ತುಮಕೂರು :
ಒಂದಲ್ಲಾ ಒಂದು ಕಾರಣಕ್ಕೆ ಕುರಿ ಮತ್ತು ಮೇಕೆಗಳ ಸಾವು ಜಿಲ್ಲೆಯಲ್ಲಿ ಹೆಚ್ಚುತ್ತಲೇ ಇವೆ. ಕಳೆದ ಐದಾರು ತಿಂಗಳಿನಿಂದ ನೂರಾರು ಕುರಿಗಳು ಮರಣ ಹೊಂದಿವೆ. ರೋಗರುಜಿನಗಳಿಗಿಂತ ಹೆಚ್ಚಾಗಿ ಆಕಸ್ಮಿಕವಾಗಿ ಮರಣ ಹೊಂದುವ ಪ್ರಕರಣಗಳೇ ಹೆಚ್ಚಾಗಿ ಕಂಡು ಬರುತ್ತಿವೆ.
ಚಿರತೆ ಹಾವಳಿಯಿಂದ ಕುರಿ ಮತ್ತು ಮೇಕೆಗಳು ನಿರಂತರವಾಗಿ ಬಲಿಯಾಗುತ್ತಲೇ ಇವೆ. ಇದರ ಜೊತೆಗೆ ರೋಗರುಜಿನಗಳು, ಆಕಸ್ಮಿಕ ಘಟನೆಯಿಂದ ಸಾವಪ್ಪುವ ಪ್ರಕರಣಗಳು ನಿರಂತರವಾಗಿವೆ. ಈಗ್ಗೆ ನಾಲ್ಕು ತಿಂಗಳ ಸಮಯದಲ್ಲಿ ವಸಂತನರಸಾಪುರ ಕೈಗಾರಿಕಾ ವಲಯದಲ್ಲಿ ಕಲುಷಿತ ನೀರು ಸೇವನೆಯಿಂದ 20ಕ್ಕೂ ಹೆಚ್ಚು ಕುರಿಗಳು ಒಂದೇ ದಿನ ಮೃತಪಟ್ಟಿದ್ದವು. ಕಳೆದ 2 ತಿಂಗಳ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ಸಾವನ್ನಪ್ಪುವ ಕುರಿಗಳ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ. ಡಿಸೆಂಬರ್ ಅಂತ್ಯದ ಸಮಯದಲ್ಲಿ ಶಿರಾ ತಾಲ್ಲೂಕು ಹುಲಿಕುಂಟೆ ಸಮೀಪದ ಓಬಳಾಪುರದಲ್ಲಿ 28 ಕುರಿಗಳು ಮರಣ ಹೊಂದಿದವು. ತುರುವೇಕೆರೆ ತಾಲ್ಲೂಕಿನ ಗೊಲ್ಲರಹಟ್ಟಿಯೊಂದರಲ್ಲಿ 22 ಕುರಿಗಳು ಅಸುನೀಗಿದವು. ಹೀಗೆ ಒಂದಲ್ಲ ಒಂದು ಕಡೆ ಮರಣ ಹೊಂದುವ ಜಾನುವಾರುಗಳ ಸಂಖ್ಯೆ ಹೆಚ್ಚುತ್ತಲೇ ಇದೆ.
ತುರುವೇಕೆರೆ ತಾಲ್ಲೂಕು ವಡವನಘಟ್ಟ ಸಮೀಪ ಕಳೆದ ಮೂರು ದಿನಗಳ ಹಿಂದೆ ಒಂದೇ ದಿನ 40 ಕುರಿಗಳು ಸಾವನ್ನಪ್ಪಿದವು. ಶಿರಾ ಕಡೆಯ ಅಲೆಮಾರಿ ಕುರಿಗಾಹಿಗಳು ಕುರಿಮಂದೆ ಬಿಟ್ಟಿದ್ದ ಸಮಯದಲ್ಲಿ ಒಂದೊಂದೇ ಕುರಿಗಳು ಅಸುನೀಗಿದವು. ಬಿಳಿ ಜಾಲಿಕಾಯಿಗಳನ್ನು ತಿಂದು ಈ ಸಾವು ಸಂಭವಿಸಿರಬಹುದೆಂದು ಪಶುವೈದ್ಯರು ತಿಳಿಸಿದ್ದರು. 2020ರ ಅಕ್ಟೋಬರ್ ತಿಂಗಳಿನಲ್ಲಿ ಶಿರಾ ತಾಲ್ಲೂಕು ಕುಂಟನಹಟ್ಟಿಯ ಕರಿಯಣ್ಣ ಎಂಬುವರಿಗೆ ಸೇರಿದ 50 ಕುರಿಗಳು ಕಲುಷಿತ ನೀರು ಸೇವನೆಯಿಂದ ಮರಣ ಹೊಂದಿದ್ದವು.
ಬೇಸಿಗೆಯ ದಿನ ಹತ್ತಿರ ಬರುತ್ತಿರುವ ಈ ದಿನಗಳಲ್ಲಿ ಈ ಜಾನುವಾರುಗಳು ಮರಣ ಹೊಂದುವ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಲಿದೆ. ಮುಖ್ಯವಾಗಿ ಚಿಗುರಿದ ಜೋಳದ ಮೇವು, ಬಿಳಿ ಜಾಲಿಕಾಯಿ, ಹರಳು ಗಿಡದ ಕುಡಿ ಇವೆಲ್ಲ ಕುರಿ ಮತ್ತು ಮೇಕೆಗಳ ಸಾವಿಗೆ ಹೆಚ್ಚು ಕಾರಣವಾಗುತ್ತಿವೆ. ಇತ್ತೀಚೆಗೆ ಚಿಗುರಿದ ಜೋಳದ ಕುಡಿ ತಿಂದೇ ಶಿರಾ ತಾಲ್ಲೂಕಿನಲ್ಲಿ ಕುರಿಗಳು ಮೃತಪಟ್ಟ ಪ್ರಕರಣ ವರದಿಯಾಗಿದೆ.
ತುಮಕೂರು, ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ ಜಿಲ್ಲೆಗಳಲ್ಲಿ ಹೆಚ್ಚಾಗಿ ಕುರಿ ಮತ್ತು ಮೇಕೆಗಳ ಸಾಕಾಣಿಕೆ ನಡೆಯುತ್ತದೆ. ಅದರಲ್ಲೂ ತುಮಕೂರು ಮತ್ತು ಚಿತ್ರದುರ್ಗ ಹೆಸರುವಾಸಿ. ಕೆಲವರು ಇದನ್ನೇ ಕಾಯಕ ಮಾಡಿಕೊಂಡಿದ್ದಾರೆ. ನೂರಾರು ಕುರಿಗಳನ್ನು ಸಾಕಿ ಬದುಕು ಕಂಡುಕೊಂಡಿರುವವರು ಇದ್ದಾರೆ. ಆಕಸ್ಮಿಕವಾಗಿ ಹೀಗೆ ಹತ್ತಾರು ಕುರಿಗಳು ಒಮ್ಮೆಗೆ ಸತ್ತು ಹೋದರೆ ಕುರಿಗಾಹಿಗಳು ಅತಂತ್ರ ಸ್ಥಿತಿಗೆ ಒಳಗಾಗುತ್ತಾರೆ. ಅಷ್ಟು ಕುರಿಗಳನ್ನು ಮತ್ತೆ ಸಾಕಲು ವರ್ಷಗಟ್ಟಲೆ ಸಮಯ ಬೇಕು.
ಇನ್ನೊಂದು ಆತಂಕದ ವಿಷಯವೆಂದರೆ, 2020ರ ಏಪ್ರಿಲ್ ತಿಂಗಳಿನಿಂದ ಸರ್ಕಾರದ ಅನುಗ್ರಹ ಯೋಜನೆ ಸ್ಥಗಿತಗೊಂಡಿದೆ. ಆಕಸ್ಮಿಕವಾಗಿ ಮರಣ ಹೊಂದಿದ ಸಂದರ್ಭದಲ್ಲಿ ಕುರಿಗಳ ಮಾಹಿತಿ ಆಧರಿಸಿ 2000 ರೂ.ಗಳಿಂದ 5000 ರೂ.ಗಳವರೆಗೆ ಪರಿಹಾರ ನೀಡುವ ಒಂದು ಉತ್ತಮ ಯೋಜನೆ ಇದ್ದು, ಅದನ್ನು ಸ್ಥಗಿತಗೊಳಿಸಿರುವುದು ಕುರಿಗಾಹಿಗಳಿಗೆ ದೊಡ್ಡ ಹೊಡೆತ ನೀಡಿದಂತಾಗಿದೆ. ಈ ಯೋಜನೆ ಮುಂದುವರೆಸಲು ವಿಪಕ್ಷಗಳ ಮುಖಂಡರಾದಿಯಾಗಿ ಸ್ವಪಕ್ಷಗಳ ನಾಯಕರು ಮಾಡಿದ ಮನವಿಗಳು ವಿಫಲವಾಗಿವೆ. ಇತ್ತೀಚೆಗಷ್ಟೇ ನಡೆದ ವಿಧಾನಸಭಾ ಅಧಿವೇಶನದಲ್ಲಿ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಈ ಬಗ್ಗೆ ಗಮನ ಸೆಳೆದಿದ್ದಾರೆ.
