ತುಮಕೂರು :
ರಾಜ್ಯ ಸರಕಾರದಲ್ಲಿರುವ ದಪ್ಪ ಚರ್ಮದ ಅಧಿಕಾರಿಗಳಿಂದ ರೈಲ್ವೆ ಯೋಜನೆಗಳಿಗೆ ಹಿನ್ನಡೆ, ದಿನಕ್ಕೊಂದು ನಿಯಮಗಳಿಂದ ತೆರಿಗೆದಾರರು ಹೈರಾಣು, ವಸಂತ ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಿ…, ಕೃಷಿ ಗ್ರಾಮೀಣಾಭಿವೃದ್ಧಿಗೆ ಒತ್ತುಕೊಡದೆ ದೇಶದ ಆರ್ಥಿಕತೆಯ ಪ್ರಗತಿ ಸಾಧ್ಯವಿಲ್ಲ…, ಇವೇ ಮೊದಲಾದ ಸಲಹೆ, ಬೇಡಿಕೆಗಳು ಕೇಳಿಬಂದಿದ್ದು, ಪ್ರಜಾಪ್ರಗತಿ -ಪ್ರಗತಿ ವಾಹಿನಿಯಿಂದ ಗಣರಾಜ್ಯೋತ್ಸವ ದಿನದಂದು ಏರ್ಪಡಿಸಿದ್ದ ಫೆ.1ರ ಕೇಂದ್ರ ಬಜೆಟ್ ಪೂರ್ವಭಾವಿ ಸಂವಾದದಲ್ಲಿ.
ಸಂವಾದದಲ್ಲಿ ಸಂಸದ ಜಿ.ಎಸ್.ಬಸವರಾಜು, ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ, ಛೇಂಬರ್ ಆಫ್ ಕಾರ್ಮಸ್ ಹಿರಿಯ ಲೆಕ್ಕ ಪರಿಶೋಧಕ ಟಿ.ಆರ್ ಆಂಜಿನಪ್ಪ ಹಾಗೂ ಛೇಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷ ಹಾಗೂ ಉದ್ಯಮಿ ಎಚ್.ಜಿ.ಚಂದ್ರಶೇಖರ್ ಹಾಗೂ ಪ್ರಜಾಪ್ರಗತಿ ಸಂಪಾದಕರಾದ ಎಸ್.ನಾಗಣ್ಣ ಅವರುಗಳು ಪಾಲ್ಗೊಂಡು ಕೇಂದ್ರ ಬಜೆಟ್‍ಗೆ ಪೂರ್ವಭಾವಿಯಾಗಿ ಜಿಲ್ಲೆಗೆ ಆಗಬೇಕಾದ ಯೋಜನೆಗಳೇನು? ಹಿಂದೆ ಘೋಷಿತವಾದ ಯೋಜನೆಗಳ ಸ್ಥಿತಿಗತಿ ಏನಾಯಿತು, ಏನೆಲ್ಲ ಕೊರತೆಗಳಿವೆ ಎಂಬುದರ ಬಗ್ಗೆ ವಿಸ್ತøತ ಚರ್ಚೆ ನಡೆಸಿದರು.
