ತುಮಕೂರು : ಸರಗಳ್ಳರ ಹಾವಳಿ : ಬೆಚ್ಚಿ ಬೀಳುತ್ತಿರುವ ನಾಗರಿಕರು

 ತುಮಕೂರು : 

      ನಗರದ ವಿವಿಧ ಕಡೆಗಳಲ್ಲಿ ಸರಗಳ್ಳರ ಹಾವಳಿ ಮತ್ತೆ ಹೆಚ್ಚಾಗತೊಡಗಿದೆ. ಕೆಲವು ದಿನಗಳ ನಂತರ ಮತ್ತೆ ಕೃತ್ಯಕ್ಕೆ ಇಳಿದಿರುವ ಸರಗಳ್ಳರ ಗುಂಪು ಅಲ್ಲಲ್ಲಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ತಮ್ಮ ಕೈಚಳಕ ಪ್ರದರ್ಶಿಸುತ್ತಿದ್ದಾರೆ.

ಬುಧವಾರ ಸಂಜೆ ಸುಮಾರು 6 ಗಂಟೆ ಸಮಯದಲ್ಲಿ ಸಪ್ತಗಿರಿ ಬಡಾವಣೆಯ 10ನೆ ತಿರುವಿನ ವಾಟರ್ ಟ್ಯಾಂಕ್ ಬಳಿ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಬಂದ ಸರಗಳ್ಳರು ಆಕೆಯ ಕೊರಳಿನಲ್ಲಿದ್ದ ಮಾಂಗಲ್ಯ ಸರಕ್ಕೆ ಕೈ ಹಾಕಿದ್ದಾರೆ. ಸುಮಾರು 70 ಗ್ರಾಂ ತೂಕದ ಮಾಂಗಲ್ಯ ಸರದಲ್ಲಿ 50 ಗ್ರಾಂನಷ್ಟು ತುಂಡರಿಸಿಕೊಂಡು ಹೋಗಿದ್ದಾರೆ. ಕೂಡಲೇ ಮಹಿಳೆ ಕಿರುಚಿಕೊಂಡಾಗ ಜನ ಅಲ್ಲಿಗೆ ಬರುವಷ್ಟರಲ್ಲಿ ಕಳ್ಳರು ಪರಾರಿಯಾಗಿದ್ದರು.

      ಇದೇ ರೀತಿ ಗಂಗೋತ್ರಿನಗರ, ಜಯನಗರ ಬಡಾವಣೆಗಳಲ್ಲಿಯೂ ಸರಗಳ್ಳತನ ನಡೆದಿರುವ ಬಗ್ಗೆ ನಾಗರಿಕರು ದೂರಿದ್ದಾರೆ. ಜನರನ್ನು ಯಾಮಾರಿಸಿ ಆಗಾಗ್ಗೆ ನಗರಕ್ಕೆ ಇಳಿಯುವ ಈ ಕಳ್ಳರ ಗುಂಪು ಪೂರ್ವಯೋಜಿತವಾಗಿ ಸಂಚು ನಡೆಸಿ ಈ ಕೃತ್ಯ ಎಸಗುತ್ತಿರುವ ಬಗ್ಗೆ ನಾಗರಿಕರು ಹೇಳುತ್ತಾರೆ.

      ಬೆಳಗಿನ ವೇಳೆ ವಾಕಿಂಗ್ ಹೋಗುವ, ರಂಗೋಲಿ ಬಿಡಿಸುವ, ಮನೆಯ ಮುಂಭಾಗ ನೀರು ಹಾಕುವ, ಕಸಗೂಡಿಸುವ ಮಹಿಳೆಯರನ್ನು ಈ ಗುಂಪು ಟಾರ್ಗೆಟ್ ಮಾಡುತ್ತದೆ. ಅದೇ ರೀತಿ ಸಂಜೆಯ ವೇಳೆ ವಾಕಿಂಗ್ ಹೋಗುವ ಮಹಿಳೆಯರನ್ನು ಹಿಂಬಾಲಿಸಿ ಸರ ಕಸಿದುಕೊಂಡು ಪರಾರಿಯಾಗುತ್ತಾರೆ. ದ್ವಿಚಕ್ರ ವಾಹನದಲ್ಲಿ ಬರುವ ಈ ಆಗಂತುಕರು ಕ್ಷಣ ಮಾತ್ರದಲ್ಲಿ ಪರಾರಿಯಾಗುತ್ತಾರೆ. ಅಲ್ಲಲ್ಲಿ ನಡೆಯುವ ಈ ಕೃತ್ಯಗಳಿಂದ ಜನತೆ ಆತಂಕಕ್ಕೆ ಒಳಗಾಗಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link