ತುಮಕೂರು:

ರೈತರು, ವರ್ತಕರು ಮತ್ತು ಗ್ರಾಹಕರ ನಡುವೆ ಇದ್ದ ಶತಮಾನಗಳ ಕೊಂಡಿ ಕಳಚಿ ಹೋಗಲಿದೆಯೇ…? ಇಂತಹ ಜಿಜ್ಞಾಸೆ, ಮತ್ತು ಆತಂಕ ಕೆಲವು ವರ್ಗದಲ್ಲಿ ಎದುರಾಗಿದೆ. ಈ ಬಗೆಗಿನ ಚರ್ಚೆಗಳು ವ್ಯಾಪಕವಾಗುತ್ತಿವೆ.
ಕೃಷಿ ಉತ್ಪನ್ನ ಮಾರುಕಟ್ಟೆ ಕಾಯಿದೆಗೆ ಕರ್ನಾಟಕ ಸರ್ಕಾರ ತಿದ್ದುಪಡಿ ತಂದಿದ್ದು, ಸಂಪುಟ ಒಪ್ಪಿಗೆ ನೀಡಿದೆ. ರಾಜ್ಯಪಾಲರ ಅಂಕಿತವಷ್ಟೆ ಬಾಕಿ ಇದೆ. ಒಂದು ಕಡೆ ಸರ್ಕಾರ ಎಪಿಎಂಸಿ ತಿದ್ದುಪಡಿ ಮಸೂದೆಯಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳುತ್ತಿದ್ದರೆ, ರೈತ ಸಂಘಟನೆಗಳು ಹಾಗೂ ವಿಪಕ್ಷ ನಾಯಕರುಗಳು ಈ ತಿದ್ದುಪಡಿಯಿಂದ ಆಗುವ ಅನಾಹುತಗಳೇನು ಎಂಬುದನ್ನು ಮುಂದಿಡುತ್ತಿದ್ದಾರೆ.
ಕರ್ನಾಟಕ ಕೃಷಿ ಉತ್ಪನ್ನಗಳ ಮಾರಾಟ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆಯನ್ನು ಮೊದಲ ಬಾರಿಗೆ 1966 ರಲ್ಲಿ ಜಾರಿಗೆ ತರಲಾಗಿತ್ತು. ನಂತರ 1986 ರಲ್ಲಿ ರೈತರ ಹಿತದೃಷ್ಟಿಯಿಂದ ಈ ಕಾಯ್ದೆಗೆ ಕೆಲವು ತಿದ್ದುಪಡಿಗಳನ್ನು ಮಾಡಲಾಗಿತ್ತು. 2017 ರಲ್ಲಿ ಎಪಿಎಂಸಿ ಮಾದರಿ ಕಾಯ್ದೆಯನ್ನು ಜಾರಿಗೆ ತರಲಾಯಿತು. ಕೇಂದ್ರ ಸರ್ಕಾರವು ಇತ್ತೀಚೆಗೆ ರಾಜ್ಯ ಸರ್ಕಾರಗಳಿಗೆ ಒಂದು ಸೂಚನೆ ಹೊರಡಿಸಿ ಈ ಕಾಯ್ದೆಗೆ ತಿದ್ದುಪಡಿ ತರಬೇಕೆಂದು ಸೂಚಿಸಿತ್ತು. ಕೇಂದ್ರದ ಸೂಚನೆಯನ್ವಯ ರಾಜ್ಯ ಸರ್ಕಾರವು ಅನಿವಾರ್ಯವಾಗಿ ಈ ತಿದ್ದುಪಡಿ ಅಧ್ಯಾದೇಶಕ್ಕೆ ಮುಂದಾಗಲೇಬೇಕಾಯಿತು. ಅದರಂತೆ ಕಾಯ್ದೆಯ 2 ಸೆಕ್ಷನ್‍ಗಳು ತಿದ್ದುಪಡಿಗೊಂಡಿವೆ.
ಇನ್ನು ಮುಂದೆ ಮಾರುಕಟ್ಟೆ ಸಮಿತಿಯ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಸಮಿತಿಗಳು ಅಧಿಕಾರ ಕಳೆದುಕೊಳ್ಳಲಿವೆ. ರೈತರು ತಾವು ಇಚ್ಛಿಸುವ ಖಾಸಗಿಯವರಿಗೆ(ಕಂಪನಿ ಅಥವಾ ಬಂಡವಾಳಗಾgರು}À ನೇರವಾಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದು. ಇದರಿಂದ ಎಪಿಎಂಸಿ ನಿಯಂತ್ರಣವೆ ತಪ್ಪಿ ಹೋಗಲಿದೆ.
