ತುಮಕೂರು : ಜಿಲ್ಲೆಯಲ್ಲಿಯೇ ಸಿಗಲಿದೆ ಕ್ಯಾನ್ಸರ್’ಗೆ ಸೂಕ್ತ ಚಿಕಿತ್ಸೆ

       ತುಮಕೂರು ಜಿಲ್ಲೆ ಕಲ್ಪತರು, ಶೈಕ್ಷಣಿಕ ನಾಡಾಗಿ ಮಾತ್ರವಲ್ಲದೆ ವೈದ್ಯಕೀಯ ಸೇವೆಯಲ್ಲಿಯೂ ಹೆಗ್ಗಳಿಕೆ ಪಡೆದಿದೆ.
ಉತ್ತಮ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಮೂಲಕ 2018-19ನೇ ಸಾಲಿನಲ್ಲಿ ರಾಜ್ಯದ ಮೊದಲ ನಂ-1 ಆಸ್ಪತ್ರೆಯಾಗಿ ‘ಕಾಯಕಲ್ಪ’ ಪ್ರಶಸ್ತಿಗೆ ಭಾಜನವಾಗಿ ಆರೋಗ್ಯ ಕ್ಷೇತ್ರದಲ್ಲಿಯೂ ತನ್ನ ಹಿರಿಮೆಯನ್ನು ಹಿಗ್ಗಿಸಿಕೊಂಡಿರುವ ಜಿಲ್ಲಾ ಕೇಂದ್ರದ ಜಿಲ್ಲಾಸ್ಪತ್ರೆಯ ಆವರಣದಲ್ಲಿಯೇ ಮೂರು ನೂತನ ಅರೋಗ್ಯ ಸೇವಾ ಕೇಂದ್ರಗಳು ನಿರ್ಮಾಣವಾಗಲಿವೆ.

     ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಇಂದು(ದಿನಾಂಕ:25-9-2021) ಜಿಲ್ಲಾಸ್ಪತ್ರೆ ಆವರಣದಲ್ಲಿ ‘ಪೆರಿಫಿರಲ್ ಕ್ಯಾನ್ಸರ್ ಕೇಂದ್ರ’, ‘ತಾಯಿ ಮತ್ತು ಮಕ್ಕಳ ಆಸ್ಪತ್ರೆ’ ಮತ್ತು ‘ಪೌಷ್ಟಿಕ ಪುನಶ್ಚೇತನ ಕೇಂದ್ರ’ಗಳ ನೂತನ ಕಟ್ಟಡಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

     ನಗರದ ಹೃದಯಭಾಗದಲ್ಲಿರುವ ಜಿಲ್ಲಾಸ್ಪತ್ರೆಯನ್ನು 1948ರಿಂದ ಹಂತ ಹಂತವಾಗಿ ನಿರ್ಮಿಸಲಾಗಿದ್ದು, ಪ್ರಸ್ತುತ 400 ಹಾಸಿಗೆಗಳನ್ನು ಒಳಗೊಂಡಿದೆ. 75 ವರ್ಷ ತುಂಬಿರುವ ಈ ಜಿಲ್ಲಾಸ್ಪತ್ರೆ ಆವರಣದಲ್ಲಿ ವಿವಿಧ ವಿಭಾಗಗಳು ಕಾರ್ಯನಿರ್ವಹಿಸುತ್ತಿದ್ದು, ಇದರೊಂದಿಗೆ 210 ಹಾಸಿಗೆಗಳುಳ್ಳ ಮೂರು ಹೊಸ ಕೇಂದ್ರಗಳು ಸೇರ್ಪಡೆಗೊಳ್ಳಲಿವೆ.

ಪೆರಿಫರಲ್ ಕ್ಯಾನ್ಸರ್ ಕೇಂದ್ರ:-

ಸುಮಾರು 27,84,099 ಜನಸಂಖ್ಯೆ ಹೊಂದಿರುವ ತುಮಕೂರು ಜಿಲ್ಲೆಯು ರಾಜ್ಯದ ಹಲವು ಜಿಲ್ಲೆಗಳಿಗೆ ಸಂಪರ್ಕ ಸಾಧಿಸುವ ಕೇಂದ್ರವಾಗಿದ್ದು, 5 ಜಿಲ್ಲೆಗಳೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಈ ಜಿಲ್ಲಾ ಕೇಂದ್ರದ ಜಿಲ್ಲಾಸ್ಪತ್ರೆಯಲ್ಲಿ ವಿವಿಧ ಆರೋಗ್ಯ ಸೇವೆಗಳಿದ್ದರೂ ಕ್ಯಾನ್ಸರ್‍ಗೆ ಸೂಕ್ತ ಚಿಕಿತ್ಸೆ ಲಭ್ಯವಿಲ್ಲ. ಇದರಿಂದ ತುಮಕೂರು ಹಾಗೂ ನೆರೆ ಜಿಲ್ಲೆಗಳ ಸಾವಿರಾರು ವಿವಿಧ ಬಗೆಯ ಕ್ಯಾನ್ಸರ್ ರೋಗಿಗಳು ಚಿಕಿತ್ಸೆಗಾಗಿ ಬೆಂಗಳೂರಿನ ಕಿದ್ವಾಯ್ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ಇದರಿಂದ ಕಿದ್ವಾಯ್ ಆಸ್ಪತ್ರೆಯ ಮೇಲೆ ಒತ್ತಡ ಹೆಚ್ಚಾಗುವುದರ ಜೊತೆಗೆ ಬಹಳಷ್ಟು ರೋಗಿಗಳು ರೋಗ ನಿರ್ಧರಿಸುವ ಮುನ್ನವೇ ಸಾವಿನ ಮನೆ ಸೇರುತ್ತಿದ್ದಾರೆ.
ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ ಸರ್ಕಾರವು ತುಮಕೂರು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 100 ಹಾಸಿಗೆಗಳ ಸಾಮಥ್ರ್ಯವುಳ್ಳ ಪೆರಿಫರಲ್ ಕ್ಯಾನ್ಸರ್ ಕೇಂದ್ರವನ್ನು 9906.21 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲು ಆಯವ್ಯಯ ಘೋಷಿಸಿದೆ. ಈ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಮುಗಿದು ಗುತ್ತಿಗೆದಾರರನ್ನು ಗುರುತಿಸಿ, ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ತಾಯಿ ಮತ್ತು ಮಕ್ಕಳ ಆಸ್ಪತ್ರೆ:

ಜಿಲ್ಲಾಸ್ಪತ್ರೆಯಲ್ಲಿ ಈಗಾಗಲೇ ತಾಯಿ ಮತ್ತು ಮಕ್ಕಳ ಆರೈಕೆ ವಿಭಾಗವು ಕಾರ್ಯ ನಿರ್ವಹಿಸುತ್ತಿದ್ದು, ಈ ಆರೈಕೆ ಕೇಂದ್ರ ಕಿರಿದಾಗಿದೆ. ಜಿಲ್ಲೆಯಲ್ಲಿ ದಿನದ 24 ಗಂಟೆಯೂ 48 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಹಜ ಹೆರಿಗೆ ಹಾಗೂ 9 ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಮತ್ತು 4 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸಹಜ ಮತ್ತು ಶಸ್ತ್ರಚಿಕಿತ್ಸೆ ಹೆರಿಗೆ, ನವಜಾತ ಶಿಶು ಆರೈಕೆ, ರಕ್ತ ಶೇಖರಣ ಘಟಕ, ತುರ್ತು ವಾಹನಗಳ ಸೌಲಭ್ಯ ನೀಡಲಾಗುತ್ತಿದೆ.

      ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಸರಾಸರಿ 600 ಹೆರಿಗೆ ನಿರ್ವಹಿಸಲಾಗುತ್ತಿದ್ದು, ತಾಯಿ ಮತ್ತು ಮಗುವಿನ ಆರೈಕೆಗಾಗಿ ಪ್ರತ್ಯೇಕವಾದ ಸುಸಜ್ಜಿತ ಆಸ್ಪತ್ರೆ ಇಲ್ಲದಿರುವುದನ್ನು ಮನಗಂಡ ಸರ್ಕಾರವು ಮಾರ್ಗ ಸೂಚಿಗಳಂತೆ 100 ಹಾಸಿಗೆಗಳುಳ್ಳ ಸಾಮಥ್ರ್ಯದ ಒಂದು ಸುಸಜ್ಜಿತ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಿಸಿಕೊಡಲು ಕೇಂದ್ರ ಸರ್ಕಾರಕ್ಕೆ ಕೋರಿತ್ತು. ಅದರಂತೆ ಕೇಂದ್ರ ಸರ್ಕಾರವು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಮಂಜೂರು ಮಾಡಿದೆ. ಅಂದಾಜು 2000 ಲಕ್ಷ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸಲು ಟೆಂಡರ್ ಪ್ರಕ್ರಿಯೆ ಮುಗಿದು, ಗುತ್ತಿಗೆದಾರರನ್ನು ಗುರುತಿಸಿ, ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿದೆ.

ಪೌಷ್ಟಿಕ ಪುನಶ್ಚೇತನ ಕೇಂದ್ರ:

      ಜಿಲ್ಲಾಸ್ಪತ್ರೆಯಲ್ಲಿ ಈಗಾಗಲೆ ಆಪೌಷ್ಟಿಕ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿದ್ದು, ಮಕ್ಕಳ ವಾರ್ಡಿಗೆ ಹೊಂದಿಕೊಂಡಿರುವ ಕಾರಿಡಾರ್‍ನಲ್ಲಿ ಹಾಲಿ ಕಾರ್ಯ ನಿರ್ವಹಿಸಲಾಗುತ್ತಿದೆ. ಆದರೆ, ಪ್ರತ್ಯೇಕ ಕಟ್ಟಡ ಇರುವುದಿಲ್ಲ.
ಈ ಪೌಷ್ಟಿಕ ಪುನಶ್ವೇತನ ಕೇಂದ್ರವನ್ನು ಜಿಲ್ಲಾ ಖನಿಜ ನಿಧಿ ಅನುದಾನದಿಂದ ಅಂದಾಜು 50 ಲಕ್ಷ ರೂ. ವೆಚ್ಚದಲ್ಲಿ 10 ಹಾಸಿಗೆಗಳ ಸಾಮಥ್ರ್ಯವುಳ್ಳ ಪುನಶ್ಚೇತನ ಕೇಂದ್ರವನ್ನು ನಿರ್ಮಿಸಲು ನಿರ್ಮಿತಿ ಕೇಂದ್ರಕ್ಕೆ ಅನುಮೋದನೆ ನೀಡಲಾಗಿದೆ.

ಜಿಲ್ಲೆಯಲ್ಲಿಯೇ ಸಿಗಲಿದೆ ಸೂಕ್ತ ಚಿಕಿತ್ಸೆ :

     ಜಿಲ್ಲಾಸ್ಪತ್ರೆಯಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣವಾಗುವುದರಿಂದ ಕ್ಯಾನ್ಸರ್ ರೋಗಿಗಳು ಬೆಂಗಳೂರಿಗೆ ತೆರಳುವ ಅನಿವಾರ್ಯ ತಪ್ಪಲಿದ್ದು, ಜಿಲ್ಲೆಯಲ್ಲಿಯೇ ಕ್ಯಾನ್ಸರ್ ರೋಗಕ್ಕೆ ಸೂಕ್ತ ಚಿಕಿತ್ಸೆ ದೊರೆಯಲಿದೆ. ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣದಿಂದ ಕ್ಯಾನ್ಸರ್‍ಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ, ಕಿಮೊಥೆರಪಿ, ರೇಡಿಯೋಥೆರಪಿ ಸೇರಿದಂತೆ ಇತರೆ ಚಿಕಿತ್ಸೆಗಳು ಲಭ್ಯವಾಗಲಿವೆ.

     ಸುಮಾರು ಕ್ಯಾನ್ಸರ್ ರೋಗಿಗಳು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯನ್ನು ಅವಲಂಬಿಸಿದ್ದರು. ಇದರಿಂದ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ಸಿಗುವ ಮುನ್ನವೇ ಸಾವನ್ನಪ್ಪುತ್ತಿದ್ದ ಪ್ರಕರಣಗಳು ಕಣ್ಮುಂದೆ ಕಂಡುಬಂದಿದ್ದವು. ಇದನ್ನು ಮನಗಂಡು ಜಿಲ್ಲೆಯಲ್ಲಿಯೇ ಕಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡಲು ಆರೋಗ್ಯ ಇಲಾಖೆ ಸೇರಿದಂತೆ ಜಿಲ್ಲಾ ಮಂತ್ರಿಗಳು ಹಾಗೂ ಜನಪ್ರತಿನಿಧಿಗಳಿಂದ ಈ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಜಿಲ್ಲೆಯು ಬೆಂಗಳೂರಿಗೆ ಹೆಬ್ಬಾಗಿಲಾಗಿರುವುದರಿಂದ ಜಿಲ್ಲೆಯ ರೋಗಿಗಳಿಗೆ ಮಾತ್ರವಲ್ಲದೆ ವಿವಿಧ ಜಿಲ್ಲೆಗಳ ರೋಗಿಗಳಿಗೂ ಅನುಕೂಲವಾಗಲಿದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣದಿಂದಲೂ ಪ್ರತ್ಯೇಕವಾಗಿ ತಾಯಿ ಮಕ್ಕಳ ಆರೈಕೆ ಮಾಡಬಹುದಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap