ತುಮಕೂರು ಸ್ಮಾರ್ಟ್‍ಸಿಟಿ ಯೋಜನೆ ಚುರುಕುಗೊಳಿಸಲು ಸಚಿವರ ಸೂಚನೆ

ತುಮಕೂರು :  

      ಸ್ಮಾರ್ಟ್ ಸಿಟಿ ಯೋಜನೆಯಡಿ ತುಮಕೂರು ನಗರದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಮುಂಬರುವ ಮಾರ್ಚ್ 31ರೊಳಗೆ ಪೂರ್ಣಗೊಳಿಸದಿದ್ದಲ್ಲಿ ತಮ್ಮ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಸಣ್ಣ ನೀರಾವರಿ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

      ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ನಡೆದ ಸ್ಮಾರ್ಟ್ ಸಿಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಮಗಾರಿಗಳನ್ನು ಆರಂಭಿಸಲು ಕಾರ್ಯಾದೇಶ ನೀಡಿ ಒಂದರೆಡು ವರ್ಷ ಕಳೆದಿದ್ದರೂ ಸಹ ಕಾಮಗಾರಿಗಳು ಪೂರ್ಣಗೊಂಡಿಲ್ಲ ಹಾಗೂ ಈ ನಿಧಾನಗತಿಗೆ ಕಾರಣವೇನು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

      ಸ್ಮಾರ್ಟ್ ಸಿಟಿ ಯೋಜನೆಯಡಿ ಪೂರ್ಣಗೊಂಡಿರುವ ಕಾಮಗಾರಿಗಳು ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಒಂದೊಂದಾಗಿ ಪರಿಶೀಲನೆ ನಡೆಸಿ ಮಾಹಿತಿ ಪಡೆದ ಸಚಿವರು, ಸ್ಮಾರ್ಟ್ ರಸ್ತೆ ನಿರ್ಮಾಣ, ಒಳಚರಂಡಿ ಕಾಮಗಾರಿ, ವಿದ್ಯುತ್ ದೀಪ, 24*7 ನೀರು ಪೂರೈಕೆ ಸೇರಿದಂತೆ ಹಲವು ಕಾಮಗಾರಿಗಳನ್ನು ಏಕಕಾಲಕ್ಕೆ ತುಮಕೂರು ನಗರದಲ್ಲಿ ಕೈಗೊಂಡಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಮಾರ್ಚ್ 31ರೊಳಗಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚನೆ ನೀಡಿ ಕಾಲಾಕಾಲಕ್ಕೆ ಪರಿಶೀಲಿಸಿ ಕಾಮಗಾರಿಯನ್ನು ಮುಗಿಸಬೇಕೆಂದು ಸ್ಮಾರ್ಟ್ ಸಿಟಿ ಸಂಸ್ಥೆ ಸಿಇಓ ರಂಗಸ್ವಾಮಿ ಅವರಿಗೆ ಸೂಚಿಸಿದರು.

      ಅಮಾನಿಕೆರೆಯಲ್ಲಿ ಕೈಗೊಂಡಿರುವ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿದ ನಂತರವೇ ಕಾಮಗಾರಿ ಪೂರ್ಣಗೊಂಡಿದೆ ಎನ್ನಬೇಕು. ಹಾಗೂ ಅಮಾನಿಕೆರೆಗೆ ಸಂಪರ್ಕಿಸುವ ರಾಜಗಾಲುವೆಗಳ ಒತ್ತುವರಿಯನ್ನು ತೆರವುಗೊಳಿಸಿ, ಅವರ ವಿರುದ್ಧ ಕೇಸು ದಾಖಲಿಸಬೇಕು. ಅಮಾನಿಕೆರೆಗೆ ರಾಜಗಾಲುವೆಗಳಿಂದ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕೆಂದು ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಸೂಚನೆ ನೀಡಿದರು. 

      ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆಯು ಸ್ಮಾರ್ಟ್ ಸಿಟಿ ಯೋಜನೆಯ ಅನುಷ್ಟಾನಕ್ಕೂ ಮುನ್ನ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಿತ್ತು. ಸ್ಮಾರ್ಟ್ ಸಿಟಿ ವತಿಯಿಂದ ಸ್ಮಾರ್ಟ್ ರಸ್ತೆ ನಿರ್ಮಿಸಿರುವುದರಿಂದ ರಸ್ತೆ ಕಿರಿದಾಗಿದೆ. ಪಾರ್ಕಿಂಗ್ ವ್ಯವಸ್ಥೆ ದೊಡ್ಡದಾಗಿದ್ದು ವಾಹನಗಳ ನಿಲುಗಡೆಯಿಂದ ಸ್ಥಳೀಯ ವ್ಯಾಪಾರಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಸರಿಪಡಿಸುವಂತೆ ಸಂಸದ ಜಿ.ಎಸ್. ಬಸವರಾಜು ಸಭೆಗೆ ತಿಳಿಸಿದರು.

      ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಬೆಂಗಳೂರಿನ ಬಿ.ವಿ.ಕೆ.ಐಯ್ಯಂಗಾರ್ ರಸ್ತೆಯಲ್ಲಿ ಒಂದು ಬದಿ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದಾರೆ. ಅದೇರೀತಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆಯಲ್ಲಿ ಒಂದು ಕಡೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ ಎಂದು ಕಾರ್ಯನಿರ್ವಾಹಕ ಅಭಿಯಂತರರುಗಳಿಗೆ ಸೂಚಿಸಿದರು.

      ಕೆಲವೊಂದು ಕಾಮಗಾರಿಗಳು 3 ವರ್ಷಗಳಾದರೂ ಆಮೆಗತಿಯಲ್ಲಿ ನಡೆಯುತ್ತಿವೆ. ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ಧ ಕ್ರಮ ಏಕೆ ಕೈಗೊಂಡಿಲ್ಲ. ಅಂದಾಜು ವೆಚ್ಚ 99.98ಲಕ್ಷ ರೂ.ಗಳೆಂದು ನಮೂದಿಸಿದ್ದೀರಿ. ಇದರಲ್ಲಿ 17.21ಲಕ್ಷ ರೂ.ಗಳು ಖರ್ಚಾಗಿದೆ ಎಂದು ತಿಳಿಸಿದ್ದೀರಿ. ಶೇ.90ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದ್ದೀರಿ. ಇದು ಹೇಗೆ ಶೇ.90ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಸ್ಮಾರ್ಟ್ ಸಿಟಿ ಇಂಜಿನಿಯರ್‍ಗಳಿಗೆ ತರಾಟೆಗೆ ತೆಗೆದುಕೊಂಡ ಸಚಿವರು, ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಯೋಜನೆಗಳ ವಸ್ತುಸ್ಥಿತಿ ವರದಿಯನ್ನು ನೀಡಬೇಕೆಂದು ಸೂಚಿಸಿದರು.

      ರಿಂಗ್ ರಸ್ತೆಯಲ್ಲಿ ರಸ್ತೆಬದಿ ಚರಂಡಿಗಳನ್ನು ನಿರ್ಮಾಣ ಮಾಡದಿದ್ದರೆ ನೀರು ಸರಾಗವಾಗಿ ಹರಿಯದೆ ಅಲ್ಲಿಯೇ ನಿಂತು ರಸ್ತೆ ಹಾಳಾಗಲು ಕಾರಣವಾಗುತ್ತದೆ. ಕಾಮಗಾರಿ ಪೂರ್ಣಗೊಂಡ ನಂತರ ರಸ್ತೆ ಗುಂಡಿಬಿದ್ದರೆ ಅದಕ್ಕೆ ನೀವೇ ಹೊಣೆಗಾರರಾಗುತ್ತೀರಿ ಎಂದು ಎಚ್ಚರಿಕೆ ನೀಡಿದರು.

      ಮಾರ್ಚ್ ಅಂತ್ಯದ ವೇಳೆಗೆ ರಿಂಗ್ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಕಾರ್ಯನಿರ್ವಾಹಕ ಇಂಜಿನಿಯರ್ ಬಸವರಾಜೇಗೌಡ ಅವರಿಗೆ ಸೂಚಿಸಿದರು. ವಿನಾಯಕ ನಗರ, ಎಂ.ಜಿ.ರಸ್ತೆ, ಹೊರಪೇಟೆ ಮುಖ್ಯರಸ್ತೆಗಳನ್ನು ಅಗೆದು ನಿಗಧಿತ ಅವಧಿಯಲ್ಲಿ ಕೆಲಸ ಪೂರ್ಣಗೊಳಿಸಿಲ್ಲ. ಅಲ್ಲದೆ ಅವಧಿಯ ಸಮಯ ಒಂದು ವರ್ಷದವರೆಗೂ ವಿಸ್ತರಣೆಯಾಗಿದ್ದರೂ ಕಾಮಗಾರಿ ವಿಳಂಬ ಮಾಡಿದ್ದೀರಿ. ಇದರಿಂದ ಸಾರ್ವಜನಿಕರು ನಮ್ಮನ್ನು ಪ್ರಶ್ನಿಸುವಂತೆ ಮಾಡಿದ್ದೀರಿ. ಕಾಮಗಾರಿಗಳನ್ನು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಿ ಹಾಗೂ ತಾಂತ್ರಿಕತೆಯನ್ನು ಬಳಸಿಕೊಂಡು ತುಮಕೂರಿನ ಜನರಿಗೆ ಸೌಲಭ್ಯಗಳನ್ನು ಒದಗಿಸಿದರೆ ಸ್ಮಾರ್ಟ್(Smಚಿಡಿಣ) ಎಂಬ ಪದಕ್ಕೆ ಅರ್ಥ ಬರುವಂತೆ ಮಾಡಬೇಕು ಎಂದರು.