ಮಂತ್ರಿಗಳು, ಅಧಿಕಾರಿಗಳ ನಡುವೆ ಸಮನ್ವಯ ಕೊರತೆ :
ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಸಂಸದ ಜಿ.ಎಸ್.ಬಸವರಾಜು ಸಂವಾದಕ್ಕೆ ಚಾಲನೆ ನೀಡಿ ಮಾತನಾಡಿ ರೈಲ್ವೆ ಬಜೆಟ್ ಅನ್ನು ಸಾಮಾನ್ಯ ಬಜೆಟ್ ಜೊತೆಗೆ ಸಮೀಕರಿಸಿರುವುದರಿಂದ ಜಿಲ್ಲೆಯ ರೈಲ್ವೆ ಯೋಜನೆಗಳಿಗೆ ಅನುದಾನಕ್ಕೇನು ಕೊರತೆಯಿಲ್ಲ. ಆದರೆ ರಾಜ್ಯ ಸರಕಾರದ ಭೂಸ್ವಾಧೀನ ವಿಳಂಬ ಪ್ರಕ್ರಿಯೆಯಿಂದಾಗಿ ತುಮಕೂರು –ರಾಯದುರ್ಗ, ತುಮಕೂರು –ದಾವಣಗೆರೆ ಹಾಗೂ ತುಮಕೂರು-ಅರಸೀಕರೆ ಮಾರ್ಗದ ರೈಲ್ವೆ ಯೋಜನೆಗಳು ವರ್ಷಾನುಗಟ್ಟಲೇ ವಿಳಂಬಗತಿಯಲ್ಲಿ ಸಾಗುವಂತಾಗಿದೆ. ಇಲ್ಲಿನ ದಪ್ಪಚರ್ಮದ ಅಧಿಕಾರಿಗಳಿಂದಾಗಿ ಬಹುತೇಕ ಯೋಜನೆಗಳು ಕುಂಠಿತಗೊಂಡಿವೆ. ದಿಲ್ಲಿಯಲ್ಲಿ ವಿಶೇಷಪ್ರತಿನಿಧಿಯಾಗಿ ನೇಮಕವಾಗುವ ರಾಜ್ಯದ ಅಧಿಕಾರಿಗಳು ಮುಖ್ಯಮಂತ್ರಿಗಳು, ಮಂತ್ರಿಗಳ ಸ್ವಾಗತಕ್ಕೆ ಸೀಮಿತರಾಗಿದ್ದಾರೆ.ಸಚಿವರು, ಜಿಲ್ಲಾಧಿಕಾರಿಗಳು, ಇತರೆ ಇಲಾಖಾ ಮಟ್ಟದ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆಯೂ ಯೋಜನೆಗಳ ಹಿನ್ನಡೆಗೆ ಕಾರಣವಾಗಿದೆ ಎಂದು ಪ್ರತಿಕ್ರಿಯಿಸಿದರು.
ಭೂಸ್ವಾಧೀನ ವಿಭಾಗಕ್ಕೆ ಬರುವ ಅಧಿಕಾರಿಗಳು 3 ತಿಂಗಳು ಮೇಲೆ ಇರೋದಿಲ್ಲ :
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಪೂರಕವಾಗಿ ಪ್ರತಿಕ್ರಿಯಿಸಿ ರೈಲ್ವೆ ಬಜೆಟ್ ಅನ್ನು ಸಾಮಾನ್ಯ ಬಜೆಟ್‍ಗೆ ಸಮೀಕರಿಸಿದ್ದೇ ರಾಜ್ಯಕ್ಕೆ ಹೆಚ್ಚು ನಷ್ಟವಾಗಿದೆ. ಇನ್ನೂ ಜಿಲ್ಲೆಯಲ್ಲಿ ನೀರಾವರಿ, ರೈಲ್ವೆ ಭೂಸ್ವಾಧೀನ ವಿಭಾಗಕ್ಕೆ ಸರಕಾರದಿಂದ ನೇಮಿಸಲ್ಪಡುವ ಅಧಿಕಾರಿಗಳು 3-4 ತಿಂಗಳಕ್ಕೆ ಹೆಚ್ಚು ಅವಧಿಗೆ ಕಚೇರಿಯಲ್ಲಿ ಇರುವುದಿಲ್ಲ. ಸ್ಟಾಪ್‍ಗ್ಯಾಪ್ ಆರೆಂಜ್‍ಮೆಂಟ್ ರೀತಿ ಅಧಿಕಾರಿಗಳು ಬಂದು ಹೋಗುತ್ತಿದ್ದಾರೆ. ಇದನ್ನು ತಪ್ಪಿಸಿ ದೀರ್ಘಾವದಿಗೆ ಅಧಿಕಾರಿಯನ್ನು ನಿಯೋಜಿಸಿ, ಯೋಜನೆಗಳ ಭೂಸ್ವಾಧೀನಕ್ಕೆ ವೇಗ ಕೊಡಬೇಕು. ಇದು ಆಗದೇ ಹೋದರೆ ಹತ್ತು ವರ್ಷ ಕಳೆದಿರುವ ರೈಲ್ವೆ ಯೋಜನೆಗಳು ಇನ್ನಷ್ಟು ವರ್ಷಗಳು ಉರುಳಿ ಕಾಲಹರಣ, ಅನುದಾನ ಅಪವ್ಯಯ, ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸಬೇಕಾಗುತ್ತದೆ. ಬಿದರೆಹಳ್ಳ ಕಾವಲ್ ವಎಚ್‍ಎಎಲ್‍ನಲ್ಲಿ 2018ರಲ್ಲೆ ಹೆಲಿಕ್ಯಾಪ್ಟರ್ ಆರಿಸ್ತೀವಿ ಅಂಥಾ ಖುದ್ದು ಪ್ರಧಾನಿಯೇ ಹೇಳಿದ್ರು, 2021 ಬಂದ್ರು ಏಕೆ ಹಾರಾಟ ಮಾಡ್ಲಿಲ್ಲ ಎಂದು ಪ್ರಶ್ನಿಸಿದರು.
