ತುಮಕೂರು :

ನಗರ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಬಳಿಯಿಂದ ಚಿಕ್ಕಪೇಟೆ ಶಿಶುವಿಹಾರದವರೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ರಸ್ತೆಯನ್ನು ವಿಸ್ತರಿಸಿ ಅಭಿವೃದ್ಧಿ ಪಡಿಸುವ ಸಂಬಂಧ ಪಾಲಿಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಥಳೀಯರೊಂದಿಗೆ ಶುಕ್ರವಾರ ಚಿಕ್ಕಪೇಟೆಯ ತುಮಕೂರು ಒನ್ ಸೆಂಟರ್‍ನಲ್ಲಿ ಸಮಾಲೋಚನಾ ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಸ್ಥಳೀಯ ನಿವಾಸಿಗಳು ಚಿಕ್ಕಪೇಟೆ ರಸ್ತೆ ನಗರದ ಹೃದಯಭಾಗದ ಅತ್ಯಂತ ಪುರಾತನ ಪ್ರದೇಶವಾಗಿದ್ದು, ರಸ್ತೆ ಮೊದಲಿನಿಂದಲೂ ಕಿರಿದಾಗಿಯೇ ಇದೆ. ಮನೆ ಮುಂದೆಯೇ ಅಂಗಡಿ ಮಳಿಗೆಗಳನ್ನು ತೆರೆದು ತಲೆತಲಾಂತರದಿಂದ ಇಲ್ಲಿನ ನಿವಾಸಿಗಳು ಬದುಕು ಸಾಗಿಸುತ್ತಿದ್ದು, ಕೇವಲ 10-20 ಅಡಿ ಪ್ರದೇಶದ ಮನೆಯಲ್ಲಿ ವಾಸಿಸುತ್ತಾ, ವಾಣಿಜ್ಯ ಚಟುವಟಿಕೆಯನ್ನು ನಡೆಸುತ್ತಾ ಬಂದಿದ್ದಾರೆ.
ಈಗ ರಸ್ತೆ ಅಭಿವೃದ್ಧಿ ಹೆಸರಲ್ಲಿ ರಸ್ತೆಯನ್ನು 40 ಅಡಿಗೆ ಅಗಲೀಕರಣಗೊಳಿಸಿದರೆ ನಾವು ನಮ್ಮ ಅಸ್ಥಿತ್ವವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಹೃದಯ ಭಾಗದಲ್ಲಿ ಜಾಗ ಹೋದರೆ ಬೇರೆಡೆ ಅಷ್ಟೇ ಮೌಲ್ಯದ ಜಾಗ ನೀವು ಕೊಡಿಸಲು ಸಾಧ್ಯವೇ?. ರಸ್ತೆ ವಿಸ್ತರಿಸುವ ಬದಲಾಗಿ ಕಟ್ಟಿಕೊಂಡಿರುವ ಚರಂಡಿಯನ್ನು ಸರಿಪಡಿಸಿ, ರಸ್ತೆಯಲ್ಲಿ ವಾಹನ ಪಾರ್ಕಿಂಗ್ ನಿಷೇಧಿಸುವ ಜೊತೆಗೆ ರಸ್ತೆಗೆ ಲಗತ್ತಾಗಿರುವ ಮನೆಯ ಮೆಟ್ಟಿಲು, ಕುಳಿತುಕೊಳ್ಳುವ ಜಗಲಿ ಮುಂತಾದವುನ್ನು ತೆರವುಗೊಳಿಸಿ ಹಾಲಿ ಇರುವಷ್ಟು ರಸ್ತೆಯಲ್ಲಿ ವಾಹನಗಳು ಸರಾಗವಾಗಿ ಓಡಾಡಲು ಅವಕಾಶ ಮಾಡಿಕೊಡಿ. ಟ್ರಕ್‍ಗಳು ದೊಡ್ಡ ವಾಹನ ಓಡಾಡುವುದನ್ನು ತಡೆದರೆ ಯಾವುದೇ ಸಂಚಾರ ಸಮಸ್ಯೆಯಾಗುವುದಿಲ್ಲ. ಹಿಂದೆ ಈ ಭಾಗದ ರಸ್ತೆಯಲ್ಲಿ ಓನ್‍ವೇ ಮಾಡಲಾಗಿತ್ತು. ಮತ್ತೆ ಅದನ್ನು ಜಾರಿಗೊಳಿಸಬೇಕು. ಹೀಗೆ ಮಾಡಿದರೆ ರಸ್ತೆ ವಿಸ್ತರಿಸದೆ ಅಭಿವೃದ್ಧಿ ಪಡಿಸಬಹುದಾಗಿದೆ ಎಂದರು. ಒಂದು ವೇಳೆ ರಸ್ತೆ ಅಗಲೀಕರಣ ಮಾಡುವುದೇ ಆದರೆ ನಮಗೆ ಮಾರುಕಟ್ಟೆ ಬೆಲೆಯ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಎಷ್ಟು ಅಡಿ ವಿಸ್ತರಿಸಬೇಕೆಂದು ಕೌನ್ಸಿಲ್, ಡಿಸಿ, ಶಾಸಕರ ಸಮ್ಮುಖದಲ್ಲಿ ನಿರ್ಧಾರ
ಈ ಸಲಹೆ, ಆಗ್ರಹಗಳನ್ನು ಆಲಿಸಿದ ಪಾಲಿಕೆ ಮೇಯರ್ ಫರೀದಾಬೇಗಂ, ಆಯುಕ್ತೆ ರೇಣುಕಾ ಅವರುಗಳು ಸಿಡಿಪಿ ನಕಾಶೆಯನ್ವಯ ಈ ರಸ್ತೆ 40 ಅಡಿ ಬರುತ್ತದೆ. ಆದರೆ ಚಿಕ್ಕಪೇಟೆ ಮುಖ್ಯ ರಸ್ತೆ ಆರಂಭದಿಂದ ಕೊನೆಯವರೆಗೆ 20 ಅಡಿ, 25 ಅಡಿ, 30 ಹೀಗೆ ರಸ್ತೆ ಮುಂದುವರಿಯುತ್ತಾ ಹೋಗಿದೆ. ಈ ಭಾಗದಲ್ಲಿ ಜನದಟ್ಟಣೆ, ವಾಹನ ಸಂಚಾರ ಅಧಿಕವಾಗಿದೆ. ವಾಣಿಜ್ಯ ಚಿನಿವಾರ ಪೇಟೆ ಆಗಿರುವುದರಿಂದ ಜಿಲ್ಲೆಯ ಎಲ್ಲೆಡೆಯಿಂದ ಇಲ್ಲಿಗೆ ಜನ ಬರುತ್ತಾರೆ. ಭವಿಷ್ಯದ ದೃಷ್ಟಿಯಿಂದ ರಸ್ತೆ ವಿಸ್ತರಣೆ, ಅಭಿವೃದ್ಧಿ ಅನಿವಾರ್ಯ, ಇದಕ್ಕೆ ನಮ್ಮ ಸಹಕಾರ ಬೇಕು. ಇದು ಪೂರ್ವಭಾವಿ ಸಭೆಯಷ್ಟೇ ನಿಮ್ಮ ಸಲಹೆ, ಆಗ್ರಹಗಳನ್ನು ದಾಖಲಿಸಿಕೊಂಡಿದ್ದು, ಕೌನ್ಸಿಲ್ ಸಭೆ, ಜಿಲ್ಲಾಧಿಕಾರಿಗಳು ಹಾಗೂ ಶಾಸಕರ ಸಮಕ್ಷಮ ಚರ್ಚೆ ನಡೆಸಿ ತೀರ್ಮಾನ ಮಾಡಲಾಗುತ್ತದೆ. ಸ್ಮಾರ್ಟ್‍ಸಿಟಿಯಿಂದ ರಸ್ತೆ ಅಭಿವೃದ್ಧಿಗೆ ಹಣವಿದೇ ಹೊರತು ಪರಿಹಾರಕ್ಕೆ ಇಲ್ಲ. ಈ ಸಂಬಂಧ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗುತ್ತದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಥಳೀಯರು ಪರಿಹಾರ ಕೊಡದೆ ಜಾಗವಂತೂ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದರು.
