ತುಮಕೂರು :
ತೈಲ ಬೆಲೆ ಹೆಚ್ಚಳ ಖಂಡಿಸಿ, ರೈತರು, ಜನಸಾಮಾನ್ಯರಿಗೆ ಮಾರಕವಾದ ಕೇಂದ್ರ ಸರಕಾರದ ಕೃಷಿ ಕಾಯ್ದೆಗಳ ವಾಪಸ್‍ಗೆ ಒತ್ತಾಯಿಸಿ ಇಂದು ಜಿಲ್ಲಾ ಕಾಂಗ್ರೆಸ್ ತುಮಕೂರು ನಗರ ಬ್ಲಾಕ್ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಡಿಸಿ ಅವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಅವರ ನೇತೃತ್ವದಲ್ಲಿ ತುಮಕೂರು ನಗರ ಬ್ಲಾಕ್ ಒಂದು ಮತ್ತು ಎರಡರ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರಕಾರದ ಕೃಷಿ ಕಾಯ್ದೆ ತಿದ್ದುಪಡಿ ವಿರುದ್ದ ಹಾಗೂ ತೈಲ ಬೆಲೆಗಳ ಹೆಚ್ಚಳದ ವಿರುದ್ದ ಎಐಸಿಸಿ ಮತ್ತು ಕೆಪಿಸಿಸಿ ನಿರ್ದೇಶನದಂತೆ ಪ್ರತಿಭಟನೆ ನಡೆಸಿದರು.
ಒಪ್ಪಂದ ಕೃಷಿ ಮೂಲಕ ರೈತರು ಕಾರ್ಪೋರೇಟ್ ಧಣಿಗಳ ಕಪಿಮುಷ್ಠಿಗೆ :
ಮಾಜಿ ಶಾಸಕ ಡಾ.ರಫೀಕ್ ಅಹಮದ್ ಮಾತನಾಡಿ,ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿಗೆ ಸಂಬಂಧಿಸಿದ ಮೂರು ತಿದ್ದುಪಡಿ ಕಾಯ್ದೆಗಳಿಂದ ರೈತರು ಮತ್ತು ಜನಸಾಮಾನ್ಯರಿಗೆ ಸಾಕಷ್ಟು ತೊಂದರೆಯಾಗಲಿದೆ.ಶಾಂತಿಯುತ ಪ್ರತಿಭಟನೆಗೆ ಸಂವಿಧಾನದಲ್ಲಿಯೇ ಅವಕಾಶ ನೀಡಿದ್ದರೂ ಸಹ,ಪ್ರತಿಭಟನಾನಿರತ ರೈತರು ದೆಹಲಿ ಪ್ರವೇಶಿಸಿದಂತೆ ತಡೆಗೋಡೆ ನಿರ್ಮಿಸಿ,ಈಗ ಮಾತುಕತೆಯ ಪ್ರಸ್ತಾಪ ಮುಂದಿಟ್ಟಿರುವುದು ನಿಜಕ್ಕೂ ನಾಚಿಕೇಗೇಡಿನ ಸಂಗತಿ.ಒಪ್ಪಂದ ಕೃಷಿ ಕಾಯ್ದೆ ಮೂಲಕ ರೈತರನ್ನು ಕಾರ್ಪೋರೇಟ್ ಧಣಿಗಳ ಕಪಿಮುಷ್ಠಿಗೆ ಸೇರಿಸುವ ಕೆಲಸವನ್ನು ಪ್ರಧಾನಿ ಮಾಡುತ್ತಿದ್ದಾರೆ. ಇದರ ವಿರುದ್ದ ತಾಲೂಕು, ಹೋಬಳಿ ಮಟ್ಟದಲ್ಲಿಯೂ ಪ್ರತಿಭಟನೆಯನ್ನು ಕಾಂಗ್ರೆಸ್ ಪಕ್ಷ ಹಮ್ಮಿಕೊಳ್ಳಲಿದೆ ಎಂದರು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಿರಂತರವಾಗಿ ಇಂಧನ ಬೆಲೆಗಳ ಹೆಚ್ಚಳವಾಗುತ್ತಿದೆ. ಇದರ ಪರಿಣಾಮ ಜನಸಾಮಾನ್ಯರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.ದಿನ ನಿತ್ಯದ ಅಕ್ಕಿ, ಬೇಳೆ ಬೆಲ್ಲ, ಅಡುಗೆ ಎಣ್ಣೆ ಸೇರಿದಂತೆ ಎಲ್ಲವೂ ಗಗನಮುಖಿಯಾಗಿವೆ. ಕೂಡಲೇ ಕೇಂದ್ರ ಸರಕಾರ ತೈಲಬೆಲೆ ಹೆಚ್ಚಳಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.
ಹೋರಾಟಗಾರರನ್ನು ಅವಮಾನಿಸದಿರಿ:
ತುಮಕೂರು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್ ಮಾತನಾಡಿ,ಈ ದೇಶಕ್ಕೆ ಸ್ವಾತಂತ್ರ ಲಭಿಸಿದ್ದು, ಆಂದೋಲನದಿಂದಲೇ,ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದ್ದು ಸಹ ಹೋರಾಟದಿಂದಲೇ,ಆದರೆ ಅದನ್ನು ಮರೆತು ಪ್ರಧಾನಿ ನರೇಂದ್ರಮೋದಿ,ಹೋರಾಟಗಾರರನ್ನು ದೇಶದ್ರೋಹಿಗಳು,ಖಲಿಸ್ಥಾನಿಗಳು ಎಂದು ಕರೆದಿರುವುದು ಇಡೀ ದೇಶದ ಜನತೆಗೆ ಮಾಡಿದ ಅಪಮಾನ.ಇದರ ವಿರುದ್ದ ನಾವೆಲ್ಲರೂ ಹೋರಾಡಬೇಕಾಗಿದೆ ಎಂದರು.
ಹೋರಾಟ ನಿರಂತರ:
ಪಾಲಿಕೆ ಸದಸ್ಯ ಜೆ.ಕುಮಾರ್ ಮಾತನಾಡಿ ,ದೇಶದ ಮೊದಲ ಪ್ರಧಾನಿಯಿಂದ, ಡಾ.ಮನಮೋಹನ್ ಸಿಂಗ್ ವರಗೆ ಅಧಿಕಾರ ನಡೆಸಿದ ಯಾವುದೇ ಪ್ರಧಾನಿ ದೇಶಕ್ಕೆ ಅನ್ನನೀಡುವ ರೈತರನ್ನು ಇಷ್ಟು ನಿಷ್ಟುರವಾಗಿ ನಡೆಸಿಕೊಂಡಿರಲಿಲ್ಲ.ಕಳೆದ 80 ದಿನಗಳಿಂದ ರಾಜಧಾನಿ ಗಡಿಯಲ್ಲಿ ಪ್ರತಿಭಟನಾನಿರತರಲ್ಲಿ ನೂರಾರು ಜನ ಸಾವನ್ನಪ್ಪಿದರೂ ಕನಿಷ್ಠ ಸೌಜನ್ಯ ತೋರದ ಸರಕಾರ, ರೈತರ ಬರುವ ಹಾದಿಗೆ ಕಲ್ಲು,ಮುಳ್ಳು, ಮಳೆಗಳನ್ನು ಹಾಕಿ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡಿ,ವಿದೇಶದಲ್ಲಿ ದೇಶದ ಮಾನ ಹರಾಜಾದ ನಂತರ ಮಾತುಕತೆಯ ನಾಟಕವಾಡುತ್ತಿರುವುದು ದುರಂತದ ಸಂಗತಿ. ಇದರ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ,ದೇಶದ ಪ್ರಧಾನಿಯಾದವರು ಜನರನ್ನು ರಕ್ಷಿಸುವ ನಿಟ್ಟಿನಲ್ಲಿ ಗಡಿಗಳಲ್ಲಿ ನಿರ್ಮಿಸಬೇಕಾದ ಮುಳ್ಳುತಂತಿ ಬೇಲಿಯನ್ನು ರೈತರು ದೆಹಲಿಗೆ ಬರದಂತೆ ನಿರ್ಮಿಸಿರುವುದನ್ನು ನೋಡಿದರೆ, ರೈತರ ಬಗ್ಗೆ ಇವರ ನಿಲುವು ಎಂತಹದ್ದು ಎಂಬುದು ತಿಳಿಯುತ್ತದೆ.ರೈತರ ಕಣ್ಣೀರು ನಿಮಗೆ ಶಾಪವಾಗಿ ಪರಿಣಮಿಸಲಿದೆ ಎಂದು ಎಚ್ಚರಿಕೆ ನೀಡಿದ ಅವರು, ತೈಲಬೆಲೆ ಹೆಚ್ಚಳದಿಂದ ಜನಸಾಮಾನ್ಯರ ಬದುಕು ಮೂರಾಬಟ್ಟೆಯಾಗಿದೆ.ಮೊದಲೇ ಕೋರೋನದಿಂದ ಉದ್ಯೋಗ ಕಳೆದುಕೊಂಡು ನೊಂದಿರುವ ಜನರ ಮೇಲೆ ಇಂಧನ ಬೆಲೆಗಳ ಹೆಚ್ಚಳ ಮಾಡಿ ಮತ್ತಷ್ಟು ಹೊರ ಹೊರಿಸ ಲಾಗಿದೆ.ಇದರ ವಿರುದ್ದ ಕಾಂಗ್ರೆಸ್ ಪಕ್ಷದ ಸಂಸದರು, ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸಲಿದೆ ಎಂದರು.
ಮಾಜಿ ಶಾಸಕ ಎಸ.ಷಫಿ ಅಹಮದ್ ಸೇರಿದಂತೆ ಹಲವರು ಪ್ರತಿಭಟನೆ ನಿರತ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿಭಟನೆಯಲ್ಲಿ ಪಾಲಿಕೆ ಮೇಯರ್ ಫರೀಧಾಬೇಗಂ,ಸದಸ್ಯರಾದ ಪ್ರಭಾವತಿ ಸುಧೀಶ್ವರ್,ಮಹೇಶ್,ರೂಪಶ್ರೀ ಶೆಟ್ಟಾಳಯ್ಯ, ನೂರುನ್ನಿಸಾ ಭಾನು,ಷಿರಾಜ್ ಅಹಮದ್,ಶರೀಫ್, ನಯಾಜ್,ನಾಸಿರ್ ಭಾನು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೆಹಬೂಬ್ ಪಾಷ,ಆಟೋರಾಜು ಮುಖಂಡರಾದ ಜಾಜ್,ಗೀತಮ್ಮ, ಚಿಕ್ಕವೆಂಕ ಟಯ್ಯ,ಜ್ವಾಲಮಾಲಾ ರಾಜಣ್ಣ, ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