ಬಹುಶಃ ಈ ಯೋಜನೆಯಾದರೂ ಇದ್ದರೆ ಆಕಸ್ಮಿಕ ಮರಣ ಹೊಂದಿದ ಜಾನುವಾರುಗಳಿಗೆ ಶೇ.ಅರ್ಧದಷ್ಟು ಪರಿಹಾರವಾದರೂ ಸಿಗುತ್ತಿತ್ತು. ಈಗ ಸರ್ಕಾರದ ಪರಿಹಾರವೂ ಇಲ್ಲ, ಕುರಿ ಮೇಕೆ ಸಾಕಾಣಿಕೆಗೆ ಉತ್ತಮ ವ್ಯವಸ್ಥೆಯೂ ಇಲ್ಲ, ಪ್ರೋತ್ಸಾಹಕರ ವಾತಾವರಣವೂ ಇಲ್ಲದಂತಾಗಿ ಇದನ್ನೇ ನಂಬಿಕೊಂಡಿರುವವರು ಆ ವೃತ್ತಿಯನ್ನೇ ಬಿಡುವ ಸ್ಥಿತಿಗೆ ಬಂದಿದ್ದಾರೆ. ಸರ್ಕಾರಗಳು ಜಾನುವಾರುಗಳ ಪೋಷಣೆ, ಪ್ರೋತ್ಸಾಹದ ಬಗ್ಗೆ ಮಾತನಾಡುತ್ತವೆ. ವಾಸ್ತವವಾಗಿ ಯಾವ ಯೋಜನೆಗೆ ಯಾವ ಸಹಕಾರ ನೀಡಬೇಕು ಎನ್ನುವ ಕಡೆ ಗಮನ ಹರಿಸದೆ ಇರುವುದು ಇದನ್ನೇ ನಂಬಿಕೊಂಡಿರುವ ಕಸುಬುದಾರರಿಗೆ ಹಿನ್ನಡೆಯಾಗಲಿದೆ ಎಂಬ ಮಾತುಗಳಲ್ಲಿ ಅತಿಶಯೋಕ್ತಿಯೇನಿಲ್ಲ.
ಅನುಗ್ರಹ ಯೋಜನೆ ಸ್ಥಗಿತಗೊಂಡಿರುವುದಕ್ಕೆ ವಿವಿಧ ಸಂಘ ಸಂಸ್ಥೆಗಳು ವ್ಯಾಪಕ ಪ್ರತಿರೋಧ ವ್ಯಕ್ತಪಡಿಸುತ್ತಲೇ ಬಂದಿವೆ. ಈ ಬಗ್ಗೆ ಪತ್ರಿಕೆಯೊಂದಿಗೆ ಪ್ರತಿಕ್ರಿಯಿಸಿದ ಶಿರಾ ತಾಲ್ಲೂಕು ಶ್ರೀರಂಗ ಕುರಿ ಮತ್ತು ಉಣ್ಣೆ ಸಹಕಾರ ಸಂಘದ ತಾಲ್ಲೂಕು ಅಧ್ಯಕ್ಷ ಡಿ.ವೈ.ಗೋಪಾಲ್ ಅವರು ರಾಜ್ಯದ ಪಶು ಸಂಗೋಪನಾ ಸಚಿವರು, ನಿಗಮದ ಅಧ್ಯಕ್ಷರೂ ಸೇರಿದಂತೆ ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸುತ್ತಲೇ ಬಂದಿದ್ದೇವೆ. ಆದರೆ ಜಾನುವಾರುಗಳ ರಕ್ಷಣೆ, ಅನುಗ್ರಹ ಯೋಜನೆ ಮುಂದುವರೆಸುವ ಕುರಿತು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮುಂದಿನ ದಿನಗಳಲ್ಲಿ ಹೋರಾಟದ ರೂಪುರೇಶೆ ನಿರ್ಧರಿಸಲಾಗುವುದು ಎಂದಿದ್ದಾರೆ.
ಇದೀಗ ಬೇಸಿಗೆ ದಿನಗಳು ಕಾಲಿಡುತ್ತಿರುವುದರಿಂದ ಜಾನುವಾರುಗಳ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು. ಚಿಗುರು ಮೇವು ತಿಂದು ಸಾಯುವುದರ ಜೊತೆಗೆ ನೀಲಿ ನಾಲಿಗೆ ರೋಗ, ಸಿಡುಬು, ಕರುಳು ಬೇನೆ, ಸಣ್ಣ ರೋಗ, ಹಿರೇಬೇನೆ, ನೆಗಡಿ, ಚಪ್ಪೇರೋಗ ಮೊದಲಾದ ರೋಗಗಳು ಆವರಿಸಿದರೆ ವಾಸಿ ಮಾಡುವುದು ತುಂಬಾ ಕಷ್ಟ. ಗ್ರಾಮೀಣ ಸಮುದಾಯದ ಮೂಲೆಗಳಲ್ಲಿ ವಾಸಿಸುತ್ತಾ ಕುರಿ ಮೇಕೆ ಸಾಕಾಣಿಕೆ ಮಾಡುವವರು ವೈಜ್ಞಾನಿಕವಾಗಿ ಹೇಗೆ ಸಂರಕ್ಷಣೆ ಮಾಡಬೇಕು ಎಂಬುದರಿಂದ ದೂರವೇ ಉಳಿದಿದ್ದಾರೆ. ಸರ್ಕಾರಿ ಇಲಾಖೆಗಳು ಅವರಿರುವಲ್ಲಿಗೆ ಹೋಗಿ ಚಿಕಿತ್ಸೆ ನೀಡಿ ಬರುವಂತಹ ಕಾರ್ಯಕ್ಷಮತೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ.
ಚಿತ್ರದುರ್ಗ, ಹಿರಿಯೂರು, ಶಿರಾ ಭಾಗದ ಕುರಿಗಾಹಿಗಳು ಕಣ ಮುಗಿಯುತ್ತಲೇ ಬೇಸಿಗೆ ದಿನಗಳಲ್ಲಿ ಪರಸ್ಥಳಕ್ಕೆ ಕುರಿ ಹೊಡೆದುಕೊಂಡು ಹೋಗುತ್ತಾರೆ. ಈಗಾಗಲೇ ಶೇ.30 ರಷ್ಟು ಕುರಿಗಾಹಿಗಳು ವಲಸೆ ಹೊರಟಿದ್ದಾರೆ. ಮಳೆ ಬಂದು ವಾಪಸ್ ಬರುವುದರೊಳಗಾಗಿ ಎಷ್ಟು ಜಾನುವಾರುಗಳು ಮರಣ ಹೊಂದಿರುತ್ತವೋ ಹೇಳಿಲಿಕ್ಕಾಗದು. ರಸ್ತೆಯಲ್ಲಿ ಹೋಗುವಾಗ, ರಸ್ತೆ ಬದಿ ಮಲಗಿದ್ದಾಗ ವಾಹನಗಳ ಸಂಚಾರದಿಂದ ಸಾವನ್ನಪ್ಪುವ, ಅಪಘಾತಕ್ಕೀಡಾಗುವ, ಚಿರತೆಗೆ ಬಲಿಯಾಗುವ, ರೋಗರುಜಿನಗಳಿಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಬೇಸಿಗೆ ಸಮಯದಲ್ಲಿ ಕುರಿಗಾಹಿಗಳು ಹೆಚ್ಚು ಜಾಗ್ರತೆ ವಹಿಸಬೇಕಾದ ಅಗತ್ಯವಿದೆ.
