ತುಮಕೂರು : ನಗರದಲ್ಲಿ ಶಾಂತಿಯುತ ಬಂದ್ ಆಚರಣೆ!!

 ತುಮಕೂರು : 

      ರೈತರಿಗೆ ಮಾರಕವಾಗಿರುವ ಮಸೂದೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ, ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತರನ್ನು ಬೆಂಬಲಿಸಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿ ಮಂಗಳವಾರ ಕರೆ ನೀಡಿದ್ದ ಭಾರತ್ ಬಂದ್ ತುಮಕೂರಿನಲ್ಲಿ ಶಾಂತಿಯುತವಾಗಿ ನಡೆಯಿತು.

    ಬಂದ್ ಬೆಂಬಲಿಸಿ ರೈತ, ಕಾರ್ಮಿಕ, ದಲಿತಪರ ಸಂಘಟನೆಗಳು ವಿವಿಧ ಸ್ವರೂಪದ ಹೋರಾಟ ರೂಪಸಿ ಕೇಂದ್ರ ಸರ್ಕಾರದ ರೈತ ವಿರೋಧಿ ಧೊರಣೆ ಖಂಡಿಸಿದವು. ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಟೌನ್‍ಹಾಲ್ ವೃತ್ತದಲ್ಲಿ ಕೇಂದ್ರ ಸರ್ಕಾರ ಅಣಕು ಶವಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

     ಬಂದ್ ವೇಳೆ ಟೌನ್‍ಹಾಲ್ ವೃತ್ತದಲ್ಲಿ ರೈತಪರ ಸಂಘಟನೆಗಳು ನಡೆಸಿದ ಪ್ರತಿಭಟನೆಯನ್ನು ಕಾಂಗ್ರೆಸ್, ಜೆಡಿಎಸ್ ಬೆಂಬಲಿಸಿದ್ದವು. ಈ ಪಕ್ಷಗಳ ಮುಖಂಡರು, ಕಾರ್ಯಕರ್ತರು ಹೋರಾಟದಲ್ಲಿ ಭಾಗಿಯಾಗಿದ್ದರು.

     ಭಾರತ್ ಬಂದ್‍ನಿಂದ ನಗರದಲ್ಲಿ ಸಾರ್ವಜನಿಕ ಚಟುವಟಿಕೆಗಳ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಲಿಲ್ಲ. ವಾಣಿಜ್ಯ ಪ್ರದೇಶ ಸೇರಿದಂತೆ ಬಹುತೇಕ ಅಂಗಡಿ ಮುಂಗಟ್ಟುಗಳು, ಹೋಟೆಲ್‍ಗಳು ತೆರೆದು ವ್ಯಾಪಾರ ವಹಿವಾಟು ನಡೆಸಿದವು. ಕೆಲವೆಡೆ ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಅಂಗಡಿ ಬಂದ್ ಮಾಡಿ ಬಂದ್‍ಗೆ ಸಹಕರಿಸಿದ್ದರು. ಸಾರಿಗೆ ಸಂಚಾರ ಸಹಜವಾಗಿತ್ತು. ಕೆಎಸ್ಸಾರ್ಟಿಸಿ, ಖಾಸಗಿ ಬಸ್‍ಗಳು ಎಂದಿನಂತೇ ಸಂಚರಿಸಿದವು. ಸರಕು ವಾಹನಗಳು, ಆಟೋರಿಕ್ಷಾ, ಖಾಸಗಿ ವಾಹನಗಳ ಸಂಚಾರ ಮಾಮೂಲಿತಾಗಿತ್ತು. ಸರ್ಕಾರಿ ಕಚೇರಿಗಳು, ಬ್ಯಾಂಕ್‍ಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

      ಪ್ರಮುಖ ರಸ್ತೆಗಳಲ್ಲಿ ಕೇಂದ್ರ ಸರ್ಕಾರದ ಅಣಕು ಶವಯಾತ್ರೆ ನಡೆಸಲು ಕಾರ್ಯಕರ್ತರು ಮುಂದಾದಾಗ ಪೊಲೀಸರು ತಡೆದರು. ಈ ವಿಚಾರವಾಗಿ ಪೊಲೀಸರು ಹಾಗೂ ಹೋರಾಟಗಾರರ ನಡವೆ ವಾಗ್ವಾದ ನಡೆಯಿತು. ಕೊನೆಗೆ, ಜಾಥಾದಲ್ಲಿ ಶವಯಾತ್ರೆ ಒಯ್ಯದೆ, ಟೌನ್‍ಹಾಲ್ ವೃತ್ತದಲ್ಲೇ ಯಾತ್ರೆ ಮಾಡಿ ದಹನ ಮಾಡಲು ತೀರ್ಮಾನಿಸಲಾಯಿತು. ಆ ನಂತರ ರೈತ ಸಂಘಟನೆ ಕಾರ್ಯಕರ್ತರು ಬಿ.ಹೆಚ್.ರಸ್ತೆ, ಜೆ.ಸಿ.ರಸ್ತೆ, ಮಂಡಿಪೇಟೆ ರಸ್ತೆ, ಬಾರ್‍ಲೈನ್‍ರಸ್ತೆನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೆರವಣಿಗೆಯುದ್ದಕ್ಕೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.