      ಸ್ಮಾರ್ಟ್ ಸಿಟಿ ಯೋಜನೆಯಡಿ 53 ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಈ ಪೈಕಿ ಈಗಾಗಲೇ 4 ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲಾಗಿದೆ. ನಗರದ ಸಾರ್ವಜನಿಕರು ಈ ಉದ್ಯಾನವನಗಳ ಅಭಿವೃದ್ಧಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಒಂದು ಕಾಮಗಾರಿ ಪೂರ್ಣಗೊಂಡ ನಂತರ ಮತ್ತೊಂದು ಕಾಮಗಾರಿಯನ್ನು ಪೂರ್ಣಗೊಳಿಸಬೇಕಾಗಿತ್ತು. ಆದರೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ಏಕಕಾಲಕ್ಕೆ ಕಾಮಗಾರಿಗಳನ್ನು ಆರಂಭಿಸಿದ್ದು, ನಗರದಲ್ಲಿ 4,000 ಕೊಳಚೆ ಒಳಚರಂಡಿ(ಚೇಂಬರ್)ಗಳನ್ನು ತೆರೆದು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ಕುರಿತು ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ನಗರ ಶಾಸಕ ಜ್ಯೋತಿಗಣೇಶ್ ಸಭೆಗೆ ತಿಳಿಸಿದರು.

ಆಯವ್ಯಯ ಸೇರ್ಪಡೆಗೆ ಮಾಹಿತಿ :-

      ಸ್ಮಾರ್ಟ್ ಸಿಟಿ ಸಭೆಗೂ ಮುನ್ನ 2021-22ನೇ ಸಾಲಿನ ಆಯವ್ಯಯದಲ್ಲಿ ತುಮಕೂರು ಜಿಲ್ಲೆಗೆ ಅಗತ್ಯವಿರುವ ಕಾರ್ಯಕ್ರಮಗಳ ಸೇರ್ಪಡೆ ಬಗ್ಗೆ ಅಧಿಕಾರಿಗಳಿಂದ ಜಿಲ್ಲಾ ಉಸ್ತುವಾರಿ ಸಚಿವರು ಮಾಹಿತಿ ಪಡೆದರು. ತುಮಕೂರು ಜಿಲ್ಲೆಯಲ್ಲಿ 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಕೆಲವು ಗ್ರಾಮಪಂಚಾಯತಿಗಳನ್ನು ಪಟ್ಟಣ ಪಂಚಾಯತಿಗಳನ್ನಾಗಿ ಮೇಲ್ದರ್ಜೆಗೇರಿಸುವುದು, ಜಿಲ್ಲಾ ಆಸ್ಪತ್ರೆಯಲ್ಲಿ ಪಿ.ಜಿ.ಕೋರ್ಸ್‍ಗಳನ್ನು ಆರಂಭಿಸುವುದು, ತಾಲ್ಲೂಕು ಆಸ್ಪತ್ರೆಗಳಲ್ಲಿ ವೈರಲ್ ಲ್ಯಾಬ್ ಸ್ಥಾಪಿಸುವುದು, ಅಗತ್ಯವಿರುವ ಕಡೆ ಪೊಲೀಸ್ ಠಾಣೆಗಳನ್ನು ಆರಂಭಿಸುವುದು, ಪ್ರವಾಸಿ ಮಂದಿರಗಳ ನಿರ್ಮಾಣ ಹಾಗೂ ಇನ್ನಿತರೆ ಮೂಲಭೂತ ಸೌಕರ್ಯಗಳ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಮಾಹಿತಿ ಪಡೆದರು.

     ಸಭೆಯಲ್ಲಿ ಮೇಯರ್ ಫರೀದಾ ಬೇಗಂ, ಉಪ ಮೇಯರ್ ಶಶಿಕಲಾ ಗಂಗಹನುಮಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಕೆ.ವಂಶಿಕೃಷ್ಣ, ಜಿ.ಪಂ. ಸಿಇಓ ಶುಭಾ ಕಲ್ಯಾಣ್, ಪಾಲಿಕೆ ಆಯುಕ್ತೆ ರೇಣುಕಾ, ಟೂಡಾ ಅಧ್ಯಕ್ಷ ನಾಗಣ್ಣ, ಪಿಡಬ್ಲ್ಯೂಡಿ ಕಾರ್ಯಪಾಲಕ ಇಂಜಿನಿಯರ್ ಸಂಜೀವ್‍ರಾಜ್ ಸೇರಿದಂತೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap