ತುಮಕೂರು :
ನಾನು ಜಾತಿಯಿಲ್ಲದ ಜಾಥಾ ಒಲ್ಲದ ಸ್ವಾಮೀಜಿ, ನನಗೆ ಪ್ರಾಯೋಗಿಕ ಬೆಳವಣಿಗೆಗಳು ಬೇಕು, ನನಗೆ ಕ್ರಾಂತಿ ಬೇಡ, ಈ ಜಗತ್ತಿನ ಇತಿಹಾಸದಲ್ಲಿ ಕ್ರಾಂತಿಗಳು ವಾಂತಿಯನ್ನು ತಂದಿವೆ. ಯಾವುದೇ ಕ್ರಾಂತಿ ಮನುಷ್ಯನ ಅಭ್ಯುದಯವನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಹೋಗಿಲ್ಲ ಎಂದು ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಮುಖ್ಯಸ್ಥರಾದ ಡಾ.ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ರೈಲ್ವೆಸ್ಟೇಷನ್ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಕಾಲೇಜು ಆವರಣದಲ್ಲಿ ಭಾನುವಾರ ಸ್ನೇಹ ಸಂಗಮ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದ ಅವರು, ಇದೊಂದು ಆತ್ಮವಿಶ್ಲೇಷಣೆಯ ಕಾರ್ಯಕ್ರಮ. ಪುನರುಜ್ಜೀವನಕ್ಕೆ ನಾವು ಪಥವನ್ನು ಕಂಡುಕೊಳ್ಳುವ ಅರ್ಥಪೂರ್ಣ ಕಾರ್ಯಕ್ರಮ ಇದಾಗಿದೆ ಎಂದರು.
ಜೀವನದಲ್ಲಿ ಒಬ್ಬ ವ್ಯಕ್ತಿ ಮೇಲೆ ಬರಲು ಸುಳ್ಳಿನ ಸರಮಾಲೆ, ಮೋಸ, ಕಪಟ ವಂಚನೆ ಮಾತುಗಳು ಎಂದಿಗೂ ಸಹಾಯಕ್ಕೆ ಬರುವುದಿಲ್ಲ. ಸ್ನೇಹ ಸಂಗಮ ಬಹಳ ಅದ್ಭುತವಾದ ಕಾರ್ಯಕ್ರಮ. ಸುಮಾರು 175 ಜನ ಪೊಲೀಸ್ ಕಾನ್‍ಸ್ಟೇಬಲ್‍ಗಳಾಗಿ ಹಳೆ ವಿದ್ಯಾರ್ಥಿಗಳು ಕೆಲಸ ನಿರ್ವಹಿಸುತ್ತಿದ್ದಾರೆ ಎಂಬುದು ಹೆಮ್ಮೆಯ ಹಾಗೂ ಸಾರ್ಥಕತೆಯ ವಿಷಯ ಎಂದು ಬಣ್ಣಿಸಿದರು.
ದೇಶಕ್ಕೆ ಬೇಕಾದಂತಹ ಯಾವುದೇ ರೀತಿಯಲ್ಲಿ ದೇಶದ ಕಷ್ಟ ನಷ್ಟಗಳ ಬಗ್ಗೆ ಹೃದಯಂಗಮವಾಗಿ ಸ್ಪಂದಿಸುವ ಪ್ರಜೆಗಳನ್ನು ನಿರ್ಮಾಣ ಮಾಡುವ ಈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನನ್ನ ಮನಸ್ಸಿಗೆ ಬಹಳ ಹತ್ತಿರ. ಇಲ್ಲಿ ಓದಿದಂತಹ ಮಕ್ಕಳು ವಿದೇಶಕ್ಕೆ ಹೋಗುವುದು ಕಡಿಮೆ. ನಮ್ಮ ದೇಶಕ್ಕೂ ಮಾನವ ಸಂಪನ್ಮೂಲ ಬೇಕಲ್ಲ, ವಿದೇಶಕ್ಕೆ ಹೋಗುವವರ ಬಗ್ಗೆ ನಮ್ಮ ಚಕಾರವಿಲ್ಲ, ಅದಕ್ಕೆ ಮೂರು ಕಾರಣವಿದೆ. ಯಾವಾಗ ನೀವು ಮೆರಿಟ್‍ನ್ನು ಕಾಪಾಡುವುದಕ್ಕಾಗುವುದಿಲ್ಲವೋ, ಯಾವಾಗ ನೀವು ಮೆರಿಟ್‍ಗೆ ಗೌರವ ಕೊಡುವುದಿಲ್ಲವೋ, ಸಹಜವಾಗಿ ಮೆರಿಟ್ ಇನ್ನೊಂದು ಕಡೆ ಹರಿಯುತ್ತದೆ. ನೀವು ನೂರು ಸವಲತ್ತುಗಳಲ್ಲಿ ಬದುಕುತ್ತೀನಿ ಎನ್ನುವವರು ಸಾಮಾನ್ಯ ವ್ಯಕ್ತಿಯಾಗಿ ಬದುಕುತ್ತಾನೆ, ಆದರೆ ಮೆರಿಟ್ ಇರುವಂತಹ ವ್ಯಕ್ತಿ ವಿಶ್ವಪ್ರಜೆಯಾಗುತ್ತಾನೆ. ಮೆರಿಟ್ ಇದ್ದರೆ ಪ್ರಪಂಚ ನಿಮ್ಮನ್ನು ಬಯಸುತ್ತದೆ. ಮೆರಿಟನ್ನು ಅವಮಾನಿಸಿದರೆ, ಅಗೌರವಿಸಿದರೆ, ಮೆರಿಟ್‍ನ ಜನರ ಕಣ್ಣಲ್ಲಿ ನೀರು ಹಾಕಿಸಿದರೆ ದೇಶಕ್ಕೆ ಖಂಡಿತಾ ಒಳ್ಳೆಯದಾಗಲ್ಲ ಎಂದು ಹೇಳಿದರು.
ಇಂದಿನ ವಿದ್ಯಾರ್ಥಿಗಳಿಗೆ ಕೌಶಲ್ಯ ಆಧಾರಿತ ಶಿಕ್ಷಣ ಅಗತ್ಯವಿದೆ. ಕೌಶಲ್ಯ ಆಧಾರಿತ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಇಂದು ಅನೇಕ ರಂಗಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಕೌಶಲ್ಯ ಆಧಾರಿತ ಶಿಕ್ಷಣ ಪಡೆಯದ ವಿದ್ಯಾರ್ಥಿಗಳು ಇಂದು ಅತಂತ್ರರಾಗಿ ಬದುಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪದವಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ತುಮಕೂರಿನಲ್ಲಿ ಶೀಘ್ರವಾಗಿ ಸ್ಪರ್ಧಾಭವನ ಆರಂಭ ಮಾಡಲು ಯೋಜನೆ ನಡೆದಿದೆ ಎಂದು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಪ್ರೊ.ಜಗದೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸರ್ಕಾರಿ ಪ್ರಥಮದರ್ಜೆ ಕಾಲೇಜು 2011-12 ಶೈಕ್ಷಣಿಕ ವರ್ಷದಲ್ಲಿ ಆರಂಭವಾಗಿ ಕೆಲವೇ ತಿಂಗಳುಗಳಲ್ಲಿ ತನ್ನ ದಶಮಾನೋತ್ಸವ ದಿನಗಳನ್ನು ಕಾಣುತ್ತಿದೆ. ಭಾರತ ಸರ್ಕಾರದ ಮಾರ್ಗಸೂಚಿಯಂತೆ ನ್ಯಾಕ್ ಪ್ರಕ್ರಿಯೆಗೂ ಸಹ ಕಾಲೇಜು ಒಳಪಡುತ್ತಿದೆ ಎಂದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳು ಅದರಲ್ಲಿಯೂ ಗ್ರಾಮೀಣ ಭಾಗದ ಉನ್ನತ ಶಿಕ್ಷಣ ಪಡೆಯುತ್ತಿರುವ ಹೆಣ್ಣುಮಕ್ಕಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಬುಡಕಟ್ಟು ಜನಾಂಗದವರ, ಹಿಂದುಳಿದ ವರ್ಗದವರ ಮಕ್ಕಳೇ ಗಣನೀಯ ಸಂಖ್ಯೆಯಲ್ಲಿರುವ ನಮ್ಮ ಕಾಲೇಜಿನಲ್ಲಿ ಪದವಿ ಎಂಬ ಉನ್ನತ ಶಿಕ್ಷಣ ಪಡೆದುಕೊಂಡು ಅವರ ಜೀವನ ಉತ್ಕøಷ್ಟವಾಗಲಿಕ್ಕೆ, ಉನ್ನತೀಕರಣವಾಗಲಿಕ್ಕೆ ನಮ್ಮ ಸಂಸ್ಥೆ ಶ್ರಮಿಸುತ್ತಿದೆ, ನಮ್ಮ ಸಂಸ್ಥೆ ಒಳಗೆ ಎಲ್ಲಾ ನುರಿತ ಪ್ರಾಧ್ಯಾಪಕ ವೃಂದವಿದೆ. ಪ್ರಾಮಾಣಿಕ ಸಿಬ್ಬಂದಿವರ್ಗವಿದೆ. ಎಲ್ಲಾ ಜನಪ್ರತಿನಿಧಿಗಳ ದೊಡ್ಡ ಸಹಕಾರವಿದೆ. ಆ ಹಿನ್ನಲೆಯಲ್ಲಿಯೇ ಇತ್ತೀಚೆಗೆ 14ರಿಂದ 15 ಕೋಟಿ ರೂ.ಗಳ ಕಟ್ಟಡ ಕಾರ್ಯವೂ ಸಹ ನಡೆದಿದೆ. ಹೀಗಾಗಿ ಕಾಲೇಜು ಭೌತಿಕವಾಗಿಯೂ ಬೌದ್ಧಿಕವಾಗಿಯೂ ತನ್ನ ಉನ್ನತಿಯನ್ನು ಪಡೆದುಕೊಳ್ಳುತ್ತಿದೆ ಎಂದು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಚಿಕ್ಕಹನುಮಯ್ಯ ಮಾತನಾಡಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶಿಕ್ಷಣ ಪಡೆದ ಅನೇಕರು ಇಂದು ಸರ್ಕಾರಿ, ಅರೆ ಸರ್ಕಾರಿ, ಸ್ವಯಂ ಉದ್ಯೋಗ, ಸ್ವಂತ ಉದ್ಯಮ, ಪತ್ರಿಕೋದ್ಯಮ, ಕಾರ್ಪೋರೆಟ್ ಸಂಸ್ಥೆಗಳ ನೌಕರಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೂ ಕೆಲವರು ರಾಜಕೀಯ, ಸಮಾಜ ಸೇವೆ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಸಾಹಿತ್ಯ, ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಸಬ್‍ಇನ್ಸ್‍ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಕಾಲೇಜಿನ ಹಳೆ ವಿದ್ಯಾರ್ಥಿ ಎನ್.ರಂಗನಾಥ್, ಕಾಲೇಜಿನ ಸಂಸ್ಥಾಪಕ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಚಿಕ್ಕಹನುಮಯ್ಯ ಮತ್ತು ಬಿಸಿಎ ವಿಭಾಗದಲ್ಲಿ 7ನೇ ರ್ಯಾಂಕ್ ಪಡೆದ ಸೌಂದರ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಗಂಗಾಧರ್, ನಿವೃತ್ತ ಕನ್ನಡ ಪ್ರಾಧ್ಯಾಪಕ ಮೇಜರ್ ಡಿ.ಚಂದ್ರಪ್ಪ, ತುಮಕೂರು ವಿವಿ ಸಿಂಡಿಕೇಟ್ ಸದಸ್ಯ ಆರ್.ಕೆ.ಶ್ರೀನಿವಾಸ್, ಪ್ರೊ.ಎ.ಆರ್.ಮಹೇಶ್, ಸುಹಾಸ್ ಸೇರಿದಂತೆ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
