ತುಮಕೂರು : ಖಾಸಗಿ ಬಸ್’ಗಳತ್ತ ಮುಖಮಾಡದ ಜನ

ತುಮಕೂರು :

      ಸಾರಿಗೆ ಸಂಸ್ಥೆಯ ಬಸ್‍ಗಳು ಮಂಗಳವಾರ ಸಂಜೆಯಿಂದಲೇ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಬುಧವಾರ ಪ್ರಯಾಣಿಕರ ಸಂಖ್ಯೆ ನಗರದಲ್ಲಿ ತೀರಾ ವಿರಳವಾಗಿತ್ತು. ಬಸ್ ನಿಲ್ದಾಣದಲ್ಲಿ ಜನರ ಸಂಖ್ಯೆಯೂ ಕಡಿಮೆ ಇತ್ತು. ಪೊಲೀಸ್ ರಕ್ಷಣೆಯಲ್ಲಿ ಬಸ್‍ಗಳನ್ನು ಸಂಚಾರಕ್ಕೆ ಬಿಡಲಾಗುತ್ತದೆ ಎಂದು ಜಿಲ್ಲಾಡಳಿತ ಹೇಳಿತ್ತು. ಆದರೂ ಪ್ರಯಾಣಿಕರ ಸಂಖ್ಯೆ ಮಾತ್ರ ಅಲ್ಲಿ ಕಂಡುಬರಲಿಲ್ಲ.

      ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಪ್ರಯಾಣಿಕರು ಬಸ್ ನಿಲ್ದಾಣದ ಬಳಿ ಕಂಡು ಬಂದರು. ಅವರಿಗೂ ಬಸ್ ವ್ಯವಸ್ಥೆ ಇಲ್ಲದೆ ಪರದಾಡಿದ ದೃಶ್ಯ ಸಾಮಾನ್ಯವಾಗಿತ್ತು. ತುಮಕೂರು ನಗರ ಹಾಗೂ ಹೊರವಲಯಕ್ಕೆ ಹೋಗಿ ಬರುವವರು ಆಟೋರಿಕ್ಷಾ ಹಿಡಿದರು. ವಿವಿಧ ಭಾಗಗಳಿಗೆ ನಗರ ಸಾರಿಗೆ ವ್ಯವಸ್ಥೆ ಇದ್ದು, ಈ ವ್ಯವಸ್ಥೆ ಮುಷ್ಕರದ ಪರಿಣಾಮ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಆಟೋರಿಕ್ಷಾಗಳನ್ನು ಆಶ್ರಯಿಸಬೇಕಾಯಿತು.
ಈಗಾಗಲೇ ರಿಕ್ಷಾಗಳಲ್ಲಿ ಹೆಚ್ಚಿನ ದರ ಪಡೆಯುತ್ತಿದ್ದು, ಮುಷ್ಕರದ ಬಿಸಿಯನ್ನು ಆಟೋಗಳವರು ಚೆನ್ನಾಗಿ ಬಳಸಿಕೊಂಡರು. ಪ್ರಯಾಣಿಕರು ಅನ್ಯ ಮಾರ್ಗವಿಲ್ಲದೆ ಹೆಚ್ಚು ದರ ಕೊಟ್ಟು ತೆರಳಬೇಕಾಯಿತು. ನಗರ ಹಾಗೂ ಸುತ್ತಮುತ್ತ ಹೋಗಿಬರುವವರಿಗೆ ಆಟೋರಿಕ್ಷಾಗಳ ವ್ಯವಸ್ಥೆ ಇತ್ತು. ಆದರೆ ದೂರದ ಊರುಗಳಿಗೆ ಪ್ರಯಾಣಿಸುವವರಿಗೆ ಸಾರಿಗೆ ಸಂಸ್ಥೆಯ ಬಸ್‍ಗಳ ಜೊತೆಗೆ ಖಾಸಗಿ ಬಸ್‍ಗಳ ಕೊರತೆಯೂ ಕಂಡುಬಂದಿತು.

