ತುಮಕೂರು :
ನಗರದ 26ನೇ ವಾರ್ಡ್‍ನ ವಿದ್ಯಾಮಾನಸ ಶಾಲೆ ಬಳಿ ಕಸ ಸುರಿದು ಅನೈರ್ಮಲ್ಯ ತಾಣವಾಗಿದ್ದ ಸ್ಥಳಕ್ಕೆ ಮೇಯರ್ ಫರೀದಾಬೇಗಂ ಭೇಟಿ ನೀಡಿ ಪರಿಶೀಲಿಸಿದರಲ್ಲದೇ, ಶುಕ್ರವಾರದೊಳಗೆ ಬಫರ್‍ಜೋನ್ ಹೊರತಾದ ಪ್ರದೇಶದಲ್ಲಿ ಕಸ ತೆರವು ಮಾಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ರೈಲ್ವೆ ಹಳಿಗೆ ಹೊಂದಿಕೊಂಡಂತಿರುವ ಶಾಲೆಗೆ ಲಗತ್ತಾದ ಖಾಸಗಿ ಪ್ರದೇಶದಲ್ಲಿ ಕಸ ತಂದು ಸುರಿಯುತ್ತಿರುವ ಬಗ್ಗೆ ಪ್ರಜಾಪ್ರಗತಿ ಪತ್ರಿಕೆಯಲ್ಲಿ ‘ಶಾಲಾ ಆವರಣದಲ್ಲಿ ಸುರಿಯುತ್ತಿರುವ ರಾಶಿ ರಾಶಿ ಕಸ’ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ವರದಿ ಆಧರಿಸಿ ಶೆಟ್ಟಿಹಳ್ಳಿ ರೈಲ್ವೇ ಗೇಟ್ ಶಾಲೆ ಬಳಿ ಗುರುವಾರ ಮಧ್ಯಾಹ್ನ ಭೇಟಿಕೊಟ್ಟ ಮೇಯರ್‍ಫರೀದಾಬೇಗಂ ಅವರು ಅಲ್ಲಿನ ರೈಲ್ವೇ ಲೇನ್ ಬಫರ್‍ಜೋನ್ ಒಳಗಿನ ಕಸ ತೆಗೆಯಲು ಪಾಲಿಕೆಯವರಿಗೆ ಸಾಧ್ಯವಿಲ್ಲ. ಜೆಸಿಬಿಯಿಂದ ಕಸ ಎತ್ತಲು ರೈಲ್ವೆ ಇಲಾಖೆಯವರು ಅನುಮತಿಸುವುದಿಲ್ಲ. ಈ ಕಾರಣಕ್ಕೆ ಅಲ್ಲಿನ ಕಸವನ್ನು ರೈಲ್ವೆ ಇಲಾಖೆಯವರೇ ತೆರವುಗೊಳಿಸುವಂತೆ ಪತ್ರ ಬರೆಯುವುದಾಗಿ ಹೇಳಿ, ಬಫರ್‍ಜೋನ್ ಆಚೆಗಿನ ಖಾಸಗಿ ಸ್ಥಳದಲ್ಲಿ ಶೇಖರಣೆಯಾಗಿರುವ ಕಸವನ್ನು ತೆರವುಗೊಳಿಸಲು ಪಾಲಿಕೆ ಆರೋಗ್ಯಾಧಿಕಾರಿಗಳು, ಮೇಲ್ವಿಚಾರಕರಿಗೆ ಸೂಚಿಸಿದರು.
ಖಾಸಗಿ ಸ್ವತ್ತಿನ ಮಾಲೀಕರಿಗೂ ನೋಟಿಸ್: ಕಸ ಹಾಕುತ್ತಿರುವ ಸ್ಥಳ ಖಾಸಗಿಯವರಿಗೆ ಸೇರಿದ್ದು, ಸ್ಥಳೀಯರು ಯಾರು ಕಸ ಹಾಕುತ್ತಿಲ್ಲ. ಹೊರಗಿನಿಂದ ಮೂಟೆಗಟ್ಟಲೇ ತಂದು ಕಸ ಸುರಿದಿದ್ದು, ಸ್ಥಳ ಪರಿಶೀಲಿಸಿದಾಗ ಮದ್ಯದ ಬಾಟೆಲ್‍ಗಳು ಪತ್ತೆಯಾಗಿದೆ. ಈ ಸಂಬಂಧ ಸಮೀಪದ ಮದ್ಯದಂಗಡಿಗೆ ಎಚ್ಚರಿಕೆ ನೋಟಿಸ್ ನೀಡಲು ಕ್ರಮ ವಹಿಸಿದ್ದು, ಖಾಸಗಿ ಸ್ವತ್ತಿನ ಮಾಲೀಕರಿಗೂ ತಮ್ಮ ನಿವೇಶನ ಕಸದ ಬ್ಲಾಕ್ ಸ್ಪಾಟ್ ಆಗದಂತೆ ಸ್ವಚ್ಛವಾಗಿಸಿಕೊಂಡು ಕಾಂಪೌಂಡ್ ಹಾಕಿಕೊಳ್ಳಬೇಕೆಂದು ನೋಟಿಸ್ ನೀಡಿ ಸೂಚಿಸಲಾಗುವುದು ಎಂದರಲ್ಲದೇ, ಶಾಲೆಯಿಂದಲೂ ಪೇಪರ್‍ಗಳನ್ನು ಅಲ್ಲಿಯೇ ಬಿಸಾಡುತ್ತಿದ್ದು, ಅವರಿಗೂ ಸೂಚನೆಗಳನ್ನು ಕೊಡಲಾಗಿದೆ ಎಂದು ಹೇಳಿದರು.
ಯಾವುದೇ ಸುರಕ್ಷತೆಯಿಲ್ಲದೆ ರೈಲ್ವೆ ಹಳಿಯನ್ನೇ ದಾಟಿಕೊಂಡು ಮಕ್ಕಳು ಶಾಲೆಗೆ ಬರುತ್ತಿದ್ದು, ಇದನ್ನು ತಪ್ಪಿಸುವಂತೆಯೂ ಶಾಲಾ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಪ್ರಜಾಪ್ರಗತಿಗೆ ಪ್ರತಿಕ್ರಿಯಿಸಿದ ಮೇಯರ್ ಅವರು ತರಕಾರಿ ತ್ಯಾಜ್ಯ ತಂದು ಸುರಿಯುತ್ತಿದ್ದಾರೆಯೇ ಎಂಬುದನ್ನು ಪತ್ತೆಹಚ್ಚುವಂತೆ ಸೂಚಿಸಿದ್ದಾನೆ. ಕಸಹಾಕುವ ಸ್ಥಳವಾಗಿ ಮಾರ್ಪಾಡುವಾಗುವುದನ್ನು ತಪ್ಪಿಸಲು, ಶಾಲೆ ಬಳಿಯ ಜಾಗದ ಅಳತೆ ಮಾಡಿಸಿ ಪಾಲಿಕೆಯ ಸ್ವತ್ತಿಗೆ ಕಾಂಪೌಂಡ್ ಹಾಕಲು ಕ್ರಮ ಕೈಗೊಳ್ಳುವಂತೆಯೇ ಸೂಚಿಸಿದ್ದೇನೆ ಎಂದರು. ಪಾಲಿಕೆ ವಿಪಕ್ಷ ನಾಯಕ ರಮೇಶ್ ಅಧಿಕಾರಿ ವೃಂದದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