ತುಮಕೂರು :
6ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಸಾರಿಗೆ ನೌಕರರು ಮಂಗಳವಾರ ಮಧ್ಯಾಹ್ನದಿಂದಲೇ ಸೇವೆ ಸ್ಥಗಿತಗೊಳಿಸಿ ಹೂಡಿರುವ ಮುಷ್ಕರದ ಪರಿಣಾಮ ತುಮಕೂರು ಜಿಲ್ಲೆಯ ರಸ್ತೆ ಸಾರಿಗೆ ಪ್ರಯಾಣಿಕರ ಮೇಲೂ ಆಯಿತು.
ರಾಜ್ಯಮಟ್ಟದಲ್ಲಿ ಮುಷ್ಕರಕ್ಕೆ ಸಾರಿಗೆ ನೌಕರರ ಒಕ್ಕೂಟ ಕರೆ ನೀಡಿದ ಬೆನ್ನಿಗೆ ತುಮಕೂರು ಜಿಲ್ಲೆಯಲ್ಲಿ ಎರಡನೇ ಪಾಳಿಗೆ ಕರ್ತವ್ಯ ನಿರ್ವಹಿಸಬೇಕಿದ್ಗದ ಕೆಎಸ್‍ಆರ್‍ಟಿಸಿ ಚಾಲಕರು, ನಿರ್ವಾಹಕರು ಬಸ್ ಚಲಾಯಿಸಿದೆ ಮುಷ್ಕರ ಹೂಡಿದರು. ಇದರಿಂದ 437 ರೂಟ್‍ನಲ್ಲಿ ಸಂಚರಿಸಬೇಕಾದ ಬಸ್‍ಗಳಲ್ಲಿ 245ರೂಟ್‍ನಲ್ಲಿ ಮಾತ್ರ ಬಸ್ ಸಂಚರಿಸಿತು. ಬೆಂಗಳೂರು, ಶಿವಮೊಗ್ಗ, ಮೈಸೂರು, ಚಿತ್ರದುರ್ಗದ ಕಡೆ ತೆರಳಲು ಬಸ್‍ನಿಲ್ದಾಣಕ್ಕೆ ಆಗಮಿಸಿದ್ದ ಪ್ರಯಾಣಿಕರು ಸಂಜೆ ವೇಳೆ ಪರದಾಡಿದರು. ಲಭ್ಯವಿದ್ದ ಖಾಸಗಿ ಬಸ್‍ಗಳ ಮೂಲಕ ಪ್ರಯಾಣಿಕರನ್ನು ಕಳುಹಿಸುವ ವ್ಯವಸ್ಥೆಯನ್ನು ಸಾರಿಗೆ ಅಧಿಕಾರಿಗಳು, ಪೊಲೀಸರು ಮಾಡುತ್ತಿದ್ದರು.
ಖಾಸಗಿ ಬಸ್ ಚಾಲನೆಗೆ ಸಭೆ: ಏತನ್ಮಧ್ಯೆ ಸಂಜೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಎಸ್ಪಿ ಡಾ.ಕೆ.ವಂಸಿಕೃಷ್ಣ ಅವರು ಎಸ್ಪಿ ಕಚೇರಿಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಖಾಸಗಿ ಬಸ್ ಮಾಲೀಕರ ಸಭೆ ನಡೆಸಿ ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆಯಾಗಬಾರದೆಂದು ಸರಕಾರದ ಆದೇಶದನುಸಾರ ಬುಧವಾರ ಬೆಳಿಗ್ಗೆಯಿಂದಲೇ ಖಾಸಗಿ ಬಸ್‍ಗಳನ್ನು ಕಾರ್ಯಚರಣೆಗಿಳಿಸಲು, ಅಗತ್ಯವಾದ ಪರ್ಮಿಟ್ ನೀಡಲು ಸಾರಿಗೆ ಇಲಾಖೆಗೆ ಸೂಚಿಸಿದರಲ್ಲದೆ ನಿಗದಿಪಡಿಸಿದ ದರವನ್ನಷ್ಟೇ ಪ್ರಯಾಣಿಕರಿಂದ ಪಡೆಬೇಕು ಎಂದು ತಾಕೀತು ಮಾಡಿದ್ದಾರೆ.
ಬಸ್ ನಿಲ್ದಾಣ ಡಿಪೋ ಬಳಿ ನಿಷೇಧಾಜ್ಞೆ:
ಕೆಎಸ್‍ಆರ್‍ಟಿಸಿ ಘಟಕಗಳು ಹಾಗೂ ಬಸ್ ನಿಲ್ದಾಣದ ಸುತ್ತಮುತ್ತ 500 ಮೀ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರು ಮಂಗಳವಾರ ಮಧ್ಯರಾತ್ರಿ 12 ರಿಂದಲೇ ನಿಷೇಧಾಜ್ಞೆ ಹೇರಿದ್ದು, ಈ ಸ್ಥಳದಲ್ಲಿ ಮುಷ್ಕರ, ಪ್ರತಿಭಟನೆ, 5ಕ್ಕಿಂತ ಹೆಚ್ಚು ಜನರು ಸೇರದಂತೆ ನಿರ್ಬಂಧಿಸಲಾಗಿದೆ. ನಿಷೇಧಾಜ್ಞೆ ಉಲ್ಲಂಘಿಸಿದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ತಿಳಿಸಿದ್ದಾರೆ.
2400ಕ್ಕೂ ಅಧಿಕ ನೌಕರರಿಂದ ಮುಷ್ಕರ
ಕೆಎಸ್‍ಆರ್‍ಟಿಸಿ ತುಮಕೂರು ವಿಭಾಗದಲ್ಲಿ 2800 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಆಡಳಿತ ಸಿಬ್ಬಂದಿ ಹೊರತುಪಡಿಸಿ ಸಾರಿಗೆ ಬಸ್‍ಚಾಲಕರು, ನಿರ್ವಾಹಕರು, ಘಟಕಗಳ ತಾಂತ್ರಿಕ ಸಿಬ್ಬಂದಿಯೇ 2400ಕ್ಕೂ ಅಧಿಕ ಮಂದಿ ಇದ್ದಾರೆ. ಇವರೆಲ್ಲರೂ ಮುಷ್ಕರದಲ್ಲಿ ಭಾಗಿಯಾಗಿದ್ದು, ಸಾರ್ವಜನಿಕ ಸಾರಿಗೆ ವ್ಯವಸ್ಥೆ ವ್ಯತ್ಯಯ ಉಂಟಾಗಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