ತುಮಕೂರು :
ಕಾಂಗ್ರೆಸ್ ಪಕ್ಷ ಬೌದ್ಧಿಕ ದಿವಾಳಿತನಕ್ಕೆ ಒಳಗಾಗಿದ್ದು, ಅದೊಂದು ಮುಳುಗುವ ಹಡಗಾಗಿದೆ. ಬಿಜೆಪಿ ಓಡುವ ಹಡಗಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.
ನಗರದ ಸಿದ್ಧಿ ವಿನಾಯಕ ಸಮುದಾಯ ಭವನದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಆಯೋಜಿಸಿದ್ದ ವಲಯ ಮಟ್ಟದ ವಿಷಯ ಪ್ರಮುಖರ ವರ್ಗದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಸಂದರ್ಭದಲ್ಲಿ ಇದ್ದ ಕಾಂಗ್ರೆಸ್ ಪಕ್ಷವೇ ಬೇರೆ, ಈಗಿರುವ ಕಾಂಗ್ರೆಸ್ ಪಕ್ಷವೇ ಬೇರೆಯಾಗಿದೆ. ಅಂದಿನವರಲ್ಲಿ ರಾಷ್ಟ್ರಪ್ರೇಮ ಇತ್ತು. ಇಂದಿನವರಲ್ಲಿ ರಾಷ್ಟ್ರ ವಿರೋಧಿ ಧೋರಣೆ ತುಂಬಿಕೊಂಡಿದೆ. ಇದರ ಪರಿಣಾಮವಾಗಿ ರಾಷ್ಟ್ರದ ಎಲ್ಲ ಕಡೆ ಕಾಂಗ್ರೆಸ್ ಮುಳುಗುವ ಹಡಗಾಗಿದೆ ಎಂದು ದೂಷಿಸಿದರು.
ಕಾಂಗ್ರೆಸ್ನವರಲ್ಲಿ ಸಿದ್ಧಾಂತ ಮತ್ತು ವಿಚಾರಗಳಿಗಿಂತ ವ್ಯಕ್ತಿ ಪೂಜೆಗೆ ಹೆಚ್ಚು ಮನ್ನಣೆ ಕೊಡಲಾಗಿದೆ. ಆದರೆ ಭಾರತೀಯ ಜನತಾ ಪಕ್ಷ ಎಂದಿಗೂ ವ್ಯಕ್ತಿಪೂಜೆಗೆ ಅವಕಾಶ ನೀಡಿಲ್ಲ. ವಿಚಾರ ಧಾರೆಯನ್ನು ಮುಂದಿಟ್ಟುಕೊಂಡು ಬಂದ ಪರಿಣಾಮವಾಗಿಯೇ ಇಂದು ರಾಷ್ಟ್ರದ ಉದ್ದಗಲಕ್ಕೆ ಪಕ್ಷವನ್ನು ವಿಸ್ತಾರಗೊಳಿಸಲು ಸಾಧ್ಯವಾಗಿದೆ. ಇಂದು ಕಾಂಗ್ರೆಸ್ ಪರಿಸ್ಥಿತಿ ಎಂತಹ ಹೀನಾಯ ಸ್ಥಿತಿಯಲ್ಲಿದೆ ಎಂದರೆ ಲೋಕಸಭೆಯಲ್ಲಿ ವಿರೋಧ ಪಕ್ಷವಾಗಿಯೂ ಕುಳಿತುಕೊಳ್ಳುವಂತಹ ಯೋಗ್ಯತೆಯನ್ನು ಕಳೆದುಕೊಂಡಿದೆ ಎಂದರು.
ಅಧಿಕಾರಕ್ಕೆ ಅಂಟಿಕೊಂಡ ಕಾಂಗ್ರೆಸ್ ಪಕ್ಷವು ವಿಚಾರಧಾರೆಯನ್ನು ಬೆಳೆಸಲಿಲ್ಲ. ಕಾರ್ಯಕರ್ತರನ್ನು ಬೆಳೆಸಲಿಲ್ಲ. ಭಾರತೀಯ ಜನತಾ ಪಕ್ಷವು ಸಿದ್ಧಾಂತ ಮತ್ತು ವಿಚಾರಧಾರೆಯನ್ನು ಮುಂದಿಟ್ಟುಕೊಂಡು ಕಾರ್ಯಕರ್ತರನ್ನು ಬೆಳೆಸುತ್ತಾ ಹೋಯಿತು. ಅದರ ಪ್ರತಿಫಲವನ್ನು ಈಗ ಕಾಣುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಮತಗಟ್ಟೆ ಕಾರ್ಯವನ್ನು ವಿಸ್ತರಿಸುವುದೇ ನಮ್ಮ ಗುರಿಯಾಗಿದೆ. ಆ ನಿಟ್ಟಿನಲ್ಲಿ ಎಲ್ಲ ಕಡೆ ಅಭ್ಯಾಸ ವರ್ಗಗಳನ್ನು, ಶಿಬಿರಗಳನ್ನು ಆಯೋಜಿಸುತ್ತಾ ಬರಲಾಗಿದೆ. ಜನಸಂಘದಿಂದ ಭಾರತೀಯ ಜನತಾ ಪಾರ್ಟಿಯವರೆಗಿನ ಹಾದಿಯನ್ನು ಗಮನಿಸಿದರೆ ದಾರಿಯಲ್ಲಿ ಇವೆರಡರ ನಡುವೆ ವ್ಯತ್ಯಾಸವಾಗಿರಬಹುದು. ಆದರೆ ಗುರಿಯಲ್ಲಿ ವ್ಯತ್ಯಾಸವಾಗಿಲ್ಲ. ಈ ಗುರಿಯನ್ನು ಇಟ್ಟುಕೊಂಡೇ ಕಾರ್ಯಕರ್ತರನ್ನು ಬೆಳೆಸಬೇಕಿದೆ ಎಂದರು.