ರೈತರು ಬೆಳೆಯುವ ಬೆಳೆಯನ್ನು ಎಪಿಎಂಸಿಗಳಲ್ಲಿ ಮಾರಾಟ ಮಾಡುವಂತಹ ವ್ಯವಸ್ಥೆ ಬಹಳ ಹಿಂದಿನಿಂದಲೂ ಜಾರಿಯಲ್ಲಿದೆ. ಖರೀದಿ ಮಾಡುವ ವ್ಯಾಪಾರಿಗಳು ಎಪಿಎಂಸಿಗಳಲ್ಲಿ ನೋಂದಣಿ ಮಾಡಿಸಿಕೊಂಡು ರೈತರು ಬೆಳೆದ ಬೆಳೆಯನ್ನು ಹರಾಜಿನ ಮೂಲಕ ಖರೀದಿಸುತ್ತಾರೆ. 2017ರ ಮಾದರಿ ಕಾಯ್ದೆಯ ಪ್ರಕಾರ ಆನ್‍ಲೈನ್ ಟೆಂಡರ್ ಖರೀದಿಯಲ್ಲಿಯೂ ಭಾಗವಹಿಸುವ ಅವಕಾಶವಿತ್ತುÉ. ಈಗ ಈ ಕಾಯ್ದೆಯ 8ನೇ ಕಲಂಗೆ ತಿದ್ದುಪಡಿ ತರಲಾಗಿದ್ದು, ಎಪಿಎಂಸಿಗಳ ಮೂಲಕವೇ ಮಾರಾಟ ಮಾಡಬಹುದಾದ ಎಲ್ಲ ಸಾಧ್ಯತೆಗಳು ಕ್ಷೀಣಿಸುತ್ತವೆ.
ಕೇಂದ್ರ ಸರ್ಕಾರ ಸುಗ್ರೀವಾಜ್ಞೆಗೆ ಸೂಚಿಸಿರುವ ಹಾಗೂ ಹಾಲಿ ಜಾರಿಗೆ ಬರುತ್ತಿರುವ ಉದ್ದೇಶಿತ ತಿದ್ದುಪಡಿ ಕಾಯ್ದೆಯು ಮೇಲ್ನೋಟಕ್ಕೆ ರೈತರಿಗೆ ಅನುಕೂಲ ಎನ್ನುವಂತಿದ್ದರೂ ಇದೆಲ್ಲವೂ ಬಹುರಾಷ್ಟ್ರೀಯ ಕಂಪನಿಗಳಿಗೆ ಮಣೆಹಾಕುವ ಹುನ್ನಾರವಷ್ಟೆ ಎಂಬ ಆರೋಪಗಳು ವಿವಿಧ ವರ್ಗಗಳಿಂದ ಬಲವಾಗಿ ಕೇಳಿಬರುತ್ತಿವೆ. ಏಕೆಂದರೆ, ಹಾಲಿ ವ್ಯವಸ್ಥೆಯ ಅಡಿಯಲ್ಲಿ ಎಪಿಎಂಸಿ ಕಾಯ್ದೆಯಡಿ ಬಹುರಾಷ್ಟ್ರೀಯ ಕಂಪನಿಗಳು ರೈತರಿಂದ ನೇರವಾಗಿ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಲು ಅವಕಾಶ ಇರಲಿಲ್ಲ. ಇಂತಹ ಅಡೆತಡೆಯನ್ನು ನಿವಾರಿಸುವ ಪ್ರಯತ್ನ ಈ ತಿದ್ದುಪಡಿಯಲ್ಲಾಗಿದೆ.
ಬಹುರಾಷ್ಟ್ರೀಯ ಕಂಪನಿಗಳು ರೈತರ ಉತ್ಪನ್ನಗಳನ್ನು ಖರೀದಿ ಮಾಡಲು ಕೃಷಿ ನಿರ್ದೇಶನಾಲಯದ ಅನುಮತಿ ಪಡೆಯುವುದು ಅಗತ್ಯವಾಗಿತ್ತು. ಇದೀಗ ಎಪಿಎಂಸಿ ಒಳಗೆ ಅಥವಾ ಹೊರಗೆ ರೈತರ ಉತ್ಪನ್ನಗಳನ್ನು ಖರೀದಿ ಮಾಡಲು ಯಾವುದೇ ಅನುಮತಿ ಅನಗತ್ಯ ಎಂಬುದನ್ನು ತಿದ್ದುಪಡಿ ಮೂಲಕ ನಿರೂಪಿಸಲಾಗಿದೆ. ಇದರಿಂದಾಗಿ ರೈತರಿಗೆ ನಿಗದಿತ ಬೆಲೆ ಸಿಗುವ ಯಾವುದೇ ಖಾತ್ರಿ ಇಲ್ಲ ಎಂಬುದು ರೈತ ಸಂಘಟನೆಗಳ ಮುಖಂಡರ ಆರೋಪ.
ಒಮ್ಮೆ ಬಹುರಾಷ್ಟ್ರೀಯ ಕಂಪನಿಗಳು ನಮ್ಮ ವ್ಯವಸ್ಥೆಯೊಳಗೆ ಕಾಲಿಟ್ಟರೆ ರೈತರನ್ನು ಆಕರ್ಷಿಸುವ ಕೆಲಸ ಮಾಡುತ್ತವೆ. ರೈತರಿಂದ ಹೆಚ್ಚಿನ ಬೆಲೆಗೆ ಖರೀದಿಸಲು ಮುಂದಾಗುತ್ತವೆ. ರೈತರು ಇದರಿಂದ ಆಕರ್ಷಣೆಗೆ ಒಳಗಾಗುತ್ತಾರೆ. ಪರಿಣಾಮವಾಗಿ ಸಣ್ಣಪುಟ್ಟ ಖರೀದಿದಾರರು ಕ್ರಮೇಣ ಮೂಲೆ ಸರಿಯುತ್ತಾರೆ. ಶತಮಾನಗಳಿಂದ ರೈತರೊಂದಿಗೆ ಬಾಂಧವ್ಯ ಬೆಸೆದುಕೊಂಡು ಬಂದಿರುವ ವ್ಯಾಪಾರಸ್ಥರು ದೂರವಾಗುತ್ತಾರೆ ಎಂಬ ಆತಂಕ ಈ ತಿದ್ದುಪಡಿ ಕಾಯಿದೆಯನ್ನು ವಿರೋಧಿಸುವವರಲ್ಲಿ ಇದೆ.
ರೈತರು ಮತ್ತು ಖರೀದಿದಾರರ ನಡುವೆ ನಮ್ಮ ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ ಅನೇಕ ರೀತಿಯ ಸಂಬಂಧಗಳು ಬೆಸೆದು ಹೋಗಿವೆ. ತಮಗೆ ಕಷ್ಟಕಾಲ ಬಂದಾಗ ವ್ಯಾಪಾರಸ್ಥರಿಂದ ಕೈ ಸಾಲದ ರೂಪದಲ್ಲಿ ಹಣ ಪಡೆಯುತ್ತಾ ಬಂದಿದ್ದಾರೆ. ಕೃಷಿ ಚಟುವಟಿಕೆಗಳಿಗೆ ಹಾಗೂ ಮನೆ ಖರ್ಚುಗಳಿಗೆ ಅಗತ್ಯವಿದ್ದ ಸಂದರ್ಭದಲ್ಲಿ ಖರೀದಿದಾರರು ರೈತರ ನೆರವಿಗೆ ಬಂದಿದ್ದಾರೆ. ಇದು ತಾತ ಮುತ್ತಾತನ ಕಾಲದಿಂದ ವಂಶಪಾರಂಪರ್ಯವಾಗಿ ನಡೆದುಕೊಂಡು ಬಂದಿರುವ ಪದ್ಧತಿ. ಸಾಲ ತೆಗೆದುಕೊಂಡವರು ತಡವಾದರೂ ವಾಪಸ್ ತೀರಿಸುತ್ತಾರೆ. ರೈತರ ಮೇಲೆ ನಂಬಿಕೆ ಇಟ್ಟು ವ್ಯಾಪಾರಸ್ಥರು ಸಾಲ ಕೊಡುತ್ತಾರೆ. ಈ ನಂಬಿಕೆಯ ಬಾಂಧÀವ್ಯ ಇನ್ನೂ ಮುಂದುವರೆದುಕೊಂಡು ಬಂದಿದೆ. ತಿದ್ದುಪಡಿ ಕಾಯಿದೆಯು ಬೇರೆ ಬೇರೆ ಹೊರಗಿನ ಕಂಪನಿಗಳು ನೇರವಾಗಿ ರೈತರಿಂದಲೇ ಖರೀದಿಸುವ ಅವಕಾಶ ಮಾಡಿಕೊಡುವುದರಿಂದ ಈ ಸಂಬಂಧಗಳು ದೂರವಾಗಿ ಹೊಸ ಸಂಬಂಧಗಳು ಆರಂಭ ಆಗಬಹುದು. ಆದರೆ ಹಿಂದಿನ ಸಂಬಂಧದ ರೀತಿಯಲ್ಲಿ ಇವು ಉಳಿಯಲಾರವು. ಏಕೆಂದರೆ ಬಹುರಾಷ್ಟ್ರೀಯ ಕಂಪನಿಗಳಿಗೆ ಮಾರಾಟ ಮತ್ತು ಲಾಭದ ಹಿತವಷ್ಟೇ ಮುಖ್ಯವಾಗುವುದರಿಂದ ರೈತರ ಚಿಂತನೆ ಲೆಕ್ಕಕ್ಕೆ ಬರುವುದೇ ಇಲ್ಲ. ಹೀಗಾಗಿ ದರ ನಿಗದಿಪಡಿಸುವುದೂ ಸೇರಿದಂತೆ ಎಲ್ಲ ನಿರ್ಧಾರಗಳು ಅವರ ಕೈಯಲ್ಲೇ ಇರುತ್ತವೆ.
ನಮ್ಮ ಸರ್ಕಾರಿ ಸಹಭಾಗಿತ್ವದ ವ್ಯವಸ್ಥೆಯಲ್ಲಿ ಏನಾದರೂ ಲೋಪದೋಷಗಳಾದರೆ ಒಂದು ವ್ಯವಸ್ಥೆಯನ್ನು ಪ್ರಶ್ನಿಸಬಹುದು. ಅದಕ್ಕಾಗಿಯೇ ಎಪಿಎಂಸಿ ಸಮಿತಿ, ಅದಕ್ಕೆ ಅಧಿಕಾರಿಗಳು, ಪ್ರತಿನಿಧಿಗಳು ಇರುತ್ತಾರೆ. ಸಮಸ್ಯೆ ಬಂದಾಗ ಇವರೆಲ್ಲ ಸೇರಿ ಅದನ್ನು ಇತ್ಯರ್ಥಪಡಿಸಲು ಶ್ರಮಿಸುತ್ತಾರೆ. ಇನ್ನು ಮುಂದೆ ಸ್ಥಳೀಯವಾಗಿ ಈ ಎಪಿಎಂಸಿಗಳ ಹಿಡಿತವೆ ಇಲ್ಲವೆಂದಾದರೆ ಯಾರನ್ನು ಕೇಳುವುದು?
