ತುಮಕೂರು :
ಈ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಲೇ ಇವೆ. ಒಂದು ಅಪಘಾತ ಸಂಭವಿಸಿ ಮತ್ತೊಂದು ಮರುಕಳಿಸುವಷ್ಟರ ವೇಳೆಗೆ ಹಳೆಯ ಘಟನೆಗಳನ್ನು ಮೆಲುಕು ಹಾಕುವ, ಒಂದಷ್ಟು ಆಕ್ರೋಶ ವ್ಯಕ್ತಪಡಿಸುವ ಪ್ರಸಂಗಗಳು ಹುಟ್ಟಿಕೊಳ್ಳುತ್ತವೆ ಅಷ್ಟೆ. ಆ ನಂತರ ಎಲ್ಲವೂ ಸಹಜ ಸ್ಥಿತಿ. ಏನೂ ಆಗಿಲ್ಲವೇನೋ ಎಂಬಂತೆ ಎಲ್ಲರೂ ಇದ್ದುಬಿಡುತ್ತಾರೆ. ತುಮಕೂರು-ಶಿರಾ ರಸ್ತೆ ಹಾಗೂ ತುಮಕೂರು-ಶಿವಮೊಗ್ಗ ರಸ್ತೆಯ ಹೊರವಲಯದಲ್ಲಿ ಹಿಂದಿನಿಂದಲೂ ಅಪಘಾತಗಳ ಸರಣಿಯೇ ನಡೆದು ಹೋಗಿವೆ. ಶಿರಾ ಹೆದ್ದಾರಿ ರಸ್ತೆ ವಿಸ್ತಾರವಾದ ನಂತರ ಅಪಘಾತಗಳ ಸಂಖ್ಯೆ ಕಡಿಮೆಯಾಗಿರಬಹುದು. ಆದರೆ ತುಮಕೂರಿನಿಂದ ತಿಪಟೂರು ಮಾರ್ಗವಾಗಿ ಹೋಗುವ ಹೆಗ್ಗೆರೆ ವಲಯದಲ್ಲಿ ಅಪಘಾತ ಪ್ರಕರಣಗಳ ಸಂಖ್ಯೆ ನಿಂತಂತೆ ಕಂಡು ಬರುತ್ತಿಲ್ಲ.
ಭಾನುವಾರ ಬೆಳಗಿನ ಜಾವ ನಡೆದಿರುವ ಒಂದು ಭೀಕರ ಪ್ರಕರಣದ ರೀತಿಯಲ್ಲಿಯೇ ಹಲವು ಹತ್ತು ಅಪಘಾತ ಪ್ರಕರಣಗಳು ಈ ರಸ್ತೆಯಲ್ಲಿ ಘಟಿಸಿವೆ. ದ್ವಿಚಕ್ರ ವಾಹನಗಳ ಅಪಘಾತದಿಂದ ಹಿಡಿದು 4 ಚಕ್ರದ ವಾಹನಗಳ ನಡುವೆ ನಡೆದ ಅಪಘಾತ ಪ್ರಕರಣಗಳು ಕಂಡುಬರುತ್ತಲೇ ಇವೆ. 15 ವರ್ಷಗಳ ಹಿಂದೆ ಮೆಟಡಾರ್‍ಗಳು, ಸಣ್ಣ ಸಣ್ಣ ವಾಹನಗಳು ಜನರನ್ನು ಕುರಿ ತುಂಬಿದಂತೆ ತುಂಬಿಕೊಂಡು ಸಂಚರಿಸುತ್ತಿದ್ದ ಸಂದರ್ಭದಲ್ಲಿ ಅಪಘಾತ ಪ್ರಕರಣಗಳು ಲೆಕ್ಕವಿಲ್ಲದಷ್ಟು ವರದಿಯಾಗುತ್ತಿದ್ದವು. ಖಾಸಗಿ ವಾಹನಗಳಲ್ಲಿ ಹತ್ತಿ ಬರುತ್ತಿದ್ದ ಪ್ರಯಾಣಿಕರು ಸ್ಥಳದಲ್ಲಿಯೇ ಅಸು ನೀಗುತ್ತಿದ್ದರು. ಪದೆ ಪದೆ ಅಪಘಾತಗಳು ಸಂಭವಿಸುವುದನ್ನು ನಿಯಂತ್ರಿಸುವ ಸಲುವಾಗಿ ಮೆಟಡಾರ್ ಸೇರಿದಂತೆ ಕೆಲವು ಖಾಸಗಿ ವಾಹನಗಳಿಗೆ ಕಡಿವಾಣ ಹಾಕಲಾಯಿತು. ಕೋವಿಡ್ ಪರಿಣಾಮವಾಗಿ ಖಾಸಗಿ ಬಸ್ ಗಳು ಸಹ ಬಂದ್ ಆಗಿದ್ದು ಕೆಲವೇ ವಾಹನಗಳು ಸಂಚರಿಸುತ್ತಿವೆ.
ಹೆಗ್ಗೆರೆ ಆಜುಬಾಜಿನ ರಸ್ತೆಯು ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 206 ಆಗಿದ್ದು, ಈ ರಸ್ತೆಯನ್ನು ಈಗ ಬದಲಾವಣೆಯೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿದೆ. ಹಲವು ವರ್ಷಗಳಿಂದ ರಸ್ತೆ ಕಾಮಗಾರಿ ನಡೆಯುತ್ತಲೇ ಇದೆ. ಮುಗಿಯುವ ಲಕ್ಷಣಗಳಂತೂ ಕಂಡುಬರುತ್ತಿಲ್ಲ. ರಸ್ತೆ ಕಾಮಗಾರಿಯಿಂದಾಗಿ ವಾಹನಗಳ ಓಡಾಟಕ್ಕೆ ಅಡಚಣೆಯ ಜೊತೆಗೆ ಅಪಘಾತಗಳು ಕೂಡ ಸಂಭವಿಸುತ್ತಿವೆ.
ಕಳೆದ 15-20 ವರ್ಷಗಳ ಹಾದಿಯನ್ನು ಒಮ್ಮೆ ಅವಲೋಕಿಸಿದರೆ ಈ ರಸ್ತೆಯಲ್ಲಿ ಒಮ್ಮೆಗೆ 10 ಕ್ಕೂ ಹೆಚ್ಚು ಮಂದಿ ಅಸುನೀಗಿರುವ ಉದಾಹರಣೆಗಳು ಕಂಡುಬರುತ್ತವೆ. ಟೆಂಪೋ ಟ್ರ್ಯಾವೆಲರ್ ಮತ್ತು ಕೆಎಸ್‍ಆರ್‍ಟಿಸಿ ಬಸ್ ನಡುವೆ ಅಪಘಾತ ಸಂಭವಿಸಿ ಒಂದೇ ಬಾರಿಗೆ 18 ಮಂದಿ ಮೃತಪಟ್ಟಿದ್ದ ಘಟನೆ ಆ ಭಾಗದ ಜನರಲ್ಲಿ ಇನ್ನೂ ಮಾಸಿಲ್ಲ. ಮೆಡಿಕಲ್ ಕಾಲೇಜು ಬಳಿ ನಡೆದಿದ್ದ ಭೀಭತ್ಸ ಘಟನೆ ಅದು. 2016 ರಲ್ಲಿ ಹೆಗ್ಗೆರೆ ಬಳಿ ಬಸ್ ಡಿಕ್ಕಿ ಹೊಡೆದು 7 ವಿದ್ಯಾರ್ಥಿಗಳು ಅಸುನೀಗಿದ್ದರು. ಇದೇ ಹೆಗ್ಗೆರೆ ಬಳಿ ಇಲ್ಲಿಗೆ ನಾಲ್ಕು ವರ್ಷಗಳ ಸಂದರ್ಭದಲ್ಲಿ ನಡೆದ ಅಪಘಾತ ಸಂದರ್ಭದಲ್ಲಿ ಆ ಸುತ್ತ ಮುತ್ತಲಿನ ಜನ ದಿನವಿಡಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು.
ಹೆಗ್ಗೆರೆ ಸರ್ಕಲ್ ಮತ್ತು ಭೀಮಸಂದ್ರ ಸರ್ಕಲ್ ಜನನಿಬಿಡ ಪ್ರದೇಶವಾಗಿದ್ದು, ಈ ಸ್ಥಳಗಳಲ್ಲಿ ಸಿಗ್ನಲ್ ದೀಪ, ರೋಡ್ ಹಂಪ್ಸ್ ನಿರ್ಮಾಣ ಸೇರಿದಂತೆ ಕೆಲವು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಹಿಂದೆ ಆ ಭಾಗದ ಜನತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದುಂಟು.
