ತುಮಕೂರು : ಗ್ರಾಮಾಂತರಕ್ಕೆ ಮಣೆ, ಕೊರಟಗೆರೆ ಕಡೆಗಣನೆ!!

 ತುಮಕೂರು : 

     ಕಳೆದ ಆ.21ರಂದು ರಾಜ್ಯ ಸರಕಾರ ಅಧಿಸೂಚನೆ ಮೂಲಕ ಕೊರಟಗೆರೆ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ತುಮಕೂರು ಎಪಿಎಂಸಿ ಮಾರುಕಟ್ಟೆಯೊಳಗೆ ವಿಲೀನಗೊಳಿಸಿ ತುಮಕೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನಾಗಿ ಅಸ್ಥಿತ್ವಕ್ಕೆ ತಂದಿದೆ.

     ಇದಾದ ಬಳಿಕ ಸೆ. 16ರಂದು ಎಪಿಎಂಸಿಗೆ ಅಧ್ಯಕ್ಷ, ಉಪಾಧ್ಯಕ್ಷರು ಸೇರಿ 15 ಮಂದಿ ಹೊಸ ಸದಸ್ಯರನ್ನು ನಾಮ ನಿರ್ದೇಶನ ಮಾಡಿದ್ದು, ಕೊರಟಗೆರೆಯ ಒಬ್ಬರಿಗೂ ಪ್ರಾತಿನಿಧ್ಯ ಸಿಕ್ಕಿಲ್ಲ. ಅಷ್ಟು ಸದಸ್ಯರು ತುಮಕೂರು ಗ್ರಾಮಾಂತರ, ನಗರಕ್ಕೆ ಸೇರಿದವರಾಗಿದ್ದು, ಆಡಳಿತಾರೂಢ ಪಕ್ಷದವರ ಮಾತಿಗೆ ಮಣೆಹಾಕಿ ಕೊರಟಗೆರೆ ಕಡೆಗಣಿಸಲಾಗಿದೆ ಎಂಬ ಅಸಮಾಧಾನಗಳು ವಿಪಕ್ಷಗಳಿಂದ ವ್ಯಕ್ತವಾಗಿದೆ.

      ಕೊರಟಗೆರೆಯನ್ನೊಳಗೊಂಡಂತೆ ಮತ್ತೆ ಅಸ್ಥಿತ್ವಕ್ಕೆ ಬಂದಿರುವ ತುಮಕೂರು ಎಪಿಎಂಸಿಗೆ ಅಧ್ಯಕ್ಷರಾಗಿ ತುಮಕೂರು ತಾಲೂಕಿನ ಹೆಬ್ಬೂರಿನ ಕುಂಟರಾಯನಪಾಳ್ಯದ ಕೆ.ಎಂ.ಉಮೇಶ್‍ಗೌಡ ಎರಡನೇ ಅವಧಿಗೆ ಅಧ್ಯಕ್ಷರಾದರೆ, ಕೊಟ್ಟನಹಳ್ಳಿ ಶಿವರಾಜು ಉಪಾಧ್ಯಕ್ಷರಾಗಿ, ಸದಸ್ಯರಾಗಿ ಚಿಕ್ಕಸಾರಂಗಿ ಸಿ.ಡಿ.ಪ್ರಕಾಶ್, ಗೂಳೂರಿನ ಸಿದ್ದರಾಜು, ಹೆಬ್ಬೂರು ಹೋಬಳಿ ರಾಮಕೃಷ್ಣಾಪುರದ ಆರ್.ಸಿ.ಶಿವಕುಮಾರ್, ನೇರಳಾಪುರದ ಎನ್.ಎಸ್.ಹೊನ್ನೇಶ್‍ಕುಮಾರ್, ಯಲ್ಲಾಪುರದ ರತ್ನಮ್ಮ, ಬೆಳಗುಂಬದ ಪುಟ್ಟಲಕ್ಷ್ಮಮ್ಮ, ನಾಗವಲ್ಲಿಯ ಎನ್.ಟಿ.ನಾಗರಾಜು, ರಂಗಯ್ಯನಪಾಳ್ಯದ ಸುಭಾಷ್‍ಚಂದ್ರ, ರಂಗನಾಥಪುರದ ಪಾರ್ವತಮ್ಮ, ತುಮಕೂರು ನಗರದ ವರ್ತಕ ಈಶ್ವರಗುಪ್ತ, ಯಲ್ಲಾಪುರದ ಲೋಕೇಶ್, ಹುಳ್ಳೇನಹಳ್ಳಿಯ ನೀಲಕಂಠಯ್ಯ, ಬೆಳ್ಳಾವಿ ಅರಳೆಕಟ್ಟೆಯ ಶಿವರಾಜು ಸದಸ್ಯರಾಗಿ ನಾಮನಿರ್ದೇಶಿತಗೊಂಡಿದ್ದಾರೆ.

ಹೊಸ ಸಮಿತಿಗೆ ಚುನಾವಣೆ ಮೂಲಕ ಆಯ್ಕೆ ಮಾಡಿದ್ದರೆ ಕೊರಟಗೆರೆ ಭಾಗಕ್ಕೂ ಕ್ಷೇತ್ರಗಳು ಸಿಗುತ್ತಿದ್ದವು. ಪ್ರಾತಿನಿಧ್ಯ ದೊರೆಯುತ್ತಿತ್ತು. ಆದರೆ ನಾಮನಿರ್ದೇಶನ ಮೂಲಕ ಸದಸ್ಯರನ್ನು ನಿಯೋಜಿಸಿರುವುದರಿಂದ ಆಡಳಿತಾರೂಢ ಬಿಜೆಪಿಯವರಿಗೆ ಅದರಲ್ಲೂ ಗ್ರಾಮಾಂತರ ಕ್ಷೇತ್ರದವರಿಗೆ ಮಾತ್ರ ಮಣೆಹಾಕಿರುವುದು ಸರಕಾರದ ಅಧಿಸೂಚನೆಯಲ್ಲಿ ಕಂಡುಬಂದಿದೆ.

ಪರಮೇಶ್ವರ್ ವಿರೋಧಿಸಿದ್ದರು :

      ಕೊರಟಗೆರೆ ಶಾಸಕರಾದ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಕೊರಟಗೆರೆ ರೈತರ ಅನುಕೂಲಕ್ಕಾಗಿ ಪ್ರತ್ಯೇಕ ಕೃಷಿ ಉತ್ಪನ್ನ ಮಾರುಕಟ್ಟೆ ಬೇಕೆಂದು ಪಟ್ಟುಹಿಡಿದು ಹಿಂದಿನ ಕಾಂಗ್ರೆಸ್ ಸರಕಾರದಲ್ಲಿ ಕೊರಟಗೆರೆಗೆ ಪ್ರತ್ಯೇಕ ಎಪಿಎಂಸಿ ಸಮಿತಿ ಅಸ್ಥಿತ್ವಕ್ಕೆ ತಂದಿದ್ದರು. ಅಲ್ಲಿ ಹೊಸ ಕಟ್ಟಡ, ಮಾರುಕಟ್ಟೆ ಪ್ರಾಂಗಣ ಸಹ ನಿರ್ಮಾಣವಾಗಿತ್ತು. ಆದರೆ ಬದಲಾದ ಸರಕಾರದಲ್ಲಿ, ಮಾರುಕಟ್ಟೆಯಲ್ಲಿ ಹೆಚ್ಚು ವಹಿವಾಟು ನಡೆಯುತ್ತಿಲ್ಲ ಎಂಬ ಕಾರಣ ಮುಂದು ಮಾಡಿ ಕೊರಟಗೆರೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನೇ ರದ್ದು ಮಾಡಿರುವುದು ವಿಪಕ್ಷ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿಸಿದೆ.

      ಕೊರಟಗೆರೆ ಎಪಿಎಂಸಿ ರದ್ದತಿ ವಿಚಾರವಾಗಿ ಪರಮೇಶ್ವರ ಅವರು ಯಡಿಯೂರಪ್ಪ ಸಿಎಂ ಆಗಿದ್ದಾಗ ಪತ್ರ ಬರೆದು ಸಹ ಸರಕಾರದ ಪ್ರಯತ್ನಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ವಿಪಕ್ಷ ನಾಯಕರ ಆಗ್ರಹಕ್ಕೆ ಓಗೊಡದ ಸರಕಾರ ಕೊರಟಗೆರೆ ಸಮಿತಿ ರದ್ದುಗೊಳಿಸುವ ಜೊತೆಗೆ ತುಮಕೂರು ತಾಲೂಕಿನವರನ್ನು ಮಾತ್ರವೇ ನಾಮನಿರ್ದೇಶನ ಮಾಡಿರುವುದು ವಿವಾದಕ್ಕೆ ಎಡೆಮಾಡಿದೆ.

ಚುನಾವಣೆ ನಡೆದಿದ್ದರೆ ಕೊರಟಗೆರೆ ಪ್ರಾತಿನಿಧ್ಯ ಸಿಗುತ್ತಿತ್ತು…!