ಕುರಿಗಾಹಿಗಳು ಎಚ್ಚರ ವಹಿಸಲಿ :
ಕಳೆದ ಎರಡು ತಿಂಗಳ ಅವಧಿಯಲ್ಲಿ ಶಿರಾ ಹಾಗೂ ತುರುವೇಕೆರೆ ತಾಲ್ಲೂಕಿನ ಕೆಲವು ಪ್ರದೇಶಗಳಲ್ಲಿ ಕುರಿಗಳು ಸಾವನ್ನಪ್ಪಿರುವುದು ಜೋಳದ ಚಿಗುರಿನಿಂದ ಹಾಗೂ ಬಿಳಿ ಜಾಲಿಕಾಯಿಯಿಂದ ಎಂಬುದು ತಿಳಿದು ಬಂದಿದೆ. ಬೇಸಿಗೆ ಕಾಲವಾದ್ದರಿಂದ ಕುರಿಗಾಹಿಗಳು ಹೆಚ್ಚು ಗಮನ ಹರಿಸಬೇಕು. ಎಲ್ಲೆಲ್ಲಿ ಜೋಳ ಚಿಗುರು ಹೊಡೆದಿರುವ ಪ್ರದೇಶ ಇದೆ ಹಾಗೂ ಬಿಳಿ ಜಾಲಿಕಾಯಿ ಇರುವ ಮರಗಳಿವೆ ಅಂತಹ ಕಡೆಗಳಲ್ಲಿ ಕುರಿ, ಮೇಕೆಗಳು ಹೋಗದಂತೆ ನೋಡಿಕೊಳ್ಳಬೇಕು. ಸಾಧ್ಯವಾದಷ್ಟು ಶುದ್ಧ ನೀರು ಕುಡಿಯುವಂತಹ ವ್ಯವಸ್ಥೆ ಮಾಡಬೇಕು.
-ಡಾ.ಕೆ.ನಾಗಣ್ಣ, ಸಹಾಯಕ ನಿರ್ದೇಶಕರು, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ.
ತುಮಕೂರು ಜಿಲ್ಲೆಯಲ್ಲಿ ಸುಮಾರು 17 ಲಕ್ಷ ಕುರಿ ಮತ್ತು ಮೇಕೆಗಳು ಇರುವ ಅಂದಾಜಿದೆ. ಹನ್ನೆರಡುವರೆ ಸಾವಿರ ಕುರಿಗಳು, ನಾಲ್ಕೂವರೆ ಸಾವಿರ ಮೇಕೆಗಳು ಇರುವ ಬಗ್ಗೆ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮೂಲಗಳು ತಿಳಿಸುತ್ತವೆ. ಇದು ಸರ್ಕಾರಿ ಅಂಕಿ ಅಂಶಗಳ ಮಾಹಿತಿ. ಆದರೆ ವಾಸ್ತವವಾಗಿ ಸುಮಾರು 20 ಲಕ್ಷ ಕುರಿ ಮತ್ತು ಮೇಕೆಗಳು ಇರಬಹುದೆಂಬ ಅಂದಾಜಿದೆ. ಕುರಿ ಮತ್ತು ಮೇಕೆ ಸಾಕಾಣಿಕೆ ಮಾಡುವವರಿಗೆ ಸರ್ಕಾರದ ಸೌಲಭ್ಯಗಳಿಲ್ಲ, ಸಮಾಜದಲ್ಲಿ ಪ್ರೋತ್ಸಾಹದಾಯಕ ವಾತಾವರಣವೂ ಇಲ್ಲ. ಆಕಸ್ಮಿಕವಾಗಿ ಕುರಿ, ಮೇಕೆಗಳು ಸತ್ತು ಹೋದರೆ ಅವರ ಬದುಕೇ ನರಕಕ್ಕೆ ದೂಡಿದಂತೆ. ಜಾನುವಾರುಗಳು ಸುರಕ್ಷಿತವಾಗಿರಲು ವೈಜ್ಞಾನಿಕ ತಿಳವಳಿಕೆ ಇಲ್ಲ. ಯಾವುದೋ ಮೂಲೆಯಲ್ಲಿ ಸಾಕಾಣಿಕೆ ಮಾಡುತ್ತಿರುವ ಪ್ರದೇಶಗಳಿಗೆ ಹೋಗಿ ಚಿಕಿತ್ಸೆ ನೀಡುವಂತಹ ವ್ಯವಸ್ಥೆಯೂ ಸರ್ಕಾರದ ಮಟ್ಟದಲ್ಲಿಲ್ಲ. ರೋಗ ವ್ಯಾಪಿಸಿ ಉಲ್ಬಣಿಸಿದಾಗ ಮಾತ್ರವೇ ಇಲಾಖೆಗಳು ಎಚ್ಚೆತ್ತುಕೊಳ್ಳುತ್ತವೆ. ಆ ವೇಳೆಗಾಗಲೇ ಸಾಕಷ್ಟು ಜಾನುವಾರುಗಳು ಮರಣ ಹೊಂದಿರುತ್ತವೆ.