ಅತಿ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವ ಸ್ಥಳಗಳನ್ನು ಪೊಲೀಸ್ ಇಲಾಖೆ ಗುರುತಿಸಿದೆ. ಜಿಲ್ಲೆಯಾದ್ಯಂತ 88 ಸ್ಥಳಗಳನ್ನು ಬ್ಲಾಕ್ ಸ್ಪಾಟ್‍ಗಳಾಗಿ ಗುರುತಿಸಲಾಗಿದ್ದು, ಅವುಗಳಲ್ಲಿ ಭೀಮಸಂದ್ರ ಹಾಗೂ ಹೆಗ್ಗೆರೆಯೂ ಸೇರ್ಪಡೆಯಾಗಿವೆ. ಇದರ ಜೊತೆಗೆ ಇದೇ ರಸ್ತೆಯಲ್ಲಿ ಹಾದು ಹೋಗುವ ಗುಬ್ಬಿಯ ಕಳ್ಳಿಪಾಳ್ಯ, ಹೇರೂರು, ಬಾಗೂರು ಗೇಟ್, ದೊಡ್ಡಗುಣಿ, ಶಿವಸಂದ್ರ ಮುಂತಾದ ಪ್ರದೇಶಗಳು ಈ ಪಟ್ಟಿಯೊಳಗಿವೆ. ಇಂತಹ ಪ್ರಮುಖ ಸ್ಪಾಟ್‍ಗಳಲ್ಲಿ ಪದೆ ಪದೆ ಅಪಘಾತಗಳು ಸಂಭವಿಸುತ್ತಲೇ ಇವೆ. ಆದರೂ ಅವುಗಳನ್ನು ತಡೆಗಟ್ಟಬಹುದಾದ ನಿಟ್ಟಿನಲ್ಲಿ ಕಾರ್ಯ ಯೋಜನೆಗಳು ಸಿದ್ಧವಾಗಲೇ ಇಲ್ಲ. ಹೆಸರಿಗೆ ಮಾತ್ರ ಬ್ಲಾಕ್ ಸ್ಪಾಟ್‍ಗಳಾಗಿ ಉಳಿದುಕೊಂಡಿವೆ.
ಮೊಬೈಲ್‍ಗಳು ತರುವ ಅನಾಹುತ
ವಾಹನವು ಚಾಲನೆಯಲ್ಲಿರುವಾಗ ಅದರ ಚಾಲಕನ ದೃಷ್ಟಿ ರಸ್ತೆಯ ಮೇಲೆಯೇ ಇರಬೇಕು. ಹಿಂದೆ ಬರುವ ಹಾಗೂ ಮುಂದೆ ಹೋಗುತ್ತಿರುವ ವಾಹನಗಳ ಪ್ರತಿ ಚಲನವಲನ ಗಮನಿಸುತ್ತಿರಬೇಕು. ಆದರೆ ಮೊಬೈಲ್ ಹಾವಳಿ ಹೆಚ್ಚಾಗಿರುವ ಕಾರಣ ಕರೆ ಬಂದ ಕೂಡಲೇ ಅದನ್ನು ಸ್ವೀಕರಿಸಲು ಹೋಗಿ ಅನಾಹುತಗಳಾಗುತ್ತಿರುವ ಸಂದರ್ಭಗಳು ಇವೆ. ಮೊಬೈಲ್ ಸಂಭಾಷಣೆಯಲ್ಲಿ ತೊಡಗಿದಾಗ ಮನಸ್ಸು ಬೇರೆ ಕಡೆ ಹರಿಯುವುದರಿಂದ ಅಪಘಾತಗಳಾಗುವ ಸಂದರ್ಭವೂ ಹೆಚ್ಚು. ತುರ್ತು ಕರೆಗಳನ್ನು ಹೊರತುಪಡಿಸಿ ಅಥವಾ ಅಗತ್ಯವಿದ್ದಷ್ಟು ಮಾತನಾಡಿ ಉಳಿದಂತೆ ವಾಹನ ಚಾಲನೆಯ ಕಡೆಗೆ ಗಮನ ಹರಿಸುವುದು ಸೂಕ್ತ ಎನ್ನುತ್ತಾರೆ ಪ್ರಜ್ಞಾವಂತರು.