      ಕೊರೊನಾ ಲಾಕ್‍ಡೌನ್ ನಂತರ ಬಸ್‍ಗಳ ನಿರ್ವಹಣೆ ಮಾಡಲಾಗದೆ ಎಷ್ಟೋ ಬಸ್‍ಗಳು ಸ್ಥಗಿತಗೊಂಡಿವೆ. ಖಾಸಗಿ ಬಸ್ ಮಾಲೀಕರು ಸರ್ಕಾರದ ಮುಂದಿಟ್ಟ ಬೇಡಿಕೆಗಳು ಈಡೇರಲೇ ಇಲ್ಲ. ಇದರಿಂದಾಗಿ ನಿರ್ವಹಣೆಯ ಹೊಣೆ ಭರಿಸಲಾಗದೆ ಬಹಳಷ್ಟು ಬಸ್‍ಗಳು ಸ್ಥಗಿತಗೊಂಡವು. ಮುಖ್ಯ ರಸ್ತೆಗಳಲ್ಲಿ ಈ ಹಿಂದೆ ಓಡಾಡುತ್ತಿದ್ದ ವಾಹನ ಸಂಖ್ಯೆಯಲ್ಲಿ ಕಡಿಮೆಯಾಗಿದೆ. ಇದೇ ರೀತಿ ಗ್ರಾಮೀಣ ಪ್ರದೇಶಗಳಲ್ಲಿಯೂ ಖಾಸಗಿ ವಾಹನಗಳ ಸಂಖ್ಯೆ ಕಡಿಮೆಯಾಗಿದೆ. ಮುಷ್ಕರದ ಹಿನ್ನೆಲೆಯಲ್ಲಿ ಬುಧವಾರ ನಗರದಲ್ಲಿ ಖಾಸಗಿ ಬಸ್‍ಗಳು ಸಂಚಾರ ನಡೆಸಿದವಾದರೂ ನಿರೀಕ್ಷಿತ ಮಟ್ಟದಲ್ಲಿ ಜನರು ಇವುಗಳನ್ನು ಆಶ್ರಯಿಸಿದ್ದು ಕಂಡುಬರಲಿಲ್ಲ.

     ಬೆಂಗಳೂರಿನಿಂದ ತುಮಕೂರಿನ ಕಡೆಗೆ ಬರುವ ಖಾಸಗಿ ಬಸ್‍ಗಳಲ್ಲಿ ಕೆಲವು ತುಂಬಾ ಭರ್ತಿಯಾಗಿದ್ದರೆ, ಇನ್ನು ಕೆಲವು ಬಸ್‍ಗಳಲ್ಲಿ ಸೀಟಿನ ಭರ್ತಿ ಮಾತ್ರ ಕಂಡುಬಂದಿತು. ಮುಷ್ಕರದ ಹಿನ್ನೆಲೆಯಲ್ಲಿ ಪ್ರಯಾಣಿಕರು ತಮ್ಮದೇ ಆದ ವ್ಯವಸ್ಥೆಯನ್ನು ಮಾಡಿಕೊಂಡಿರುವುದು ತಿಳಿದು ಬಂದಿತು.
 
      ಸಾರಿಗೆ ಮುಷ್ಕರದ ಹಿನ್ನೆಲೆಯಲ್ಲಿ ಬಸ್‍ಗಳ ಓಡಾಟ ಸ್ಥಗಿತವಾದ್ದರಿಂದ ರಸ್ತೆಗಳಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್‍ಗಳ ಸಂಚಾರ ಸ್ಥಬ್ದವಾಗಿತ್ತು. ಖಾಸಗಿ ಬಸ್‍ಗಳ ಓಡಾಟ ಇದ್ದಿತಾದರೂ ನಿರೀಕ್ಷಿತ ಮಟ್ಟದಲ್ಲಿ ಕಂಡುಬರಲಿಲ್ಲ. ಪ್ರಯಾಣಿಕರು ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತಿದುದು ಕಂಡುಬಂದಿತು. ತುಮಕೂರಿನಿಂದ ಬೆಂಗಳೂರಿಗೆ ಹೋಗಿಬರುವ, ತುರ್ತು ಇರುವ ಅನೇಕರು ದ್ವಿಚಕ್ರ ವಾಹನಗಳ ಮೊರೆ ಹೋದರು. ಇನ್ನು ಕೆಲವರು ಅನಿವಾರ್ಯ ಪ್ರಕರಣಗಳಲ್ಲಿ ಖಾಸಗಿ ಟ್ಯಾಕ್ಸಿಗಳನ್ನು ಹಿಡಿದರು. ಆದರೆ ಮುಷ್ಕರದ ಪರಿಣಾಮ ಹೆಚ್ಚು ದರ ಭರಿಸಬೇಕಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link