ಆಡಿಟರ್ ಟಿ.ಆರ್.ಆಂಜಿನಪ್ಪ ಪ್ರತಿಕ್ರಿಯಿಸಿ ಆಂಧ್ರದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಬೇಗ ಆಗುತ್ತದೆಯೆಂದರೆ ನಮ್ಮಲ್ಲಿ ಆಗದಿರಲು ಏನು ಕಾರಣ? ಇದರಲ್ಲಿ ಅಧಿಕಾರಿಗಳು, ರಾಜಕಾರಣಿಗಳಲ್ಲಿ ಇಚ್ಚಾಶಕ್ತಿ ಕೊರತೆಯಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದರು.
ಉದ್ಯಮಿ ಎಚ್.ಜಿ.ಚಂದ್ರಶೇಖರ್ ಮಾತನಾಡಿ ವಸಂತಾ ನರಸಾಪುರ ಮಾರ್ಗದಲ್ಲಿ ಹಾದು ಹೋಗುವ ತುಮಕೂರು-ದಾವಣಗೆರೆ ರೈಲ್ವೆ ಲೇನ್ ಬೇಗ ಮುಗಿದರೆ ಕೈಗಾರಿಕಾಭಿವೃದ್ಧಿಗೆ ಹೆಚ್ಚು ಸಹಕಾರಿಯಾಗುತ್ತದೆ. ವಾಣಿಜ್ಯ ರಾಜಧಾನಿ ಮುಂಬೈ, ಆಂಧ್ರ ಭಾಗಕ್ಕೂ ಇಲ್ಲಿ ನಿರ್ಮಾಣವಾಗುವ ಜಂಕ್ಷನ್ ಮೂಲಕ ಸರಕು ಸಾಗಾಣೆ ಸುಲಭವಾಗುತ್ತದೆ ಎಂದರು.
ಪ್ರತ್ಯೇಕ ಇಲಾಖೆ ತೆರೆಯುವುದು ಸೂಕ್ತ :
ಸಂಸದರು ಪ್ರತ್ರಿಕ್ರಿಯಿಸಿ ನಾವೆಲ್ಲ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಿ ಯೋಜನೆಗಳು, ಅನುದಾನ ತರಲು ಸಿದ್ಧರಿದ್ದೇವೆ. ಬಜೆಟ್ ಅಧಿವೇಶನದ ವೇಳೆ ರೈಲ್ವೇ ಯೋಜನೆಗಳ ಬಗ್ಗೆ ಕೇಂದ್ರ ಸಚಿವರೊಡನೆ ಮತ್ತೊಮ್ಮೆ ಸಮಾಲೋಚಿಸುತ್ತೇವೆ. ಆದರೆ ಅನುಷ್ಟಾನಕ್ಕೆ ಅಗತ್ಯವಾದ ಭೂಮಿ, ನೀರನ್ನು ತ್ವರಿತವಾಗಿ ಒದಗಿಸುವ ಕಾರ್ಯ ರಾಜ್ಯ ಸರಕಾರದಿಂದ ಆಗಬೇಕು.ಮಹಾರಾಷ್ಟ್ರದ ಮಾದರಿಯಲ್ಲಿ ಕೇಂದ್ರದ ಯೋಜನೆಗಳ ಅನುಷ್ಟಾನಕ್ಕೆ ಸಂಬಂಧಿಸಿದಂತೆಯೇ ಪ್ರತ್ಯೇಕ ಇಲಾಖೆ ತೆರೆಯುವುದು ಸೂಕ್ತ ಎಂದು ಅಭಿಪ್ರಾಯಿಸಿದರು.
ಜಿಎಸ್‍ಟಿ ಸಮರ್ಪಕ ಅನುಷ್ಟಾನವಿಲ್ಲ: ಜಿಎಸ್‍ಟಿ ತೆರಿಗೆ ಸ್ವಾಗತಾರ್ಹವಾದರೂ ಸಮರ್ಪಕ ಅನುಷ್ಟಾನವಾಗುತ್ತಿಲ್ಲ ಎಂದ ಆಡಿಟರ್ ಅಂಜಿನಪ್ಪ ಅವರು ದಿನಕ್ಕೊಂದರಂತೆ ಹೊರಡಿಸುತ್ತಿರುವ ನಿಯಮಗಳಿಂದ ತೆರಿಗೆದಾರರೇ ಗೊಂದಲಕ್ಕೊಳಗಾಗುತ್ತಿದ್ದಾರೆ. ತೆರಿಗೆ ವಿಷಯ ಮೊದಲು ತೆರಿಗೆ ಪಾವತಿದಾರರಿಗೆ ಅರ್ಥವಾಗಬೇಕು.ದಾಖಲೆ ಸಲ್ಲಿಕೆಯಲ್ಲಿ ಸಣ್ಣ ವ್ಯತ್ಯಾಸವಾದರೂ ಮ್ಯಾನ್ಯುಯಲ್ ಆಗಿ ತಿದ್ದಿಕೊಳ್ಳಲು ಸಾಧ್ಯವಿಲ್ಲ. ದೊಡ್ಡ ಮಟ್ಟದ ದಂಡ ಪಾವತಿಸಬೇಕಾಗುತ್ತದೆ. ಟಿಡಿಸಿಎಸ್, ಜಿಎಸ್‍ಟಿ ಹೆಸರಲ್ಲಿ ಸಣ್ಣ ವ್ಯಾಪಾರಸ್ಥರು ತೀವ್ರ ತೋಂದರೆ ಎದುರಿಸುತ್ತಿದ್ದಾರೆ. ಉದ್ದಿಮೆಗಳು ಎನ್‍ಪಿಎ ಸುಳಿಯಲ್ಲಿ ಸಿಕ್ಕಿ ಎಲ್ಲಾ ಸಾಲ ಸಿಗದಂತಾಗುತ್ತದೆ. ಜಿಎಸ್‍ಟಿಯಲ್ಲಿನ ತಪ್ಪುಗಳನ್ನು ಸರಿಪಡಿಸುವ ಅವಶ್ಯಕತೆ ಇದೆ. ಜಿಎಸ್‍ಟಿ ಪಾವತಿಯಲ್ಲಿ ಕರ್ನಾಟಕ ಇತರೆ ರಾಜ್ಯಗಳಿಗಿಂತ ಮುಂಚೂಣಿಯಲ್ಲಿದ್ದರೂ ನಮ್ಮ ಪಾಲಿನ ಜಿಎಸ್‍ಟಿ ಹಂಚಿಕೆ ನಮಗೆ ಸಿಗುತ್ತಿಲ್ಲ. ಎಂದು ವಾಸ್ತವಾಂಶ ವಿವರಿಸಿದರು.
ಮೂಲ ಸೌಕರ್ಯ ಕಲ್ಪಿಸಿ:
ಉದ್ಯಮಿ ಚಂದ್ರಶೇಖರ್ ಅವರು ಸಹ ದನಿಗೂಡಿಸಿ ಕೈಗಾರಿಕೋದ್ಯಮಿ, ವರ್ತಕರು ಉತ್ಪಾದನೆ, ಮಾರಾಟಕ್ಕಿಂತ ತೆರಿಗೆ ಕೆಲಸದಲ್ಲೇ ಹೆಚ್ಚು ಮಗ್ನರಾಗುವಂತಾಗಿದೆರು. ಇನ್ನೂ ಇಂಡಸ್ಟ್ರಿಯಲ್ ನೋಡ್ ವ್ಯಾಪ್ತಿಗೆ ಬಂದಿರುವ ವಸಂತಾ ನರಸಾಪುರ ಕೈಗಾರಿಕಾ ಪ್ರದೇಶ ರಸ್ತೆ, ನೀರು, ಬೀದಿದೀಪ, ಕಾರ್ಮಿಕರಿಗಾಗಿ ಆಸ್ಪತ್ರೆ ಮುಂತಾದ ಮೂಲಸೌಕರ್ಯಗಳಿಲ್ಲದೆ ಸೊರಗುತ್ತಿದ್ದು, ಮೂಲಭೂತ ಸಮಸ್ಯೆಗಳನ್ನು ಮೊದಲು ನಿವಾರಿಸಿಕೊಡಿ ಎಂದು ಸಂಸದರಲ್ಲಿ ಕೋರಿದರು.
ಜಿಲ್ಲೆಗೆ ಬರಲಿದೆ ಮೆಗಾ ಡೇರಿ, ವಿಮಾನನಿಲ್ದಾಣ, 2ನೇ ಎಚ್‍ಎಎಲ್ : ಜಿ.ಎಸ್.ಬಸವರಾಜ್
ಕೇಂದ್ರದಿಂದ ಹಲವು ಯೋಜನೆಗಳು ಜಿಲ್ಲೆಯಲ್ಲಿ ಅನುಷ್ಟಾನಗೊಳ್ಳುತ್ತಿದ್ದು, ವಸಂತಾ ನರಸಾಪುರದಲ್ಲಿ ಮೆಗಾ ಡೇರಿ ಸ್ಥಾಪನೆಗೆ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ. ಇನ್ನೂ ಕೆಲವೇ ತಿಂಗಳಲ್ಲಿ 600 ಎಕರೆ ವಿಸ್ತೀರ್ಣದ ಎಚ್‍ಎಎಲ್ ಲಘು ಉತ್ಪಾದನಾ ಘಟಕ ಬಿದರೆಹಳ್ಳ ಕಾವಲ್‍ನಲ್ಲಿ ಪ್ರಧಾನಿಯವರಿಂದ ಚಾಲನೆಗೊಳ್ಳಲಿದೆ. ಇದಕ್ಕೆ ಹೊಂದಿಕೊಂಡಂತೆಯೇ 2500 ಎಕರೆ ಪ್ರದೇಶದಲ್ಲಿ 2ನೇ ಎಚ್‍ಎಎಲ್ ಘಟಕವನ್ನು ಸ್ಥಾಪಿಸುವ ಕುರಿತು ಚಿಂತನೆ ನಡೆಯುತ್ತಿದೆ. ದಕ್ಷಿಣ ಭಾರತದಲ್ಲೇ ಪ್ರಮುಖವೆನಿಸಿದ ಮುಂಬೈ-ಬೆಂಗಳೂರು ಇಂಡಸ್ಟ್ರೀಯಲ್ ನೋಡ್ ವಸಂತಾ ನರಸಾಪುರದ ಮೂಲಕವೇ ಹಾದುಹೋಗಲಿದ್ದು, ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಹ ತಲೆ ಎತ್ತಲಿದೆ. ಶಿರಾದವರೆಗೆ ಕೈಗಾರಿಕೆಗಳು ವಿಸ್ತರಣೆಯಾಗಲಿವೆ. ಆಮೂಲಕ ವಿಪುಲ ಉದ್ಯೋಗವಕಾಶ, ಸಮಗ್ರ ಅಭಿವೃದ್ಧಿಯಾಗಲಿದೆ ಎಂದರು.
ಪ್ರತೀ ಮನೆ ಮನೆಗೂ ನಲ್ಲಿ ನೀರು ಕೊಡುತ್ತೇವೆ ಎನ್ನುತ್ತಿರುವ ಬಿಜೆಪಿ ಸರಕಾರ ಎಲ್ಲಿಂದ ನೀರು ಹರಿಸುತ್ತದೆ ಎಂದು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ವಿಡಿಯೋ ಸಂವಾದದ ಮೂಲಕ ಎತ್ತಿದ್ದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದರು ಅಟಲ್ ಭೂ ಜಲ ಯೋಜನೆಯಡಿ ಪ್ರತೀ ಹಳ್ಳಿಗೂ ಶುದ್ಧ ಕುಡಿಯುವ ನಿರೋದಗಿಸಲಾಗುವುದು. ಎತ್ತಿನಹೊಳೆ ಯೋಜನೆಗೆ ಕುಮಾರಧಾರ, ನೇತ್ರಾವತಿ ನದಿಯ ನೀರನ್ನು ಲಿಂಕ್ ಮಾಡುವ ಪ್ರಸ್ತಾಪ ಸರಕಾರದ ಮುಂದಿದೆ. ಇದರಿಂದ 16 ಟಿಎಂಸಿ ಹೆಚ್ಚುವರಿ ನೀರು ಲಭ್ಯವಾಗÀಲಿದ್ದು, ಭದ್ರಾ ಮೇಲ್ದಂಡೆ ಯೋಜನೆಯಡಿ, ಶಿರಾ, ಚಿ.ನಾ.ಹಳ್ಳಿ ಮಧುಗಿರಿ, ಪಾವಗಡ ಭಾಗಕ್ಕೂ ನೀರು ಹರಿಸಲಾಗುತ್ತದೆ. ಹಳ್ಳಿಗೊಂದು ಕೆರೆ ಅದಕ್ಕೆ ನದಿ ನೀರು ಯೋಜನೆ ಸಾಕಾರಕ್ಕೆ ಅಘನಾಶಿನಿ, ಸೂಫಾ, ಶರಾವತಿ ನದಿ ನೀರಿಗೂ ಯೋಜನೆ ರೂಪಿಸಲು ಸಿಎಂ ನೇತೃತ್ವದಲ್ಲಿ ರೂಪುರೇಶೆ ಸಭೆಗಳು ನಡೆದಿದೆ ಎಂದು ಮಾಹಿತಿ ನೀಡಿದರು.
