಂವಿಧಾನದ ಆಶಯ ಹಾಗೂ ಸ್ವಾತಂತ್ರ್ಯ ಭಾರತದ ನೈಜ ಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮುನ್ನಡೆಯೋಣ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

      ಧ್ವಜಾರೋಹಣೆ ನೆರವೇರಿಸಿದ ನಂತರ ಸಚಿವ ಮಾಧುಸ್ವಾಮಿ ಅವರು ತೆರೆದ ಜೀಪಿನಲ್ಲಿ ಕವಾಯತು ತುಕಡಿಗಳನ್ನು ಪರಿವೀಕ್ಷಣೆ ಮಾಡಿದರು. ರಾಜ್ಯ ಮೀಸಲು ಪೊಲೀಸ್ ಪಡೆ, ಗೃಹ ರಕ್ಷಕದಳ, ಮಹಿಳಾ ಪೊಲೀಸ್ ತಂಡ, ಮಹಿಳಾ ಪೊಲೀಸ್ ಪಡೆ, ಮಹಿಳಾ ಪೊಲೀಸ್ ಪಡೆ, ಅರಣ್ಯ ರಕ್ಷಕ ತಂಡ, ಕಲ್ಪತರು ಪಡೆ ಶಿಸ್ತು ಬದ್ಧ ಪಥ ಸಂಚಲನ ನಡೆಸಿ, ಗೌರವ ಸಲ್ಲಿಸಿತು.
ಡಿಎಆರ್ ಪೊಲೀಸ್ ಬ್ಯಾಂಡ್ ತಂಡ ರಾಷ್ಟ್ರ ಗೀತೆ ಹಾಗೂ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.

      ಕಾರ್ಯಕ್ರಮದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್, ವಿಧಾನ ಪರಿಷತ್ ಶಾಸಕ ಬೆಮೆಲ್ ಕಾಂತರಾಜ್, ತುಮಕೂರು ನಗರ ಪಾಲಿಕೆ ಮೇಯರ್ ಫರೀದಾ ಬೇಗಂ, ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಶಾರಾದಾ ನರಸಿಂಹಮೂರ್ತಿ, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap