ಚಿಕ್ಕನಾಯಕನಹಳ್ಳಿ :
ತಾಲ್ಲೂಕಿನಲ್ಲಿ ಕಾಂಗ್ರೆಸ್ ಹಿಂದುಳಿಯಲು ಕಾರ್ಯಕರ್ತರಿಗಿಂತ ನಾಯಕರಲ್ಲಿರುವ ಹೊಂದಾಣಿಕೆಯ ಕೊರತೆಯೇ ಕಾರಣವಾಗಿದೆ, ಪಕ್ಷ ಬೆಳೆಯಲು ಭಿನ್ನಾಭಿಪ್ರಾಯ ಬದಿಗಿಡುವುದು ಅವಶ್ಯವಾಗಿದೆ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಪರವಾದ ಅಭ್ಯರ್ಥಿಗಳನ್ನು ಗೆಲ್ಲಿಸಲು ತಳಮಟ್ಟದ ಸಂಘಟನೆ ಅವಶ್ಯ ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅಭಿಪ್ರಾಯಪಟ್ಟರು.
ಪಟ್ಟಣದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಗ್ರಾ.ಪಂ. ಚುನಾವಣೆ ಸಂಬಂಧ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಚುನಾವಣೆಗೆ ಕೆಲವೇ ದಿನಗಳಿದೆ, ತಳಮಟ್ಟದಲ್ಲಿ ಕಾರ್ಯಕರ್ತರನ್ನು ಬಲಪಡಿಸಬೇಕು, ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷಾತೀತವಾಗಿ ನಡೆಯುವ ಚುನಾವಣೆಯಾಗಿದ್ದು ಈ ಚುನಾವಣೆಯಲ್ಲಿ ನಮ್ಮ ಬೆಂಬಲಿಗ ಅಭ್ಯರ್ಥಿಗಳೇ ಹೆಚ್ಚಾಗಿ ಗೆಲ್ಲುವಂತೆ ನೋಡಿಕೊಳ್ಳಬೇಕು, ಚುನಾವಣೆಯಲ್ಲಿ ಉತ್ತಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಚುನಾವಣೆ ಗೆಲ್ಲುವಂತೆ ಕಾರ್ಯಕರ್ತರು ಶ್ರಮಿಸಬೇಕು. ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿರುವ 34 ಗ್ರಾ.ಪಂ.ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ನಿಲ್ಲಿಸಿ, ಎಲ್ಲಾ ಕ್ಷೇತ್ರದಲ್ಲೂ ಕಾಂಗ್ರೆಸ್ ಪರವಾಗಿರುವವರನ್ನು ಗೆಲ್ಲಿಸುವ ರಣತಂತ್ರ ಕಾರ್ಯಕರ್ತರು ರೂಪಿಸಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.
ತಾಪಂ, ಜಿಪಂ ಗೆಲ್ಲಲು ವೇದಿಕೆ: ಗ್ರಾಮ ಪಂಚಾಯಿತಿಯಲ್ಲಿ ಪಕ್ಷದ ಬೆಂಬಲಿಗರು ಬಹುಮತ ಪಡೆದರೆ ಮುಂದಿನ ದಿನಗಳಲ್ಲಿ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ವಿಧಾನಸಭಾ ಕ್ಷೇತ್ರ ಹಾಗೂ ಲೋಕಸಭಾ ಕ್ಷೇತ್ರವನ್ನು ಬಲಿಷ್ಠವಾಗಿ ಗೆಲ್ಲಬಹುದು ಎಂದರು.
ತಾಲ್ಲೂಕು ವೀಕ್ಷಕರಾದ ಷಫಿ ಅಹಮದ್ ಮಾತನಾಡಿ, ಪ್ರತಿ ಗ್ರಾಮ ಪಂಚಾಯಿತಿಗೆ ಐದು ಮಂದಿ ವೀಕ್ಷಕರನ್ನು ನೇಮಕ ಮಾಡುತ್ತೇವೆ, ಪ್ರತಿ ಹೋಬಳಿಗಳಲ್ಲೂ ಸಭೆ ಮಾಡಿ ಕಾಂಗ್ರೆಸ್ ಕಾರ್ಯಕರ್ತರಿಗೆ ಬಲ ತುಂಬುತ್ತೇವೆ, ಮುಖಂಡರು, ಕಾರ್ಯಕರ್ತರು ಅಭ್ಯರ್ಥಿಗೆ ಬೆಂಬಲ ನೀಡಿ ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ಡಾ.ಸಾಸಲು ಸತೀಶ್ ಮಾತನಾಡಿ, ಎಲ್ಲರೂ ಒಗ್ಗಟ್ಟಾಗಿ ಹೋಗೋಣ, ಕಳೆದ ಬಾರಿ ಗ್ರಾ.ಪಂ. ಚುನಾವಣೆಯಲ್ಲಿ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳೇ ಹೆಚ್ಚಾಗಿ ಗೆದ್ದಿದ್ದರು. ಕಾಂಗ್ರೆಸ್ ಒಗ್ಗಟ್ಟಾಗದಿದ್ದರೆ ಮುಂದಿನ ದಿನಗಳಲ್ಲಿ ಕಷ್ಟ. ಎಲ್ಲರೂ ಭಿನ್ನಾಭಿಪ್ರಾಯ ಬದಿಗಿಡಿ ಆಗ ಮಾತ್ರ ತಾಲ್ಲೂಕಿನಲ್ಲಿ ಪಕ್ಷ ಬೆಳೆಯಲು ಸಾಧ್ಯ ಎಂದು ಹೇಳಿದರು.
ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿ, ಚಿ.ನಾ.ಹಳ್ಳಿ ಕ್ಷೇತ್ರದಲ್ಲಿ 1985ರಿಂದ ಈವರೆಗೆ ಪಕ್ಷ ಗೆಲುವು ಕಂಡಿಲ್ಲ ಇದಕ್ಕೆ ತಾಲ್ಲೂಕಿನ ಕಾರ್ಯಕರ್ತರಲ್ಲಿ ಒಗ್ಗಟ್ಟಿಲ್ಲದಿರುವುದೇ ಕಾರಣವಾಗಿದೆ, ಇದೇ ರೀತಿ ಮುಂದುವರೆದರೆ ಪಕ್ಷ ಬೆಳೆಯುವುದಿಲ್ಲ, ಇಂದು ಎಲ್ಲಾ ನಾಯಕರು ಒಟ್ಟಾಗಿ ಭಾಗವಹಿಸಿರುವುದು ಸಂತಸ, ಈ ಸಂಘಟನೆ ಇದೇ ರೀತಿ ಮುಂದುವರೆಯಬೇಕು ಎಂದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಆರ್.ನಾರಾಯಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು , ಉಪಾಧ್ಯಕ್ಷ ಸಿ.ಡಿ.ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಬ್ರಹ್ಮಾನಂದ್, ಮುಖಂಡ ಕೆ.ಜಿ.ಕೃಷ್ಣೆಗೌಡ, ಮಾಜಿ ಜಿ.ಪಂ.ಅಧ್ಯಕ್ಷ ರಘುನಾಥ್, ಕಿರಣ್ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