      ತುಮಕೂರು ಎಪಿಎಂಸಿಗೆ ಮತ್ತೆ ಕೊರಟಗೆರೆ ವಿಲೀನಗೊಳಿಸಿ, ಹೊಸ ಸಮಿತಿ ಅಸ್ಥಿತ್ವಕ್ಕೆ ತರಲಾಗಿದ್ದು, ಚುನಾವಣೆ ನಡೆದಿದ್ದರೆ ಕೊರಟಗೆರೆಯ ಹೊಳವನಹಳ್ಳಿ, ಕೋಳಾಲ ಹೀಗೆ ಎಲ್ಲಾ ಹೋಬಳಿಗಳಿಗೂ ಒಬ್ಬರು ರೈತ ಪ್ರತಿನಿಧಿಗಳು ಆಯ್ಕೆಯಾಗುತ್ತಿದ್ದರು. ಆದರೆ ಹೊಸ ಎಪಿಎಂಸಿ ಸಮಿತಿ ಹೆಸರಲ್ಲಿ ಆಡಳಿತ ಮಂಡಳಿಯ 15 ಜನರನ್ನು ನಾಮನಿರ್ದೇಶನ ಮಾಡಿದ್ದು, ಕೊರಟಗೆರೆಯವರು ಒಬ್ಬರು ನೇಮಕವಾಗದಿರುವುದು ಪ್ರಾದೇಶಿಕ ತಾರತಮ್ಯಕ್ಕೆ ಕಾರಣವಾಗಿದೆ. ಸರಕಾರದ ನಡೆಗೆ ಕೊರಟಗೆರೆ ಭಾಗದಲ್ಲಿ ವಿರೋಧಕ್ಕೆ ಕಾರಣವಾಗಿದೆ.

      ತುಮಕೂರು ಎಪಿಎಂಸಿಗೆ ಕೊರಟಗೆರೆಯನ್ನು ಮತ್ತೆ ವಿಲೀನಗೊಳಿಸಿ ಹೊಸ ಸಮಿತಿ ಅಸ್ಥಿತ್ವಕ್ಕೆ ತಂದಿರುವುದು ಸರಿಯಷ್ಟೇ. ಆದರೆ ಕೊರಟಗೆರೆಯ ಒಬ್ಬ ರೈತ ಪ್ರತಿನಿಧಿಯನ್ನು ನಾಮ ನಿರ್ದೇಶನ ಮಾಡದಿರುವ ಸರಕಾರದ ಕ್ರಮ ಸರಿಯಲ್ಲ. ಚುನಾವಣೆ ನಡೆದಿದ್ದರೆ ಕೊರಟಗೆರೆಯ ವಿವಿಧ ಹೋಬಳಿಗಳಿಂದ ಒಬ್ಬೊಬ್ಬರು ರೈತ ಪ್ರತಿನಿಧಿ ಆಯ್ಕೆಯಾಗುತ್ತಿದ್ದರು. ನಾಮ ನಿರ್ದೇಶನದ ಹೆಸರಲ್ಲಿ ಕೊರಟಗೆರೆ ಕಡೆಗಣಿಸಿ ಬರೀ ಗ್ರಾಮಾಂತರಕ್ಕೆ ಮಣೆ ಹಾಕಿರುವುದು ಪ್ರಶ್ನಾರ್ಹವಾಗಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್‍ಗೌಡ ಅವರು ಗ್ರಾಮಾಂತರ ಮಾಜಿ ಶಾಸಕರಷ್ಟೇ ಅಲ್ಲ.್ಲ ಜಿಲ್ಲಾ ಬಿಜೆಪಿ ಅಧ್ಯಕ್ಷರೂ ಆಗಿರುವುದರಿಂದ ಕೊರಟಗೆರೆಗೆ ನ್ಯಾಯ ಕೊಡಿಸುವುದು ಅವರ ಧರ್ಮ.
-ಆರ್.ಕಾಮರಾಜ್ ಎಪಿಎಂಸಿ ಮಾಜಿ ಸದಸ್ಯರು.

      ಕೊರಟಗೆರೆಯ ಎಪಿಎಂಸಿಯನ್ನು ರದ್ದುಪಡಿಸಿ ವಿಲೀನಗೊಳಿಸಿದ ಪ್ರಕ್ರಿಯಿಯೇ ಸರಿಯಲ್ಲ. ಆದರೂ ವಿಲೀನಗೊಳಿಸಿ ನಾಮನಿರ್ದೇಶನ ಮಾಡುವಲ್ಲಿ ಕೊರಟಗೆರೆಯ ಒಬ್ಬ ರೈತಪ್ರತಿನಿಧಿಯನ್ನು ಪರಿಗಣಿಸದಿರುವುದು ಕೊರಟಗೆರೆ ಭಾಗದ ರೈತರಿಗೆ ಮಾಡಿದ ಅನ್ಯಾಯ. ರೈತರ ಸಮಿತಿಯನ್ನು ಆಲಿಸುವ ಸಮಿತಿಗೆ ಅವರನ್ನು ಪ್ರತಿನಿಧಿಸುವ ಪ್ರತಿನಿಧಿಯೇ ಇಲ್ಲದಿದ್ದರೆ ಹೇಗೆ? ಈ ಅನ್ಯಾಯವನ್ನು ಜಿಲ್ಲಾ ಉಸ್ತುವಾರಿ ಸಚಿವರು, ಸಹಕಾರ ಸಚಿವರು ಸರಿಪಡಿಸಬೇಕು.

-ಪಿ.ಆರ್.ಸುಧಾಕರಲಾಲ್, ಜೆಡಿಎಸ್ ಮಾಜಿ ಶಾಸಕರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
 

 ಎಸ್.ಹರೀಶ್ ಆಚಾರ್ಯ

 

Recent Articles

spot_img

Related Stories

Share via
Copy link