ತುಮಕೂರು :
ಪಂಚಮಸಾಲಿ ಲಿಂಗಾಯತರನ್ನು 2ಎ ವರ್ಗಕ್ಕೆ ಸೇರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಹರಿಹರೇಶ್ವರ ಮಠದ ವಚನಾನಂದ ಸ್ವಾಮೀಜಿ ಹಾಗೂ ಕೂಡಲಸಂಗಮ ಮಠದ ಜಯಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಕೂಡಲಸಂಗಮದಿಂದ ಬೆಂಗಳೂರಿಗೆ ಹೊರಟಿರುವ ಪಾದಯಾತ್ರೆ ಬುಧವಾರ ತುಮಕೂರಿಗೆ ಆಗಮಿಸಿತು.
ಸಂಜೆ ನಗರದ ಖಾಸಗಿ ಹೋಟೆಲ್‍ನಲ್ಲಿ ಸ್ವಾಮೀಜಿಗಳ ಸಮ್ಮುಖದಲ್ಲಿ ಸಭೆ ಸೇರಿದ ಪಂಚಮಸಾಲಿ ಲಿಂಗಯತ ಸಮುದಾಯದ ಸಚಿವರು, ಶಾಸಕರು, ಮುಖಂಡರು ಬೆಂಗಳೂರಿನಲ್ಲಿ ಯಾವ ಸ್ವರೂಪದ ಹೋರಾಟ ನಡೆಸಬೇಕು ಎಂದು ಚರ್ಚೆ ನಡೆಸಿದರು.
ಸ್ವಾಮೀಜಿಗಳೊಂದಿಗೆ ಸಚಿವರಾದ ಮುರುಗೇಶ್ ನಿರಾಣಿ, ಸಿ.ಸಿ.ಪಾಟೀಲ್, ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್, ಲಕ್ಷ್ಮೀ ಹೆಬ್ಬಾಳ್ಕರ್, ಕಳಕಪ್ಪ ಬಂಡಿ, ಅರುಣ್‍ಕುಮಾರ್ ಪೂಜಾರ್, ಮಾಜಿ ಶಾಸಕರಾದ ರವಿಕಾಂತ ಪಾಟೀಲ್, ವಿಜಯಾನಂದ ಕಾಶಪ್ಪನವರ್, ರಾಜ್ಯ ಪಂಚಮಸಾಲಿ ಸಂಘದ ಅಧ್ಯಕ್ಷ ನಾಗನಗೌಡ, ಮಾಜಿ ಅಧ್ಯಕ್ಷ ಬಸವರಾಜ ದಿಂಡೂರ ಮತ್ತಿತರ ಮುಖಂಡರು ಸಭೆ ನಡೆಸಿ ತೀರ್ಮಾನಿಸಿದರು.
ರಾಜ್ಯದ ಪಂಚಮಸಾಲಿ ಲಿಂಗಾಯತರನ್ನು 2ಎ ವರ್ಗಕ್ಕೆ ಸೇರಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ತರಲು ಈ ಹೋರಾಟ ನಡೆದಿದೆ. ಕೂಡಲಸಂಗಮ ಮಠದ ಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಹರಿಹರೇಶ್ವರ ಮಠದ ವಚನಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಜನವರಿ 14ರ ಸಂಕ್ರಾಂತಿಯಂದು ಕೂಡಲಸಂಗಮದಿಂದ ಆರಂಭವಾದ ಪಾದಯಾತ್ರೆ ಬುಧವಾರ ಸಂಜೆ ತುಮಕೂರು ಬಳಿಯ ಸೀಬಿ ತಲುಪಿತು. ರಾತ್ರಿ ಸೀಬಿಯಲ್ಲಿ ವಾಸ್ತವ್ಯ ಹೂಡಿ, ಗುರುವಾರ ಬೆಳಿಗ್ಗೆ ಬೆಂಗಳೂರಿನತ್ತ ತೆರಳಲಿದ್ದಾರೆ.
ಪಾದಯಾತ್ರೆ ತಂಡ ಈ ತಿಂಗಳ 18ರಂದು ಬೆಂಗಳೂರು ತಲುಪುವ ಗುರಿ ಹೊಂದಿದೆ. ಬೆಂಗಳೂರಿನಲ್ಲಿ ಪಂಚಮಸಾಲಿ ಸಮುದಾಯದವರ ಬೃಹತ್ ಸಮಾವೇಶ ನಡೆಸಿ ಬೇಡಿಕೆ ಈಡೇರಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹಾಕಲು ತೀರ್ಮಾನಿಸಲಾಗಿದೆ.