ನಾಯಿಗಳ ಹಾವಳಿ
ನಗರ ಪ್ರದೇಶ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿಯೂ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ರಸ್ತೆಯ ಬದಿಗಳಲ್ಲಿ ತ್ಯಾಜ್ಯವನ್ನು ಅದರಲ್ಲೂ ವಿಶೇಷವಾಗಿ ಮಾಂಸದ ಅಂಗಡಿಗಳ ತ್ಯಾಜ್ಯವನ್ನು ಬಿಸಾಡುವುದರಿಂದ ನಾಯಿಗಳು ಅಲ್ಲೆಲ್ಲಾ ಗುಂಪುಗೂಡುತ್ತವೆ. ಅತಿವೇಗವಾಗಿ ಸಂಚರಿಸುವ ವಾಹನಗಳಿಗೆ ನಾಯಿಗಳ ಗುಂಪು ಅಡ್ಡ ಬಂದಾಗ ಅಪಘಾತಗಳು ಸಂಭವಿಸುತ್ತಿವೆ. ಹೆಗ್ಗೆರೆ ಮಾರ್ಗವಾಗಿ ಹೋಗುವ ದಾರಿಯಲ್ಲಿ ಆಗಾಗ್ಗೆ ರಸ್ತೆಯಲ್ಲಿಯೇ ನಾಯಿಗಳು ವಾಹನಗಳಿಗೆ ಸಿಲುಕಿ ಸಾಯುತ್ತಿರುವ ಉದಾಹರಣೆಗಳನ್ನು ಗಮನಿಸಬಹುದು. ರಸ್ತೆಗಳಲ್ಲಿ ನಾಯಿಗಳ ಓಡಾಟಕ್ಕೆ ಕಡಿವಾಣ ಹಾಕಬೇಕಾದ ಅನಿವಾರ್ಯತೆ ಇದೆ.
ಧಾವಂತ ಬಿಡಿ : ವೇಗದ ಮಿತಿ ಇರಲಿ
ನಾನು ಬೇಗ ತಲುಬೇಕು ಎಂಬ ಧಾವಂತ ಎಲ್ಲರಿಗೂ ಇರುತ್ತದೆ. ಆದರೆ ಇದೇ ಗುರಿ ಇಟ್ಟುಕೊಂಡು ಅತಿವೇಗದ ಚಾಲನೆಗೆ ಮುಂದಾಗಬಾರದು. ಒಮ್ಮೆ ಅಪಘಾತ ಸಂಭವಿಸಿತೆಂದರೆ ಅದಕ್ಕೆ ಹೊಣೆಯಾರು? ಇದನ್ನೆಲ್ಲ ಯೋಚಿಸಬೇಕಲ್ಲವೆ? ನಿಧಾನ ಆದರೂ ಪರವಾಗಿಲ್ಲ, ಸಂಚಾರಿ ನಿಯಮಗಳನ್ನು ಪಾಲಿಸಿಕೊಂಡೇ ರಸ್ತೆ ಸಂಚಾರದಲ್ಲಿ ಮುಂದುವರೆಯಬೇಕು. ಬಹಳಷ್ಟು ಅಪಘಾತ ಪ್ರಕರಣಗಳು ರಸ್ತೆ ಸಂಚಾರ ನಿಯಮಗಳ ಉಲ್ಲಂಘನೆಯಿಂದಲೇ ನಡೆಯುತ್ತಿವೆ. ಅತಿ ವೇಗ ಮತ್ತು ಅಜಾಗರೂಕತೆಯ ಚಾಲನೆಗೆ ಕಡಿವಾಣ ಹಾಕಿಕೊಳ್ಳುವ ಮನಸ್ಸು ಎಲ್ಲರಲ್ಲಿಯೂ ಬರಬೇಕು. ಪ್ರಾಣಕ್ಕಿಂತ ಬೇರೇನೂ ಮುಖ್ಯವಲ್ಲ ಅಲ್ಲವೆ?
-ರಾಹುಲ್ ಕುಮಾರ್ ಶಹಪೂರ್ ವಾಡ್, ಎಸ್ಪಿ, ತುಮಕೂರು.
ಸಾ.ಚಿ.ರಾಜಕುಮಾರ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