ವಿಶ್ವಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುತಿಸಲ್ಪಟ್ಟಿದ್ದಾರೆ. ಜಗತ್ತಿನ ನಾಯಕರಾಗಿ ಮೋದಿ ನಿಂತಿದ್ದಾರೆ. ಕಪ್ಪು ಹಣ ನಿಯಂತ್ರಣವಾಗಿದೆ. ಸರ್ಕಾರದ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲ. ಮಹಿಳೆಯರ ಅಕೌಂಟ್ಗೆ 500 ರೂ., ರೈತರ ಖಾತೆಗೆ 10,000 ರೂ.ಗಳನ್ನು ಹಾಕಿ ನುಡಿದಂತೆ ನಡೆಯುವ ಪಕ್ಷವಾಗಿದೆ ಎಂದರು.
ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠ ರಾಜ್ಯ ಸಂಚಾಲಕ ಶ್ರೀಕಾಂತ್ ಕುಲಕರ್ಣಿ ಮಾತನಾಡಿ, ಕೇವಲ ಅಧಿಕಾರದ ಗುರಿ ಬಿಜೆಪಿಗಿಲ್ಲ. ಆದರೆ ಅಧಿಕಾರ ಒಂದು ಸಾಧನ. ಅದಕ್ಕಾಗಿ ಅಭ್ಯಾಸ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ರಾಷ್ಟ್ರದಲ್ಲಿ ಬಿಜೆಪಿ ಇಂದು ಬಹುದೊಡ್ಡದಾಗಿ ಬೆಳೆದಿದೆ. ಯಾವ ಬಿರುಗಾಳಿಯೂ ಈ ವೃಕ್ಷವನ್ನು ಬಗ್ಗಿಸಲು ಆಗುವುದಿಲ್ಲ. ಕಾರ್ಯಕರ್ತರನ್ನು ಸರಿಯಾದ ದಿಕ್ಕಿನಲ್ಲಿ ಬೆಳೆಸಿದರೆ ಅವರೆಲ್ಲ ಬೇರುಗಳಾಗುತ್ತಾರೆ. ಅಂತಹ ಬೇರುಗಳನ್ನು ಹುಟ್ಟು ಹಾಕುವುದೇ ಈ ಅಭ್ಯಾಸ ವರ್ಗದ ಗುರಿ ಎಂದರು.
ವಿ.ಪ. ಮಾಜಿ ಸದಸ್ಯ ಆರ್.ಕೆ.ಸಿದ್ದರಾಮಣ್ಣ ಸ್ವಾಗತಿಸಿದರು. ಸಮಾರಂಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಸುರೇಶ್ಗೌಡ, ತುಮಕೂರು ಶಾಸಕ ಜಿ.ಬಿ.ಜ್ಯೋತಿಗಣೇಶ್, ರಾಜ್ಯ ಮಟ್ಟದ ಮುಖಂಡರುಗಳಾದ ಎನ್.ರವಿಕುಮಾರ್, ಸಿದ್ದರಾಜು, ರಾಜಶೇಖರ ನಾಡಮೂರ್ತಿ ಸೇರಿದಂತೆ ವಿವಿಧ ಮುಖಂಡರುಗಳು ಪಾಲ್ಗೊಂಡಿದ್ದರು.
ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು :
ಆರ್.ಆರ್.ನಗರ ಹಾಗೂ ಶಿರಾ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಶಿರಾದಲ್ಲಿ 25 ಸಾವಿರ ಹಾಗೂ ಆರ್.ಆರ್.ನಗರದಲ್ಲಿ 40 ಸಾವಿರ ಮತಗಳ ಅಂತರದಿಂದ ಗೆಲುವು ಸಾಧ್ಯವಿದೆ. ಬಿಜೆಪಿಯಲ್ಲಿ ಒಟ್ಟಾಗಿ ಚುನಾವಣೆ ಎದುರಿಸಿದ್ದೇವೆ. ಇಲ್ಲಿ ಸಾಮೂಹಿಕ ಪ್ರಯತ್ನವಿದೆ. ವಿಧಾನಸಭೆ ಮಾತ್ರವಲ್ಲದೆ, ಇತರೆ ಕ್ಷೇತ್ರಗಳ ನಾಲ್ಕು ಸ್ಥಾನಗಳನ್ನೂ ಬಿಜೆಪಿ ಪಡೆಯಲಿದೆ. ಕಾಂಗ್ರೆಸ್ನಲ್ಲಿ ಒಳ ಜಗಳವೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಆ ಪಕ್ಷದ ಬೀದಿ ಕಾಳಗ ಹೊರಬರಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