ಕೈಗಾರಿಕಾ ಇಲಾಖೆಯಲ್ಲ, ರಿಯಲ್ ಎಸ್ಟೇಟ್ ಏಜೆನ್ಸಿ: ಕೆ.ಎನ್.ರಾಜಣ್ಣ
ಕೆ.ಎನ್.ರಾಜಣ್ಣ ಅವರು ಪ್ರತಿಕ್ರಿಯಿಸಿ ಕೈಗಾರಿಕೆಗಳನ್ನು ತರವುದಕ್ಕಿಂತ ಪ್ರಮುಖವಾಗಿ ಕೈಗಾರಿಕಾ ನಿಯಮಗಳಲ್ಲಿ ಬದಲಾವಣೆ ತರುವ ಅಗತ್ಯವಿದೆ. ಎಂದಾದರೂ ಕೈಗಾರಿಕಾ ಇಲಾಖೆ ಅಧಿಕಾರಿಗಳು ಉದ್ದಿಮೆದಾರರ ಬಳಿ ಹೋಗಿ ನಿಮ್ಮ ಸಮಸ್ಯೆ ಏನು? ಸರಕಾರದ ಮಟ್ಟದಲ್ಲಿ ಏನಾಗಬೇಕು ಎಂದು ಚರ್ಚಿಸಿದ್ದಾರೆಯೇ ಬರೀ ಫ್ಲಾಟ್ ಅಲಾಟ್‍ಮೆಂಟ್ ಹೆಸರಲ್ಲಿ ಹಣ ಮಾಡುವ ದಂಧೆಗಿಳಿದಿದ್ದಾರೆ. ಕೈಗಾರಿಕಾ ಇಲಾಖೆ ಸರಕಾರದ ರಿಯಲ್ ಎಸ್ಟೇಟ್ ಇಲಾಖೆ ಎಂಬಂತಾಗಿದೆ. ಕೈಗಾರಿಕಾ ನೋಡ್ ಆಗಿ ಅಭಿವೃದ್ಧಿ ಪಡಿಸುತ್ತೇವೆ ಎನ್ನುತ್ತಿರುವ ವಸಂತಾ ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಪ್ರವೇಶವೇ ಸರಿಯಾಗಿಲ್ಲ. 18 ಜಿಲ್ಲೆಗಳ ಪ್ರವೇಶ ಪಡೆಯುವ ತುಮಕೂರಿಗೂ ಇದೇ ಗತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇಶವನ್ನು ಆಳುವವರಿಗೆ ದೂರದೃಷ್ಟಿ ಇರಬೇಕು. ನೆಹರು, ಶಾಸ್ತ್ರೀಜಿ ಕೃಷಿ ಕೈಗಾರಿಕೆಗೆ ಪೂರಕವಾದ ಕ್ರಮ ಕೈಗೊಳ್ಳದಿದ್ದರೆ ದೇಶದ ಆರ್ಥಿಕ ವಿಕಾಸ ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿ ನೋಟ್ ಬ್ಯಾನ್ ಆದ್ಮೇಲೆ ಎಷ್ಟು ಹಳೆ ನೋಟುಗಳು ವಾಪಸ್ಸಾದ ಮಾಹಿತಿಯನ್ನೇ ಆರ್‍ಬಿಐ ಈವರೆಗೆ ಬಹಿರಂಗಪಡಿಸಿಲ್ಲ. ಬದಲಾಗಿ ಹೊಸ ನೋಟು ಮುದ್ರಣ್ಕಕೆ 25 ಸಾವಿರ ಕೋಟಿ ವೆಚ್ಚ ಮಾಡಿದ್ದಾರೆ. ಕೋವಿಡ್ ಪರಿಸ್ಥಿತಿಯಲ್ಲಿ ಎಲ್ಲಾ ವರ್ಗದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಬಡ-ಮಧ್ಯಮ ವರ್ಗದವರಿಗೆ ಅನುಕೂಲ ಕಲ್ಪಿಸದಿದ್ದರೆ ಆರ್ಥಿಕ ಚೇತರಿಕೆ, ಜಿಡಿಪಿ ಪ್ರಗತಿ ಅಸಾಧ್ಯವಾಗುತ್ತದೆ ಎಂದರು.