ಪಾಲಿಕೆ ಸದಸ್ಯೆ ದೀಪಶ್ರೀಮಹೇಶ್‍ಬಾಬು ಮಾತನಾಡಿ ನಾಗರಿಕರ ಒಮ್ಮತದಿಂದ ಸಹಕಾರ ನೀಡಿದರೆ ರಸ್ತೆ ಅಭಿವೃದ್ಧಿ ಮಾಡಲಾಗುವುದು. ಕೆಲವರು ರಸ್ತೆ ಅಗಲೀಕರಣ ಮಾಡಬೇಕೆಂದು ಕೋರಿ ಪತ್ರಗಳನ್ನು ಸಲ್ಲಿಸಿದ್ದಾರೆ. ಸ್ಮಾರ್ಟ್ ಸಿಟಿ ಹಣ ಮತ್ತೆ ಸಿಗೊಲ್ಲ. ಊರಿನ ಅಭಿವೃದ್ಧಿ ದೃಷ್ಟಿಯಿಂದ ಸಹಕರಿಸಬೇಕೆಂದು ಕೋರಿದರು. 5ನೇ ವಾರ್ಡಿನ ಪಾಲಿಕೆ ಸದಸ್ಯಟಿ.ಎಂ.ಮಹೇಶ್, ನಾಮಿನಿ ಸದಸ್ಯರಾದ ನರಸಿಂಹಸ್ವಾಮಿ, ಸ್ಮಾರ್ಟ್ ಸಿಟಿ ಎಇಇ ಚನ್ನವೀರಯ್ಯ ಇತರರು ಹಾಜರಿದ್ದರು. ಸಭೆಯಲ್ಲಿ ಸ್ಥಳೀಯ ನಿವಾಸಿಗಳಾದ ರವಿ, ಗಂಗರಾಜಚಾರ್, ವಿರೂಪಾಕ್ಷಚಾರ್, ಜಯಪ್ರಕಾಶ್, ಟಿ.ಎ.ಸುಧೀರ್, ಚೇತನ್, ಸತೀಶ್ ಸೇರಿ ಹಲವರು ಪಾಲ್ಗೊಂಡರು.
20ರೊಳಗೆ ದಾಖಲೆ ಪ್ರತಿ ನೀಡಿ ಸಹಕರಿಸಿ
ಚಿಕ್ಕಪೇಟೆ ರಸ್ತೆ ಅಭಿವೃದ್ಧಿ ಸಂಬಂಧ ಎಷ್ಟು ಅಡಿ ಅಗಲೀಕರಣವಾಗಬೇಕೆಂಬುದು ಉನ್ನತ ಮಟ್ಟದ ಸಮಿತಿಯಲ್ಲಿ ತೀರ್ಮಾನವಾಗಲಿದೆ. ಅದಕ್ಕೆ ಪೂರ್ವಭಾವಿಯಾಗಿ ರಸ್ತೆ ಅಕ್ಕಪಕ್ಕದ ಸ್ವತ್ತಿನ ಮಾಲೀಕರು ಪಾಲಿಕೆ ಕಂದಾಯ ಅಧಿಕಾರಿಗಳು ತಮ್ಮ ಮನೆ ಬಾಗಿಲಿಗೆ ಬಂದಾಗ ಅವರಿಗೆ ಸ್ವತ್ತಿಗೆ ಮಾಲೀಕತ್ವಕ್ಕೆ ಸಂಬಂಧಿಸಿದ ಮೂಲಪ್ರತಿ ಸೇರಿ ಅಗತ್ಯ ದಾಖಲೆಗಳ ಪ್ರತಿ ನೀಡಿ ಫೆ.20ರೊಳಗೆ ಸಹಕರಿಸಬೇಕು ಎಂದು ಪಾಲಿಕೆ ಆಯುಕ್ತೆ ರೇಣುಕಾ ಸ್ಥಳೀಯರಲ್ಲಿ ಮನವಿ ಮಾಡಿದರು.








