ತುಮಕೂರು :
ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಸ್ತುತ ಶೈಕ್ಷಣಿಕ ವರ್ಷದ ಬಸ್‍ಪಾಸ್ ಅನ್ನು ಉಚಿತವಾಗಿ ನೀಡಬೇಕು ಮತ್ತು ಅಲ್ಲಿಯವರೆಗೂ ಹಿಂದಿನ ವರ್ಷದ ಪಾಸ್ ಅಥವಾ ಶಾಲಾ-ಕಾಲೇಜಿನ ಗುರುತಿನ ಚೀಟಿಯೊಂದಿಗೆ ಪ್ರಯಾಣಿಸಲು ಅನುಮತಿ ನೀಡಬೇಕೆಂದು ಒತ್ತಾಯಿಸಿ, ಎಐಡಿಎಸ್‍ಓ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಎಐಡಿಎಸ್‍ಓ ಜಿಲ್ಲಾ ಸಂಚಾಲಕಿ ಟಿ.ಇ.ಅಶ್ವಿನಿ, ಕೆಲವು ಕೋರ್ಸ್‍ಗಳ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿವೆ. ಇನ್ನೂ ಕೆಲವರಿಗೆ ಶೈಕ್ಷಣಿಕ ವರ್ಷ ಆರಂಭವಾಗಿದೆ. ವಿದ್ಯಾರ್ಥಿಗಳು ಪ್ರಸ್ತುತ ಗ್ರಾಮೀಣ ಪ್ರದೇಶಗಳಿಂದ ಶಾಲಾ-ಕಾಲೇಜುಗಳಿಗೆ ಹೋಗಲು ಬಸ್ ಟಿಕಟ್‍ನ ದರ ಪಾವತಿಸಿ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಸ್ ಟಿಕೆಟ್ ದರ ಹೊರೆಯಾಗಿ ಪರಿಣಮಿಸಿದೆ ಎಂದು ಹೇಳಿದರು.
ಎಐಡಿಎಸ್‍ಓ ಜಿಲ್ಲಾ ಸಂಘಟಕ ಲಕ್ಕಪ್ಪ ಮಾತನಾಡಿ, ಕಳೆದ ವರ್ಷ ವಿದ್ಯಾರ್ಥಿಗಳು ಪಡೆದಿದ್ದ ವಾರ್ಷಿಕ ಬಸ್‍ಪಾಸ್ ಸಂಪೂರ್ಣವಾಗಿ ಉಪಯೋಗವಾಗಿಲ್ಲ. ಕೊರೋನ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆದ ಪರಿಣಾಮ ಬಹುಪಾಲು ಶಾಲಾ-ಕಾಲೇಜಿಗೆ ರಜೆ ಘೋಷಣೆಯಾಗಿದ್ದಾಗ ವಾರ್ಷಿಕ ಬಸ್‍ಪಾಸ್ ಸುಮಾರು ಅರ್ಧ ವರ್ಷಕ್ಕೂ ಹೆಚ್ಚಾಗಿ ಬಳಕೆ ಆಗಿಲ್ಲ. ಈಗ ಮತ್ತೊಮ್ಮೆ ವಿದ್ಯಾರ್ಥಿಗಳು ವಾರ್ಷಿಕ ಬಸ್‍ಪಾಸ್‍ನ ಸಂಪೂರ್ಣ ವೆಚ್ಚ ಭರಿಸಿ ಪಡೆಯಬೇಕಾದುದ್ದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಹೇಳಿದರು.
ಕಳೆದ ಒಂದೂವರೆ ವರ್ಷಗಳಿಂದ ಕೋವಿಡ್ ಸಾಂಕ್ರಾಮಿಕ ರೋಗದಿಂದ ಜನಸಾಮಾನ್ಯರ ಜೀವನವು ಸಂಕಷ್ಟಕ್ಕೆ ಸಿಲುಕಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ಒದಗಿಸಬೇಕಾದದ್ದು ಸರ್ಕಾರದ ಕರ್ತವ್ಯ. ಆದ್ದರಿಂದ ಕೂಡಲೇ ಉಚಿತ ಬಸ್‍ಪಾಸ್ ವಿತರಿಸಬೇಕು ಅಥವಾ ಪ್ರವೇಶಾತಿ ರಸೀದಿಯಿದ್ದವರಿಗೆ ಪ್ರಯಾಣಿಸಲು ಅವಕಾಶ ನೀಡಬೇಕು.
ಟಿ.ಇ.ಅಶ್ವಿನಿ, ಎಐಡಿಎಸ್‍ಓ ಜಿಲ್ಲಾ ಸಂಚಾಲಕಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