ಕೃಷಿಯಾಧರಿತ ಕೈಗಾರಿಕೆಯನ್ನು ಉತ್ತೇಜಿಸಿ : ಎಚ್.ಜಿ.ಚಂದ್ರಶೇಖರ್
ಕೃಷಿಯಾಧರಿತ ಕೈಗಾರಿಕೆಯನ್ನು ಉತ್ತೇಜಿಸುವ ಕಾರ್ಯ ಕೇಂದ್ರ ಬಜೆಟ್ ಮೂಲಕ ಆಗಬೇಕಿದೆ ಎಂದು ಉದ್ಯಮಿ ಎಚ್.ಜಿ.ಚಂದ್ರಶೇಖರ್ ಅವರು ಕೈಗಾರಿಕೆಗಳನ್ನು ಸ್ಥಾಪಿಸುವವರಿಗೆ, ಹಾಲಿ ಕೈಗಾರಿಕೆಗಳನ್ನು ಸ್ಥಾಪಿಸುವವರಿಗೆ ಉತ್ತೇಜಿಸುವ ಕ್ರಮಗಳನ್ನು ಕೈಗೊಳ್ಳದಿದ್ದರೆ ಆರ್ಥಿಕ ಪ್ರಗತಿಯ ಮೇಲೆ ಹೊಡೆತ ಬೀಳುತ್ತಿದೆ. ಜಿಲ್ಲೆಯ ಕೈಗಾರಿಕಾ ಪ್ರದೇಶಗಳಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಅವುಗಳನ್ನು ನಿವಾರಿಸಲು ಆದ್ಯತೆ ಕೊಡಬೇಕು ಎಂದು ಮನವಿ ಮಾಡಿದರು.
ಜಿಎಸ್‍ಟಿ ಗೊಂದಲ ಪರಿಹರಿಸಿ: ಟಿ.ಆರ್.ಆಂಜಿನಪ್ಪ
ಜಿಎಸ್‍ಟಿ, ಟಿಡಿಸಿಎಸ್ ಸೇರಿ ಹಲವು ವಿಷಯಗಳಲ್ಲಿ ತೆರಿಗೆದಾರರು ಗೊಂದಲದಲ್ಲಿ ಮುಳುಗಿದ್ದಾರೆ. ಎಷ್ಟೊ ಉದ್ದಿಮೆದಾರರಿಗೂ ಇದರ ಅರಿವಿಲ್ಲದೆ ಎನ್‍ಪಿಎ ಸುಳಿಯಲ್ಲಿ ಸಿಲುಕಿ ಉದ್ಯಮವನ್ನೇ ಮುಚ್ಚುವ ಹಂತ ಬಂದಿದೆ. ದಂಡವೊಂದೇ ಎಲ್ಲದಕ್ಕೂ ಪರಿಹಾರವಾಗದು. ಕೇಂದ್ರ ಹಣಕಾಸು ಸಚಿವರು ಜಿಎಸ್‍ಟಿ ಗೊಂದಲಗಳಿಗೆ ತೆರೆಎಳೆಯುವ ಪ್ರಯತ್ನ ಮಾಡಬೇಕು. ರಾಜ್ಯದ ಸಂಸದರು ಈ ಬಗ್ಗೆ ಧ್ವನಿ ಎತ್ತಬೇಕು ಎಂದು ಹಿರಿಯ ಲೆಕ್ಕ ಪರಿಶೋಧಕರಾದ ಟಿ.ಆರ್.ಆಂಜಿನಪ್ಪ ಒತ್ತಾಯಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
