ಮಾದರಿ ವಿಧಾನ ಪರಿಷತ್ ಮಾಡಲು ಶ್ರಮಿಸುತ್ತೇನೆ: ಹೊರಟ್ಟಿ

     ತುಮಕೂರು : 

      ಕರ್ನಾಟಕ ವಿಧಾನ ಪರಿಷತ್‍ನ ಘನತೆ, ಗೌರವವನ್ನು ಎತ್ತಿ ಹಿಡಿದು ದೇಶದಲ್ಲೇ ಮಾದರಿ ವಿಧಾನ ಪರಿಷತ್ತನ್ನಾಗಿ ಮಾಡಲು ಹಗಲಿರುಳು ಶ್ರಮಿಸುತ್ತೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

     ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಹಿರಿಯ ಶ್ರೀಗಳಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,      ಸಭಾಪತಿ ಹುದ್ದೆ ಸಂವಿಧಾನ ಬದ್ಧವಾದ, ಜವಾಬ್ದಾರಿಯುತ ಸ್ಥಾನ. ಇಂತಹ ಸಂವಿಧಾನ ಬದ್ದವಾದ ಹುದ್ದೆಯನ್ನು ನಾನು ಅಲಂಕರಿಸಿದ್ದೇನೆ. ಸದನವನ್ನು ಉತ್ತಮ ರೀತಿಯಲ್ಲಿ ನಡೆಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

     113 ವರ್ಷಗಳ ಇತಿಹಾಸ ಹೊಂದಿರುವ ಕರ್ನಾಟಕ ವಿಧಾನ ಪರಿಷತ್ ಇಡೀ ದೇಶಕ್ಕೆ ಮಾದರಿಯಾಗಬೇಕಾಗಿದೆ. ಆ ನಿಟ್ಟಿನಲ್ಲಿ ತಾವು ಕಾರ್ಯನಿರ್ವಹಿಸುತ್ತೇನೆ ಎಂದು ಅವರು ಹೇಳಿದರು.

      ಸಭಾಪತಿ ಸ್ಥಾನ ಸಂವಿಧಾನ ಬದ್ಧವಾದ ಹುದ್ದೆಯಾಗಿರುವುದರಿಂದ ಇದರಲ್ಲಿ ಯಾವುದೇ ರೀತಿಯ ಲಾಭ, ನಷ್ಟದ ವಿಚಾರ ಮಾಡುವಂತಿಲ್ಲ. ವಿಧಾನ ಪರಿಷತ್ ನಡೆಸಲು ನನಗೆ ಬಹಳ ಪ್ರೀತಿ ಮತ್ತು ಗೌರವ ಇದೆ. ಈ ವ್ಯವಸ್ಥೆಯಲ್ಲಿ ಸಮಾಜಕ್ಕೆ ದೊಡ್ಡದಾದ ಕೊಡುಗೆಯನ್ನು ಕೊಡಲು ಅವಕಾಶ ಇದೆ. ಹಾಗಾಗಿ ಆ ಕೆಲಸವನ್ನು ನಾನು ಬಹಳ ಪ್ರೀತಿ, ಶ್ರದ್ಧೆಯಿಂದ ಮಾಡುತ್ತೇವೆ ಎಂದು ಅವರು ಹೇಳಿದರು.

      ನಾನು ಅಧಿಕಾರ ಪಡೆದಾಗಲೆಲ್ಲಾ ಶ್ರೀಮಠಕ್ಕೆ ಬಂದು ಹೋಗುವ ಪರಂಪರೆ ರೂಢಿಸಿಕೊಂಡಿದ್ದೇನೆ. 2004, 2006 ಹೀಗೆ ನಾನು ಅಧಿಕಾರ ಪಡೆದಾಗಲೆಲ್ಲಾ ಶ್ರೀಕ್ಷೇತ್ರಕ್ಕೆ ಬಂದು ಹಿರಿಯ ಶ್ರೀಗಳು ಸೇರಿದಂತೆ ಎಲ್ಲರ ಆಶೀರ್ವಾದ ಪಡೆದಿದ್ದೇನೆ. ಈಗಲೂ ಆ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ ಎಂದರು.