      ಇದಕ್ಕೂ ಮುನ್ನ ಟೌನ್‍ಹಾಲ್ ವೃತ್ತದಲ್ಲಿ ಮಾತನಾಡಿದ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಆನಂದ್ ಪಟೇಲ್, ಕೇಂದ್ರ ಸರ್ಕಾರದ ದೇಶದ ಸಂವಿಧಾನಗಳಿಗೆ ಬೆಲೆ ಕೊಡದೆ ಸರ್ವಾಧಿಕಾರಿಯಂತೆ ಹಿಟ್ಲರ್ ತತ್ವಗಳನ್ನು ಅಳವಡಿಸಿಕೊಂಡು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

      ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಆದರೂ ಕೇಂದ್ರ ಮಾನವ ಹಕ್ಕುಗಳ ಆಯೋಗ ಕೈಕಟ್ಟಿ ಕುಳಿತಿದೆ. ಪ್ರಧಾನಿ ನರೇಂದ್ರ ಮೋದಿಯವರ ಕೈಗೊಂಬೆಯಾಗಿ ಮಾನವ ಹಕ್ಕುಗಳ ಆಯೋಗ ಕೆಲಸ ಮಾಡುತ್ತಿದೆ ಎಂದು ದೂರಿದ ಅವರು, ತುಮಕೂರು ಸೇರಿದಂತೆ ಜಿಲ್ಲೆಯಾದ್ಯಂತ ಶಾಂತಿಯುತವಾಗಿ ಬಂದ್ ಆಚರಿಸಲಾಗುತ್ತಿದೆ. ನಮ್ಮ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

      ಕೇಂದ್ರ ಸರ್ಕಾರ ರೈತರ ಹೋರಾಟವನ್ನು ಹತ್ತಿಕ್ಕಲು ಸೈನಿಕರನ್ನು ಬಳಸುತ್ತಿದೆ, ರೈತರ ಮೇಲೆ ಅಶ್ರುವಾಯು, ಜಲಫಿರಂಗಿ ಬಲ ಪ್ರಯೋಗ ಮಾಡಿದೆ, ಹಿಟ್ಲರ್‍ನಂತೆ ಆಡಳಿತ ನಡೆಸುತ್ತಿರುವ ಸರ್ಕಾರದ ಮೇಲೆ ಮಾನವ ಹಕ್ಕುಗಳ ಆಯೋಗ ಹಾಗೂ ಸುಪ್ರೀಂ ಕೋರ್ಟ್ ಸ್ವಯಂ ಪ್ರಕರಣ ದಾಖಲಿಸಿಕೊಂಡು ಕೇಂದ್ರ ಸರ್ಕಾರಕ್ಕೆ ಛೀಮಾರಿ ಹಾಕಬೇಕು ಎಂದು ಆಗ್ರಹಿಸಿದರು.

      ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಧನಂಜಯ ಆರಾಧ್ಯ ಮಾತನಾಡಿ, ದೇಶದ 70 ಕೋಟಿ ರೈತರ ಹಿತ ಕಾಯದ ಕೇಂದ್ರ ಸರ್ಕಾರ ರೈತರ ಪಾಲಿಗೆ ಸತ್ತುಹೋಗಿದೆ. ಸರ್ಕಾರದ ಶವ ಯಾತ್ರೆ ಮೂಲಕ ಖಂಡಿಸಲಾಗುತ್ತದೆ ಎಂದರು.

      ಮುಖಂಡರಾದ ಕೋಡಿಹಳ್ಳಿ ಸಿದ್ಧರಾಜು, ರುದ್ರೇಶ್‍ಗೌಡ, ಪುಟ್ಟರಾಜು, ಕೀರ್ತಿ, ಎನ್.ಕೆ.ಸತೀಶ್, ರತ್ನಮ್ಮ, ಲಕ್ಷ್ಮೀನರಸಮ್ಮ, ಅರಸಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap