ತುಮಕೂರು : ಪದವಿ ಕಾಲೇಜು ಆರಂಭ ; ಶೇ.32 ರಷ್ಟು ಹಾಜರಾತಿ!!

 ತುಮಕೂರು : 

      ಕೋವಿಡ್ 2 ನೇ ಅಲೆಯ ಲಾಕ್‍ಡೌನ್‍ನಿಂದ ಸುಮಾರು 3 ತಿಂಗಳ ನಂತರ ಮೊನ್ನೆಯವರೆಗೆ ವಿದ್ಯಾರ್ಥಿಗಳಿಲ್ಲದೆ ಬಿಕೊ ಎನ್ನುತ್ತ್ತಿದ್ದ ಜಿಲ್ಲೆಯ ಪದವಿ ಕಾಲೇಜುಗಳು ಸೋಮವಾರ ಅಲ್ಪ-ಸ್ವಲ್ಪ ವಿದ್ಯಾರ್ಥಿಗಳ ಹಾಜರಾತಿಯ ಮೂಲಕ ತಮ್ಮ ಭೌತಿಕ ತರಗತಿಗಳನ್ನು ಆರಂಭಿಸಿದವು. ಮೊದಲನೆ ದಿನವಾದ ನಿನ್ನೆ ಜಿಲ್ಲೆಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕೇವಲ ಶೇ.32 ರಷ್ಟು ಮಾತ್ರ ಇದ್ದು, ವಾರದೊಳಗೆ ಎಲ್ಲಾ ಕಾಲೇಜುಗಳು ವಿದ್ಯಾರ್ಥಿಗಳಿಂದ ಮತ್ತೆ ಕಲರವಗುಟ್ಟುವ ಲಕ್ಷಣಗಳು ಕಂಡು ಬಂದವು.

      ಒಂದು ಡೆಸ್ಕ್‍ಗೆ ಇಬ್ಬರು ವಿದ್ಯಾರ್ಥಿಗಳು :

      ನಿನ್ನೆ ತರಗತಿ ಆರಂಭಿಸಿದ ಕಾಲೇಜುಗಳಲ್ಲಿ ಒಂದು ಡೆಸ್ಕ್‍ಗೆ ಇಬ್ಬರು ವಿದ್ಯಾರ್ಥಿಗಳು ಕೂರಲು ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿಗಳು ಗುಂಪು ಸೇರದಂತೆ ಸೂಚಿಸಿದ್ದು, ತರಗತಿಯಲ್ಲಿ ಪಾಠ ಕೇಳುವಾಗ ಮಾಸ್ಕ್ ಧರಿಸುವುದು ಮತ್ತು ಅಂತರ ಕಾಯ್ದುಕೊಂಡು ಕುಳಿತುಕೊಳ್ಳುವುದನ್ನು ಕಡ್ಡಾಯ ಮಾಡಲಾಗಿತ್ತು. ಅದರಂತೆಯೆ ಜಿಲ್ಲೆಯ ಸ್ನಾತಕ, ಸ್ನಾತಕೋತ್ತರ, ಇಂಜಿನಿಯರಿಂಗ್ ಹಾಗೂ ಡಿಪ್ಲೊಮಾ ಕಾಲೇಜುಗಳು ಸೋಮವಾರ ಭೌತಿಕ ತರಗತಿಗಳನ್ನು ನಡೆಸಿದವು.

     ಜಿಲ್ಲೆಯಲ್ಲಿ ಶೇ.96 ರಷ್ಟು ವಿದ್ಯಾರ್ಥಿಗಳಿಗೆ ಲಸಿಕೆ :

      ಕೊವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲೆಯ ಎಲ್ಲಾ ಪದವಿ ಕಾಲೇಜುಗಳಿಗೆ ಕುಲಪತಿ ವೈ.ಎಸ್.ಸಿದ್ದೇಗೌಡ ಅವರು ಸೂಚನೆ ನೀಡಿದ್ದು, ಅದರಂತೆಯೇ ಕಾಲೇಜುಗಳಲ್ಲಿ ನಿಯಮಗಳನ್ನು ಪಾಲಿಸಲಾಯಿತು. ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಮೊದಲನೆಯ ಡೋಸ್ ಲಸಿಕೆ ಕಡ್ಡಾಯವಾಗಿದ್ದು, ಈಗಾಗಲೇ ಜಿಲ್ಲೆಯಲ್ಲಿ ಶೇ.96 ರಷ್ಟು ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದೆ. ಅಧ್ಯಾಪಕ ಮತ್ತು ಸಿಬ್ಬಂದಿ ವರ್ಗಕ್ಕೂ ಲಸಿಕೆ ಹಾಕಲಾಗಿದೆ. ವಿದ್ಯಾರ್ಥಿಗಳು ಕಾಲೇಜಿಗೆ ಬರದಿದ್ದರೂ ಅಧ್ಯಾಪಕರಿಗೆ ಹಾಜರಾತಿ ಕಡ್ಡಾಯ. ಭೌತಿಕ ತರಗತಿಗಳಿಗೆ ವಿದ್ಯಾರ್ಥಿಗಳು ಹಾಜರಾಗದಿದ್ದರೆ, ಆನ್‍ಲೈನ್ ಕ್ಲಾಸ್ ಮೂಲಕ ತರಗತಿಗೆ ಹಾಜರಾಗಬೇಕು. ಆನ್‍ಲೈನ್ ಅಥವಾ ಭೌತಿಕ ತರಗತಿ ಯಾವುದಾದರೂ ಒಂದು ತರಗತಿಗೆ ವಿದ್ಯಾರ್ಥಿಗಳು ಹಾಜರಾಗುವುದು ಕಡ್ಡಾಯವಾಗಿದೆ.

ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಈ ನಿಯಮಗಳು ಕಡ್ಡಾಯ :

* ವಿದ್ಯಾರ್ಥಿಗಳು ಕಡ್ಡಾಯವಾಗಿ ಒಂದು ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು
* ಲಸಿಕೆ ಹಾಕಿಸದ ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶವಿಲ್ಲ
* ವಿದ್ಯಾರ್ಥಿಗಳು ಕಾಲೇಜಿಗೆ ಬರುವುದು ಕಡ್ಡಾಯ ಅಲ್ಲ, ಸ್ವ ಇಚ್ಚೆಯಿಂದ ಬರಬಹುದು
* ಕಾಲೇಜು ಪ್ರಾರಂಭ ಆದರೂ ಆನ್‍ಲೈನ್ ಕ್ಲಾಸ್ ಮುಂದುವರಿಯಲಿದೆ. ಆನ್‍ಲೈನ್, ಆಫ್‍ಲೈನ್ ಯಾವುದಾದರೂ ಒಂದಕ್ಕೆ ಹಾಜರಾತಿ ಕಡ್ಡಾಯ
* ಅಧ್ಯಾಪಕರು ಮತ್ತು ಸಿಬ್ಬಂದಿ ವರ್ಗಕ್ಕೆ 2 ಡೋಸ್ ಲಸಿಕೆ ಕಡ್ಡಾಯ
* ಪ್ರತಿ ಕಾಲೇಜಿನಲ್ಲೂ ಕಡ್ಡಾಯವಾಗಿ ಕೊರೊನಾ ಮಾರ್ಗಸೂಚಿ ಪಾಲನೆಗೆ ಕ್ರಮವಹಿಸಬೇಕು
* ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ನಿತ್ಯ ಥರ್ಮಲ್ ಸ್ಕ್ಯಾನಿಂಗ್ ನಡೆಸಬೇಕು
* ಕಾಲೇಜು ಆರಂಭ, ನಂತರ ಸ್ಯಾನಿಟೈಸರ್ ಕಡ್ಡಾಯ
* ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿಗೆ ಮಾಸ್ಕ್ ಕಡ್ಡಾಯ

      ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಜಿಲ್ಲೆಯಲ್ಲಿ ನಿನ್ನೆ ಎಲ್ಲಾ ಕಡೆ ಪದವಿ ಕಾಲೇಜುಗಳಲ್ಲಿ ತರಗತಿಗಳು ನಡೆದವು. ಒಟ್ಟಾರೆ ಹಾಜರಾತಿ ಶೇ.30 ರಷ್ಟಿದ್ದು, ಈಗಾಗಲೇ ಶೇ.96 ರಷ್ಟು ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದೆ. ಮೊದಲದಿನವಾದ ನಿನ್ನೆ ನಗರದ 6-7 ಕಾಲೇಜುಗಳಿಗೆ ಭೇಟಿ ನೀಡಿದ್ದೆ, ಮೊದಲದಿನವಾದ್ದರಿಂದ ವಿದ್ಯಾರ್ಥಿಗಳಿಂದ ನೀರಸ ಪ್ರತಿಕ್ರಿಯೆ ಇದ್ದು, ನಾಳೆ, ನಾಡಿದ್ದರಲ್ಲಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚುವ ಸಾಧ್ಯತೆ ಇದೆ.

-ಪ್ರೊ.ವೈ.ಎಸ್.ಸಿದ್ದೇಗೌಡ, ಕುಲಪತಿ, ತುಮಕೂರು ವಿವಿ

      ಮುಂದಿನ ದಿನಗಳಲ್ಲಿ ಕೋವಿಡ್ ಮೂರನೇ ಅಲೆಯ ಸಾಧ್ಯತೆ ಇರುವುದರಿಂದ ನಿನ್ನೆ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರಿಗೆ ಸೋಂಕಿನ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಮಾಹಿತಿ ನೀಡಲಾಯಿತು. ಸೈನ್ಸ್ ಕಾಲೇಜಿನ ಮುಂದೆ ಗುಂಪುಗೂಡಿದ್ದ ವಿದ್ಯಾರ್ಥಿಗಳನ್ನು ಕರೆದು ಸೋಂಕಿನ ಬಗ್ಗೆ ಎಚ್ಚರದಿಂದಿರಲು ಹೇಳಿ ಮಾಸ್ಕ್ ಹಾಕಿಕೊಂಡು, ಅಂತರ ಕಾಪಾಡಿಕೊಳ್ಳುವಂತೆ ತಿಳಿಸಿದೆ.

-ಪ್ರೊ.ಕೆ.ಶಿವಚಿತ್ತಪ್ಪ, ಕುಲಸಚಿವರು, (ಆಡಳಿತ) ತುಮಕೂರು ವಿವಿ

      ಮೂರು ತಿಂಗಳಿನಿಂದ ಫ್ರೆಂಡ್ಸ್ ಗಳನ್ನು ನೋಡಲಾಗಿರಲಿಲ್ಲ, ಈಗ ಕಾಲೇಜು ಆರಂಭವಾಗಿದ್ದು, ಫ್ರೆಂಡ್ಸ್ ಗಳನ್ನು ನೋಡಿ ಖುಷಿ ಆಯ್ತು. ಆನ್‍ಲೈನ್ ಕ್ಲಾಸ್‍ಗಳು ಅಷ್ಟೇನೂ ಅರ್ಥ ಆಗುತ್ತಿರಲಿಲ್ಲ, ಆದರೆ ನಿನ್ನೆ ನಡೆದ ತರಗತಿಯಲ್ಲಿ ಎಲ್ಲಾ ಪಾಠಗಳು ಮನವರಿಕೆ ಆದವು. ಮತ್ತೆ ಕಾಲೇಜು ಆರಂಭ ಆಗಿದ್ದು ಖುಷಿ ತಂದಿದೆ.

-ಯಮುನಾ, ಕನ್ನಡ, ಎಂ.ಎ ವಿದ್ಯಾರ್ಥಿನಿ, ತುಮಕೂರು ವಿವಿ

Recent Articles

spot_img

Related Stories

Share via
Copy link