ಬಂಡವಾಳಶಾಹಿ ವ್ಯವಸ್ಥೆಗೆ ಅವಕಾಶ:
ಯಾರ ಬಳಿ ಬಂಡವಾಳ ಇದೆಯೋ ಅಂತಹವರು ಮಾರುಕಟ್ಟೆ ವ್ಯವಸ್ಥೆಯನ್ನು ಮಾನೋಪಲಿ (ಏಕ ಸ್ವಾಮ್ಯ) ಮಾಡಿಕೊಳ್ಳುತ್ತಾರೆ. ಅವರೆ ಬೆಲೆಯನ್ನು ನಿರ್ಧರಿಸುತ್ತಾರೆ. ತಿದ್ದುಪಡಿ ಕಾಯ್ದೆ ಕೆಲವರಿಗೆ ಹೊಸದು ಎನ್ನಿಸಿರಬಹುದು. ಆದರೆ ಈ ಕಾಯ್ದೆ ಜಾರಿಗೆ ತರಲು ಈ ಹಿಂದಿನಿಂದಲೂ ಒಳಂದೊಳಗೆ ತೀರ್ಮಾನವಾಗಿದೆ. ಅದರ ಪರಿಣಾಮವಾಗಿಯೇ ಅಲ್ಲಲ್ಲಿ ವೇರ್‍ಹೌಸ್‍ಗಳು, ಕೋಲ್ಡ್ ಸ್ಟೋರೇಜ್‍ಗಳು ನಿರ್ಮಾಣವಾಗಿವೆ. ರೈತರಿಂದ ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಕೊಂಡು ಈ ಸ್ಟೋರೇಜ್‍ಗಳಲ್ಲಿ ಸಂಗ್ರಹಿಸುತ್ತಾರೆ. ದುಬಾರಿ ಬೆಲೆಗೆ ಗ್ರಾಹಕರಿಗೆ ನೀಡುತ್ತಾರೆ. ರೈತರು ಮತ್ತು ಗ್ರಾಹಕರು ಇಬ್ಬರೂ ಶೋಷಣೆಗೆ ಒಳಗಾಗುತ್ತಾರೆ. ರೈತರಿಂದ ಕಡಿಮೆ ದರಕ್ಕೆ ಕೊಂಡು ತಮಗೆ ಬೇಕಾದ ದರ ನಿಗದಿಪಡಿಸುವ ಅವಕಾಶ ಬಂಡವಾಳ ಶಾಹಿಗಳಿಗೆ ಸಿಗುವುದರಿಂದ ಇಡೀ ವ್ಯವಸ್ಥೆಯೆ ನಿರ್ನಾಮವಾಗಿ ಹೋಗಲಿದೆ ಎನ್ನುತ್ತಾರೆ ಕರ್ನಾಟಕ ರಾಜ್ಯ ಗ್ರಾಮ ಸೇವಾ ಸಂಘದ ಅಧ್ಯಕ್ಷ ಸಿ.ಯತಿರಾಜು.
ಬಂಡವಾಳ ಹಾಕುವವರು ರೈತರ ಉತ್ಪನ್ನಗಳನ್ನು ಮಾಲ್‍ಗಳಿಗೆ ಹಾಕುತ್ತಾರೆ. ಉದಾಹರಣೆಗೆ ತುಮಕೂರು ಸಮೀಪ ಇರುವ ಫುಡ್‍ಪಾರ್ಕ್ ಅನ್ನೇ ಒಂದು ಉದಾಹರಣೆಯನ್ನಾಗಿ ತೆಗೆದುಕೊಂಡರೆ, ಅಲ್ಲಿ ಎಲ್ಲ ರೈತರಿಂದ ಉತ್ಪನ್ನಗಳನ್ನು ಖರೀದಿಸುವುದಿಲ್ಲ. ತಮಗೆ ಬೇಕಾದ್ದನ್ನು ಮಾತ್ರವೆ ಖರೀದಿಸುತ್ತಾರೆ. ಅವರದ್ದೇ ಆಗಿರುವ ನೆಟ್‍ವರ್ಕ್ ವ್ಯವಸ್ಥೆಯಲ್ಲಿ ದುಬಾರಿ ದರಕ್ಕೆ ಮಾರುತ್ತಾರೆ. ಇನ್ನು ಮುಂದೆ ಇದೇ ರೀತಿ ವ್ಯವಸ್ಥೆ ನಿರ್ಮಾಣವಾಗುತ್ತದೆ. ಎಪಿಎಂಸಿಗಳು ನಾಶವಾಗುತ್ತವೆ. ಬಹುರಾಷ್ಟ್ರೀಯ ಕಂಪನಿಗಳು ಎಲ್ಲ ಕಡೆ ತಲೆ ಎತ್ತುತ್ತವೆ. ದರ ನಿಗದಿಯು ಈ ಕಂಪನಿಗಳ ಹಿತಾಸಕ್ತಿ ಅವಲಂಬಿಸಿ ಒಮ್ಮೆ ಆಕಾಶಕ್ಕೆ ಹೋದರೆ ಮತ್ತೊಮ್ಮೆ ಪಾತಾಳಕ್ಕೆ ಕುಸಿಯುತ್ತದೆ. ಇವೆಲ್ಲವನ್ನು ಸಹಿಸಿಕೊಳ್ಳಬೇಕು ಎಂಬ ಆತಂಕವನ್ನು ಅವರು ವ್ಯಕ್ತಪಡಿಸುತ್ತಾರೆ.
ಎಪಿಎಂಸಿ ತಿದ್ದುಪಡಿ ಕಾಯ್ದೆಯು ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡುತ್ತದೆ. ಬಹುರಾಷ್ಟ್ರೀಯ ಕಂಪನಿಗಳು ನೇರವಾಗಿ ರೈತರೊಂದಿಗೆ ಸಂಪರ್ಕ ಸಾಧಿಸುತ್ತವೆ. ಬೆಲೆ ನಿಗದಿ ಈ ಕಂಪನಿ ಅಥವಾ ಬಂಡವಾಳಗಾರರ ಹಿಡಿತಕ್ಕೆ ಸಿಗುತ್ತದೆ. ರೈತರಿಂದ ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಪಡೆದು ಅವರು ಬೇಕಾದ ದರಕ್ಕೆ ಮಾರಿಕೊಳ್ಳುತ್ತಾರೆ. ನಮ್ಮಲ್ಲಿ ಇರುವ ಎಪಿಎಂಸಿಗಳು ಸರಿಯಾಗಿವೆ ಎನ್ನಲಾಗದು. ಆದರೆ ಇರುವ ವ್ಯವಸ್ಥೆಯನ್ನೇ ಸರಿಪಡಿಸಿ ರೈತರು ಮತ್ತು ವರ್ತಕರ ನಡುವೆ ಇದ್ದ ಬಾಂಧÀವ್ಯವನ್ನು ವೃದ್ಧಿಪಡಿಸಬಹುದಿತ್ತು. ಬದಲಾಗಿ ಈ ವ್ಯವಸ್ಥೆಯನ್ನೇ ನಿರ್ನಾಮ ಮಾಡಲಾಗುತ್ತಿದೆ. ಭವಿಷ್ಯದಲ್ಲಿ ಎಪಿಎಂಸಿಗಳೆ ನಾಶವಾಗಲಿವೆ.
-ಸಿ.ಯತಿರಾಜು, ರಾಜ್ಯಾಧ್ಯಕ್ಷರು, ಕರ್ನಾಟಕ ಗ್ರಾಮ ಸೇವಾ ಸಂಘ.
ಎಪಿಎಂಸಿಗಳಿಗೆ ರೈತರು ಉತ್ಪನ್ನಗಳನ್ನು ತರುತ್ತಾರೆ. ಅಲ್ಲಿ ಟೆಂಡರ್ ಹಾಕಿದಾಗ ಅದಕ್ಕೆ ತಕ್ಕಂತೆ ಮಾರಾಟ ಮಾಡಿ ಹೋಗುತ್ತಾರೆ. ಮಾರುಕಟ್ಟೆಯಲ್ಲಿ ಏನು ದರ ಇದೆ ಎಂಬುದು ಎಲ್ಲರಿಗೂ ಬಹಿರಂಗವಾಗುತ್ತದೆ. ಈ ಟೆಂಡರ್ ನೋಡಿಕೊಂಡು ರೈತರು ವ್ಯವಹರಿಸುತ್ತಾರೆ. ಆದರೆ ಕಾಯ್ದೆಗೆ ತಿದ್ದುಪಡಿಯಾಗಿ ಬಂಡವಾಳಶಾಹಿಗಳು, ಖರೀದಿದಾರರು ರೈತರ ಬಳಿಗೆ ಹೋಗುವಂತಾದಾಗ ಅವರು ಕೇಳಿದ ದರಕ್ಕೆ ಕೊಡಬೇಕಾಗುತ್ತದೆ. ಕಳಪೆ ಮಾಲು, ಹಸಿ ಇತ್ಯಾದಿ ನೆಪ ಹೇಳಿಕೊಂಡು ದರದಲ್ಲಿ ವರ್ಗೀಕರಣ ಮಾಡುತ್ತಾರೆ. ರೈತರು ಯಾರಲ್ಲಿ ಪ್ರಶ್ನೆ ಮಾಡಬೇಕು? ಮಹಾರಾಷ್ಟ್ರದಲ್ಲಿ ಇಂತಹ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಅಲ್ಲಿ ವಿಫಲವಾಗಿರುವುದನ್ನು ಗಮನಿಸಬಹುದು.
-ಟಿ.ಆರ್.ಸುರೇಶ್, ಮಾಜಿ ಸದಸ್ಯರು, ಎಪಿಎಂಸಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
ಮುಂದುವರೆಯುವುದು….