     ಪ್ರಸ್ತುತ ದಿನಗಳಲ್ಲಿ ಮೀಸಲಾತಿ ಬಗ್ಗೆ ಮಾತನಾಡುವುದು ಬಹಳ ಕಷ್ಟದ ಕೆಲಸ. ಯಾರ್ಯಾರಿಗೆ ಏನೇನು ಸೌಲಭ್ಯ ಕೊಡಬೇಕು ಎಂಬ ಬಗ್ಗೆ ಸರ್ಕಾರ ವಿಚಾರ ಮಾಡುತ್ತದೆ ಎಂದ ಅವರು, ನಾವು ಜಾತ್ಯಾತೀತ ರಾಷ್ಟ್ರದಲ್ಲಿದ್ದೇವೆ. ಪ್ರತಿಯೊಬ್ಬರೂ, ರಾಜಕೀಯ ಪಕ್ಷಗಳು, ರಾಜಕಾರಣಿಗಳು ಚುನಾವಣೆಗೆ ನಿಲ್ಲಬೇಕಾದರೆ ಜಾತಿ ಪದ್ದತಿ ಮುಂದಿಟ್ಟುಕೊಳ್ಳುತ್ತಾರೆ. ಇದು ಒಳ್ಳೆಯ ಪದ್ದತಿಯಲ್ಲ. ಆದರೆ ನಿಸರ್ಗ ನಿಯಮಗಳು ಬದಲಾವಣೆಯಾದಂತೆ ನಾವುಗಳು ಸಹ ಬದಲಾವಣೆಯಾಗಬೇಕಾಗಿದೆ ಎಂದರು.
2ಎ ಮೀಸಲಾತಿಗಾಗಿ ಶ್ರೀಗಳು ನಡೆಸುತ್ತಿರುವ ಪಾದಯಾತ್ರೆ ಬಗ್ಗೆ ನಾನು ಮಾತನಾಡುವುದಿಲ್ಲ. ಶ್ರೀಗಳು ನಮ್ಮೆಲ್ಲರಿಗೂ ಮಾರ್ಗದರ್ಶನ ಮಾಡುವಂತಹವರು. ಅವರ ಹೋರಾಟಕ್ಕೆ ದೇವರು ಒಳ್ಳೆಯದು ಮಾಡಲಿ ಎಂದರು.

      ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮೀಸಲಾತಿ ಪಾದಯಾತ್ರೆಗಳಿಗೆ ಔಷಧಿ ಇಲ್ಲ. ನಾನು ಆ ಬಗ್ಗೆ ಮಾತನಾಡುವುದಿಲ್ಲ. ನಾವೆಲ್ಲರೂ ದೇಶ, ರಾಜ್ಯದ ಬಗ್ಗೆ ಕಾಳಜಿ ಇಟ್ಟುಕೊಂಡು ಕೆಲಸ ಮಾಡುವತ್ತ ಚಿಂತನೆ ನಡೆಸಬೇಕಿದೆ ಎಂದು ಅವರು ಹೇಳಿದರು.

      ಈ ಸಂದರ್ಭದಲ್ಲಿ ಮಾಜಿ ಶಾಸಕ ಕೋನರೆಡ್ಡಿ, ವಸಂತ ಹೊರಟ್ಟಿ, ಆರ್. ಶಿವಕುಮಾರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ. ಆಂಜಿನಪ್ಪ, ಮುಖಂಡರಾದ ಟಿ.ಆರ್. ನಾಗರಾಜು, ಬೆಳ್ಳಿ ಲೋಕೇಶ್, ಪಾಲಿಕೆ ಸದಸ್ಯ ಧರಣೇಂದ್ರಕುಮಾರ್, ಗಂಗಹನುಮಯ್ಯ, ಗಂಗಣ್ಣ, ದೇವರಾಜು, ಗಣೇಶ್, ಉಪ್ಪಾರಹಳ್ಳಿ ಕುಮಾರ್, ತನ್ವೀರ್, ಲೋಕೇಶ್, ಆಶಾಜಾನು, ಜಯಶ್ರೀ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap