ಜಿಲ್ಲಾ – ನಗರ ಕೇಂದ್ರ ಗ್ರಂಥಾಲಯಗಳಲ್ಲಿ ಸಿಬ್ಬಂದಿ ಕೊರತೆ

ಪುಸ್ತಕಗಳ ನಿರ್ವಹಣೆ ಸವಾಲು: ಬೆರಳೆಣಿಕೆಯಷ್ಟು ಕಾಯಂ ನೌಕರರು

ತುಮಕೂರು:

ನಗರದ ಟೌನ್‌ ಹಾಲ ಹತ್ತಿರ ಇರುವ ಜಿಲ್ಲಾ ಕೇಂದ್ರ ಗ್ರಂಥಾಲಯದ ಕಛೇರಿ

ವಿಶೇಷ ವರದಿ :ಶಿವಾನಂದ ಎಸ್. ನೇಗಿನಾಳ

     ನಗರದಲ್ಲಿ ೧೯೯೭ರ ಡಿಸೆಂಬರ್‌ನಲ್ಲಿ ಪ್ರಾರಂಭವಾಗಿದ್ದ ನಗರ ಕೇಂದ್ರ ಗ್ರಂಥಾಲಯವು, ೨೦೨೩ರ ಮಾರ್ಚ್‌ನಲ್ಲಿ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಸುಮಾರು ೩೩ ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡವಾಗಿ ನಿರ್ಮಾಣವಾಗಿದೆ. ಮುಖ್ಯ ಶಾಖೆಯು ಪ್ರಸ್ತುತ ಒಟ್ಟು ೧೩೦೧೨ ಸದಸ್ಯರನ್ನೊಳಗೊಂಡಿದ್ದು ಸಿಬ್ಬಂದಿ ಕೊರತೆಯಿಂದ ಬಳಲುತ್ತಿದೆ. ಇನ್ನು ನಗರದ ವಿವಿಧ ಬಡಾವಣೆಗಳಲ್ಲಿ ಇರುವ ನಗರ ಕೇಂದ್ರ ಗ್ರಂಥಾಲಯಗಳ ಶಾಖೆಗಳು ಸಿಬ್ಬಂದಿಗಳಿಲ್ಲದೆ ಬಿಕೋ ಎನ್ನುತ್ತಿವೆ.

    ಇನ್ನು ಜಿಲ್ಲಾ ಕೆಂದ್ರ ಗ್ರಂಥಾಲಯದಲ್ಲೂ ಇದೆ ಸಮಸ್ಯೆ. ಜಿಲ್ಲೆಯ ಒಟ್ಟು 10 ತಾಲ್ಲೂಕುಗಳಲ್ಲಿ ತನ್ನ ಶಾಖೆಗಳನ್ನು ತೆರೆದಿದ್ದು, ಸಿಬ್ಬಂದಿಗಳಿಲ್ಲದೇ ಗ್ರಂಥಾಲಯದ ನಿರ್ವಹಣೆ ದೊಡ್ಡ ಸವಾಲಾಗಿದೆ.ನಗರದ ಎಲ್ಲ ಗ್ರಂಥಾಲಯಗಳು ಹಗಲಿನಲ್ಲಿ ಪೂರ್ಣಾವಧಿ ಕಾರ್ಯನಿರ್ವಹಿಸಬೇಕು ಎಂಬ ನಾಗರಿಕರ ಬಹುದಿನಗಳ ಬೇಡಿಕೆ ಕಾಯಂ ಸಿಬ್ಬಂದಿ ಕೊರತೆಯಿಂದಾಗಿ ಈಡೇರುತ್ತಿಲ್ಲ. ನಗರ ಮುಖ್ಯ ಕೇಂದ್ರ ಗ್ರಂಥಾಲಯ ಸೇರಿದಂತೆ ೧೧ ಗ್ರಂಥಾಲಯ ಶಾಖೆಗಳು, ಒಂದು ಮಕ್ಕಳ ಸಮುದಾಯ ಕೇಂದ್ರ ಇಲ್ಲಿವೆ.

    ಓದುಗರ ಬೇಡಿಕೆಗೆ ಅನುಗುಣವಾಗಿ ನಗರದ ವಿವಿಧ ಬಡಾವಣೆಗಳಲ್ಲಿ ನಗರ ಕೇಂದ್ರ ಗ್ರಂಥಾಲಯಗಳನ್ನು ತೆರೆಯಲಾಗಿದೆ. ಆದರೆ, ಅವುಗಳಿಗೆ ಅಗತ್ಯ ಸಹಾಯಕ ಗ್ರಂಥಪಾಲಕ, ಗ್ರಂಥಾಲಯ ಸಹಾಯಕರ ಕಾಯಂ ಹುದ್ದೆಗಳನ್ನು ನೇಮಿಸಿಕೊಳ್ಳಲು ಅವಕಾಶ ಕೂಡಿಬಂದಿಲ್ಲ. ಹೀಗಾಗಿ ಇರುವ ಕೆಲವೇ ಕೆಲವು ಸಿಬ್ಬಂದಿಗಳೇ ಗ್ರಂಥಾಲಯಗಳನ್ನು ನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾ ಕೇಂದ್ರ ಗ್ರಂಥಾಲಯ ಹಾಗೂ ನಗರ ಕೇಂದ್ರ ಗ್ರಂಥಾಲಯಕ್ಕೆ ಪರ್ಯಾಯ ಒಬ್ಬರು ಮುಖ್ಯ ಗ್ರಂಥಾಲಯಾಧಿಕಾರಿ ಇರಬೇಕು. ಆದರೆ, ಈ ಹುದ್ದೆಗೆ ಇಲ್ಲಿ ಅವಕಾಶ ಮಾಡಿಕೊಟ್ಟಿಲ್ಲ. ಇನ್ನು ಉಪನಿರ್ದೇಶಕ ಹುದ್ದೆ ಇದ್ದು ಇಲ್ಲದಂತಾಗಿದೆ. ಒಬ್ಬರೇ ಜಿಲ್ಲಾ ಹಾಗೂ ನಗರ ಗ್ರಂಥಾಲಯಗಳಿಗೆ ಹೆಚ್ಚುವರಿಯಾಗಿ (ಪ್ರಭಾರ) ಕಾರ್ಯ ನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ.

ಜಿಲ್ಲಾ ಕೇಂದ್ರ ಗ್ರಂಥಾಲಯ; ೧೬ ಕಾಯಂ ನೌಕರರು

    ಜಿಲ್ಲಾ ಕೇಂದ್ರ ಗ್ರಂಥಾಲಯಗಳಲ್ಲಿ ವಿವಿಧ ಹುದ್ದೆಗಳಿಗೆ ೨೯ ಸಿಬ್ಬಂದಿಗಳ ಕಾಯಂ ಸಿಬ್ಬಂದಿ ನೇಮಕಕ್ಕೆ ಸರ್ಕಾರದ ಅನುಮತಿ ಇದೆ. ಆದರೆ, ಇಬ್ಬರು ಗ್ರಂಥಪಾಲಕರು, ತಾಲ್ಲೂಕಿಗೆ ಒಬ್ಬರಂತೆ ೯ ಜನ ಗ್ರಂಥಾಲಯ ಸಹಾಯಕರು, ಒಬ್ಬ ಪ್ರಥಮ ದರ್ಜೆ ಸಹಾಯಕ, ಇಬ್ಬರು ಗ್ರಂಥಾಲಯ ಸಹವರ್ತಿಗಳು (ಕ್ಯಾತ್ಸಂದ್ರ ಮತ್ತು ತುರುವೇಕೆರೆ), ಶಿರಾ, ಕೊರಟಗೆರೆಯಲ್ಲಿ ತಲಾ ಒಬ್ಬರು ಜವಾನ ಸೇರಿದಂತೆ ಒಟ್ಟು ೧೬ ಮಂದಿ ಅಷ್ಟೇ ಕಾಯಂ ನೌಕರರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನುಳಿದ ಹುದ್ದೆಗಳು ಭರ್ತಿಯಾಗದೆ ಗ್ರಂಥಾಲಯಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬುವಂತಾಗಿದೆ.

ನಗರ ಕೇಂದ್ರ ಗ್ರಂಥಾಲಯ; ೯ ಹುದ್ದೆ ಖಾಲಿ

  ನಗರ ಕೇಂದ್ರ ಗ್ರಂಥಾಲಯಗಳಲ್ಲಿ ವಿವಿಧ ಹುದ್ದೆಗಳಿಗೆ ೧೫ ಕಾಯಂ ಸಿಬ್ಬಂದಿ ನೇಮಕಕ್ಕೆ ಅವಕಾಶ ಇದ್ದು, ಒಬ್ಬ ಗ್ರಂಥಪಾಲಕ, ಒಬ್ಬ ಸಹಾಯಕ ಗ್ರಂಥಪಾಲಕ, ಇಬ್ಬರು ಗ್ರಂಥಾಲಯ ಸಹಾಯಕರು, ಒಬ್ಬ ವಾಹನ ಚಾಲಕ, ಒಬ್ಬ ರಾತ್ರಿ ಕಾವಲುಗಾರ ಸೇರಿ ಒಟ್ಟು ಆರು ಮಂದಿ ಕಾಯಂ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ. ಮಂಜೂರಾಗಿರುವ ಹುದ್ದೆಗಳ ಪೈಕಿ ಜಿಲ್ಲಾ ಮತ್ತು ನಗರ ಗ್ರಂಥಾಲಯಕ್ಕೆ ಗ್ರಂಥಾಲಯ ಉಪನಿರ್ದೇಶಕರು, ತಲಾ ಒಬ್ಬರು ದ್ವಿತೀಯ ದರ್ಜೆ ಸಹಾಯಕರು, ೨ ಗ್ರಂಥಾಲಯ ಸಹವರ್ತಿಗಳು (ಅಟೆಂಡರ್), ೧ ಜವಾನ, ೧ ತಾಂತ್ರಿಕ ಸಹಾಯಕ, ಮೂವರು ಗ್ರಂಥಾಲಯ ಸಹಾಯಕರು, ಒಬ್ಬ ಬೆರಳಚ್ಚುಗಾರರ ಹುದ್ದೆ ಇನ್ನೂ ಖಾಲಿ ಇವೆ.

11 ಗ್ರಂಥಾಲಯ, 3 ಜನರಿಗೆ ಹಂಚಿಕೆ

    ನಗರದಲ್ಲಿ ಮುಖ್ಯ ಗ್ರಂಥಾಲಯ ಶಾಖೆ ಸೇರಿ ಒಟ್ಟು ೧೧ ನಗರ ಕೇಂದ್ರ ಗ್ರಂಥಾಲಯದ ಶಾಖೆಗಳನ್ನು ತೆರೆಯಲಾಗಿದೆ. ಇರುವ ೬ ಜನರಲ್ಲಿ ಕಾಯಂ ಸಿಬ್ಬಂದಿಗಳ ಪೈಕಿ ಮೂವರಿಗೆ ವಿವಿಧ ಶಾಖೆಗಳ ನಿರ್ವಹಣೆ ಜವಾಬ್ದಾರಿ ವಹಿಸಲಾಗಿದೆ. ಸಹಾಯಕ ಗ್ರಂಥಪಾಲಕರೊಬ್ಬರಿಗೆ ಹೆಚ್ಚುವರಿಯಾಗಿ ಒಟ್ಟು ೬ ಶಾಖೆಗಳನ್ನು ನೋಡಿಕೊಳ್ಳಲು ಸೂಚಿಸಲಾಗಿದೆ. ಗ್ರಂಥಾಲಯ ಸಹಾಯಕರಿಬ್ಬರೂ ಇನ್ನುಳಿದ ಶಾಖೆಗಳನ್ನು ನೋಡಿಕೊಳ್ಳುತ್ತಿದ್ದಾರೆ. ಒಬ್ಬರು ಮುಖ್ಯ ಶಾಖೆ ಸೇರಿ ೩ ಗ್ರಂಥಾಲಯದ ನಿರ್ವಹಣೆ ಜವಾಬ್ದಾರಿ ವಹಿಸಿದ್ದರೆ, ಇನ್ನುಳಿದ ಒಬ್ಬರು ಎರಡು ಶಾಖೆಗಳನ್ನು ನೋಡಿಕೊಳ್ಳುತ್ತಿದ್ದಾರೆ.

ನಗರದಲ್ಲಿ ೧೪,೪೪೯ ಜನ ಸದಸ್ಯರು!

    ನಗರದಲ್ಲಿ ಒಟ್ಟು ೧೧ ಗ್ರಂಥಾಲಯಗಳ ಪೈಕಿ ಮುಖ್ಯ ಶಾಖೆಯಲ್ಲಿ ೧೩೦೧೨, ಹನುಮಂತಪುರ ೫೦೧, ಶಿರಾ ಗೇಟ್ ೨೨೮, ದೇವರಾಯಪಟ್ಟಣ ೭೪, ಎಸ್ ಐ ಟಿ ೩೬೨, ಕನ್ನಡ ಭವನ ೧೬೮, ಅಮರ ಜ್ಯೋತಿ ನಗರ ೪೯, ಪಿಜಿ ಲೇಔಟ್ ೧೭, ಮೇಳೆಕೋಟೆ ೧೮, ಅಶೋಕನಗರ ೨೦, ದಿಬ್ಬೂರು ಖಾಲಿ ಸೇರಿ ೧೧ ಗ್ರಂಥಾಲಯಗಳಲ್ಲಿ ಒಟ್ಟು ೧೪,೪೪೯ ಜನರು ಸದಸ್ಯತ್ವ ಪಡೆದುಕೊಂಡಿದ್ದಾರೆ.

ಜಿಲ್ಲಾ ಗ್ರಂಥಾಲಯದಲ್ಲಿ ೧೬೨೨೫ ಸದಸ್ಯರು!

    ಜಿಲ್ಲಾ ಕೇಂದ್ರ ಗ್ರಂಥಾಲಯ ವ್ಯಾಪ್ತಿಯಲ್ಲಿ ಒಟ್ಟು ೨೦೨೩-೨೪ ಮತ್ತು ೨೦೨೪- ೨೫ ನೇ ಸಾಲಿನಲ್ಲಿ ಸಿದ್ದಗಂಗಾ ಮಠ ೧೮೮, ಗುಬ್ಬಿ ೧೭೨೨, ಚಿಕ್ಕನಾಯಕನಹಳ್ಳಿ ೨೯೩೪, ತಿಪಟೂರು ೨೯೧೧, ತುರುವೇಕೆರೆ ೧೬೪೬, ಶಿರಾ ೧೯೦೫, ಪಾವಗಡ ೮೬೫, ಕೊರಟಗೆರೆ ೧೦೧೪, ಮಧುಗಿರಿ ೧೮೨೮, ಕುಣಿಗಲ್ ೧೨೧೨ ಸೇರಿ ಒಟ್ಟು ೧೬೨೨೫ ಮಂದಿ ಸದಸ್ಯತ್ವ ಪಡೆದಿದ್ದಾರೆ. ಜಿಲ್ಲೆಯ ಎಲ್ಲಾ ೧೦ ತಾಲ್ಲೂಕು ಗ್ರಂಥಾಲಯ ಸೇರಿ ೨೦೨೩-೨೪ ರಲ್ಲಿ ಒಟ್ಟು ೬೪೭೫೭೬ ಪುಸ್ತಕಗಳನ್ನು ಸ್ವೀಕರಿಸಲಾಗಿದೆ.

    ಹಾಗೆಯೆ ನಗರ ಗ್ರಂಥಾಲಯದ ಎಲ್ಲ ಶಾಖೆಗಳಲ್ಲಿ ಕಥೆ, ಕಾದಂಬರಿ, ಕವನ, ನಾಟಕ ಸೇರಿದಂತೆ ವಿವಿಧ ಬಗೆಯ ಸುಮಾರು ೪ ಲಕ್ಷ ಪುಸ್ತಕಗಳಿವೆ. ದಿನಪತ್ರಿಕೆ-ನಿಯತಕಾಲಿಕೆಗಳು ಸುಮಾರು ೫೦೦ ಬರುತ್ತವೆ. ಗಂಥಾಲಯ ಸಹವರ್ತಿಗಳ ಕೊರತೆಯಿಂದಾಗಿ ಇವುಗಳ ನಿರ್ವಹಣೆ ಮತ್ತು ಜೋಡಣೆ ಮಾಡುವುದು ದುಸ್ತರವಾಗಿದೆ. ನಗರ ಮುಖ್ಯ ಕೇಂದ್ರ ಗ್ರಂಥಾಲಯದ ಶಾಖೆ ಮಾತ್ರ ಬೆಳಿಗ್ಗೆ ೮ ರಿಂದ ರಾತ್ರಿ ೮ ಗಂಟೆಯವರೆಗೆ ಕಾರ್ಯನಿರ್ವಹಿಸಲಾಗುತ್ತಿದೆ. ಉಳಿದ ಬಹುತೇಕ ಕಡೆಗೆ ಬೆಳಿಗ್ಗೆ ೮.೩೦ರಿಂದ ಮಧ್ಯಾಹ್ನ ೧೧.೩೦ ವರೆಗೆ ಹಾಗೂ ಸಂಜೆ ೪ ರಿಂದ ರಾತ್ರಿ ೮ ರವರೆಗೆ ಗ್ರಂಥಾಲಯ ತೆರೆಯಲಾಗುತ್ತಿದೆ.

   ನಗರದ ಎಲ್ಲ ಕೇಂದ್ರ ಗ್ರಂಥಾಲಯಗಳನ್ನು ಬೆಳಿಗ್ಗೆ ೧೦ ಸಂಜೆ ೫ ರವರೆಗೆ ತೆರೆಯುವಂತೆ ಸ್ಥಳೀಯ ನಾಗರಿಕರಿಂದ ಹಲವು ದಿನಗಳಿಂದ ಬೇಡಿಕೆ ಬರುತ್ತಿದೆ. ಆದರೆ, ಕಾಯಂ ಸಿಬ್ಬಂದಿ ಕೊರತೆಯಿಂದಾಗಿ ಎಲ್ಲ ಗ್ರಂಥಾಲಯಗಳನ್ನು ಪೂರ್ಣಾವಧಿಗೆ ತೆರೆಯಲು ಸಾಧ್ಯವಾಗುತ್ತಿಲ್ಲ. ಪೂರ್ಣಾವಧಿ ನಡೆಸಬೇಕಾದರೆ, ಒಂದು ಶಾಖೆಗೆ ಇಬ್ಬರು ಸಹಾಯಕ ಗ್ರಂಥಪಾಲಕರು, ಇಬ್ಬರು ಗ್ರಂಥಾಲಯ ಸಹಾಯಕರು ಹಾಗೂ ಇಬ್ಬರು ಜವಾನರು ಅಗತ್ಯವಿದೆ ಎಂದು ಜಿಲ್ಲಾ ಹಾಗೂ ನಗರ ಕೇಂದ್ರ ಗ್ರಂಥಾಲಯದ ಹೆಚ್ಚುವರಿ ಉಪನಿರ್ದೇಶಕ ದಿವಾಕರ್ ಅವರು ಪ್ರಜಾ ಪ್ರಗತಿಗೆ ತಿಳಿಸಿದರು.

   ಕಾಯಂ ಸಿಬ್ಬಂದಿ ಕೊರತೆಯಿಂದಾಗಿ ಸದ್ಯ ತಾತ್ಕಾಲಿಕವಾಗಿ ನಗರ ಕೇಂದ್ರ ಗ್ರಂಥಾಲಯದಲ್ಲಿ ೧೫ ಸಿಬ್ಬಂದಿ ನೇಮಿಸಿಕೊಂಡಿದ್ದೇವೆ. ಅವರಿಗೆ ಪ್ರತಿ ತಿಂಗಳು ೧೦ ಸಾವಿರ ಹಾಗೂ ಜಿಲ್ಲಾ ಗ್ರಂಥಾಲಯ ಸಹವರ್ತಿಗಳಿಗೆ ಪ್ರತಿ ತಿಂಗಳು ೫ ಸಾವಿರ ರೂ. ನೀಡುತ್ತಿದ್ದೇವೆ. ಪದೇ ಪದೇ ಇವರು ಕೆಲಸ ಬಿಟ್ಟು ಹೋಗುವುದರಿಂದ ಹೊಸಬರಿಗೆ ಮತ್ತೆ ತರಬೇತಿ ನೀಡಿ ಕೆಲಸಕ್ಕೆ ಸೇರಿಸಿಕೊಳ್ಳಬೇಕಾಗುತ್ತಿದೆ. ಇದರ ಬದಲು ಕಾಯಂ ಸಿಬ್ಬಂದಿ ನೇಮಿಸಿಕೊಂಡರೆ ಎಲ್ಲ ಗ್ರಂಥಾಲಯಗಳನ್ನು ಉತ್ತಮವಾಗಿ ನಿಭಾಯಿಸಲು ಅನುಕೂಲವಾಗುತ್ತದೆ ಎನ್ನುತ್ತಾರೆ ದಿವಾಕರ್.

   ಎಲ್ಲ ಗ್ರಂಥಾಲಯಗಳನ್ನು ಪೂರ್ಣಾವಧಿಗೆ ನಡೆಸಲು ಇಬ್ಬರು ಗ್ರಂಥಪಾಲಕರು, ೧೫ ಸಹಾಯಕ ಗ್ರಂಥಪಾಲಕರು, ೨೦ ಗ್ರಂಥಾಲಯ ಸಹಾಯಕರು, ೧೫ ಗ್ರಂಥಾಲಯ ಸಹವರ್ತಿಗಳು ಹಾಗೂ ೧೯ ಜವಾನರು ಸೇರಿದಂತೆ ಒಟ್ಟು ೭೧ ಸಿಬ್ಬಂದಿಗಳ ಅಗತ್ಯವಿದೆ. ಈ ಹುದ್ದೆಗಳ ನೇಮಕಾತಿಗೆ ಮಂಜೂರಾತಿ ನೀಡುವಂತೆ ಗ್ರಂಥಾಲಯ ಇಲಾಖೆಗೆ ತಿಳಿಸಲಾಗುವುದು ಎಂದು ಅವರು ತಿಳಿಸಿದರು.

ಪ್ರಮುಖಾಂಶ

    ಕಳೆದ ವರ್ಷ ಆಗಷ್ಟ್‌ನಲ್ಲಿ ಖಾಲಿಯಾದ ಗ್ರಂಥಾಲಯ ಉಪನಿರ್ದೇಶಕ ಹುದ್ದೆಗೆ, ಬೆಂಗಳೂರಿನ ಕೇಂದ್ರ ವಲಯ ಗ್ರಂಥಾಲಯ ಶಾಂತಿನಗರದ ಉಪನಿರ್ದೇಶಕರನ್ನು ಹೆಚ್ಚುವರಿಯಾಗಿ ತುಮಕೂರು ಜಿಲ್ಲಾ ಮತ್ತು ನಗರ ಕೇಂದ್ರ ಗ್ರಂಥಾಲಯಕ್ಕೆ ನೇಮಕ ಮಾಡಿ ಜವಾಬ್ದಾರಿ ವಹಿಸಲಾಗಿದೆ.

 ವಾಹನದ ಅವಧಿ ಮುಗಿದ ಪರಿಣಾಮ ಕಳೆದ ಒಂದು ವರ್ಷದಿಂದ ಸಂಚಾರಿ ಗ್ರಂಥಾಲಯ ಸೇವೆ ಸ್ಥಗೀತವಾಗಿದೆ. ಸಂಚಾರಿ ಗ್ರಂಥಾಲಯದಲ್ಲಿ ಸುಮಾರು ಒಂದುವರೆ ಸಾವಿರ ಓದುಗರು ಸದಸ್ಯತ್ವ ಪಡೆದಿದ್ದಾರೆ. ಆದಷ್ಟು ಬೇಗ ಈ ಸೇವೆ ಆರಂಭವಾಗಲಿ ಎಂಬುದು ಸಾರ್ವಜನಿಕರ ಬೇಡಿಕೆಯಾಗಿದೆ.

 
ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಿರ್ಮಾಣವಾದ ಗ್ರಂಥಾಲಯದ ನಿರ್ವಹಣೆಗೆ ಸಾಕಷ್ಟು ಸಿಬ್ಬಂದಿಗಳ ಅವಶ್ಯಕತೆ ಇದೆ. ಈಗಾಗಲೇ ತಾತ್ಕಾಲಿಕವಾಗಿ ಸ್ವಚ್ಛತೆ ಸೇರಿದಂತೆ ಗ್ರಂಥಾಲಯದ ನಿರ್ವಹಣೆಗಾಗಿ ಸುಮಾರು ೧೫ ಜನರನ್ನು ನೇಮಿಸಿಕೊಳ್ಳಲಾಗಿದೆ. ಸೆಸ್ ಹಣವನ್ನು ಗ್ರಂಥಾಲಯದ ಅಭಿವೃದ್ಧಿಗೆ ಬಳಸಲಾಗುತ್ತಿದ್ದು, ಜೊತೆಗೆ ಕೆಲಸಗಾರರಿಗೆ ಮಾಸಿಕ ಭತ್ಯೆಯಾಗಿ ನೀಡಲಾಗುತ್ತಿದೆ.
-ದಿವಾಕರ್, ಉಪನಿರ್ದೇಶಕರು, ಜಿಲ್ಲಾ ಮತ್ತು ನಗರ ಕೇಂದ್ರ ಗ್ರಂಥಾಲಯ, ತುಮಕೂರು

Recent Articles

spot_img

Related Stories

Share via
Copy link